Sunday, 15th December 2024

ಹಾಡಿನಲ್ಲೇ ಮನಗೆದ್ದ ತ್ರಿವಿಕ್ರಮ

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ತ್ರಿವಿಕ್ರಮ ಜೂನ್ ೨೪ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನವೇ ತ್ರಿವಿಕ್ರಮ ಹಾಡುಗಳ ಮೂಲಕವೇ ಗಮನ ಸೆಳೆಯುತ್ತಿದೆ.

ರವಿಚಂದ್ರನ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಪ್ಲೀಸ್ ಮಮ್ಮಿ… ವಿಡಿಯೊ ಸಾಂಗ್ ರಿಲೀಸ್ ಮಾಡಿತ್ತು. ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯದಲ್ಲಿ ಮೂಡಿಬಂದಿರುವ ಹನಿ ಬನಿ ಫೀಲ್ ಮೈ ಲವ್… ಹಾಡು ಇದಾಗಿದ್ದು, ಸುಮಾರು ೨೦ಕ್ಕೂ ಹೆಚ್ಚು ಸೆಬ್ರಿಟಿಗಳು ವರ್ಚುವಲ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಪ್ರೇಮ್, ರಕ್ಷಿತಾ, ಗಣೇಶ್, ಸೃಜನ್ ಲೋಕೇಶ್, ಚಂದನ್ ಶೆಟ್ಟಿ, ನವೀನ್ ಸಜ್ಜು, ಮೇಘಾ ಶೆಟ್ಟಿ ಹಾಗೂ ಅನುಪಮಾ ಗೌಡ ಸೇರಿದಂತೆ ಸಾಕಷ್ಟು ತಾರೆಯರು ಹಾಡನ್ನು ಕೇಳಿ, ಮೆಚ್ಚಿ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ನಾಯಕಿಯಾಗಿ ಆಕಾಂಕ್ಷಾ ನಟಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಸಂಚಿತ್ ಹೆಗ್ಡೆ ದನಿಯಾಗಿ ದ್ದಾರೆ. ಬ್ಯಾಂಕಾಕ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ನೃತ್ಯ ನಿರ್ದೇಶಕ ಭೂಷಣ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಈ ಹಾಡು ಕಲರ್ ಫುಲ್ ಆಗಿ ಮೂಡಿಬಂದಿದೆ. ರೋಸ್, ಮಾಸ್ ಲೀಡರ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಹನಾ ಮೂರ್ತಿ, ತ್ರಿವಿಕ್ರಮನಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ಸೋಮಣ್ಣ ಟಾಕೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ, ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ
ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾ ಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.