Sunday, 15th December 2024

ಕರಾವಳಿ ವಧು ಮರಾಠಿ ವರ

ಹಿಂದೊಮ್ಮೆ ಮುನಿಸು-ವಾಗ್ವಾದ-ಪ್ರತಿಷ್ಠೆ ಮೇಲುಗೈ ಪಡೆಯುತ್ತಿದ್ದ ಮದುವೆ ಮಂಟಪಗಳು ಆಧುನಿಕ-ಶಿಕ್ಷಿತ ಸಮಾಜದಲ್ಲಿ ಸುಧಾರಣೆ ಕಾಣುತ್ತಿರುವುದು ಸ್ವಾಗತಾರ್ಹ.

ಬೈಂದೂರು ಚಂದ್ರಶೇಖರ ನಾವಡ

ತಮ್ಮ ಮಕ್ಕಳ ಮದುವೆ ಸಂಭ್ರಮದಿಂದ ನೆರವೇರಿಸಬೇಕೆಂದು ಹೆತ್ತವರು ಕನಸು ಕಾಣುವುದು ಸ್ವಾಭಾವಿಕವೆ. ಕರೋನಾ ಕಾಲದ ಲಾಕ್ ಡೌನ್-ಕಂಟೈನ್ಮೆಂಟ್- ಕ್ವಾರಂಟೈನ್, ಜನಜಂಗುಳಿ ಸೇರುವ ಸಭೆ-ಸಮಾರಂಭ ಪ್ರತಿ ಬಂಧ ಮತ್ತಿತರ ಹತ್ತಾರು ಇತಿ- ಮಿತಿ ಗಳ ಪರಿಧಿಯಲ್ಲಿ ವಧೂ- ವರರ, ಬಂಧು-ಬಾಂಧವರ ಆಸೆ-ಆಕಾಂಕ್ಷೆಗಳು ಮುದುಡಿ ಹೋಗುವಂತಾಯಿತು.

ದೀರ್ಘ ಕಾಲದ ನಂತರ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾದ ನಂತರ ಬಂಧಮುಕ್ತ ಹಸುವಿನ ಚಿನಕುರುಳಿ ಕರು ಚಂಗನೆ ನೆಗೆದು ಓಡುವಂತೆ ಜನಸಾಮಾನ್ಯರ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳು ದಾಪುಗಾಲಿನಲ್ಲಿ ಗರಿಗೆದರಲು ಪ್ರಾರಂಭಿಸಿವೆ. ಮದುವೆ ಸಮಾರಂಭಗಳು ಸಾಮಾಜಿಕ ಅಂತರದ ಷರತ್ತಿನೊಂದಿಗೆ ಸೀಮಿತ ಸಂಖ್ಯೆಯಲ್ಲೇ ಸರಿ ಮತ್ತೊಮ್ಮೆ ಕಳೆಗಟ್ಟಲು ತೊಡಗಿವೆ. ಕರೋನಾ ಸಂಕಷ್ಟ ಕಾಲದ ಈ ಹೊತ್ತಿನಲ್ಲಿ ಇತ್ತೀಚೆಗೆ ನಡೆದ ಮದುವೆಯ ಮುನ್ನಾ ದಿನದ ಸಡಗರದ ಸಂಜೆಯೊಂದು ದೀರ್ಘ ಕಾಲದ ನಂತರ ಮಧುರಾನುಭವ ನೀಡಿತು.

