Sunday, 15th December 2024

ಶುಗರ್‌ ಫ್ಯಾಕ್ಟರಿಯಲ್ಲಿ ಸಂಗೀತದ ಸಿಹಿ

ಪ್ರಶಾಂತ್‌ ಟಿ.ಆರ್‌

ಲವ್ ಮಾಕ್ಟೇಲ್ ಬಳಿಕ ಡಾರ್ಲಿಂಗ್ ಕೃಷ್ಣ ಶುಗರ್ ಫ್ಯಾಕ್ಟರಿ ಸೇರಿದ್ದಾರೆ. ಈ ಟೈಟಲ್ ಕೇಳಿದಾಕ್ಷಣ ಇದು ಸಕ್ಕರೆ ಕಾರ್ಖಾನೆಯಲ್ಲಿ ನಡೆಯುವ ಕಥೆಯೇ ಅನ್ನಿಸಬಹುದು. ಖಂಡಿತಾ ಇಲ್ಲ, ಒಂದು ನಿರ್ದಿಷ್ಟ ಜಾಗದ ಸುತ್ತ ನಡೆಯುವ ಕಥೆಯೇ ಶುಗರ್ ಫ್ಯಾಕ್ಟರಿ. ಅದು ಏನು ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು. ಆದರೆ ಒಂದಂತು ಸತ್ಯ. ಸಿನಿಪ್ರಿಯರಿಗೆ ಶುಗರ್ ಫ್ಯಾಕ್ಟರಿ, ಸಿಹಿ ಉಣಿಸುವುದು ಖಚಿತ.

ಒಂದು ನಿರ್ದಿಷ್ಟ ಪ್ರದೇಶದ ಸುತ್ತ ನಡೆಯುವ ಕಥೆಯೇ ಈ ಶುಗರ್ ಫ್ಯಾಕ್ಟರಿ ಎಂದಾದ ಮೇಲೆ, ಆ ಪ್ರದೇಶ ಯಾವುದು. ಅಂತಹ ವಿಶೇಷ ಆ ಜಾಗದಲ್ಲಿ ಏನಿದೆ ಎಂಬ ಕ್ಯೂರಿಯಾಸಿಟಿ ಕಾಡುತ್ತದೆ. ಅದೆಲ್ಲದಕ್ಕೂ ತೆರೆಯಲ್ಲಿಯೇ ಉತ್ತರ ಸಿಗಲಿದೆಯಂತೆ.

ನವಿರಾದ ಪ್ರೇಮಕಥೆ

ಶುಗರ್ ಫ್ಯಾಕ್ಟರಿಯಲ್ಲಿ ನವಿರಾದ ಪ್ರೇಮಕಥೆ ಅಡಕವಾಗಿದೆ. ತ್ರಿಕೋನ ಪ್ರೇಮಕಥೆಯಲ್ಲಿ ಚಿತ್ರ ಸಾಗಲಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಒಬ್ಬನೇ ನಾಯಕ, ಮೂವರು ನಾಯಕರಿಯ ರಿದ್ದಾರೆ. ಹಾಗಾಗಿ ನಾಯಕ ಯಾರನ್ನು ಇಷ್ಟಪಡುತ್ತಾನೆ. ಕೊನೆಗೆ ಯಾರನ್ನು ವರಿಸುತ್ತಾನೆ ಎಂಬ ಕೌತುಕವೂ ಇಲ್ಲಿದೆ. ಚಿತ್ರ ಕಣ್ತುಂಬಿಕೊಂಡ ಮೇಲೆಯೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ
ಸಿಗಲಿದೆ. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿದ್ದು, ಇವರಿಗೆ ಜತೆಯಾಗಿ ಸೋನಾಲ್ ಮಂತೇರೊ, ಶಿಲ್ಪಾ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ ಬಣ್ಣಹಚ್ಚಿದ್ದಾರೆ.

