Saturday, 12th October 2024

ಶುಗರ್‌ಲೆಸ್‌ಗೆ ಶರಣ್ ಹಿನ್ನೆಲೆ ದನಿ

ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಕೆ.ಎಂ.ಶಶಿಧರ್, ನಿರ್ದೇಶನಕ್ಕೂ ಧುಮುಕಿ ದ್ದಾರೆ. ತಾವೇ ಸ್ವತಃ ಕಥೆ, ಚಿತ್ರಕಥೆ ಬರೆದು ಶುಗರ್ ಲೆಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜತೆಗೆ ಚಿತ್ರ ನಿರ್ಮಾಣದ ಜವಬ್ದಾರಿಯನ್ನೂ ಹೊತ್ತಿದ್ದಾರೆ.

ಶೀರ್ಷಿಕೆಯ ಮೂಲಕವೇ ಕುತೂಹಲ ಮೂಡಿಸಿರುವ ಶುಗರ್ ಲೆಸ್ ಚಿತ್ರಕ್ಕೆ ಹಾಸ್ಯನಟ ಶರಣ್ ಹಿನ್ನೆಲೆ ದನಿ ನೀಡಿದ್ದಾರೆ. ಚಿತ್ರದುದ್ದಕ್ಕೂ ಶರಣ್ ಅವರ ಪಂಚಿಂಗ್ ಡೈಲಾಗ್ ಕೇಳಬಹುದಾಗಿದೆ. ಸಸ್ಪೆನ್ಸ್ ಜತೆಗೆ ನವಿರಾದ ಹಾಸ್ಯದ ನಿರೂಪಣೆಯೂ ಶುಗರ್ ಲೆಸ್‌ಗೆ ರುಚಿತುಂಬಿದೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಉಳಿದಂತೆ ಹಿರಿಯ ನಿರ್ದೇಶಕ ಎಸ್.ನಾರಾಯಣ್, ದತ್ತಣ್ಣ, ಪದ್ಮಜಾರಾವ್, ರಘು ರಾಮನಕೊಪ್ಪ, ಧರ್ಮಣ್ಣ ಕಡೂರ್, ನವೀನ್.ಡಿ.ಪಡೀಲ್, ಗಿರೀಶ್ ಜತ್ತಿ, ಹೊನ್ನವಳ್ಳಿ ಕೃಷ್ಣ, ಮಾಲತಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಲವಿತ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಗುರು ಕಶ್ಯಪ್ ಸಂಭಾಷಣೆ ಚಿತ್ರಕ್ಕಿದೆ. ರಾಜ್ಯದ ಸುಂದರ ತಾಣಗಳಲ್ಲಿ ನಲವತ್ತೈದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.