ಶ್ರೀರಂಜನಿ ಅಡಿಗ
ಮದುವೆ ಮನೆ ಎಂದರೆ ಬಳೆಗಳ ಸದ್ದು ರಿಂಗಣಿಸುತ್ತದೆ. ಹಿಂದೆಲ್ಲಾ ಬಳೆಗಾರನು ಮದುವೆಯಾಗುವ ಹೆಣ್ಣಿಗೆ ಬಳೆ ತೊಡಿಸಲೆಂದೇ ಆಕೆಯ ತವರು ಮನೆಗೆ ಬಂದು, ಮದುವೆ ಬಳೆಗಳನ್ನು ತೊಡಿಸುತ್ತಿದ್ದ!
ಶ್ರಾವಣಕ್ಕೂ ಹೆಣ್ಣಿಗೂ ಬಿಡಿಸಲಾರದ ನಂಟು. ಶ್ರಾವಣ ಮಾಸವೆಂದರೆ ಹೆಣ್ಣಿಗೆ ಏನೋ ಒಂದು ಭಾವುಕತೆ. ಸೋಣೆ ತಿಂಗಳಲ್ಲಿ ಭೂರಮೆ ಹಸುರುಟ್ಟು
ಸಂಭ್ರಮಿಸುತ್ತಿದ್ದರೆ ಹೆಣ್ಣು ಕೈತುಂಬಾ ಬಳೆಗಳನ್ನು ತೊಟ್ಟು ಸಾಲಾಗಿ ಬರುವ ಹಬ್ಬಗಳನ್ನು ಆಚರಿಸಲು ಕಾತರಳಾಗಿರುತ್ತಾಳೆ. ‘ಹಸಿರು ಗಾಜಿನ ಬಳೆಗಳೆ’ ಎಂದು
ಸುಧಾರಾಣಿ ಕೈತುಂಬಾ ಬಳೆಗಳನ್ನು ಧರಿಸಿ ಹಾಡಿದ ಹಾಡು ಹೆಣ್ಣು ಮಕ್ಕಳ ಆಲ್ ಟೈಮ್ ಫೇವರೇಟ್ ಸಾಂಗ್.
ಹುಟ್ಟಿದ ಮಗುವಿಗೆ ದೃಷ್ಟಿ ತಾಗದಿರಲೆಂದು ಕರಿಮಣಿಗಳ ಬಳೆತೊಡಿಸುತ್ತಾರೆ. ಅಕ್ಷರ ದುಂಡಾಗುವುದು, ಕೈಗೆ ಬಲ ಬರುವುದು ಹೀಗೆ ಪ್ರಾದೇಶಿಕವಾಗಿ ನಂಬಿಕೆ ಗಳು ಬದಲಾಗುತ್ತವೆ. ಮದುಮಗಳು ಸೀರೆ, ಒಡವೆಗಳಿಗೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಬಳೆಗಳಿಗೂ ನೀಡುತ್ತಾಳೆ. ಮದುವೆ ಹಿಂದಿನ ದಿನ ಮದುಮಗಳಿಗೆ ಮಾತ್ರವಲ್ಲ ಮನೆಮಂದಿಗೆ ಬಳೆ ಇಡಿಸುವ ಶಾಸ್ತ್ರಕ್ಕೆ ಮದುವೆಯಷ್ಟೇ ಪ್ರಾಮುಖ್ಯತೆಯಿದೆ. ಮೊದಲೆ ಬಳೆಗಾರ ಬೆನ್ನ ಮೇಲೆ ಬಳೆಗಳ ಚೀಲವನ್ನು ಹೊತ್ತುಕೊಂಡು ಊರೂರಿಗೆ ತಿರುಗುತ್ತಿದ್ದ. ಅವನು ಬಂದೊಡನೆ ಹೆಂಗಳೆಯರು ಇದ್ದ ಕೆಲಸವನ್ನೆ ಬಿಟ್ಟು ಅವನೆದುರು ಹಾಜರಾಗುತ್ತಿದ್ದರು.
