Saturday, 14th December 2024

ವಿಂಡೋಸೀಟ್‌ನಲ್ಲಿ ಮರ್ಡರ್‌ ಮಿಸ್ಟರಿ

ನಟ ನಿರೂಪ್ ಭಂಡಾರಿ ಬಹು ದಿನಗಳ ಬಳಿಕ ತೆರೆಯಲ್ಲಿ ಮಿಂಚಲು ಸಿದ್ಧವಾಗಿದ್ದರೆ. ಈ ಬಾರಿ ವಿಂಡೋಸೀಟ್‌ನಲ್ಲಿ ಕುಳಿತ್ತಿದ್ದು, ಪ್ರೇಕ್ಷಕರ ಮನಸೂರೆಗೊಳ್ಳಲಿದ್ದಾರೆ. ಶೀತಲ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಸದ್ಯ ವಿಂಡೋಸೀಟ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ತಾಳಗುಪ್ಪದಿಂದ ಸಾಗರದವರೆಗೆ ರೈಲಿನಲ್ಲಿ ಪ್ರಯಾಣಿಸುವ ನಾಯಕನ ಕಥೆ ಈ ಚಿತ್ರದಲ್ಲಿದೆ.

ಮಲೆನಾಡು, ಅಲ್ಲಿನ ಜನರ ಜೀವನಶೈಲಿಯನ್ನು ಪರಿಚಯಿಸುವ ಜತೆಗೆ ಒಂದು ಕುತೂಹಲ ಕರ ಮರ್ಡರ್ ಮಿಸ್ಟರಿ ಕಥಾನಕವೂ ಚಿತ್ರದಲ್ಲಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು, ಜುಲೈ ಒಂದರಂದು ಚಿತ್ರ ಬಿಡುಗಡೆ ಯಾಗುತ್ತಿದೆ.

ತಾಳಗುಪ್ಪದ ರಘು ಪಾತ್ರದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದಾರೆ. ರಘು ಒಬ್ಬ ಹಾಡುಗಾರ. ಆತನಿಗೆ ವಿಂಡೋಸೀಟ್ ಎಂದರೆ ಬಲು ಪ್ರೀತಿ. ಈತನ ವಿಂಡೋಸೀಟಿನ ವ್ಯಾಮೋಹವೇ ಈತನನ್ನು ದೊಡ್ಡದೊಂದು ಸಂಕಷ್ಟಕ್ಕೆ ತಳ್ಳುತ್ತದೆ. ಇದರ ಸುಳಿಯಿಂದ ರಘು ಪಾರಾಗುತ್ತಾನಾ ಇಲ್ಲವೆ ಎನ್ನುವುದನ್ನು ವಿಂಡೋಸೀಟ್‌ನಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ.

ವಿಂಡೋಸೀಟ್ ಚಿತ್ರ ಈ ವೇಳೆಗಾಗಲೇ ಬಿಡುಗಡೆಯಾಗಿರಬೇಕಿತ್ತು. ಆದರೆ, ಕರೋನಾ ದಿಂದಾಗಿ ಸಿನಿಮಾದ ಚಿತ್ರೀಕರಣ ತಡ ವಾಯಿತು. ಈಗ ಚಿತ್ರತಂಡ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿದೆ. ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ನಾನು ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಈ ಕಥೆ ರಚಿಸಿದೆ. ಸ್ನೇಹಿತರೆಲ್ಲ ನೀವೇ ಡೈರೆಕ್ಟ್ ಮಾಡಿ ಎಂಬ ಸಲಹೆ  ನೀಡಿದರು. ನಂತರ ನಿರ್ಮಾಪಕರ ಹುಡುಕಾಟ ನಡೆಸು ತ್ತಿದ್ದೆವು. ನಿರ್ಮಾಪಕ ಜಾಕ್ ಮಂಜು ಅವರ ಬಳಿ ಈ ಕಥೆ ಹೇಳಿದೆ. ಸ್ಟೋರಿಯಲ್ಲಿ ಒಂದಷ್ಟು ತಿದ್ದುಪಡಿ ಮಾಡಿ ಬಂಡವಾಳ ಹೂಡಲು ಸಿದ್ದರಾದರು. ಇನ್ನು ನಾಯಕನ ಪಾತ್ರಕ್ಕೆ ನಿರೂಪ್ ಅವರು ಒಪ್ಪುತ್ತಾರೋ, ಇಲ್ಲವೊ ಎಂಬ ಅನುಮಾನವಿತ್ತು. ಆದರೆ ಅವರು ಕಥೆ ಕೇಳಿದ ಕೂಡಲೇ ಹೊಸಬಳೆಂದು ಯೋಚಿಸದೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟರು. ಹೀಗೆ ಚಿತ್ರ ಸೆಟ್ಟೇರಿತು, ಅಂದುಕೊಂಡಂತೆ ನಿರ್ಮಾಣ ವಾಯಿತು ಎಂದರು ನಿರ್ದೇಶಕಿ ಶೀತಲ್ ಶೆಟ್ಟಿ.

