ಪ್ರಶಾಂತ್.ಟಿ.ಆರ್
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್, ತ್ರಿವಿಕ್ರಮನಾಗಿ ಮಿಂಚಲು ಸಿದ್ಧವಾಗಿದ್ದಾರೆ. ವಿಕ್ರಮ್‌ಗೆ ಚೊಚ್ಚಲ ಚಿತ್ರ ಇದಾಗಿದ್ದು, ಬಿಡುಗಡೆಗೂ ಮುನ್ನವೇ ಸಖತ್ ಸದ್ಧು ಮಾಡುತ್ತಿದೆ. ಹಾಗಾಗಿ ವಿಕ್ಕಿ ಮೊದಲ ಚಿತ್ರದಲ್ಲಿಯೇ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇದು ಆಕ್ಷನ್ ಸಿನಿಮಾವೆ ಅಂದುಕೊಳ್ಳಬಹುದು. ಇಲ್ಲಿ ಆಕ್ಷನ್, ಲವ್, ಸೆಂಟಿಮೆಂಟ್ ಎಲ್ಲವೂ ಅಡಕವಾಗಿದೆ. ತ್ರಿವಿಕ್ರಮ ಚಿತ್ರದ ಬಗ್ಗೆ ನಿರ್ದೇಶಕ ಸಹನ ಮೂರ್ತಿ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.
ವಿ.ಸಿನಿಮಾಸ್ : ತ್ರಿವಿಕ್ರಮ ಚಿತ್ರದ ಮೂಲಕ ಏನು ಹೇಳಲು ಹೊರಟ್ಟಿದ್ದೀರಾ ?
ಸಹನ ಮೂರ್ತಿ: ತ್ರಿವಿಕ್ರಮ ಮಧ್ಯಮ ವರ್ಗದ ಹುಡುಗನ ಕಥೆಯನ್ನು ಒಗೊಂಡಿದೆ. ಮಿಡಲ್ ಕ್ಲಾಸ್ ಹುಡುಗ ಎಂದಾಕ್ಷಣ, ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂಬ ತುಡಿತ, ಏನೇ ಬಂದರೂ ಎದುರಿಸಬೇಕು ಎಂಬ ಛಲ, ಒಂದಷ್ಟು ಹುಡುಗಾಟ ಎಲ್ಲವೂ ಇರು ತ್ತದೆ. ಇಂತಹ ಹುಡಗ ಜೈನ ಸಮುದಾಯದ ಹುಡುಗಿಯ ಪ್ರೀತಿಯಲ್ಲಿ ಬಿದ್ದಾಗ ಆತ ಹೇಗೆ ಬದುಕುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಜೈನ ಸಮುದಾಯದ ಆಚಾರ-ವಿಚಾರ, ಸಂಸ್ಕೃತಿಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ.
ವಿ.ಸಿ: ಸಂಪೂರ್ಣ ಪ್ರೇಮ ಕಥೆಗೆ ಚಿತ್ರವನ್ನು ಮೀಸಲಿಡಲಾಗಿದೆಯೇ ?
ಸಹನ ಮೂರ್ತಿ : ಇಲ್ಲಿ ನವಿರಾದ ಪ್ರೇಮ ಕಥೆಯ ಜತೆಗೆ ಸೆಂಟಿಮೆಂಟ್ ಕಥೆಯೂ ಇದೆ. ಪಯಣದಲ್ಲಿ ಸಾಗುವ ಪ್ರೇಮ ಕಥೆ ಪ್ರೇಕ್ಷಕರಿಗೆ ಹೊಸತನ ತಂದುಕೊಡುತ್ತದೆ. ಬೆಂಗಳೂರಿನಿಂದ ಆರಂಭವಾಗುವ ನಾಯಕನ ಪಯಣ ರಾಜಸ್ಥಾನದವರೆಗೂ ಸಾಗುತ್ತದೆ. ಈ ಹಾದಿಯಲ್ಲಿ ಎದುರಾದ ಸವಾಲುಗಳನ್ನು ನಾಯಕ ಹೇಗೆ ಎದುರಿಸುತ್ತಾನೆ ಎಂಬುದನ್ನು ತುಂಬಾ ಇಂಟರೆಸ್ಟಿಂಗ್ ಆಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಇನ್ನು ಅಮ್ಮ ಮಗನ ಬಾಂಧವ್ಯದ ಕಥೆಯೂ ಮನಸೂರೆಗೊಳ್ಳುತ್ತದೆ. ಜತೆಗೆ ಸ್ನೇಹಿತರ ಹುಡುಗಾಟ ಕಾಮಿಡಿ ಕಚಗುಳಿ ಇಡುತ್ತದೆ.
ವಿ.ಸಿ: ಈ ರೀತಿಯ ಕಥೆಯನ್ನೇ ತೆರೆಗೆ ತರಲು ಕಾರಣ ?
