Sunday, 24th November 2024

ವೀಲ್‌ ಚೇರ್‌ ರೋಮಿಯೋ

ಈ ವಾರ ತೆರೆಗೆ ಬಂದ ಸಿನಿಮಾಗಳಲ್ಲಿ ಕಾತರತೆ ಹೆಚ್ಚಿಸಿರುವ ಚಿತ್ರ ವೀಲ್ ಚೇರ್ ರೋಮಿಯೋ. ಚಿತ್ರದ ಶೀರ್ಷಿಕೆಯೇ ಹೇಳು ವಂತೆ ವೀಲ್‌ಚೇರ್‌ನಲ್ಲಿ ಕುಳಿತ ರೋಮಿಯೋ ಕಥೆ ಚಿತ್ರದಲ್ಲಿ ಹಾಸು ಹೊಕ್ಕಾಗಿದೆ.

ಆಪರೂಪವಾದ, ವಿನೂತನ ಪ್ರೇಮ ಕಾವ್ಯ ಬೆಳ್ಳಿತೆರೆಯಲ್ಲಿ ಹಾದು ಹೋಗ ಲಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೊಚ್ಚ ಹೊಸ ಪ್ರಯತ್ನವೂ ಹೌದು. ಕಥೆಯೂ ಹೌದು.ಇಂತಹ ಅಪರೂಪದ ಸ್ಟೋರಿಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ನಟರಾಜ್. ಇದುವರೆಗೂ ಚಿತ್ರರಂಗದಲ್ಲಿ ಹಲವು ಪ್ರೇಮ ಕಥೆಯ ಸಿನಿಮಾಗಳು ಮೂಡಿಬಂದಿವೆ. ಆದರೆ ಆ ಎಲ್ಲಾ ಕಥೆಗಳಿಗಿಂತ ವಿಭಿನ್ನವಾದ ಲವ್ ಸ್ಟೋರಿ ಈ ಚಿತ್ರದಲ್ಲಿದೆ. ಎಲ್ಲರಿಗೂ ಪ್ರೀತಿ ಮೂಡುವುದು ಸಹಜ.

ಮನಸಿಗೆ ಹಿಡಿಸಿದ ಹುಡುಗಿಯನ್ನು ಮೆಚ್ಚಿ ಮದುವೆಯಾಗಬೇಕು ಎಂಬುದು ಎಲ್ಲರ ಬಯಕೆಯೂ ಕೂಡ. ಅದರಲ್ಲಿ ಕೆಲವರು ಯಶಸ್ವಿಯಾಗುತ್ತಾರೆ. ಆದರೆ ಒಬ್ಬ ವಿಕಲಾಂಗ ನಲ್ಲಿಯೂ ಹೇಗೆ ಪ್ರೀತಿ ಮೂಡುತ್ತದೆ, ಬಯಸಿದ ಹುಡುಗಿಯನ್ನು ಆತ ಹೇಗೆ ಕೈಹಿಡಿಯುತ್ತಾನೆ. ಈ ನಡುವೆ ಆತನಿಗೆ ಯಾವೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದಾರೆ. ಇಲ್ಲಿ ಪ್ರೇಮ ಕಥೆಗಿಂತ ತಂದೆ-ಮಗನ ಬಾಂಧವ್ಯದ ಕಥೆ ಮನಮಿಡಿಯುತ್ತದೆ.

