Thursday, 12th December 2024

ವರದನಾಗಿ ತೆರೆಗೆ ಬರಲು ವಿನೋದ್‌ ಪ್ರಭಾಕರ್‌ ರೆಡಿ

ರಾಬರ್ಟ್ ಚಿತ್ರದ ಯಶಸ್ಸಿನಲ್ಲಿರುವ ವಿನೋದ್ ಪ್ರಭಾಕರ್ ಈಗ ಹೊಸ ಅವತಾರದಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದಾರೆ. ರಾಬರ್ಟ್‌ನಲ್ಲಿ ರಗಡ್ ಲುಕ್‌ನಲ್ಲಿ ಕಂಗೊಳಿಸಿದ ವಿನೋದ್, ಈಗ ವರದನಾಗಿ ಸಿಂಪಲ್ ಲುಕ್‌ನಲ್ಲಿ ಮಿಂಚಲಿದ್ದಾರೆ. ವರದ ವಿನೋದ್ ಅಭಿನಯದ ಹೊಸ ಚಿತ್ರ, ಇದು ಅಪ್ಪಟ ಕೌಟುಂಬಿಕ
ಸಿನಿಮಾವಾಗಿದ್ದು, ಬಾಂಧವ್ಯದ ಕಥೆಯಲ್ಲಿ ವಿನೋದ್ ಗಮನ ಸೆಳೆಯಲಿದ್ದಾರೆ.

ವಿನೋದ್ ಪ್ರಭಾಕರ್ ಈ ಹಿಂದೆ ಅಭಿನಯಿಸಿದ ಬಹುತೇಕ ಸಿನಿಮಾಗಳು ಸಾಹಸ ಪ್ರಧಾನ ಕಥೆಯ ಚಿತ್ರಗಳಾಗಿವೆ. ಕೆಲವು ಸಿನಿಮಾಗಳು ಹೊಡಿಬಡಿ ಕಥೆಗಷ್ಟೇ ಸೀಮಿತವಾಗಿದ್ದವು. ಹಾಗಾಗಿ ಆ ಚಿತ್ರಗಳು ಯಾವು ಅಷ್ಟಾಗಿ ಸದ್ದು ಮಾಡಲೇ ಇಲ್ಲ. ಹಾಗಾಗಿ ಕೊಂಚ ಬದಲಾವಣೆ ಬಯಸಿರುವ ವಿನೋದ್, ಸೆಂಟಿಮೆಂಟ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅದು ವರದನಾಗಿ. ನಿರ್ದೇಶಕ ಪ್ರಕಾಶ್ ನಿರ್ದೇಶದಲ್ಲಿ ವರದ ಸಿದ್ಧವಾಗಿದೆ. ಅಪ್ಪ-ಮಗನ ಸೆಂಟಿಮೆಂಟ್ ಸ್ಟೋರಿ ವರದ ಕಂಪ್ಲೀಟ್ ಕಮರ್ಷಿಯಲ್ ಸಿನಿಮಾ.

ಇದೊಂದು ಕೌಟುಂಬಿಕ ಕಥೆಯ ಚಿತ್ರ ಎನ್ನುವುದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಲು ಕಾರಣವಾಗಿದೆ. ಇಲ್ಲಿ ವಿನೋದ್ ಸಿಂಪಲ್ ಆಗಿಯೇ ಗಮನ ಸೆಳೆಯಲಿದ್ದಾರೆ. ಚಿತ್ರದ ನಾಯಕ ವರದ, ತಂದೆಯ ಪ್ರೀತಿಯ ಮಗ. ಅಪ್ಪನ ಮಾತಿಗೆ ಎಂದು ಎದುರಾಡದ ಶಿಸ್ತಿನ ಪುತ್ರ. ಆದರೆ ವರದನ ಜೀವನದಲ್ಲಿ ನಡೆದ ಕಹಿ ಘಟನೆಗಳು ಆತನ ದಿಕ್ಕನ್ನೇ ಬದಲಾಯಿಸುತ್ತವೆ. ಅಪ್ಪನ ಮಾತನ್ನು ಧಿಕ್ಕರಿಸಿದ ಮಗ, ಸಮಾಜದ ಅನ್ಯಾಯಗಳ ವಿರುದ್ದ ಸಿಡಿದೆದ್ದು ನಿಲ್ಲುತ್ತಾನೆ. ಅಷ್ಟಕ್ಕೂ ವರದನ ಬಾಳಿನಲ್ಲಿ ನಡೆದ ಕಹಿ ಘಟನೆಗಳೇನು ಎಂಬುದೇ ಚಿತ್ರದ ಸಸ್ಪೆನ್ಸ್.

