ಮಂಜುನಾಥ್ ಡಿ.ಎಸ್.
ಅಮೆರಿಕದ ಸಿಯಾಟೆಲ್ ನಗರದಲ್ಲಿರುವ ಕೆರ್ರಿ ಪಾರ್ಕ್ ಸಾಕಷ್ಟು ಪ್ರಸಿದ್ಧ. ನಗರವೊಂದರಲ್ಲಿರುವ ಪಾರ್ಕ್‌ನ್ನು ಹೇಗೆ ಪ್ರವಾಸಿ ಆಕರ್ಷಣೆಯನ್ನಾಗಿ ರೂಪಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.
ಅಮೆರಿಕದ ಸಿಯಾಟಲ್ ನಗರಕ್ಕೆ ಭೇಟಿಯಿತ್ತಿದ್ದ ಸಂದರ್ಭದಲ್ಲಿ ನಾವು ತಂಗಿದ್ದ ಅಪಾರ್ಟ್ಮೆಂಟ್ ಕ್ವೀನ್ ಆನ್ ಬಡಾವಣೆಯ ಮೊದಲ ಅವೆನ್ಯೂನಲ್ಲಿತ್ತು. ಇದು ಪಚ್ಚೆ ನಗರ ಸಿಯಾಟಲ್‌ನ ಕೇಂದ್ರದಲ್ಲಿದ್ದುದರಿಂದ ನಮ್ಮ ಪಾಡಿಗೆ ನಾವು ಸುತ್ತಾಡಿ ಕೊಂಡಿ ರಲು ಅನುಕೂಲವಾಗಿತ್ತಾದರೂ, 456 ಅಡಿ ಎತ್ತರದ ಪುಟ್ಟ ಬೆಟ್ವೀನ್ ಆನ್ ಹಿಲ್‌ನ ಭಾಗವಾಗಿದ್ದ ರಿಂದ ಇಳಿಜಾರಿನ ರಸ್ತೆಯಲ್ಲಿ ಸಾಗಿ ಮನೆ ತಲುಪುವುದು ಸ್ವಲ್ಪ ತ್ರಾಸಕರ ಎನಿಸುತ್ತಿತ್ತು. ವಾರಂತ್ಯದಲ್ಲಿ ಹಾಗು ಬಿಡುವಿನ ವೇಳೆಯಲ್ಲಿ ಮಗ ಹಾಗು ಸೊಸೆ ನಮ್ಮನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಉಳಿದಂತೆ, ಕಾಲ ಕಳೆಯಲು ನಾವೇ ಹತ್ತಿರದ ಜಾಗಗಳಿಗೆ ಹೋಗಿಬರುತ್ತಿದ್ದೆವು.
ಹೀಗೆ ಒಂದು ದಿನ ಬೆಟ್ಟದ ಮೇಲಕ್ಕೆ ಹೋಗುವ ಹಾದಿಯಲ್ಲಿ ಸಾಗಿದೆವು. ವೆಸ್ಟ್ ಹೈಲೆಂಡ್ ಡ್ರೈವ್‌ನಲ್ಲಿ ಎಡಕ್ಕೆ ತಿರುಗಿ ಎರಡನೆಯ ಅವೆನ್ಯೂ ತಲುಪುತ್ತಿದ್ದಂತೆ ಕೆರ್ರಿ ಪಾರ್ಕ್ ನಮ್ಮನ್ನು ಸ್ವಾಗತಿಸಿತು. ಸುಮಾರು ಒಂದೂ ಕಾಲು ಎಕರೆಯಷ್ಟು ವಿಸ್ತೀರ್ಣದ ಈ ಉದ್ಯಾನ ಕಿರಿದಾದರೂ ಸ್ವಚ್ಛವಾಗಿದ್ದು ಸುಂದರ ಎನಿಸಿತು. ಅಲ್ಲಲ್ಲಿ ರಂಗುರಂಗಿನ ಕುಸುಮಗಳಿಂದ ಕೂಡಿದ ಚಿಕ್ಕ ಚಿಕ್ಕ ಗಿಡಗಳಿದ್ದವು. ಉದ್ಯಾನದ ಅಂಚಿನಲ್ಲಿದ್ದ ಆಯಕಟ್ಟಿನ ಸ್ಥಳದಿಂದ ಇಡೀ ನಗರದ ವಿಹಂಗಮ ದೃಶ್ಯವನ್ನು ಕಂಡಾಗ ನಮಗರಿ ವಿಲ್ಲದೆಯೇ ವಿಸ್ಮಯದ ಉದ್ಗಾಾರ ಹೊರಹೊಮ್ಮಿತ್ತು.
