Saturday, 5th October 2024

ವೆಡ್ಡಿಂಗ್ ಗಿಫ್ಟ್ ಕೊಡಲು ಸಿದ್ದವಾದ ಸೋನುಗೌಡ

ಗಂಡ-ಹೆಂಡತಿ ಸಂಬಂಧ ಜನುಮ ಜನುಮಗಳ ಅನುಬಂಧ ಎಂಬ ನಂಬಿಕೆ ಹಿಂದಿ ನಿಂದಲೂ ಇದೆ. ಮದುವೆ ಪವಿತ್ರ ಬಂಧ. ಆದರೆ ಮದುವೆಯಾದ ಹೊಸತರಲ್ಲೇ ಈ ಸಂಬಂಧದಲ್ಲಿ ಬಿರುಕು ಮೂಡಿದರೆ ಜೀವನೇ ಮುಗಿದಂತೆ ಇದೇ ಅಂಶವನ್ನು ಹೊತ್ತು
ವೆಡ್ಡಿಂಗ್ ಗಿಫ್ಟ್ ಚಿತ್ರ ತೆರೆಗೆ ಬರುತ್ತಿದೆ. ಸಮಾಜಕ್ಕೆ ಅಗತ್ಯವಾದ ಈ ಕಥೆಯ ಚಿತ್ರವನ್ನು ನಿರ್ದೇಶಕ ವಿಕ್ರಮ್ ಪ್ರಭು ಹೇಳಲು ಹೊರಟ್ಟಿದ್ದಾರೆ.

ಚಿತ್ರದಲ್ಲಿ ನಿಶಾಂತ್ ನಾಯಕನಾಗಿ ನಟಿಸಿದ್ದು, ಸೋನುಗೌಡ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ನಟಿ ಪ್ರೇಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರನ್ನು ಸೆಳೆಯುತ್ತಿದೆ. ನಾನು ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ ಲವ್ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿ ಸಿದ್ದೆ. ಬಳಿಕ ಕೆಲಸದ ನಿಮಿತ್ತ ಒಂದಷ್ಟು ಗ್ಯಾಪ್ ತೆಗೆದುಕೊಂಡಿದ್ದೆ. ನನಗೆ ಚಿತ್ರರಂಗಕ್ಕೆ ಮರಳಬೇಕು ಎಂಬ ತುಡಿತ ಹೆಚ್ಚಾಗಿತ್ತು. ಹಾಗಾಗಿ ಮರಳಿ ಚಿತ್ರರಂಗಕ್ಕೆ ಬಂದು ವೆಡ್ಡಿಂಗ್ ಗಿಫ್ಟ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ. ಕಳೆದ ವರ್ಷ ಜುಲೈನಲ್ಲಿ ನಮ್ಮ ಸಿನಿಮಾದ ಮುಹೂರ್ತ ನೆರವೇರಿತ್ತು. ಈ ಜುಲೈನಲ್ಲಿ ತೆರೆ ಕಾಣುತ್ತಿದೆ. ಸಮಾಜಕ್ಕೆ ಉತ್ತಮ ಸಂದೇಶವುಳ್ಳ ಚಿತ್ರವಿದು ಎಂದರು ವಿಕ್ರಮ್ ಪ್ರಭು.

ಇದೊಂದು ಭಾವನಾತ್ಮಕ ಚಿತ್ರ. ಯಾರು ಈ ಕಷ್ಟಗಳನೆಲ್ಲಾ ಅನುಭವಿಸಿರುತ್ತಾರೊ, ಅವರಿಗೆ ಈ ಚಿತ್ರ ಹತ್ತಿರವಾಗಲಿದೆ. ಈ ಪಾತ್ರ ಮಾಡುವಾಗ ನನಗಂತು ನಿಜವಾಗಲೂ ಕಷ್ಟವಾಯಿತು. ಇಂತಹವರು ಇರುತ್ತಾರಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಒಬ್ಬ ನಟಿಯಾಗಿ ಎಲ್ಲಾ ಪಾತ್ರಗಳನ್ನು ಮಾಡಬೇಕು. ಅಂತೆಯೇ ಪಾಸಿಟಿವ್ ಹಾಗೂ ನೆಗಟಿವ್ ಎರಡು ಪಾತ್ರಗಳಲ್ಲೂ ಅಭಿನಯಿಸಿದ್ದೇನೆ. ಹಾಗೊಂದು ವೇಳೆ ನೆಗಟಿವ್ ಪಾತ್ರ ನೋಡುಗರಿಗೆ ಹಿಡಿಸಿತೆಂದರೆ, ಅದು ನನ್ನ ಹಾಗೂ ನನ್ನ ಪಾತ್ರದ ಗೆಲುವು ಎನ್ನುತ್ತಾರೆ ನಟಿ ಸೋನು ಗೌಡ. ಅಚ್ಯುತ ಕುಮಾರ್, ಪವಿತ್ರಾ ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಉದಯಲೀಲ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ಜುಲೈ ೮ ರಂದು ಚಿತ್ರ ಬಿಡುಗಡೆಯಾಗಲಿದೆ.

***

ನಾನು ಸಾಮಾನ್ಯವಾಗಿ ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ವಿಕ್ರಮ್ ಪ್ರಭು ಹೇಳಿದ ಕಥೆ ಕೇಳಿ ನಟಿಸಬೇಕು ಎನಿಸಿತು. ಹಾಗಾಗಿ ಸಿನಿಮಾದಲ್ಲಿ ನಟಿಸಲು ಒಪ್ಪಿದೆ. ನಾನು ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಸಾಕಷ್ಟು ಮಹತ್ವವಿದೆ. -ಪ್ರೇಮಾ ನಟಿ