Thursday, 12th December 2024

ಗೌಳಿಯಲ್ಲಿ ರಗಡ್‌ ಲುಕ್‌ ತಾಳಿದ ಶ್ರೀನಗರ ಕಿಟ್ಟಿ

ಬಹುದಿನಗಳ ಬಳಿಕ ಶ್ರೀನಗರ ಕಿಟ್ಟಿ ಭರ್ಜರಿಯಾಗಿ ತೆರೆಗೆ ಬರಲು ರೆಡಿಯಾಗಿದ್ದಾರೆ. ಈ ಬಾರಿ ರಗಡ್ ಲುಕ್ ತಾಳಿದ್ದು, ಗೌಳಿಯಾಗಿ ಅಬ್ಬರಿಸಲು ಸಿದ್ಧವಾ ಗಿದ್ದಾರೆ.

ಗೌಳಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಮನಸೂರೆಗೊಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್ ಎಲ್ಲರೂ ಸೇರಿ ಚಿತ್ರದ ಟೀಸರ್ ರಿಲೀಸ್ ಮಾಡಿ ದರು. ಚಿತ್ರತಂಡಕ್ಕೆ ಶುಭಕೋರಿದರು. ಗೌಳಿ ಚಿತ್ರಕ್ಕೆ ಸೂರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಕಿಟ್ಟಿಯ ಈ ಶ್ರಮಕ್ಕೆ ನೂರಕ್ಕೆ ನೂರರಷ್ಟು ಫಲ ಸಿಗುತ್ತದೆ. ಚಿತ್ರದಲ್ಲಿ ನೇಟಿವಿಟಿಯನ್ನು ಚೆನ್ನಾಗಿ ತೋರಿಸಿದ್ದಾರೆ ಎಂದು ಗಣೇಶ್ ಮೆಚ್ಚಿಕೊಂಡರು. ನಮ್ಮ ಟೀಂಗೆ ಕಿಟ್ಟಿ ಕ್ಯಾಪ್ಟನ್ ಇದ್ದಂತೆ, ಕಿಟ್ಟಿಗೆ ಈ ರೀತಿಯ ಪಾತ್ರ ಮೊದಲೇ ಸಿಗಬೇಕಿತ್ತು. ಈ ಚಿತ್ರದ ಟೀಸರ್ ನೋಡುತ್ತಿದ್ದರೆ, ಸಿನಿಮಾದಲ್ಲಿ ಹೊಸ ತನ ಇರುವುದು ಭಾಸವಾಗುತ್ತದೆ. ಬೇರೆ ಭಾಷೆಯ ಸಿನಿಮಾಗಳನ್ನು ಮೀರಿಸುವಂತೆ ಗೌಳಿಯ ಟೀಸರ್ ಮೂಡಿಬಂದಿದೆ ಎಂದು ದುನಿಯಾ ವಿಜಯ್ ಮೆಚ್ಚುಗೆ ವ್ಯಕ್ತಪಡಿಸಿದರು.

ಗೌಳಿ ನೈಜಘಟನೆ ಆಧರಿಸಿದ ಚಿತ್ರ, ಈ ಘಟನೆ ನಡೆದಿದ್ದು, ಬೇರೆ ರಾಜ್ಯದಲ್ಲಿ ಅದನ್ನು ಕರ್ನಾಟಕದಲ್ಲಿ ನಡೆದಂತೆ ಚಿತ್ರದಲ್ಲಿ ತೋರಿಸಲಾಗಿದೆ. ಈ ಕಥೆ ಮಾಡಿ ಕೊಂಡಾಗ ಗೌಳಿಯ ಪಾತ್ರವನ್ನು ಕಿಟ್ಟಿ ಅವರಿಂದಲೇ ಮಾಡಿಸಬೇಕೆಂದುಕೊಂಡಿದ್ದೆ. ಕಥೆ, ಪಾತ್ರ ಕೇಳಿದ ಕೂಡಲೇ ಕಿಟ್ಟಿ ನಟಿಸಲು ಒಪ್ಪಿದರು. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ, ಯಲ್ಲಾಪುರ, ಮುಂಡಗೋಡು ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಮೊದಲ ಹಂತದ ಶೂಟಿಂಗ್ ನಡೆಸಿದ್ದೇವೆ. ಬೆಂಗಳೂರು ಸುತ್ತಮುತ್ತ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ಕೊನೆಯ ಹಂತದ ಚಿತ್ರೀಕರಣ ಮಾತ್ರ ಬಾಕಿ ಇದೆ. ಈ ಟೀಸರ್ ಬರೀ ಸ್ಯಾಂಪಲ್ ಅಷ್ಟೇ, ಚಿತ್ರದಲ್ಲಿ ಇನ್ನೂ ಸಾಕಷ್ಟು ವಿಶೇಷಗಳಿವೆ ಎನ್ನುತ್ತಾರೆ ನಿರ್ದೇಶಕ ಸೂರ. ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದು, ಗ್ರಾಮೀಣ ಮಹಿಳೆಯಾಗಿ ಬಣ್ಣ ಹಚ್ಚಿದ್ದಾರೆ. ಬಾಲನಟಿ ನಮನಾ ಕಿಟ್ಟಿಯ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು, ಶರತ್ ಲೋಹಿತಾಶ್ವ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಹನ್ ಫಿಲಂ ಫ್ಯಾಕ್ಟರಿ ಮೂಲಕ ರಘುಸಿಂಗಂ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

***

ಚಿತ್ರದ ಪ್ರತಿಯೊಂದು ಶಾಟ್ ನಮ್ಮ ನಿರ್ದೇಶಕರ ಕನಸು. ಸಿನಿಮಾದಲ್ಲಿ ಅಭಿನಯಿಸಿದ ಎಲ್ಲರೂ ಚಿತ್ರಕ್ಕೆ ಜೀವ ತುಂಬಿದ್ದಾರೆ. ಸಂಗೀತ ನಿರ್ದೇಶಕರು,
ಛಾಯಾಗ್ರಾಹಕರು, ಸಂಕಲನಕಾರರ ಕೈಚಳದಿಂದ ಚಿತ್ರದ ಪ್ರತಿದೃಶ್ಯವೂ ಅದ್ಭುತವಾಗಿ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಗೌಳಿಯ ಬಗ್ಗೆ ನನಗೆ ಅಪಾರ ನಿರೀಕ್ಷೆ ಇದೆ. -ಶ್ರೀನಗರ ಕಿಟ್ಟಿ ನಟ