Thursday, 12th December 2024

ಘೀಳಿಡಲಿದೆ ಮದಗಜ – ಮಾಸ್‌ ಲುಕ್‌ನಲ್ಲಿ ಶ್ರೀಮುರಳಿ

ಪ್ರಶಾಂತ್‌ ಟಿ.ಆರ್‌

ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಹುಟ್ಟುಹಬ್ಬದ ಸಂಭ್ರಮ. ಈ ಪ್ರಯುಕ್ತ ಶ್ರೀಮುರಳಿಗೆ ಭರ್ಜರಿ ಬರ್ತ್‌ಡೇ ಗಿ- ಸಿಕ್ಕಿದೆ. ಬಹುನಿರೀಕ್ಷಿತ ‘ಮದಗಜ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ರಿಲೀಸ್ ಮಾಡಿದ ಈ ಟೀಸರ್‌ನಲ್ಲಿ ಮುರಳಿ ಮಾಸ್‌ಲುಕ್‌ನಲ್ಲಿ ಮಿಂಚಿದ್ದಾರೆ.

ವಾರಣಾಸಿಯಲ್ಲಿ ಬೆಂಕಿ ಉಗುಳುವ ರಾಶಿಯ ನಡುವೆ ಚುಟ್ಟ ಹಿಡಿದ ಶ್ರೀಮುರಳಿ, ರಗಡ್ ಆಗಿ ಕಂಗೊಳಿಸುತ್ತಾರೆ. ‘ಪಂದ್ಯ ಗೆಲ್ಲಬೇಕು ಅನ್ನೋವ್ನು ಪಾಯಿಂಟ್‌ಗೋಸ್ಕರ ಆಡ್ತಾನೆ. ಪಟ್ಟ ಗೆಲ್ಲಬೇಕು ಅನ್ನೋವ್ನು ಪಾಯಿಂಟಲ್ಲೇ ಹೊಡಿತಾನೇ’ ಎನ್ನುವ ಡೈಲಾಗ್ ಸಿನಿಪ್ರಿಯರನ್ನು ಸೆಳೆಯುತ್ತಿದೆ. ಶ್ರೀಮುರಳಿಯ ಕಂಚಿನ ಕಂಠದಲ್ಲೇ ಟೀಸರ್ ಮೂಡಿಬಂದಿದೆ. ಟೀಸರ್ ನೋಡು ತ್ತಿದ್ದರೆ, ಇದು ಪಕ್ಕಾ ಆಕ್ಷನ್ ಸಿನಿಮಾ ಅನ್ನುವುದರಲ್ಲಿ ಅನುಮಾನವೇ ಇಲ್ಲ.

ರೋರಿಂಗ್ ಸ್ಟಾರ್ ಕೂಡ ಆಕ್ಷನ್ ಹೀರೋ ಆಗಿರುವುದುರಿಂದ ಸಹಜವಾಗಿಯೇ ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದೆ. ‘ಮದಗಜ‘ ಚಿತ್ರದ ಬಹುತೇಕ ಚಿತ್ರೀಕರಣ ವಾರಣಾಸಿಯಲ್ಲಿಯೇ ನಡೆದಿದೆ. ಉಳಿದಂತೆ ಬೆಂಗಳೂರು, ಮೈಸೂರಿನಲ್ಲಿಯೂ ಚಿತ್ರೀಕರಿ ಸಲಾಗಿದೆ. ಮಹೇಶ್ ಕುಮಾರ್ ಚಿತ್ರಕ್ಕೆ ಆಕ್ಷನ್‌ಕಟ್ ಹೇಳಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದಾರೆ. ಶ್ರೀಮುರಳಿಗೆ, ಆಶಿಕಾ ರಂಗನಾಥ್ ಜತೆಯಾಗಿದ್ದಾರೆ. ತೆಲುಗಿನ ಖ್ಯಾತ ಖಳನಟ ಜಗಪತಿಬಾಬು ಈ ಚಿತ್ರದಲ್ಲಿಯೂ ಖದರ್ ಖಳನಾಗಿ ಆರ್ಭಟಿಸಲಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ಕಾಮಿಡಿ ಕಚಗುಳಿಯಿಡಲಿದ್ದಾರೆ.

