Sunday, 15th December 2024

ತುರ್ತು ನಿರ್ಗಮನದಲ್ಲಿ ಸುನೀಲ್‌ ರಾವ್ ರೀಎಂಟ್ರಿ

ಚಿತ್ರರಂಗದಿಂದ ದೂರ ಉಳಿದಿದ್ದ ಸುನೀಲ್ ರಾವ್ ಮತ್ತೆ ನಟನೆಗೆ ಮರಳಿ ಬಂದಿದ್ದಾರೆ. ಈ ಬಾರಿ ತುರ್ತು ನಿರ್ಗಮನದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಚಿತ್ರದ ಶೀರ್ಷಿಕೆಯಂತೆಯೇ ಚಿತ್ರದ ಕಥೆಯೂ ವಿಭಿನ್ನವಾಗಿದೆ.

ತುರ್ತು  ನಿರ್ಗಮನ ಹೊಸ ತಲೆಮಾರಿನ ಸೈ-ಫೈ ಕಲ್ಪನಾ ಕಥೆಯನ್ನು ಒಳಗೊಂಡಿದ್ದು, ಜನನ ಮತ್ತು ಮರಣದ ಸುತ್ತ ಚಿತ್ರದ ಕಥೆ ಸಾಗುತ್ತದೆ. ವಿಕ್ರಮ್ ಪಾತ್ರವೇ ಇಲ್ಲಿ ಪ್ರಧಾನವಾಗಿದೆ. ಜಡತ್ವದಿಂದ ಕೂಡಿದ ಗುಣವಿರುವ ನಾಯಕ ವಿಕ್ರಮ್‌ನ ಜನನ ಮತ್ತು ಮರಣದ ಸುತ್ತ ಸಿನಿಮಾದ ಸ್ಟೋರಿ ಸಾಗಲಿದೆ. ವಿಕ್ರಮ್ ಸಾವನ್ನಪ್ಪಿದ ನಂತರ ಮತ್ತೆ ಮೂರು ದಿವಸಗಳು ಜೀವಿಸುವ ಅವಕಾಶ ಸಿಗುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆತ ಏನು ಮಾಡಬಹುದು ಏನನ್ನು ಕಳೆದುಕೊಳ್ಳುತ್ತಾನೆ ಮತ್ತು ಏನನ್ನು ಪಡೆದು ಕೊಳ್ಳುತ್ತಾನೆ.

ಎಂಬುದನ್ನು ಫ್ಯಾಂಟಸಿ ಅಂಶಗಳನ್ನು ಬೆರೆಸಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಬದುಕೇ ಹಾಸ್ಯಾಸ್ಪದ ಎನಿಸುವ ಜನನ ಮತ್ತು ಮರಣದ ಹೊಸ ಅರ್ಥ ತೆರೆಯಲ್ಲಿ ಅನಾವರಣ  ವಾಗುತ್ತದೆ. ಇದೆಲ್ಲದರ ಜತೆಗೆ ಮಾಂತ್ರಿಕತೆ ಮತ್ತು ವಾಸ್ತವಿಕತೆ ನಡುವೆ ನಡೆಯುವ ಕಥೆ ಪ್ರೇಕ್ಷಕರನ್ನು ಸೆಳೆಯುತ್ತದೆ. ಇಂತಹ ಅದ್ಭುತ ಕಥೆ ಯನ್ನು ಹೇಮಂತ್ ಕುಮಾರ್ ಅಚ್ಚು ಕಟ್ಟಾಗಿ ತೆರೆಗೆ ತಂದಿದ್ದಾರೆ.

ಸೋಮಾರಿ ವಿಕ್ರಮ
ಎಲ್ಲರ ಜೀವನದ ಕಾಲಘಟ್ಟದಲ್ಲಿ ಕೆಲವೊಂದು ಸಂದಿಗ್ಧ ಪರಿಸ್ಥಿತಿಗಳು ಎದುರಾಗುತ್ತವೆ. ಕೆಲವರು ಜೀವನದಲ್ಲಿ ಬಂದ ಸವಾಲು ಗಳನ್ನು ಎದುರಿಸ ಲಾಗದೆ, ಏನನ್ನೂ ಸಾಧಿಸಲಾಗದೆ ಸೋಮಾರಿಯಾಗಿ ದಿನ ದೂಡುತ್ತಿರುತ್ತಾರೆ. ಅಂತಹದ್ದೇ ಗುಣಚಿತ್ರದ ನಾಯಕ ವಿಕ್ರಮನದ್ದು ಆತ ಬಲು ಸೋಮಾರಿ. ಇಷ್ಟ ಬಂದಾಗ ಏಳುವುದು, ಇಲ್ಲ ಆರಾಮಾಗಿ ಮಲಗಿಕೊಂಡಿರುವುದು.
ಸಿನಿಮಾಗೆ ಹೋಗುವುದು. ಚಿಕ್ಕಮಕ್ಕಳೊಂದಿಗೆ ಕ್ರಿಕೆಟ್ ಆಡುವುದು ಇಷ್ಟೇ ಜೀವನ ಅಂದುಕೊಂಡಿರುತ್ತಾನೆ.