ನೈಜಕಥೆಗೆ ಕಾಲ್ಪನಿಕತೆಯ ಸ್ಪರ್ಶ

ನಿರ್ದೇಶಕ ದೀಪಕ್ ಶುಗರ್ ಫ್ಯಾಕ್ಟರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ತಾವು ಕಂಡ ನೈಜ ಘಟನೆಯನ್ನೇ ಆಧರಿಸಿ, ಕಥೆ ಹೆಣೆದು ಅದನ್ನು ಸಿನಿಮಾ ರೂಪಕ್ಕೆ ತರುವಲ್ಲಿಯೂ ಯಶಸ್ವಿಯಾಗಿದ್ದಾರೆ. ನೈಜ ಘಟನೆಯಾದರೂ, ಅದಕ್ಕೊಂದಿಷ್ಟು ಕಾಲ್ಪನಿಕತೆಯ ಸ್ಪರ್ಶ ನೀಡಿ, ಒಂದಷ್ಟು ಮನರಂಜನೆಯನ್ನು ಬೆರೆಸಿ, ಅಚ್ಚುಕಟ್ಟಾಗಿ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ.

ಈಗಾಗಲೇ ಬಹುತೇಕ ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡ, ಉಳಿದ ಭಾಗವನ್ನು ವಿದೇಶದಲ್ಲಿ ಶೂಟ್ ಮಾಡಲು ನಿರ್ಧರಿಸಿತ್ತು. ಆದರೆ ಅಷ್ಟರಲ್ಲಿ ಬಂದೆರಗಿದ ಕರೋನಾ ಮಹಾಮಾರಿ ಚಿತ್ರೀಕರಣಕ್ಕೆ ತಡೆ ಯೊಡ್ಡಿದೆ. ಹಾಗಾಗಿ ಉಳಿದ ಭಾಗವನ್ನು ಲಾಕ್‌ಡೌನ್ ಬಳಿಕ ಚಿತ್ರೀಕರಿಸಲು ನಿರ್ದೇಶಕರು ರೆಡಿಯಾಗಿದ್ದಾರೆ. ಅದಕ್ಕಾಗಿ ಇನ್ನೇನು ತಮ್ಮ ತಂಡದೊಂದಿಗೆ ಅಬ್ರಾಡ್‌ಗೂ ಹಾರಲಿದ್ದಾರೆ.

ಸಂಗೀತದ ರಸದೌತಣ

ಶುಗರ್ ಫ್ಯಾಕ್ಟರಿಯ ವಿಶೇಷವೇ ಚಿತ್ರದ ಹಾಡುಗಳು. ಇಂದಿನ ಯುವಜನಾಂಗವೇ ಮೆಚ್ಚು ವಂತಹ ಮ್ಯೂಸಿಕಲ್ ಲವ್ ಸ್ಟೋರಿ ನೀಡಬೇಕೆಂಬ ಮಹದಾಸೆಯಿಂದ ನಿರ್ದೇಶಕ ದೀಪಕ್, ಚಿತ್ರದಲ್ಲಿ ಕಥೆಯಂತೆಯೇ ಹಾಡುಗಳಿಗೂ ಕೂಡ ಪ್ರಾಮುಖ್ಯತೆ ನೀಡಿದ್ದಾರೆ.

ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಜಯಂತ್ ಕಾಯ್ಕಿಣಿ, ಚಂದನ್ ಶೆಟ್ಟಿ, ಯೋಗರಾಜ್ ಭಟ್, ಚೇತನ್ ಹೀಗೆ ಏಳು ಚಿತ್ರ ಸಾಹಿತಿಗಳು ಈ ಹಾಡುಗಳನ್ನು ರಚಿಸಿದ್ದಾರೆ. ಚಂದನ್ ಶೆಟ್ಟಿ ಗೀತೆ ರಚಿಸುವುದರ ಜತೆಗೆ ಒಂದು ಹಾಡಿಗೆ ದನಿಯಾಗಿದ್ದಾರೆ. ಉಳಿದಂತೆ ವಿಜಯ್ ಪ್ರಕಾಶ್, ಅರ್ಮಾನ್ ಮಲ್ಲಿಕ್, ಸಂಚಿತ್ ಹೆಗ್ಡೆ ದನಿಯಲ್ಲಿ ಮಧುರವಾದ ಹಾಡುಗಳು ಮೂಡಿಬಂದಿವೆ.
ಕಬೀರ್ ರಫೀ ಅವರ ಸಂಗೀತ ಚಿತ್ರಕ್ಕಿದೆ.

