ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಜಬರ್ದಸ್ಥಾಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಸೀತಾಯಣ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ.
ಅಕ್ಷಿತ್ ಚೊಚ್ಚಲ ಚಿತ್ರದಲ್ಲಿಯೇ ಕೌಟುಂಬಿಕ ಕಥೆಯ ಸಿನಿಮಾದಲ್ಲಿ ಮನಗೆಲ್ಲಲು ಸಿದ್ಧ ವಾಗಿದ್ದಾರೆ. ಸೀತಾಯಣ ಅಂದಾಕ್ಷಣ ಇದು ಪೌರಾಣಿಕ ಕಥೆಯ ಸಿನಿಮಾವೇ ಇರಬೇಕು ಎಂದುಕೊಳ್ಳಬಹುದು. ಖಂಡಿತಾ ಇಲ್ಲ. ಇದು ಪ್ರಸ್ತುತ ಕಾಲಘಟ್ಟದಲ್ಲಿ ಸಾಗುವ ಕಥೆ ಯಾಗಿದೆ. ನಾಯಕ, ನಾಯಕಿ ಹಾಗೂ ಖಳನಾಯಕನ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹಾಗಾಗಿಯೇ ಈ ಚಿತ್ರಕ್ಕೆ ಸೀತಾಯಣ ಎನ್ನುವ ಶೀರ್ಷಿಕೆ ಇಡಲಾಗಿದೆ.
ಸೀತಾಯಣ ಕೌಟುಂಬಿಕ ಕಥೆಯ ಜತೆಗೆ , ನನವಿರಾದ ಪ್ರೇಮ ಕಥೆಯನ್ನು ಒಳಗೊಂಡಿದೆ. ನಾಯಕ ತಾನು ಪ್ರೀತಿಸಿದ ಹುಡುಗಿ ಯನ್ನು ವರಿಸಲು ಸಿದ್ಧವಾಗಿರುತ್ತಾನೆ. ಆದರೆ ಇದಕ್ಕೆ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗುತ್ತವೆ. ನಾಯಕಿಯನ್ನು ಅಪಹರಿಸಿ ನಾಯಕನಿಂದ ದೂರ ಮಾಡುವ ಪ್ರಯತ್ನವೂ ನಡೆಯುತ್ತದೆ. ಹೀಗೆ ಏನೇ ಅಡ್ಡಿ ಬಂದರೂ ಖಳರನ್ನು ಸೆದೆಬಡಿದು ನಾಯಕ ಹೇಗೆ ತನ್ನ ಪ್ರಿಯತಮೆಯನ್ನು ಕಾಪಾಡಿಕೊಳ್ಳುತ್ತಾನೆ ಎಂಬುದೇ ಚಿತ್ರದ ಸ್ಟೋರಿ. ಇದಕ್ಕೆ ಒಂದಷ್ಟು ಆಕ್ಷನ್, ಮನರಂಜನೆಯ ಅಂಶಗಳನ್ನು ಬೆರೆಸಿ ತೆರೆಗೆ ತಂದಿದ್ದಾರೆ ನಿರ್ದೇಶಕ ಪ್ರಭಾಕರ್ ಆರಿಪ್ಕ.
ಚಿತ್ರಕ್ಕೆ ಶಕ್ತಿ ತುಂಬಿದ ಅಪ್ಪು
ಸೀತಾಯಣ ಚಿತ್ರಲ್ಲಿ ಕರುನಾಡ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದನಿಯಲ್ಲಿ ಹಾಡೊಂದು ಮೂಡಿಬಂದಿದೆ. ಈ ಹಾಡು ಇಡೀ ಚಿತ್ರತಂಡಕ್ಕೆ ಶಕ್ತಿತುಂಬಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಕೂಡ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಹಾಗಾಗಿ ಚಿತ್ರ ಬಿಡುಗಡೆಗೂ ಮುನ್ನವೇ ಕುತೂಹಲ ಕೆರಳಿಸಿತ್ತು. ರಾಮಾಯಣದಂತೆಯೇ ಇಲ್ಲಿಯೂ ನಾಯಕ, ನಾಯಕಿ, ಖಳನಾಯಕ ಇದ್ದಾರೆ. ಅದಕ್ಕಾಗಿಯೇ ಈ ಚಿತ್ರಕ್ಕೆ ಸೀತಾಯಣ ಎನ್ನುವ ಶೀರ್ಷಿಕೆ ಇಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಪ್ರಭಾಕರ್ ಆರಿಪ್ಕ.
ಮಂಗಳೂರು, ಆಗುಂಬೆ, ವಿಶಾಖ ಪಟ್ಟಣ, ಹೈದರಬಾದ್ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕವಿರಾಜ್ ಮತ್ತು ಗೌಸ್‌ಪೀರ್ ಸಾಹಿತ್ಯದ ಹಾಡುಗಳಿಗೆ ಪದ್ಮನಾಭ ಭಾರದ್ವಾಜ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದುರ್ಗಪ್ರಸಾದ್ ಕೊಲ್ಲಿ, ಸಂಕಲನ ಪ್ರವೀಣ್ ಪುಡಿ ಅವರದಾಗಿದೆ ನಾನು ನಟಿಸಿರುವ ಪ್ರಥಮ ಚಿತ್ರಕ್ಕೆ ಅಪ್ಪು ಸರ್ ಹಾಡಿರುವುದು ನನ್ನ ಅದೃಷ್ಟ. ಶಿವರಾಜ್ ಕುಮಾರ್ ಅವರು ಪೋಸ್ಟರ್ ಬಿಡುಗಡೆ ಮಾಡಿದರೆ, ಉಪೇಂದ್ರ ಅವರು ಹಾಡನ್ನು ಅನಾವರಣಗೊಳಿಸಿದರು.
ಚಿತ್ರದಲ್ಲಿ ಪ್ರೀತಿಯ ಕಥೆ ಇದೆ. ವಿರಾಮದ ನಂತರ ಥ್ರಿಲ್ಲರ್ ಅಂಶಗಳಿಂದ ಚಿತ್ರ ಸಾಗುತ್ತದೆ. ಟ್ವಿಸ್ಟ್ ಪಡೆದುಕೊಳ್ಳುತ್ತಾ ನೋಡುಗ ರನ್ನು ಕುತೂಹಲದ ಅಲೆಯಲ್ಲಿ ತೇಲಿಸುತ್ತದೆ. ಮದ್ಯಮ ವರ್ಗದ ಹುಡುಗನಾಗಿ ಸಮಸ್ಯೆಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿ ಕೊಂಡು ಹೇಗೆ ಹೊರಗೆ ಬರುತ್ತಾನೆ ಎನ್ನುವ ಪಾತ್ರ ನನ್ನದು. ಮಾತೃ ಭಾಷೆ ಕನ್ನಡವಾಗಿರುವುದರಿಂದ ಚಿತ್ರವನ್ನು ಮೊದಲು ಇಲ್ಲಿ ರಿಲೀಸ್ ಮಾಡಿ ಮುಂದಿನ ದಿನಗಳಲ್ಲಿ ತೆಲುಗಿನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎನ್ನತ್ತಾರೆ ಅಕ್ಷಿತ್ ಶಶಿಕುಮಾರ್. ಪರಭಾಷಾ ಬೆಡಗಿ ಅನಹಿತಾ ಭೂಷಣ್ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.