ಬಘೀರನಾದ ರೋರಿಂಗ್‌ ಸ್ಡಾರ್‌

ಪ್ರಸಿದ್ಧ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿದ್ದು, ‘ಬರ’
ಶೀರ್ಷಿಕೆ ಯಲ್ಲಿ ಚಿತ್ರ ಮೂಡಿಬರಲಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಲಿದ್ದು, ಶ್ರೀಮುರಳಿ ಈ ಚಿತ್ರಲ್ಲಿಯೂ ಮಾಸ್ ಲುಕ್‌ನಲ್ಲಿಯೇ ಮಿಂಚಲಿದ್ದಾರೆ. ‘ಉಗ್ರಂ’ ನಂತರ ಶ್ರೀಮುರಳಿ ಹಾಗೂ ಪ್ರಶಾಂತ್ ನೀಲ್ ಜೋಡಿ ಮತ್ತೊಮ್ಮೆ ಒಂದಾ ಗಿದೆ. ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಕೂತೂಹಲ ಮೂಡಿಸಿದೆ. ಇಲ್ಲಿ ಶ್ರೀಮುರಳಿ ಪೊಲೀಸ್ ಅಧಿಕಾರಿಯಾಗಿ ಖಾಕಿ ತೊಟ್ಟು, ಖದರ್ ತೋರಲಿದ್ದಾರೆ. ಸಮಾಜದ ಘಾತುಕ ಶಕ್ತಿಗಳ ವಿರುದ್ದ ಹೋರಾಡಲು ರೋರಿಂಗ್ ಸ್ಟಾರ್ ಮತ್ತೊಮ್ಮೆ ಉಗ್ರಾವತಾರ ತಾಳಲಿದ್ದಾರೆ.

ಕೋಟ್ಸ್‌

ಸಿನಿಮಾ ರಂಗದಲ್ಲಿ ತಂತ್ರಜ್ಞನಾಗಿ 10 ವರ್ಷ ಅನುಭವ ಹೊಂದಿದ್ದೇನೆ. ಪ್ರೇಕ್ಷಕನಾಗಿಯೂ 35 ವರ್ಷ ಅನುಭವವಿದೆ. ನಾನು ಒಬ್ಬ ಪ್ರೇಕ್ಷಕನಾಗಿ ಮದಗಜ ಟೀಸರ್ ಬಗ್ಗೆ ಹೇಳುವುದಾದರೆ, ಅದೊಂದು ಅದ್ಭುತ ಟೀಸರ್, ಚಿತ್ರತಂಡಕ್ಕೆ ಶುಭ ಹಾರೈಕೆಗಳು. ಟೀಸರ್‌ನಲ್ಲಿ ಶ್ರೀಮುರಳಿ ಘರ್ಜಿಸುತ್ತಿದ್ದಾರೆ. ಅವರು ಮುಂದೆಯೂ ಹೀಗೆಯೇ ಘರ್ಜಿಸುತ್ತಲೇ ಇರಬೇಕು

– ಪ್ರಶಾಂತ್ ನೀಲ , ನಿರ್ದೇಶಕ

ಶೇ 80ರಷ್ಟು ಚಿತ್ರೀಕರಣ ಮುಗಿದಿದೆ. ಉಳಿದ ಭಾಗವನ್ನು ಬಾಗೇಪಲ್ಲಿ ಹಾಗೂ ಮೇಕೆದಾಟು ವಿನಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಿಕೊಂಡಿದ್ದೇವೆ. ಜನವರಿ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಮುಕ್ತಾಯವಾಗಲಿದ್ದು, ಏಪ್ರಿಲ್‌ನಲ್ಲಿ ಚಿತ್ರವನ್ನು ತೆರೆಗೆ ತರಬೇಕು ಅಂದುಕೊಂಡಿದ್ದೇವೆ. ಕನ್ನಡ ಮತ್ತು, ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ರಿಲೀಸ್ ಆಗಲಿದೆ. ಹಿಂದಿ, ತಮಿಳಿನಲ್ಲಿಯೂ ಬೇಡಿಕೆ ಬಂದಿದೆ. ಹಾಗಾಗಿ ಮದಗಜ ಪ್ಯಾನ್ ಇಂಡಿಯಾ ಸಿನಿಮಾ ಆಗಬಹುದು ಎಂಬ ನಂಬಿಕೆ ನನ್ನಲ್ಲಿದೆ.
– ಮಹೇಶ್ ಕುಮಾರ್, ನಿರ್ದೇಶಕ