ಬಾಂಧವ್ಯದ ಬೆಸುಗೆ: ವೀಲ್ ಚೇರ್ ರೋಮಿಯೋ ಮಧುರ ಬಾಂಧವ್ಯದ ಕಥೆಯನ್ನು ಒಳಗೊಂಡಿದೆ. ವಿಕಲಾಂಗ ಮಗನನ್ನು ಪ್ರೀತಿಯಿಂದ ಸಲಹುವ ತಂದೆಯ ಅಂತಃಕರಣದ ಹೂರಣ ಚಿತ್ರದಲ್ಲಿದೆ. ಆತ ಬೆಳೆದುನಿಂತ ಮಗ. ಆದರೆ ತನ್ನ ಸಾಮರ್ಥ್ಯ ದಿಂದ ಎದ್ದು ನಿಲ್ಲುವ ಶಕ್ತಿಯೂ ಆತನಿಗೆ ಇರುವುದಿಲ್ಲ. ಆತನಿಗೆ ಏನು ಬೇಕೋ ಎಲ್ಲವನ್ನು ಒಗಿಸುವ ಪ್ರೀತಿಯ ತಂದೆ. ಹೀಗಿರು ವಾಗ ಬೆಳೆದು ನಿಂತ ಮಗನ ಮನದಲ್ಲಿ ಪ್ರೀತಿ ಚಿಗುರಿದಾಗ ಅದನ್ನು ಪೂರೈಸಲು ತಂದೆ ಸಿದ್ಧವಾಗುತ್ತಾನೆ. ಇದನ್ನು ಬಲು ಮಾನವೀಯವಾಗಿ, ಮಮಕಾರದಿಂದ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಮನದ ಮಧುರ ಪ್ರೇಮ
ತಾನೇ ಎದ್ದು ನಿಲ್ಲಲಾಗದಿದ್ದರೂ, ಏನನ್ನಾದರೂ ಸಾಽಸಲೇಬೇಕು ಎಂಬ ಹಂಬಲ ನಾಯಕ ನಿಗಿರುತ್ತದೆ. ಹೀಗಿರುವಾಗಲೇ ತಾನು ಎಲ್ಲರಂತೆ ಹೊರಗಡೆ ಸುತ್ತಬೇಕು, ಎಲ್ಲರೊಂದಿಗೆ ಬೆರೆಯಬೇಕು ಎಂಬ ಹಂಬಲ ಹೃದಯದಲ್ಲಿ ಮೂಡುತ್ತದೆ. ಈ ನಡುವೆ ರೆಡ್ ಲೈಟ್ ಏರಿಯಾಗೆ ಹೋಗಬೇಕು ಎಂಬ ವಿಚಿತ್ರ ಬಯಕೆ ಇರುತ್ತದೆ. ಮಗನ ಆಸೆಯನ್ನು ಕೇಳಿದ ತಂದೆಗೆ ಇರುಸು ಮುರುಸಾದರೂ ಮಗನ ಆಸೆ ಈಡೇರಿಸಲೇಬೇಕು ಎಂಬ ನಿಟ್ಟಿನಲ್ಲಿ ಅಲ್ಲಿಗೆ ಕರೆದೊಯ್ಯುತ್ತಾನೆ. ಅಲ್ಲಿಗೆ ತೆರಳಿದ ನಾಯಕನಿಗೆ ಯುವತಿಯ ಮೇಲೆ ಮನಸಾಗುತ್ತದೆ. ಆಕೆಯನ್ನು ಮದುವೆಯಾಗಬೇಕು ಎಂದು ನಿರ್ಧರಿಸುತ್ತಾನೆ. ರೆಡ್ ಲೈಟ್ ಏರಿಯಾದಲ್ಲಿರುವ ಯುವತಿಯನ್ನು ಮದುವೆಯಾಗುವದಾದರೂ ಹೇಗೆ ಎಂಬ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಾ ಸಾಗುತ್ತದೆ.

ಜಾಕ್ ಮಾಮನಾದ ರಘು
ಹಿರಿಯ ನಟ ರಂಗಾಯಣ ರಘು ಜಾಕ್ ಮಾಮನಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿಯೂ ಎಲ್ಲ ರನ್ನೂ ನಗಿಸುತ್ತಾರೆ. ರೆಡ್ ಲೈಟ್ ಏರಿಯಾದಲ್ಲಿ ಜಾಕ್ ಮಾಮನದ್ದೇ ಕಾರುಬಾರು. ಇನ್ನು ನಾಯ ಕನ ತಂದೆಯ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ.

***

ಒಂದು ಒಳ್ಳೆಯ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬುದು ನನ್ನ ಬಹುದಿನಗಳ ಆಸೆಯಾಗಿತ್ತು. ಅದಕ್ಕಾಗಿ ಕಥೆ ಬರೆದೆ. ಈ ಚಿತ್ರದ ಕಥೆಯೇ ಹೊಸಬರನ್ನು ಬಯಸಿತು. ಹಾಗಾಗಿ ರಾಮ್ ಚೇತನ್ ಅವರನ್ನು ನಾಯಕನ ಪಾತ್ರಕ್ಕೆ ಕರೆತಂದೆವು. ರಾಮ್ ಚೇತನ್ ಚಿತ್ರದಲ್ಲಿ ಮೆಚ್ಚುವಂತೆ ಅಭಿನಯ ತೋರಿದ್ದಾರೆ. ಮುಗ್ಧತೆಯ ನಾಯಕಿಯ ಅಗತ್ಯವಿತ್ತು. ಹಾಗಾಗಿ ಮಯೂರಿ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದೆವು. ಸಿನಿಮಾ ಅಂದುಕೊಂಡಂತೆ ಮೂಡಿಬಂದಿದೆ ಎಂಬ ತೃಪ್ತಿ ನನಗಿದೆ.
-ನಟರಾಜ್ ನಿರ್ದೇಶಕ