ಅಂದದ ನಗರದ ಮನಸೂರೆಗೊಳ್ಳುವ ಗಗನಚುಂಬಿ ಭವನಗಳು, ಎದ್ದುಕಾಣುತ್ತಿದ್ದ ಸ್ಪೇಸ್ ನೀಡ್ಲ್, ಎಲಿಯಟ್ ಬೇ, ದೂರ
ದಲ್ಲಿ ನಿಧಾನವಾಗಿ ಸಾಗುತ್ತಿದ್ದ ದೋಣಿಗಳು ಹಾಗು ಹಡಗುಗಳು, ಹಿನ್ನೆಲೆಯಲ್ಲಿ ಮಸುಕಾಗಿ ಕಂಡ ರೇನಿಯರ್ ಪರ್ವತ, ಇವು ಗಳನ್ನೆಲ್ಲ ಕಣ್ತುಂಬಿಸಿಕೊಂಡೆವು. ಹಲವರು ಈ ಅಪೂರ್ವ ದೃಶ್ಯಗಳನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿದ್ದರು. ಇಲ್ಲಿನ ಸೂರ್ಯಾಸ್ತದ ಅನುಪಮ ಅಂದವನ್ನು ಕಂಡು ಆನಂದಿಸಲು ಅನೇಕ ನಿಸರ್ಗಪ್ರೇಮಿಗಳು ಇಲ್ಲಿಗೆ ಆಗಮಿಸುತ್ತಾರೆ. ಮನೆಗೆ ಹತ್ತಿರವೇ ಇದ್ದುದರಿಂದ ಒಂದು ಸಂಜೆ ಮತ್ತೆ ಇಲ್ಲಿಗೆ ಭೇಟಿಯಿತ್ತೆವು. ಸೂರ್ಯ ಮರೆಯಾಗುತ್ತಿದ್ದಂತೆ, ಬೆಳಗಲಾರಂಭಿಸಿದ ವಿದ್ಯುತ್ ದೀಪಗಳ ಬೆಳಕಿನಲ್ಲಿ ಪ್ರಕಾಶಿಸಿದ ನಗರ ಮಾಯಾಲೋಕವನ್ನು ಪ್ರವೇಶಿಸಿದ ಅನುಭವ ನೀಡಿತು.
ಸಿಯಾಟೆಲ್ ಕುರಿತ ದೂರದರ್ಶನ ಕಾರ್ಯಕ್ರಮಗಳಲ್ಲಿ ಈ ದೃಶ್ಯಗಳನ್ನು ಬಳಸಿಕೊಳ್ಳು ವುದು ನಿರಂತರವಾಗಿ ಪ್ರಸಾರ ಮಾಡುತ್ತಾ, ಅಲ್ಲಿನ ಸೂರ್ಯಾಸ್ತವನ್ನು ಒಂದು ಉತ್ತಮ ಅನುಭವ ಎಂಬಂತೆ ಅಲ್ಲಿನವರು ಬಿಂಬಿಸಿದ್ದಾರೆ.
ದೂರದರ್ಶಕದ ನೋಟ
ವ್ಯೂ ಪಾಯಿಂಟ್‌ಗೆ ಸುರಕ್ಷತೆ ಒದಗಿಸಿದ್ದ ಕಬ್ಬಿಣದ ಕಟಕಟೆಯ ಮೇಲೆ ಅಲ್ಲಲ್ಲಿ ದೂರದರ್ಶಕಗಳನ್ನು ಅಳವಡಿಸಲಾಗಿತ್ತು. ಇವುಗಳಲ್ಲಿ 50 ಸೆಂಟ್‌ನ ನಾಣ್ಯ ಹಾಕಿ ದೂರದ ದೃಶ್ಯಗಳ ಸಮೀಪ ದರ್ಶನ ಪಡೆಯಬಹುದಿತ್ತು. ಆದರೆ ಡಾಲರ್ ಲೆಕ್ಕದ ಆ ಹಣವನ್ನು ವೆಚ್ಚ ಮಾಡಲು ಭಾರತೀಯರಾದ ನಮಗೆ ತುಸು ಕಸಿವಿಸಿ. ಈ ರೀತಿಯ ದರ್ಶನ ಭಾಗ್ಯಕ್ಕಾಗಿ ಇಪ್ಪತ್ತು ಇಪ್ಪತ್ತೈದು ರುಪಾಯಿಗಳನ್ನು ವ್ಯಯಿಸಬೇಕೆ ಬೇಡವೇ ಎಂಬ ದ್ವಂದ್ವದಲ್ಲಿ ಸ್ವಲ್ಪ ಹೊತ್ತು ಸಿಲುಕಿದ್ದಂತೂ ಸತ್ಯ.
