Monday, 20th May 2024

ಪುರಾತನ ಮೈನ್ಜ್ ಮೆರುಗು ಮುದ್ರಣ ಯಂತ್ರದ ತವರು

ಮನುಕುಲದ ವಿಕಸನಕ್ಕೆೆ ತನ್ನ ವಿಶೇಷ ಕೊಡುಗೆ ನೀಡಿದ ಮುದ್ರಣ ಯಂತ್ರವನ್ನು ಕಂಡು ಹಿಡಿದದ್ದು ಇದೇ  ನಗರ ದಲ್ಲಿ. ಈ ಮಧ್ಯಯುಗೀನ ನಗರವು ಇಂದು ಪ್ರವಾಸಿಗರನ್ನು ಆಕರ್ಷಿಸುತ್ತಾ, ಐತಿಹಾಸಿಕ ಮಹತ್ವವನ್ನು ಸಾರುತ್ತಿದೆ.

ಡಾ.ಉಮಾಮಹೇಶ್ವರಿ ಎನ್‌.

ಜರ್ಮನಿಯ ರೈನ್ ನದಿಯ ಎಡ ದಂಡೆಯ ಮೇಲಿರುವ ಈ ನಗರ ರೈನ್ ಲ್ಯಾಂಡ್ ಪಲಟಿನೇಟ್ ಪ್ರಾಂತ್ಯದ ಪ್ರಮುಖ ನಗರ.
ರೈನ್ ನದಿಯ ಇನ್ನೊಂದು ದಂಡೆಯಲ್ಲಿರುವುದು ವೀಸ್ ಬಾಡೆನ್. ಕ್ರಿಸ್ತ ಪೂರ್ವ ಕಾಲಘಟ್ಟದಲ್ಲಿ ಸೆಲ್ಟಿಕ್ ಜನಾಂಗದ
ಆವಾಸ ಸ್ಥಾನವಾಗಿದ್ದ ಇದು ಮೊಗುಂಟಿಯಾಕುಮ್ ಎಂದು ನಾಮಧೇಯ ಹೊಂದಿತ್ತು.

ಸೆಲ್ಟಿಕ್ ದೇವ ಮೊಗೊನ ಗೌರವಾರ್ಥವಾಗಿ. ತದ ನಂತರ ರೋಮನ್ನರ ವಸಾಹತಾಗಿತ್ತು. ಈ ಜಾಗವನ್ನು ರೋಮನ್ನರು ಐದನೇ ಶತಮಾನದಲ್ಲಿ ತೊರೆದರು. ಆರನೇ ಶತಮಾನದಿಂದ ಜರ್ಮನ್ ಜನರ ವಸತಿಯಾದ ಇದು ಚರ್ಚ್ ಗಳ ಹಿಡಿತದಲ್ಲಿತ್ತು. 12-13 ನೇ ಶತಮಾನದಲ್ಲಿ ಅತಿ ಶ್ರೀಮಂತವಾದ ಈ ಜಾಗದ ಬಿಷಪ್‌ಗಳು ಹೊಲಿ ರೋಮನ್ ಎಂಪೈರ್‌ನ ಚಾನ್ಸೆಲರ್‌ಗಳು ಮತ್ತು
ಇಲೆಕ್ಟರ್‌ಗಳಾಗಿ ನೇಮಕಗೊಳ್ಳುತ್ತಿದ್ದರು.

15 ನೇ ಶತಮಾನದ ನಂತರ ಬಿಷಪ್‌ರ ಒಳಜಗಳಗಳಿಂದಾಗಿ ಜನರು ಜಾಗವನ್ನು ತೊರೆದರು. ಒಂದು ಕಾಲಘಟ್ಟದಲ್ಲಿ ಇದು ಫ್ರೆಂಚರ ಆಡಳಿಕ್ಕೊಪಟ್ಟಿತ್ತು. ಎರಡೂ ಮಹಾಯುದ್ಧಗಳ ಕಾಲದಲ್ಲೂ ಫ್ರೆಂಚ್ ಸೈನ್ಯ ಇಲ್ಲಿ ಬೀಡುಬಿಟ್ಟಿತ್ತು. ಎರಡನೇ ಮಹಾ
ಯುದ್ಧದಲ್ಲಿ 80 ಶೇಕಡಾದಷ್ಟು ನಾಶವಾದ ಈ ನಗರ ಕ್ಷಿಪ್ರವಾಗಿ ಮರುನಿರ್ಮಾಣಗೊಂಡಿತು.