ಮಹಾರಾಷ್ಟ್ರದ ವರ, ಮಂಗಳೂರಿನ ವಧು, ಭಾಷೆ-ದೇಶ- ಕಾಲದ ಹಂಗಿಲ್ಲದೇ ದಿಲ್ ಸೇ ದಿಲ್ ಮಿಲ ಗಯಾ ಎನ್ನುವಂತೆ
ಪರಸ್ಪರ ಆಕರ್ಷಿತರಾದ ಯುವ ಜೋಡಿಯ ಶುಭ ಮಿಲನದ ವೈವಾಹಿಕ ಮುಹೂರ್ತದ ಮುನ್ನಾ ದಿನದ ವೈಭವದ ಸಂಜೆಯ
ಸೊಬಗು ಮಲ್ಲಿಗೆಯ ಘಮ ಘಮ ಪರಿಮಳದಂತೆ ಎಲ್ಲೆಡೆ ಪಸರಿಸಿ ನೋಡುಗರ ಮನ ಮುದಗೊಳಿಸಿತು. ಕರಾವಳಿಯ ಗಂಡು ಕಲೆ ಯಕ್ಷಗಾನದ ವೇಷಧಾರಿ ಚಂಡೆ-ತಾಳದ ಲಯಕ್ಕೆ ಕುಣಿದು ಕೈ ಮುಗಿದು ಸ್ವಾಗತಿಸಿ ಮರಾಠಿ ವರ ಮತ್ತವರ ಕಡೆಯವರ ಮುಖಾರವಿಂದಗಳನ್ನು ಅಳಿಸಿ ಸುಖಾನುಭವದಲ್ಲಿ ತೇಲಿಸಿದ ಕಾರ್ಯಕ್ರಮ ಉಸ್ತುವಾರಿ ಮಂಗಳೂರಿನ ನಾಗೇಂದ್ರ ಐತಾಳ್ ಮತ್ತವರ ಹೆಜ್ಜೆ ನಾದ ತಂಡದ್ದಾಗಿತ್ತು.

ವಿದೇಶೀ ಗಣ್ಯಾತಿಥಿಗಳನ್ನು ಸಕಲ ರಾಜಕೀಯ ಸಮ್ಮಾನಗಳೊಂದಿಗೆ ಔಪಚಾರಿಕವಾಗಿ ಸ್ವಾಗತಿಸುವ ರೀತಿಯಲ್ಲಿ ವರ ಮತ್ತವರ ಕೌಟುಂಬಿಕರನ್ನು ಹೂ ಹಾರ ಹಾಕಿ, ಪೇಟ ತೊಡಿಸಿ, ಶಾಲು ಹೊದೆಸಿದ ವೈಭವಪೂರ್ಣ ಆದರ-ಆತಿಥ್ಯಪೂರ್ಣ ಸ್ವಾಗತ ಅತಿಥಿ ಗಳ ಹೃದಯ ತುಂಬಿ ಬರುವಂತೆ ಮಾಡಿತು.

ವೇದಿಕೆಯಲ್ಲಿ ವರ-ಕನ್ಯಾ ಪಿತೃಗಳನ್ನು ಆಹ್ವಾನಿಸಿ ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಧಿವತ್ತಾಗಿ ಚಾಲನೆ ನೀಡಿ ದ್ದಲ್ಲದೇ ದೂರದ ಮಹಾರಾಷ್ಟ್ರದಿಂದ ಬಂದವರಿಗೆ ಪರ ಭಾಷೆಯ ಕರಾವಳಿಯ ಕನ್ನಡ ನೆಲದ ರೀತಿ-ನೀತಿ, ಆಹಾರ- ವಿಹಾರ ಗಳ ಕುರಿತಾಗಿ ತಮ್ಮ ಅನಿಸಿಕೆ ಹಂಚಿಕೊಳ್ಳಲು ಕೇಳಲಾಯಿತು.