ಉದ್ಯಾನದ ನಡುವಿನಲ್ಲಿ, ವೃತ್ತಾಕಾರದ ವೇದಿಕೆಯ ಮೇಲೆ ಚೇಂಜಿಂಗ್ ಫಾರ್ಮ್ ಎಂದು ಕರೆಯಲ್ಪಡುವ ಉಕ್ಕಿನ ಕಲಾಕೃತಿ ಇದೆ. 1971ರಲ್ಲಿ ಅನಾವರಣಗೊಂಡ, 15 ಅಡಿ ಎತ್ತರದ ಈ ನವ್ಯಶಿಲ್ಪದ ಕಲಾವಿದರು ಡೋರಿಸ್ ಟೋಟನ್ ಚೇಸ್ ಎಂಬುದನ್ನು ನಂತರ ತಿಳಿದುಕೊಂಡೆ.
ವೀಕ್ಷಣಾಸ್ಥಳದ ಪಶ್ಚಿಮದ ಕಡೆಗಿದ್ದ ಸೋಪಾನಗಳನ್ನಿಳಿದು ಕೆಳಹಂತದಲ್ಲಿದ್ದ ಮಕ್ಕಳ ಆಟದ ಮೈದಾನವನ್ನು ನೋಡಿಕೊಂಡು ಮನೆಗೆ ಮರಳಿದೆವು. ಈಗ ಉದ್ಯಾನವಿರುವ ಜಾಗವನ್ನು, ಇಲ್ಲಿ ವಾಸವಾಗಿದ್ದ ಆಲ್ಬರ್ಟ್ ಎಸ್. ಕೆರ್ರಿ ಹಾಗು ಅವರ ಪತ್ನಿ ಕ್ಯಾಥೆರೀನ್ 1927ರಲ್ಲಿ ದಾನವಾಗಿ ನೀಡಿದರಂತೆ. ಇದರಿಂದಾಗಿ, ಈ ಉದ್ಯಾನಕ್ಕೆ ಕೆರ್ರಿ ಪಾರ್ಕ್ ಎಂದು ನಾಮಕರಣ ಮಾಡಲಾ ಗಿದೆ. ಚೇಂಜಿಂಗ್ ಫಾರ್ಮ್ ಶಿಲ್ಪ ನಿರ್ಮಾಣಕ್ಕೆ ಕೆರ್ರಿ ದಂಪತಿಯ ಮಕ್ಕಳು ದೇಣಿಗೆ ನೀಡುವ ಮೂಲಕ ವಂಶದ ಪರಂಪರೆ ಯನ್ನು ಮುಂದುವರಿಸಿಕೊಂಡುಬಂದಿದ್ದಾರೆ.