ಪುರಾತನ ಕಾಲದಲ್ಲಿ ವಾಣಿಜ್ಯ ಪ್ರಮುಖವಾಗಿದ್ದ ನಗರವಾಗಿದ್ದರೂ ಆಧುನಿಕ ಕಾಲದಲ್ಲಿ ಫ್ರಾಂಕ್ಫರ್ಟ್ ಮತ್ತು ಮಾನ್ ಹೈಮ್ ನಗರಗಳೊಡನೆ ಸ್ಪರ್ಧೆಗಿಳಿಯಬೇಕಾಯಿತು. ವೈನ್ ತಯಾರಿಕೆ ಇಲ್ಲಿನ ಮುಖ್ಯ ಉದ್ದಿಮೆಯಾಗಿ ಉಳಿಯಿತು. ರಾಸಾ ಯನಿಕಗಳ ಮತ್ತು ಔಷಧಿಗಳ ತಯಾರಿಕೆ, ಇಲೆಕ್ಟ್ರಾನಿಕ್ ವಸ್ತುಗಳು, ಯಂತ್ರಗಳ ತಯಾರಿ, ಗಾಜಿನ ವಸ್ತುಗಳ ಉತ್ಪಾದನೆ, ಸಂಗೀತ ಉಪ
ಕರಣಗಳ ತಯಾರಿ ಇಲ್ಲಿ ಪ್ರಸಿದ್ಧ.

ಪ್ರಮುಖ ಮೀಡಿಯಾ ಕೇಂದ್ರವಾಗಿರುವ ಇಲ್ಲಿ ರೇಡಿಯೊ ಮತ್ತು ಟೆಲಿವಿಷನ್ ಸ್ಟುಡಿಯೊಗಳೂ ಇವೆ. ತನ್ನ ಪುರಾತನ ನಗರ ಭಾಗ, ಮರದ ಚೌಕಟ್ಟಿನ ಮನೆಗಳು ಹಾಗೂ ಪುರಾತನ ಮಾರುಕಟ್ಟೆಯ ಸ್ಕ್ವೇರ್ ಗಳಿಂದಾಗಿ ತನ್ನದೇ ಆಕರ್ಷಣೆ ಹೊಂದಿದೆ. ಮಾರ್ಕ್‌ಟ್‌ ಬ್ರುನ್ನೆನ್ ಎಂಬುದು ರೆನೈಸೆನ್ಸ್ ಕಾಲದ ಕಾರಂಜಿಯ ನಿರ್ಮಿತಿಯಾದರೆ, ಅಷ್ಟಭುಜಾಕೃತಿಯ ಗೋಪುರ ಒಂದು ಪುರಾತನ ರೋಮನ್ ಚರ್ಚಿನ ಇರುವನ್ನು ಸಾರುತ್ತದೆ.

ಮುದ್ರಣ ಉದ್ಯಮದ ಇತಿಹಾಸ
ನಗರದ ಹೆಮ್ಮೆೆಯ ಪುತ್ರನಾದ ಗುಟೆನ್ ಬರ್ಗ್ ನ ಸ್ಮರಣಾರ್ಥ ಇರುವ ಮ್ಯೂಸಿಯಂ ಮತ್ತೊಂದು ಪ್ರಮುಖ ಆಕರ್ಷಣೆ. ನಾಲ್ಕು ಅಂತಸ್ತುಗಳನ್ನು ಹೊಂದಿರುವ ಈ ಮ್ಯೂಸಿಯಂ ಪುರಾತನ ಕಾಲದಿಂದ ಇಂದಿನ ವರೆಗಿನ ಪ್ರಿಂಟಿಂಗ್‌ನ ಮಾಹಿತಿಯನ್ನು ತೆರೆದಿಡುತ್ತವೆ. ಗುಟೆನ್ ಬರ್ಗ್‌ನ ಹೊಸ ಯಂತ್ರದ ಆವಿಷ್ಕಾರದ ನಂತರ ರಚಿತವಾದ ಹಲವಾರು ಅಪೂರ್ವಕೃತಿಗಳು ಇಲ್ಲಿವೆ. ಗುಟೆನ್ ಬರ್ಗ್ ಬೈಬಲ್‌ನ ಎರಡು ಮೂಲಕೃತಿಗಳು ಸಂಗ್ರಹದಲ್ಲಿವೆ.

