ವಿಭಿನ್ನ ಕಥೆಯ ತ್ರಿಕೋನಾ ತೆರೆಗೆ ಬಂದಿದೆ. ಚಿತ್ರದ ಶಿರ್ಷಿಕೆ ಕೇಳಿದಾಕ್ಷಣ ಸಿನಿಮಾದಲ್ಲಿ ಗಟ್ಟಿ ಕಥೆ ಇರುವುದು ಸ್ಪಷ್ಟವಾಗುತ್ತದೆ. ಚಿತ್ರದ ಪೋಸ್ಟರ್ ಹಾಗೂ ಟೀಸರ್ ಇದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತವೆ.
ಇದು ಕಾಲದ ಕಥೆಯೇ ಇಲ್ಲ, ಅಘೋರಿ ಸ್ಟೋರಿಯೆ ಹೀಗೆ ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಇದೆಲ್ಲದಕ್ಕೂ ತೆರೆ ಯಲ್ಲಿಯೇ ಉತ್ತರ ಸಿಗಲಿದೆ ಎನ್ನು ತ್ತಾರೆ ನಿರ್ಮಾಪಕ ರಾಜಶೇಖರ್. ನಮ್ಮ ಸುತ್ತಮುತ್ತ ನಡೆದ ಕೆಲವು ಘಟನೆಗಳನ್ನು ಆಧರಿಸಿ ಚಿತ್ರದ ಕಥೆ ಹೆಣೆಯಲಾಗಿದೆ ಬಿಸಿರಕ್ತದ ಯುವಕರು ತಾಳ್ಮೆಯನ್ನೇ ಕಳೆದುಕೊಂಡಿದ್ದಾರೆ.
ಇದರಿಂದ ಸಾಕಷ್ಟು ಅಚಾತುರ್ಯಗಳು ಆಗುತ್ತವೆ. ವಯಸ್ಸಾದಂತೆ ನಮಗಿರಿವಿಲ್ಲದಂತೆ ತಾಳ್ಮೆ, ಸಹನೆ ನಮ್ಮನ್ನು ಆವರಿಸುತ್ತವೆ. ಆಗ ನಾವು ಹಿಂದೆ ಮಾಡಿದ ತಪ್ಪು ಒಪ್ಪುಗಳು ನಮ್ಮನ್ನು ಕಾಡುತ್ತವೆ. ಇದನ್ನು ಚಿತ್ರದಲ್ಲಿ ಹೇಳಲಾಗಿದೆ. ಪ್ರೇಕ್ಷಕರು ಸಿನಿಮಾ ವೀಕ್ಷಿಸಿ, ಚಿತ್ರಮಂದಿರದಿಂದ ಹೊರಗೆ ಬಂದ ಮೇಲೂ ಸಿನಿಮಾ ಬಿಡದೆ ಕಾಡುತ್ತದೆ.
ಕಾಡುವ ಕಥೆ: ತ್ರಿವಿಕ್ರಮ, ಕೋದಂಡ ರಾಮ, ನಟರಾಜ ಹೀಗೆ ಮೂರು ಕಥೆಗಳು ಚಿತ್ರದಲ್ಲಿವೆ. ಅವು ಮೂರು ಆಯಾಗಳಲ್ಲಿ ಸಾಗುತ್ತವೆ. ಇದರಲ್ಲಿ ಮತ್ತೊಂದು ವಿಭಿನ್ನ ಪಾತ್ರವೂ ಇದೆ. ಅದನ್ನು ಅಘೋರಿ ಅಂತಲಾದರೂ ಅಂದುಕೊಳ್ಳಬಹುದು, ಕಾಲ ಅಂದುಕೊಳ್ಳಬಹುದು, ನಾವು ಯಾವ ದೃಷ್ಟಿಕೋನದಲ್ಲಿ ನೋಡುತ್ತೇವೆಯೋ ಅಂತೆಯೇ ಆ ಪಾತ್ರ ನಮಗೆ ಭಾಸ ವಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮನ್ನು ನಾವು ತೆರೆಯಲ್ಲಿ ಕಾಣಬಹುದಾಗಿದೆ ಎನ್ನುತ್ತಾರೆ ನಿರ್ಮಾಪಕರು .
ಒಂದೇ ಕಥೆ ಮೂರು ದೃಷ್ಟಿಕೋನ: ನಿರ್ಮಾಪಕ ಪಿ.ರಾಜಶೇಖರ್ ತ್ರಿಕೋನ ಚಿತ್ರಕ್ಕೆ ವಿನೂತನ ಕಥೆ, ಚಿತ್ರಕಥೆ ಬರೆದು ಚಂದ್ರಕಾಂತ್ ಅವರಿಂದ ನಿರ್ದೇಶನ ಮಾಡಿಸಿದ್ದಾರೆ. ತ್ರಿಕೋನ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿದೆ. ಆಯಾ ಭಾಷೆಗೆ ತಕ್ಕಂತೆ ಚಿತ್ರಕಥೆ ಸಿದ್ದಪಡಿಸಿರುವುದು ವಿಶೇಷ. ಒಂದೇ ಕಥೆಯಲ್ಲಿ ಪ್ರಾರಂಭ ಹಾಗೂ ಅಂತ್ಯವನ್ನು ಮೂರು ವಿಭಿನ್ನ ರೀತಿಯಲ್ಲಿ ತೆರೆಯಲ್ಲಿ ಕಟ್ಟಿಕೊಡಲಾಗಿದೆ.
ಇದಕ್ಕಾಗಿ ಮೂರು ಸಂಗೀತ ನಿರ್ದೇಶಕರು ಅಲ್ಲಿನ ನೇಟಿವಿಟಿಗೆ ತಕ್ಕಂತೆ ಹಿನ್ನಲೆ ಸಂಗೀತ ನೀಡಿದ್ದಾರೆ. ಎಲ್ಲರ ಜೀವನದಲ್ಲಿ ನಡೆದಿರುವ, ನಡೆಯುತ್ತಿರುವ, ನಡೆಯುವಂತೆ ಇರುವ ಘಟನೆಗಳು ಚಿತ್ರದಲಿವೆ. ಇಪ್ಪತ್ತೈದು, ನಲವತ್ತರ ಆಸುಪಾಸಿನವರು, ಹಿರಿಯ ನಾಗರೀಕರು ಹೀಗೆ ಮೂರು ವಯೋಮಾನದವರ ಸನ್ನಿವೇಶಗಳು ತೆರೆಯಲ್ಲಿ ಸಾಗುತ್ತವೆ.