ಭಾಷೆ-ಪ್ರಾಂತ ಬೇರೆಯಾದರೂ ಸಂಸ್ಕೃತಿ ಒಂದೆ ಎಂದ ಆ ಹಿರಿಯರ ಆನಂದತುಂದಿಲ ಮಾತುಗಳು, ಕರಾವಳಿಯ ಸಾಂಸ್ಕೃತಿಕ ವೈಭವ ಹಾಗೂ ಇಲ್ಲಿನ ಆತಿಥ್ಯದ ಮುಕ್ತ ಕಂಠದ ಪ್ರಶಂಸೆ ಎಲ್ಲರ ಮನಸ್ಸನ್ನು ಸ್ಪರ್ಷಿಸಿತು. ಡೋಲು-ಮದ್ದಳೆ ವಾದನ ಗಳೊಂದಿಗೆ ವರನನ್ನು ವೇದಿಕೆಗೆ ಕರೆತರುವ, ಸ್ಥಳೀಯ ಭಾಷೆಯ ಕೆಲವು ಶಬ್ದಗಳನ್ನು ಹೇಳುವಂತೆ ಆತನನ್ನು ಕೇಳಿದಾಗ
ಥಟ್ಟನೆ ಆತನಿಗೆ ಹೊಳೆಯುವ ತಲೆ ತಿನ್ನಬೇಡ ಎಂದಾಗ, ಇಷ್ಟದ ತಿಂಡಿ ಎಂದಾಗ ಕಷ್ಟದಿಂದ ಆತ ಗಂಜಿ ಎಂದಾಗ ವೀಕ್ಷಕರ ಮಧ್ಯೆ ನಗೆಯ ಹೊನಲು ಹರಿಯುತ್ತದೆ. ಮಂದಗಮನೆಯಾಗಿ ವಧುವಿನ ಭವ್ಯ ಆಗಮನ ಸಿಡಿ ಮದ್ದಿನಿಂದ ಸಿಡಿದ ರಂಗು ರಂಗಿನ
ಪಕೆಗಳ ವೃಷ್ಠಿ ಸುರಿಸಿತು.

ತನ್ನೊಂದಿಗೆ ಆಸೀನಳಾಗಲು ಬಂದ ವಧುವಿನ ಬರವಿಕೆಯ ಗೌರವಾರ್ಥ ವರನು ಎದ್ದು ನಿಲ್ಲುವ ಮೂಲಕ ಸ್ತ್ರೀ ಸಮಾನತೆಗೆ ಜಯಜಯಕಾರ ಹಾಕಿದಂತೆ ಭಾಸವಾಯಿತು. ಮದುವೆಯಂತಹ ತೀರಾ ವೈಯ್ಯಕ್ತಿಕ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ರಂಗು ತುಂಬಿ, ಅತಿಥಿಗಳ ಮನೋರಂಜನೆ ಮಾಡಿದ್ದಲ್ಲದೆ ವಧೂ-ವರರ ಸಂಬಂಧಕ್ಕೆ ಭದ್ರ ಬುನಾದಿ ಹಾಕಿದ ಹೆಜ್ಜೆ ನಾದ ತಂಡದ ಧಾರ್ಮಿಕ, ರಾಷ್ಟ್ರ ಪ್ರೇಮದ, ಗತ ಕಾಲದ ಸೂರ್ಪ ಹಿಟ್ ಹಾಡುಗಳ ಹಿನ್ನೆಲೆಯೊಂದಿಗಿನ ನೃತ್ಯ ಮನತಣಿಸಿತು.

ಹಿಂದೊಮ್ಮೆ ಮುನಿಸು-ವಾಗ್ವಾದ-ಪ್ರತಿಷ್ಠೆ ಮೇಲುಗೈ ಪಡೆಯುತ್ತಿದ್ದ ಮದುವೆ ಮಂಟಪಗಳು ಆಧುನಿಕ-ಶಿಕ್ಷಿತ ಸಮಾಜದಲ್ಲಿ ಸುಧಾರಣೆ ಕಾಣುತ್ತಿರುವುದು ಸ್ವಾಗತಾರ್ಹವೇ. ಮದುವೆಗಳು ಹೀಗೆ ಸಾಂಸ್ಕೃತಿಕ ಸೊಬಗನ್ನು ಪಡೆದುಕೊಂಡರೆ ಎಷ್ಟೊಂದು
ಸೊಗಸಲ್ಲವೇ?