ತಲೆದೂಗಿದ ವಿದೇಶಿಯರು ಈಗಾಗಲೇ ಚಿತ್ರದ ಒಂದು ಹಾಡನ್ನು ಗೋವಾದಲ್ಲಿ ಚಿತ್ರೀಕರಿಸಲಾಗಿದೆ. ಯೋಗರಾಜ್ ಭಟ್ ರಚನೆಯ ಗೀತೆ ಇದಾಗಿದ್ದು, ಈ ಹಾಡಿನ ಚಿತ್ರೀಕರಣ ಸಂದರ್ಭ, ಉತ್ತರ ಭಾರತದ ಕೆಲವು ಮಂದಿ ಸ್ವೆಚ್ಛೆಯಿಂದ ಹಾಡಿಗೆ
ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲ, ವಿದೇಶಿಯರು ಕೂಡ ಹಾಡಿಗೆ ತಲೆದೂಗಿದ್ದಾರೆ. ಇದು ಚಿತ್ರತಂಡಕ್ಕೆ ಸಂತಸ ತಂದಿದ್ದು, ಹಾಡುಗಳು ಸಂಗೀತ ಪ್ರಿಯರ ಮನ ಸೆಳೆಯಲಿವೆ ಎಂಬ ನಿರೀಕ್ಷೆ ಮೂಡಿದೆ.

***

ಕೆಲಸದ ನಿಮಿತ್ತ ತೆರಳುತ್ತಿರುವಾಗ ನನ್ನ ಕಣ್ಣಮುಂದೆಯೇ ಘಟನೆಯೊಂದು ನಡೆಯಿತು. ಅದು ನನ್ನ ಮನಸಿನ ಮೇಲೆ ಪರಿಣಾಮ ಬೀರಿತು. ಕಳೆದ ಬಾರಿ ಲಾಕ್‌ಡೌನ್ ಆದಾಗ ಮನೆಯಲ್ಲೇ ಉಳಿದಿದ್ದೆ. ಈ ಸಂದರ್ಭ ಆ ಘಟನೆ ನನ್ನನ್ನು ಬಿಡದೆ ಕಾಡಿತು. ಅದನ್ನು ಯಾಕೆ ಕಥೆಯ ರೂಪದಲ್ಲಿ ತರಬಾರದು ಎನ್ನಿಸಿತು. ಅಂತು ಕಥೆಯ ರೂಪದಲ್ಲಿ ಆ ಘಟನೆ ಸೇರಿತು. ಇದನ್ನು ಯಾಕೆ ಸಿನಿಮಾ ರೂಪದಲ್ಲಿ ತೆರೆಗೆ ತರಬಾರದು ಎಂದು ಚಿಂತಿಸಿದೆ. ಅದೇ ಸಮಯಕ್ಕೆ ಲವ್ ಮಾಕ್‌ಟೇಲ್ ಚಿತ್ರ ಬಿಡುಗಡೆ ಯಾಗಿತ್ತು. ಹಾಗಾಗಿ ಈ ಚಿತ್ರದಲ್ಲಿಯೂ ಕೃಷ್ಣ ನಟಿಸಿದರೆ ಸೂಕ್ತ ಎನ್ನಿಸಿತು. ಅದರಂತೆ ಅವರಿಗೆ ನಾನು ಬರೆದ ಕಥೆಯನ್ನು ನೀಡಿದೆ. ಅವರು ಮೆಚ್ಚಿದರು. ಅಂತು ಲಾಕ್‌ಡೌನ್ ಮುಗಿಯು ತ್ತಿದ್ದಂತೆ ಚಿತ್ರ ಸೆಟ್ಟೇರಿತು. ಈಗ ಬಹುತೇಕ ಚಿತ್ರೀಕರಣವೂ ಮುಗಿದಿದೆ. ಕರೋನಾ ಸಂಕಷ್ಟ ಮುಗಿದ ಮೇಲೆ ಉಳಿದ ಚಿತ್ರೀಕರಣ ಮುಗಿಸಿ ತೆರೆಗೆ ತರುವ ಯೋಜನೆ ಇದೆ.
-ದೀಪಕ್ ನಿರ್ದೇಶಕ