ಆತನ ಆವಿಷ್ಕಾರವಾದ ಚಲಿಸಬಹುದಾದ ಮೊಳೆಗಳನ್ನು ಹೊಂದಿದ ಪ್ರಿಂಟಿಂಗ್ ಯಂತ್ರದ ಪ್ರಾತ್ಯಕ್ಷಿಕ ನಿದರ್ಶನ ಸಾಕಷ್ಟು ವಿವರಗಳನ್ನು ನೀಡುವಲ್ಲಿ ಸಫಲವಾಯಿತು. ಇದಲ್ಲದೆ ಗುಟೆನ್ ಬರ್ಗ್ ನ ಸ್ಮಾರಕ, ಅಂತರರಾಷ್ಟ್ರೀಯ ಗುಟೆನ್ ಬರ್ಗ್ ಸಂಸ್ಥೆಯ ಕೇಂದ್ರ ಕಛೇರಿಯೂ ಇಲ್ಲಿವೆ.

ರೋಮನ್ ಕಾಲದ ಇನ್ನೂ ಸುಸ್ಥಿತಿಯಲ್ಲಿರುವ ವಸ್ತುಗಳು ಒಂದು ಮ್ಯೂಸಿಯಂನಲ್ಲಿ ಸ್ಥಾನ ಪಡೆದಿವೆ. ಸೈಂಟ್ ಮಾರ್ಟಿನ್
ಅಥವಾ ಮೈನ್ಜ್ ಕ್ಯಾಥೆಡ್ರಲ್ ಮೂಲ ರೋಮನ್ ಶೈಲಿಯ ಜೊತೆಗೆ ಮುಂದಿನ ಕಾಲಘಟ್ಟಗಳ ಶೈಲಿಯ ನಿರ್ಮಿತಿಯ ಭಾಗ ಗಳನ್ನೂ ಹೊಂದಿದೆ. ಮೊತ್ತಮೊದಲ ಬಾರಿಗೆ 975- 1009ರಲ್ಲಿ ನಿರ್ಮಿತವಾದರೂ ಕಾಲಕಾಲಕ್ಕೆ ಮರುನಿರ್ಮಾಣ ಹೊಂದಿತು. ಈ ಕ್ಯಾಥೆಡ್ರಲ್ ನಲ್ಲಿ ಬಹಳಷ್ಟು ಬಿಷಪ್‌ರ ಸಮಾಧಿಗಳಿವೆ. ಇಲ್ಲಿನ ಗಾಜಿನ ಕಿಟಕಿಗಳ ಪೈಂಟಿಂಗ್ ಗಳು ಅತ್ಯಾಕರ್ಷಕವಾಗಿವೆ . ಸೈಂಟ್ ಇಗ್ನೇಷಿಯಸ್, ಸೈಂಟ್ ಸ್ಟೀಫನ್, ಸೈಂಟ್ ಪೀಟರ್ ಚರ್ಚುಗಳು ಮತ್ತು ರೆನೈಸೆನ್ಸ್‌ ಅರಮನೆ ಇತರ ಪುರಾತನ ಸ್ಥಳಗಳು.

ಪುರಾತನ ಕಟ್ಟಡಗಳು 
ಮೈನ್ಜ್ ಕ್ಯಾಥೆಡ್ರಲ್ ನ ಆಸುಪಾಸಿನಲ್ಲಿರುವ ನಾಲ್ಕು ಸ್ಕ್ವೇರ್‌ಗಳಲ್ಲೂ ಪ್ರವಾಸಿಗರು ಅಡ್ಡಾಡಬಹುದು. ಪುರಾತನ ಕಟ್ಟಡಗಳು, ಕಲ್ಲು ಚಪ್ಪಡಿಗಳ ರಸ್ತೆ, ಸುಂದರವಾದ ಪುಟ್ಟ ಹುಲ್ಲು ಹಾಸು- ಹೂಗಿಡಗಳು ಸೌಂದರ್ಯವನ್ನು ವೃದ್ಧಿಸುವುದರಲ್ಲಿ ತಮ್ಮದೇ  ಕೊಡುಗೆ ನೀಡಿವೆ. ಬಹುಮಹಡಿಗಳ ಮರದ ಚೌಕಟ್ಟಿನ ಮನೆಗಳು ಗಮನ ಸೆಳೆಯುತ್ತವೆ.