ಸಹನ ಮೂರ್ತಿ : ನಾನು ಕೂಡ ಮಧ್ಯಮ ವರ್ಗದಲ್ಲಿ ಜನಿಸಿದವನು. ಬದುಕು ಸಾಗಿಸುತ್ತಿರುವವನು. ಮಧ್ಯಮ ವರ್ಗದಲ್ಲಿಯೇ ಸುಂದರ ಬದುಕನ್ನು ಕಾಣಲು ಸಾಧ್ಯ. ಇಲ್ಲಿ ಕಷ್ಟ ಸುಖ, ನೋವು ನಲಿವು ಎಲ್ಲವೂ ಸಮ್ಮಿಳಿತವಾಗಿರುತ್ತವೆ. ಇಂತಹ ಮಧ್ಯಮ ವರ್ಗದ ಹುಡಗ ಪ್ರೀತಿಯಲ್ಲಿ ಬಿದ್ದಾಗ ಆತನ ಕನಸುಗಳು ಹೇಗಿರುತ್ತವೆ. ತನ್ನ ಪ್ರಿಯತಮೆಯನ್ನು ಪಡೆಯಲು ಯಾವೆಲ್ಲಾ ಸಾಹಸ ಮಾಡುತ್ತಾನೆ ಎಂಬುದನ್ನು ಚಿತ್ರದ ಮೂಲಕ ಹೇಳಬೇಕು ಎನ್ನಿಸಿತು ಹಾಗಾಗಿ ಈ ಚಿತ್ರದ ಕಥೆ ಹೆಣೆದೆ. ನಿರ್ದೇಶಿಸಿ ತೆರೆಗೆ ತಂದಿದ್ದೇನೆ. ವಿಕ್ರಮ್ ಈ ಕಥೆಗೆ ಹೊಂದುಕೊಳ್ಳುತ್ತಾರೆ ಎನಿಸಿತು, ಹಾಗಾಗಿ ಅವರನ್ನೇ ನಾಯಕನಾಗಿ ನಟಿಸಲು ಒಪ್ಪಿಸಿದೆವು.
ವಿ.ಸಿ. : ತ್ರಿವಿಕ್ರಮನಲ್ಲಿ ಯಾವ ಸಂದೇಶ ಹೇಳುತ್ತಿದ್ದೀರಾ ?
ಸಹನ ಮೂರ್ತಿ : ನಾವು ಪ್ರೀತಿಯಲ್ಲಿ ಬಿದ್ದಾಗ ನಮಗೆ ಅರಿವಿಲ್ಲದಂತೆ ಅಮಲು ನಮ್ಮನ್ನು ಆವರಿಸಿರುತ್ತದೆ. ಆಗ ಪ್ರೀತಿಸಿದವಳ ಹೊರತಾಗಿ ನಮಗೆ ಯಾವುದೂ ಮುಖ್ಯವಲ್ಲ ಎನ್ನಿಸುತ್ತದೆ. ಇದರಿಂದ ನಮ್ಮ ಸಂಬಂಧಗಳನ್ನು ನಾವು ಹೇಗೆ ಕಳೆದುಕೊಳ್ಳು ತ್ತೇವೆ ಎಂಬುದನ್ನು ಮನಮುಟ್ಟುವಂತೆ ಹೇಳಿದ್ದೇವೆ. ಜತೆಗೆ ಸಂಬಂಧಗಳ ಮಹತ್ವವನ್ನು ಸಾರಿದ್ದೇವೆ.
ವಿ.ಸಿ : ಚಿತ್ರದ ತಾರಾಬಳಗದ ಬಗ್ಗೆ ಹೇಳುವುದಾದರೆ
ಸಹನ ಮೂರ್ತಿ : ವಿಕ್ರಮ್ ನಾಯಕನಾಗಿ ನಟಿಸಿದ್ದು. ಆಕಾಂಕ್ಷಾ ಶರ್ಮ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ತುಳಸಿ ನಾಯಕನ ತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಚಿಕ್ಕಣ್ಣ, ಸಾದುಕೋಕಿಲ ಮತ್ತಿತರರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಚಿತ್ರದ ಕಥೆಗೆ ತಕ್ಕಂತೆ ಲೊಕೇಷನ್ ಹುಡುಕಿ ಶೂಟಿಂಗ್ ಮಾಡಿದ್ದೇವೆ. ನಾಯಕನಿಗೆ ಅಡ್ಡಲಾಗಿ ಹುಲಿ ಯೊಂದು ಎದುರಾದಾಗ , ಅದನ್ನು ಆತ ಹೇಗೆ ಎದುರಿಸುತ್ತಾನೆ ಎಂಬ ಸನ್ನಿವೇಶವೂ ಇದೆ. ಇದು ಚಿತ್ರದ ಮುಖ್ಯ ಸನ್ನಿವೇಶವೂ ಹೌದು. ಈ ದೃಶ್ಯನೈಜವಾಗಿ ಬರಬೇಕು ಎಂಬ ಉದ್ದೇಶದಿಂದ ಬ್ಯಾಕಾಂಕ್‌ಗೆ ತೆರಳಿ ನೈಜ ಹುಲಿಯನ್ನು ಬಳಸಿಕೊಂಡು ಚಿತ್ರೀಕರಣ ನಡೆಸಿದ್ದೇವೆ. ಇನ್ನೂ ವಿಶೇಷ ಎಂದರೆ ನಮ್ಮ ಚಿತ್ರದಲ್ಲಿ ಸುಂದರವಾದ ಜಿಂಕೆಯೂ ನಟಿಸಿದೆ.