ರಂಗಿತರಂಗದಲ್ಲಿ ಮುಗ್ಧತೆಯಲ್ಲೇ ಮನಗೆದ್ದ ನಿರೂಪ್ ಭಂಡಾರಿ ಈಗ ವಿಂಡೋ ಸೀಟ್‌ನಲ್ಲಿ ಕುಳಿತು ತೆರೆಗೆ ಬರುತ್ತಿದ್ದಾರೆ. ಪಯಣದಲ್ಲಿ ಸಾಗುತ್ತಾ ಪ್ರೀತಿಯ ಕಥೆ ಹೇಳಲಿದ್ದಾರೆ.

**

ಜರ್ನಿಯ ಜತೆ ಪ್ರೀತಿಯ ಕಥೆ ವಿಂಡೋಸೀಟ್ ಎಂದ ಕೂಡಲೇ ಇದೊಂದು ಬರೀ ಜರ್ನಿ ಕಥೆ ಅಂದುಕೊಳ್ಳಬೇಕಿಲ್ಲ. ಸಸ್ಪೆನ್ಸ್, ಥ್ರಿಲ್ಲರ್ ಜತೆಗೆ ಮಿಸ್ಟರಿ ಕೂಡ ಇದರಲ್ಲಿದೆ. ಬಿಡುಗಡೆಯಾಗಿರುವ ಟ್ರೇಲರ್ ಸಿನಿಮಾದ ಬಗ್ಗೆ ಕುತೂಹಲ ಮೂಡಿಸುತ್ತದೆ. ಈ
ಚಿತ್ರದ ವಿಶಿಷ್ಟ ಟ್ರೇಲರನ್ನು ಕಿಚ್ಚ ಸುದೀಪ್ ಮೆಚ್ಚಿ ಶುಭ ಹಾರೈಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಹಾಗೂ ವಿಘ್ನೇಶ್ ರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

*

ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ನಿರ್ಮಾಣ ಸಂಸ್ಥೆಯ ಆಶಯ. ಅಂತೆಯೇ ಲೈಫ್ ಇಷ್ಟೇನೇ, ಡೆಡ್ಲಿ ಸೋಮ ಸಿನಿಮಾಗಳು ಮೂಡಿಬಂದವು. ಹೊಸಬರು ಬಂದಾಗ ಹೊಸ ಐಡಿಯಾಗಳು ಹೊರಬರುತ್ತವೆ. ಹೊಸತನ ಕೊಟ್ಟಾಗ ಪ್ರೇಕ್ಷಕರೂ ಸಿನಿಮಾ ನೋಡಲು ಬಯಸುತ್ತಾರೆ. ಈಗ ಮಹಿಳಾ ನಿರ್ದೇಶಕಿಗೆ ಅವಕಾಶ ನೀಡುರುವುದು ಸಂತಸ ತಂದಿದೆ. ಶೀತಲ್ ಶೆಟ್ಟಿ ಅದ್ಭುತವಾಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
-ಶಾಲಿನಿ ಮಂಜುನಾಥ್ ನಿರ್ಮಾಪಕಿ