ಹೀಗೆ ಸಮಯದ ಪರಿಜ್ಞಾನವೇ ಇಲ್ಲದ ಹುಡುಗನ ಲೈ-ನಲ್ಲಿ ಘಟನೆಯೊಂದು ನಡೆ ಯುತ್ತದೆ. ಆಗ ಆತನಿಗೆ ಕಾಲದ ಮಹತ್ವ ತಿಳಿಯುತ್ತದೆ. ಜೀವನವನ್ನು ಸರಿಪಡಿಸಿ ಕೊಳ್ಳುವ ಎರಡನೇ ಅವಕಾಶ ಸಿಕ್ಕಾಗ ಏನು ಮಾಡುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ವಿಕ್ರಮ್ ಆಗಿ ಸುನೀಲ್ ರಾವ್ ನಟಿಸಿದ್ದು, ಇಲ್ಲಿಯೂ ತಮ್ಮ ಸಹಜಾಭಿ ನಯದ ಮೂಲಕ ಸಿನಿಪ್ರಿಯರ ಮನ ಗೆಲ್ಲುತ್ತಾರೆ. ಈ ಚಿತ್ರಕ್ಕಾಗಿ ನಾಲ್ಕು ಕೆ.ಜಿ ತೂಕ ವನ್ನು ಹೆಚ್ಚಿಸಿಕೊಂಡಿದ್ದಾರೆ.

ನಿಜ ಜೀವನದ ದರ್ಶನ
ತುರ್ತು ನಿರ್ಗಮ ಪಾತ್ರಗಳ ಮೂಲಕವೇ ನಿಜ ಜೀವನದ ದರ್ಶನ ಮಾಡಿಸುತ್ತದೆ. ಈ ಹಿಂದಿನ ಚಿತ್ರಗಳಲ್ಲಿ ನಕ್ಕು ನಗಿಸಿದ್ದ ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಕ್ಯಾಬ್ ಚಾಲಕನಾಗಿ ಕಾಣಿಸಿಕೊಂಡಿದ್ದು, ಸೆಂಟಿಮೆಂಟ್ ಮೂಲಕ ಮನಗೆಲ್ಲುತ್ತಾರೆ. ಜೀವನದಲ್ಲಿ ಯಾವೆಲ್ಲಾ ಸಂಕಷ್ಟಗಳು ಎದುರಾಗುತ್ತವೆ ಎನ್ನುವುದು ರಾಜ್ ಪಾತ್ರದ ಮೂಲಕ ತೆರೆಯಲ್ಲಿ ಹಾದು ಹೋಗುತ್ತದೆ. ಕಿರಿಕ್ ಬೆಡಗಿ ಸಂಯುಕ್ತಾ ಹೆಗಡೆ ಕ್ರಿಕೆಟ್ ಕೋಚ್ ಆಗಿ ಅಭಿನಯಿಸಿದ್ದಾರೆ.

ಹಿತಾ ಚಂದ್ರಶೇಖರ್ ವಿಶೇಷ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಉಳಿದಂತೆ ನರ್ಸ್ ಆಗಿ ಸುಧಾರಾಣಿ, ವಾರ್ಡನ್ ಆಗಿ ಅಚ್ಯುತ ಕುಮಾರ್ ಇವರೊಂದಿಗೆ ಅಮೃತಾ ರಾಮಮೂರ್ತಿ, ನಾಗೇಂದ್ರಷಾ, ಅರುಣ್ ಬಾಲ್‌ರಾಜ್ ಮುಂತಾದವರು ನಟಿಸಿದ್ದಾರೆ. ಕ್ವಾಯರ್ ಮಾದರಿಯಲ್ಲಿ ಚಿತ್ರದ ಹಾಡುಗಳು ಮೂಡಿಬಂದಿವೆ. ಪ್ರಯಾಗ್ ಮುಕುಂದನ್, ಛಾಯಾಗ್ರಹಣ, ಬಿ.ಅಜಿತ್‌ಕುಮಾರ್ ಸಂಕಲನವಿದೆ. ನಿರ್ಮಾಪಕ ಭರತ್ ಕುಮಾರ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.