Sunday, 15th December 2024

ಸವಿಯಲು ಸಿದ್ಧವಾದ ತೋತಾಪುರಿ

ನವರಸ ನಾಯಕ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ತೋತಾಪುರಿ ಬಿಡುಗಡೆಯ ಸನಿಹದಲ್ಲಿದೆ. ವಿಜಯ ಪ್ರಸಾದ್ ಈ ಚಿತ್ರವನ್ನು ನಿರ್ದೇಶಿಸಿದ್ದು, ನೀರ್ ದೋಸೆ ಯಶಸ್ಸಿನ ಬಳಿಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಮತ್ತೆ ಈ ಚಿತ್ರದ ಮೂಲಕ ಒಂದಾಗಿದ್ದಾರೆ.

ತೋತಾಪುರಿ ಎರಡು ಭಾಗಗಳಾಗಿ ಮೂಡಿಬರುತ್ತಿದ್ದು, ಸದ್ಯದಲ್ಲೆ ತೋತಾಪುರಿಯ ಫಸ್ಟ್ ಲುಕ್ ಬಿಡುಗಡೆ ಯಾಗಲಿದೆ. ಇತ್ತೀಚೆಗಷ್ಟೇ ಕುಂಬಳಕಾಯಿ ಒಡೆದಿದ್ದ ತೋತಾಪುರಿ ಚಿತ್ರತಂಡ, ಈಗ ಡಬ್ಬಿಂಗ್ ಕಾರ್ಯವನ್ನು ಮುಗಿಸಿದೆ. ಕೆಲವು ದಿನಗಳ ಹಿಂದೆ ಜಗ್ಗೇಶ್ ಹಾಗೂ ಧನಂಜಯ್ ತಮ್ಮ ಪಾತ್ರಗಳ ಡಬ್ಬಿಂಗ್ ಮುಗಿಸಿ ದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂಣಗೊಳಿಸಿರುವ ಚಿತ್ರತಂಡ, ಶೀಘ್ರವೇ ತೋತಾಪುರಿಯನ್ನು ಪ್ರೇಕ್ಷಕರ ಮುಂದಿಡಲಿದೆ. ಜಗ್ಗೇಶ್ ನಟನೆಯ ಸಿನಿಮಾ ಎಂದ ಮೇಲೆ ಕಾಮಿಡಿ ಇರಲೇ ಬೇಕು. ಈ ಚಿತ್ರದಲ್ಲಿಯೂ ಭರಪೂರ ಹಾಸ್ಯ ದೃಶ್ಯಗಳಿದ್ದು, ಚಿತ್ರದುದ್ದಕ್ಕೂ ಪ್ರೇಕ್ಷಕರು ನಗೆಗಡಲಲ್ಲಿ ತೇಲಲಿದ್ದಾರೆ ಎನ್ನುತ್ತಾರೆ ನಿರ್ದೇಶಕ ವಿಜಯ ಪ್ರಸಾದ್.

ಚಿತ್ರದ ಪೋಸ್ಟರ್‌ಗಳು ಪ್ರೇಕ್ಷಕರ ಮನ ಸೆಳೆದಿವೆ. ಜಗ್ಗೇಶ್ ಜತೆಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಉಳಿದಂತೆ ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಕೇರಳ ಮುಂತಾದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎರಡನೇ ಮದುವೆ, ಗೋವಿಂದಾಯ ನಮಃ, ಶಿವಲಿಂಗ ಮೊದಲಾದ ಸೂಪರ್ ಹಿಟ್ ಸಿನಿಮಾ ಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ಈ ಚಿತ್ರ ನಿರ್ಮಾಣಕ್ಕೂ ಬಂಡವಾಳ ಹೂಡಿದ್ದಾರೆ.

ತೋತಾಪುರಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ನಿರಂಜನ್ ಬಾಬು ಛಾಯಾಗ್ರಹಣ ಮಾಡಿದ್ದಾರೆ.