ಜೀವಾ, ಪಾರಿಜತದಲ್ಲಿ ಪ್ರೇಮದ ಕಥೆ ಹೇಳಿ ಮನಸೂರೆಗೊಂಡಿದ್ದ ನಿರ್ದೇಶಕ ಪ್ರಭು ಶ್ರೀನಿವಾಸ್, ಬಳಿಕ ಗಣಪ, ಕರಿಯಾ ೨ ಚಿತ್ರವನ್ನು ತೆರೆಗೆ ತಂದರು ಮಾಸ್ ಎಲಿಮೆಂಟ್ಸ್ ಮೂಲಕ ಎಲ್ಲರನ್ನೂ ರಂಜಿಸಿದ್ದರು. ಈಗ ಮತ್ತೊಂದು ವಿಭಿನ್ನ ಕಥೆಯ ಬಾಡಿ ಗಾಡ್ ಚಿತ್ರವನ್ನು ತೆರೆಗೆ ತಂದಿದ್ದಾರೆ.
ಹಾಗಂತ ಈ ಚಿತ್ರವೂ ಕಂಪ್ಲೀಟ್ ಲವ್ ಸ್ಟೋರಿಯೂ ಅಲ್ಲ, ಆಕ್ಷನ್ ಸಿನಿಮಾ ವೂ ಅಲ್ಲ. ಇದು ಡಾರ್ಕ್ ಹ್ಯೂಮರ್ ಜನರ್ನಲ್ಲಿ ಮೂಡಿ ಬಂದಿರುವ ಅಪರೂಪದ ಸಿನಿಮಾ. ಕಾಲ್ಪನಿಕತೆಗೆ ನೈಜತೆಯ ಸ್ಪರ್ಶ ನೀಡಿದ್ದು, ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಗೆ ತರಲಾಗಿದೆ. ಬಾಡಿಗಾಡ್ ಚಿತ್ರದ ಶಿರ್ಷಿಕೆ ಕೇಳಿದರೆ ಅಚ್ಚರಿಯಾಗುತ್ತದೆ. ವಿಭಿನ್ನತೆಯ ಕಥಾಹಂದರ ಚಿತ್ರದಲ್ಲಿರುವುದು ಸ್ಪಷ್ಟ ವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದವರು ಪಡುವ ಪಾಡು ಮನಸನ್ನು ಕಾಡುತ್ತದೆ. ಬದುಕಿನ ಬಂಡಿ ಸಾಗಿಸಲು ಪಡುವ ಹರಸಾಹಸ, ಈ ಹಾದಿಯಲ್ಲಿ ಎದುರಾಗುವ ಸಂದಿಗ್ಧತೆ ಪರಿಸ್ಥಿತಿಗಳು ಇವೆಲ್ಲವೂ ನೆನಪಾಗುತ್ತವೆ.
ಅಮಾಯಕನ ಅಲೆದಾಟ
ಚಿತ್ರದ ನಾಯಕ ಮಧ್ಯಮ ಕುಟುಂಬದ ಹುಡುಗ, ತನ್ನನ್ನು ನಂಬಿದವರನ್ನು ಸಲಹುವ ಹೊಣೆ ಆತನಿಗಿರುತ್ತದೆ. ಅದಕ್ಕಾಗಿ
ನೌಕರಿ ಅಗತ್ಯವಾಗಿರುತ್ತದೆ. ಎಲ್ಲೂ ಕೆಲಸ ಸಿಗದಿದ್ದಾಗ, ಒಬ್ಬ ರೋಗಪೀಡಿತ ವೃದ್ಧನನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿ ಕೊಳ್ಳುತ್ತಾನೆ. ಹಿರಿಯ ವ್ಯಕ್ತಿಯ ಮನೆಯವರೆಲ್ಲ ವಿದೇಶಕ್ಕೆ ಹಾರಿದ್ದರಿಂದ ನಾಯಕ, ವೃದ್ದನೊಂದಿಗೆ ಇರಬೇಕಾಗುತ್ತದೆ. ಈ ನಡುವೆ ಒಂದು ಕೊಲೆ ನಡೆಯುತ್ತದೆ. ಆ ಅಪರಾಧ ನಾಯಕನ ಮೇಲೆ ಬರುತ್ತದೆ. ಅಷ್ಟಕ್ಕೂ ಆ ಕೊಲೆ ಮಾಡಿದ್ದು ಯಾರು, ಆ
ಕೊಲೆಗೂ ನಾಯಕನಿಗು ಏನು ಸಂಬಂಧ, ತನ್ನ ಮೇಲಿನ ಅಪವಾದದಿಂದ ಹೇಗೆ ಪಾರಾಗುತ್ತಾನೆ ಎಂಬ ಪ್ರಶ್ನೆಗಳು ಕುತೂಹಲ ಮೂಡಿಸುತ್ತಾ ಸಾಗುತ್ತವೆ. ಈ ಕಾತರತೆಯ ನಡುವೆಯೆ ಚಿಕ್ಕದಾದರೂ ಚೊಕ್ಕಟ್ಟವಾದ ಪ್ರೇಮಕಥೆ, ಒಂದಷ್ಟು ಭಾವನಾತ್ಮಕತೆ ನಮ್ಮನ್ನು ಸೆಳೆಯುತ್ತದೆ.