ಇವುಗಳಲ್ಲಿ ಕೆಲವು 500 ವರ್ಷಕ್ಕೂ ಹೆಚ್ಚು ಪುರಾತನವಾದವುಗಳು. ಅವುಗಳನ್ನು ಪುನರ್‌ ನಿರ್ಮಿಸಿ ಸುಸ್ಥಿತಿಯಲ್ಲಿಡಲಾಗಿದೆ. ನದಿ ದಂಡೆಯ ಉದ್ದಕ್ಕೂ ಸೌಂದರ್ಯವನ್ನು ಆಸ್ವಾದಿಸುತ್ತಾ ನಡೆಯಬಹುದು. ನವ್ಯ ನಗರದಲ್ಲಿನ ಕಟ್ಟಡಗಳು ವಿನ್ಯಾಸದಲ್ಲಿ ಬೇರೆಯಾಗಿವೆ. ಮುಖ್ಯ ಆಡಳಿತ ಕಛೇರಿಯ ಹೊರಗೆ ಇರಿಸಲಾಗಿರುವ ನವ್ಯ ಕಲಾಕೃತಿಗಳು ಇನ್ನೊಂದು ಲೋಕಕ್ಕೆ ಕರೆದೊ ಯ್ಯುತ್ತವೆ. ಗುಟೆನ್ ಬರ್ಗ್ ಯುನಿವರ್ಸಿಟಿ, ಮ್ಯಾಕ್ಸ್‌ ಪ್ಲಾಂಕ್ ಯುನಿವರ್ಸಿಟಿ, ವಿಜ್ಞಾನ ಮತ್ತು ಕಲೆಗಳ ಅಕಾಡೆಮಿ ಗಳಿಂದಾಗಿ ಇದು ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಮುಖ ಸ್ಥಳವಾಗಿದೆ.

ಗುಟೆನ್‌ಬರ್ಗ್

ಯುರೋಪಿನ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ ಮುದ್ರಣ ಯಂತ್ರವನ್ನು ಕಂಡು ಹಿಡಿದ ಜೊಹಾನ್ಸ್ ಗುಟೆನ್ ಬರ್ಗ್ (1400-1468) ಇದೇ ಊರಿನವನು. 1439ರಲ್ಲಿ ಆತ ಚಲಿಸುವ ಮಾದರಿಯ ಮುದ್ರಣ ಯಂತ್ರ ಕಂಡುಹಿಡಿದ. ಇವನು ಕಂಡು ಹಿಡಿದ ಈ ತಂತ್ರಜ್ಞಾನವು ಯುರೋಪಿನಾದ್ಯಂತ ಹರಡಿ, ಅಲ್ಲಿನ ಐತಿಹಾಸಿಕ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ಅಪೂರ್ವ ಕೊಡುಗೆ ನೀಡಿತು.

ಈತ ಮುದ್ರಿಸಿದ ‘ಗುಟೆನ್‌ಬರ್ಗ್ ಬೈಬಲ್’ ತನ್ನ ಗುಣಮಟ್ಟದಿಂದ ಪ್ರಸಿದ್ಧ ಎನಿಸಿದ್ದು, ಇದು ಬೈಬಲ್‌ನ ಮೊತ್ತ ಮೊದಲ ಮುದ್ರಣ ಎನಿಸಿದೆ. ಸುಮಾರು 160ರಿಂದ 180 ಪ್ರತಿಗಳನ್ನು 1450ರ ಸಮಯದಲ್ಲಿ ಮುದ್ರಿಸಲಾಗಿದ್ದು, ಇವುಗಳ ಪೈಕಿ ಸುಮಾರು 120 ಪ್ರತಿಗಳನ್ನು ಕಾಗದದ ಮೇಲೆ ಮುದ್ರಿಸಲಾಗಿತ್ತು. ಈ ಅಪರೂಪದ ಬೈಬಲ್‌ನ 49 ಪ್ರತಿಗಳು ಇಂದಿಗೂ ಉಳಿದಿದ್ದು, ಯುರೋಪ್ ಮತ್ತು ಅಮೆರಿಕದ ವಿವಿಧ ಪ್ರದೇಶಗಳಲ್ಲಿವೆ. ಈ ಅಪರೂಪದ ಬೈಬಲ್‌ನ ಒಂದು ಪ್ರತಿ ಬೆಲೆ 1987ರಲ್ಲಿ 5.4 ಮಿಲಿಯ ಡಾಲರ್ ಆಗಿದ್ದು, ಇಂದು ಹರಾಜುಗೊಂಡರೆ 35 ಮಿಲಿಯ ಡಾಲರ್‌ಗೆ ವಿಕ್ರಯವಾಗಬಹುದು ಎಂದು ಅಂದಾಜು. -ಶ.ಹಾ.

ಫ್ರಾಂಕ್ ಫರ್ಟ್ ನಿಂದ ರೈಲು, ಬಸ್ಸು, ಕಾರುಗಳ ಮೂಲಕ ಇಲ್ಲಿಗೆ ತಲುಪಬಹುದು. ಈ ಎರಡು ನಗರಗಳ ನಡುವಿನ ದೂರ 32 ಕಿ.ಮೀ

Leave a Reply

Your email address will not be published. Required fields are marked *

error: Content is protected !!