ವರದ, ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾ ಎಂದಾಕ್ಷಣ, ಆಕ್ಷನ್ ದೃಶ್ಯಗಳಿಗೆ ಆದ್ಯತೆ ಇಲ್ಲ ಎನ್ನುವಂತಿಲ್ಲ. ವಿನೋದ್ ರಾಜ್‌ಗೆ ಹೊಂದುವ ಸಾಹಸ ದೃಶ್ಯಗಳು ಚಿತ್ರದಲ್ಲಿವೆ. ಆದರೆ ಅವುಗಳನ್ನು ಎಲ್ಲಿಯೂ ಅತಿರೇಕ ಎನಿಸದಂತೆ, ಕಥೆಗೆ ಪೂರಕ ವಾಗುವಂತಹ ಸಾಹಸ ದೃಶ್ಯಗಳನ್ನು ಚಿತ್ರದಲ್ಲಿ ಬಳಸಿಕೊಳ್ಳ ಲಾಗಿದೆ.

ವಿಭಿನ್ನ ಪಾತ್ರದಲ್ಲಿ ಚರಣ್‌ರಾಜ್ ವರದ ಚಿತ್ರದ ಕೇಂದ್ರಬಿಂದು ಹಿರಿಯ ನಟ ಚರಣ್ ರಾಜ್. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಭಾಷೆಯ ಚಿತ್ರಗಳಲ್ಲೂ
ಚರಣ್ ರಾಜ್ ನಟಿಸಿದ್ದಾರೆ. ಸೆಂಟಿಮೆಂಟ್ ಪಾತ್ರಗಳಲ್ಲೇ ಹೆಚ್ಚಾಗಿ ಗಮನಸೆಳೆದಿದ್ದಾರೆ. ವರದ ಚಿತ್ರದಲ್ಲಿಯೂ ಚರಣ್ ರಾಜ್ ನಟಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ವಿಶೇಷ ಎಂದರೆ ಈ ಹಿಂದೆ ಎಂದು ಕಂಡಿರದ ಪಾತ್ರದಲ್ಲಿ ಚರಣ್ ರಾಜ್ ಕಾಣಿಸಿಕೊಂಡಿದ್ದಾರಂತೆ. ಇಲ್ಲಿ ನಾಯಕನ ತಂದೆಯಾಗಿ ಚರಣ್‌ ರಾಜ್ ಅಭಿನಯಿಸಿದ್ದಾರೆ.

ವರದನಿಗೆ ಜತೆಯಾದ ಕನ್ನಡದ ಬೆಡಗಿ ವರದ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ವಿನೋದ್ ಜತೆಯಾಗಿ ಕನ್ನಡತಿ ಅಮಿತಾ ನಟಿಸಿದ್ದಾರೆ. ತೆಲುಗು ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಅಮಿತಾ, ವರದ ಚಿತ್ರದ ಮೂಲಕ ಕನ್ನಡದ ಚಿತ್ರಗಳಲ್ಲಿ ನಾಯಕಿಯಾಗಿ ಎಂಟ್ರಿಕೊಡುತ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಚಿತ್ರಮಂದಿರಗಳು ತೆರೆದ ಬಳಿಕ ಚಿತ್ರವನ್ನು ತೆರೆಗೆ ತರಲು ಯೋಜಿಸಿದೆ.

***

ವರದ ವಿನೋದ್ ರಾಜ್ ಅವರಿಗಾಗಿಯೇ ಹೆಣೆದ ಕಥೆ. ವಿನೋದ್ ಎಲ್ಲಾ ಪಾತ್ರಗಳಿಗೂ ಹೊಂದಿಕೊಳ್ಳುವ ನಟ. ಅವರನ್ನು ಸ್ವಲ್ಪ ವಿಭಿನ್ನವಾಗಿ ತೆರೆಯಲ್ಲಿ ತೋರಿಸಬೇಕು ಎಂಬ ಆಸೆ ನನಗಿತ್ತು. ಅಂತೆಯೇ ಈ ಚಿತ್ರದಲ್ಲಿ ಅದು ಸಾಧ್ಯವಾಗಿದೆ. ಹಿಂದೆಂದು ಕಾಣದ ವಿನೋದ್ ರಾಜ್, ವರದನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಅವರಿಗೆ ಹೊಸ ತಿರುವು ನೀಡಲಿದೆ ಎಂಬ ನಿರೀಕ್ಷೆ ನನಗಿದೆ. ಜನತೆ ಕರೋನಾ ಭಯ ತೊರೆದು ಯಾವಾಗ ಚಿತ್ರಮಂದಿರಕ್ಕೆ ಬರುತ್ತಾರೋ ಆಗ
ವರದನನ್ನು ತೆರೆಗೆ ತರುತ್ತೇವೆ. -ಪ್ರಕಾಶ್ ನಿರ್ದೇಶಕ