ಜನಪ್ರಿಯ ಎನಿಸಿದ ಪುಟಾಣಿ ಪಾರ್ಕ್
ಈ ಪಾರ್ಕ್ ಇರುವ ಜಾಗ ಕಿರಿದು ಎನಿಸಿದರೂ, ಎತ್ತರದಲ್ಲಿರುವುದರಿಂದಾಗಿ, ಸುಂದರ ಸ್ಥಳವಾಗಿ ರೂಪುಗೊಂಡಿದೆ. 1927ರಲ್ಲಿ ಈ
ಜಾಗವನ್ನು ಪಾರ್ಕ್‌ಗಾಗಿ ದಾನ ನೀಡಿದ ಕೆರ್ರಿ ದಂಪತಿಯ ಉದ್ದೇಶವೂ ಅದೇ ಆಗಿತ್ತು. ಈ ದಾರಿಯಲ್ಲಿ ಸಾಗುವವರೆಲ್ಲರೂ
ಇಲ್ಲೊಂದು ಗಳಿಗೆ ನಿಂತು, ಇಲ್ಲಿಂದ ಕಾಣುವ ದೃಶ್ಯವನ್ನು ನೋಡಿ ಆನಂದಿಸಲಿ ಎಂಬ ಉದ್ದೇಶದಿಂದ ಪಾರ್ಕ್ ನಿರ್ಮಿಸಲು ಅವರು ದಾನ ನೀಡಿದ್ದರು. ಈ ಜಾಗದಿಂದ ಸಿಯಾಟಲ್ ನಗರದ ಸ್ಕೈಲೈನ್ ನೋಡುವ ಅನುಭವ ವಿಶಿಷ್ಟ, ಅನನ್ಯ. ಸಿಯಾಟಲ್ ನಗರ ಹೆಚ್ಚು ಹೆಚ್ಚು ಪ್ರಸಿದ್ಧಿಗೊಂಡಂತೆಲ್ಲಾ, ಈ ಪುಟಾಣಿ ಪಾರ್ಕ್ ಸಹ ಜನಪ್ರಿಯವಾಯಿತು. 1999ರಲ್ಲಿ ತೆರೆಕಂಡ ‘10 ಥಿಂಗ್ಸ್ ಐ ಹೇಟ್ ಅಬೌಟ್ ಯು’ ಮೊದಲಾದ ಚಲನಚಿತ್ರಗಳಲ್ಲೂ ಈ ಪಾರ್ಕ್‌ನ ದೃಶ್ಯಾವಳಿಗಳನ್ನು ಅಳವಡಿಸಿದ್ದರಿಂದಾಗಿ, ಈ ಪಾರ್ಕ್ ಹೆಚ್ಚು ಪ್ರಸಿದ್ಧಿ ಪಡೆಯಲು ಸಹಕಾರಿ ಎನಿಸಿತು.
ಚೇಂಜಿಂಗ್ ಫಾರ್ಮ್
ಸಿಯಾಟಲ್‌ನಲ್ಲಿ ಜನಿಸಿದ ಕಲಾವಿದೆ, ಲೇಖಕಿ ಡೋರಿಸ್ ಟೋಟೆನ್ ಚೇಸ್ ನಿರ್ಮಿಸಿದ ಚೇಂಜಿಂಗ್ ಫಾರ್ಮ್ ಎಂಬ ಕಲಾಕೃತಿ ಈ ಪಾರ್ಕ್‌ನ ಪ್ರಮುಖ ಆಕರ್ಷಣೆ ಎನಿಸಿದೆ. ಸುಮಾರು 15 ಅಡಿ ಎತ್ತರದ ಈ ಕಬ್ಬಿಣದ ಕಲಾಕೃತಿಯನ್ನು 1971ರಲ್ಲಿ ನಿರ್ಮಿಸಲಾ ಯಿತು. ಇದೊಂದು ಟೊಳ್ಳು ಕಲಾಕೃತಿ. ಒಂದು ರೀತಿಯಲ್ಲಿ ಇದು ಅಮೆರಿಕವನ್ನು ಆವರಿಸಿರುವ ಆಧುನಿಕ ಜನಸಮೂಹದ ಟೊಳ್ಳು ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಕೆಲವು ಕಲಾವಿಮರ್ಶಕರು ಗುರುತಿಸಿದ್ದಾರೆ. ಸಿಯಾಟೆಲ್‌ನ ಪ್ರಮುಖ ಫೋಟೋ ಶೂಟ್ ಜಾಗವಾಗಿ ಚೇಂಜಿಂಗ್ ಪಾರ್ಮ್ ರೂಪುಗೊಂಡಿದ್ದರಿಂದ, ಈ ಸ್ಟೀಲ್ ಕಲಾಕೃತಿಯು ಪ್ರವಾಸಿಗರ ಫೊಟೋ ಫ್ರೇಮ್ ಗಳಲ್ಲಿ ಶಾಶ್ವತವಾಗಿ ಬಂಧಿಯಾಗಿದೆ.