ರಂಜಿಸುವ ಸಂಭಾಷಣೆ
ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವೃದ್ಧನ ಪಾತ್ರದಲ್ಲಿ ಬಣ್ಣಹಚ್ಚಿದ್ದು, ಪಂಚಿಂಗ್ ಡೈಲಾಗ್ಗಳ ಮೂಲಕವೇ ಕಾಮಿಡಿ ಕಚಗುಳಿ ಇಡುತ್ತಾರೆ. ಗುರು ಪ್ರಸಾದ್ ಅವರ ಸಾದಾ ಸೀದಾ ಅಭಿನಯ ಎಲ್ಲರನ್ನು ರಂಜಿಸುವುದು ಖಚಿತ. ಅದು ಈಗಾಗಲೇ ಟ್ರೇಲರ್ನಲ್ಲಿಯೇ ಸಾಬೀತಾಗಿದೆ. ಈ ಹಿಂದೆ ಮೊಗ್ಗಿನ ಮನಸು ಚಿತ್ರದಲ್ಲಿ ನಟಿಸಿದ್ದ ಮನೋಜ್ ಬಾಡಿಗಾಡ್ ಚಿತ್ರದ ನಾಯಕ ನಾಗಿ ಅಭಿನಯಿಸಿದ್ದಾರೆ.
ಉಳಿದಂತೆ ದೀಪಿಕಾ ಆರಾಧ್ಯಾ, ಪದ್ಮಜ ರಾವ್ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಶಕ್ತಿತುಂಬಿದ ಅಪ್ಪು ಬಾಡಿಗಾಡ್ ಚಿತ್ರದ ಹಾಡೊಂದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ದನಿಯಲ್ಲಿ ಮೂಡಿಬಂದಿದೆ. ಅರೇಸಾ..ಡಂಕಣಕ… ಎಂಬ ಹಾಡು ಇದಾಗಿದ್ದು, ಸಂಗೀತ ಪ್ರಿಯರನ್ನು ಮನಸೂರೆಗೊಂಡಿದೆ. ಈ ಹಾಡು ಚಿತ್ರಕ್ಕೆ ಶಕ್ತಿ ತುಂಬಿದೆ. ಹೊಸತನವನ್ನು ತಂದಿದೆ.
***
ಬಾಡಿಗಾಡ್ ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೇನ್ ಮೆಂಟ್ ಸಿನಿಮಾ. ಇಲ್ಲಿ ಲವ್ ಇದೆ. ಸೆಂಟಿಮೆಂಟ್ ಇದೆ, ನಗಿಸುವ ಕಾಮಿಡಿ ದೃಶ್ಯಗಳೂ ಇವೆ. ತೆರೆಯಲ್ಲಿ ಸಿನಿಮಾ ನೋಡು ತ್ತಿದ್ದರೆ, ನಾವು ಸಿಲುಕಿದ ಸಂದಿಗ್ಧ ಪರಿಸ್ಥಿತಿಗಳು ನಮ್ಮ ಕಣ್ಣಮುಂದೆ ಹಾದು ಹೋಗುತ್ತವೆ.
-ಪ್ರಭು ಶ್ರೀನಿವಾಸ್ ನಿರ್ದೇಶಕ