ಹಿಂದೆ ಬಳೆಗಾರ, ಬಳೆ ತೊಡಿಸುವವನು ಮಾತ್ರನಾಗಿರದೆ ಊರಿಂದ ಊರಿಗೆ ಸಂಚರಿಸುವ ಸುದ್ದಿಯ ವಾಹಕನೂ ಆಗಿರುತ್ತಿದ್ದ. ಹೆಣ್ಣು ಮಕ್ಕಳಿಗೆ ತವರಿನ ಒಸಗೆ ತರುವ ಆತ್ಯಾಪ್ತ ಬಂಧು. ಅದನ್ನೇ ಜನಪದರು ‘ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ’ ಎಂದು ತವರಿನ ದಾರಿಯನ್ನು ವರ್ಣಿಸಿದರು. ಹಿರಿಯ ಕವಿ ಕೆ.ಎಸ್.ನರಸಿಂಹ ಸ್ವಾಮಿ ಯವರು ‘ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು’ ಎನ್ನುತ್ತಲೇ ‘ನವಿಲೂರ ಮನೆಯಿಂದ ನುಡಿಯೊಂದ ತಂದಿ ಹೆನು’ ಎಂದು ಚಿತ್ರಿಸುತ್ತಾರೆ.
ಆದರೆ ಈಗ ತವರಿನ ವಿಷಯ ತಿಳಿಯಲು ಮೊಬೈಲ್ ಇದೆ, ಬಳೆಕೊಳ್ಳಲು ಬಳೆಗಾರ ಬೇಡ, ಅಮೆಜಾನ್ನಂತಹ ಆನ್‌ಲೈನ್ ಅಂಗಡಿಗಳೇ ಆ ಕೆಲಸವನ್ನು ವಹಿಸಿಕೊಂಡಿವೆ. ಬಳೆಗಳೆಂದ ಕೂಡಲೇ ನನ್ನ ಬಾಲ್ಯ ಕಿಂಕಿಣಿ ನಾದ ಹೊಮ್ಮಿಸುತ್ತದೆ. ಕಲ್ಲುಗಳನ್ನು ಹಾರಿಸುತ್ತಾ, ಸದಾಕಾಲ ಗುಡ್ನ ಆಟ ಆಡುತ್ತಿದ್ದ ನಾನು
ಕಲ್ಲುಗಳನ್ನು ಹಾರಿಸಿ ಅಂಗೈ ಮೇಲೆ ಬೀಳಿಸಿಕೊಳ್ಳುತ್ತಿದ್ದಂತೆ ಎಲ್ಲಿದ್ದರೂ ಓಡಿ ಬರುತ್ತಿದ್ದ ಅಮ್ಮ ‘ಕೈ ಗಟ್ಟಿಯಾಗಿ ಬಳೆ ತೊಡಲು ಕಷ್ಟವಾಗುತ್ತದೆ, ಜಾಸ್ತಿ ಗುಡ್ನ ಆಡಬೇಡ’ ಎಂದು ಎಚ್ಚರಿಸುತ್ತಿದ್ದಳು. ಹೀಗಾಗಿ ಬಳೆ ತೊಡಬೇಕೆಂಬ ಆಸೆಯಿಂದ ಗೆಳೆಯರೊಡನೆ ಆಡುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿದ್ದೆ.
ಬಳೆಗಳೆಂದರೆ ಅಕ್ಕರೆ
ನನ್ನಮ್ಮನಿಗೆ ಬಳೆಗಳ ಮೇಲೆ ಬಲು ಅಕ್ಕರೆ. ಕೈಯಲ್ಲಿದ್ದ ಬಳೆಗಳು ಮಾಸಿದ ಕೂಡಲೆ ಅಪ್ಪನನ್ನು ಅಕ್ಷರಶಃ ಎಳೆದುಕೊಂಡೇ ಬಳೆಯಂಗಡಿಗೆ ಹೋಗಿ ಕೈತುಂಬ ಬಳೆ ಧರಿಸಿ ಬರುತ್ತಿದ್ದಳು. ನಂತರ ತನ್ನ ಕೈಗಳನ್ನು ನೋಡಿ ಸಂಭ್ರಮಿಸುವ ಅವಳ ಮುಗ್ಧತೆ ಶಬ್ದಕ್ಕೆ ನಿಲುಕದ್ದು. ಅಮ್ಮನ ಬಳೆಗಳ ಮೇಲಿನ ಈ ಪರಿಯ ಪ್ರೇಮ ನೋಡಿ ಅಪ್ಪ ಎಲ್ಲಿಗೆ ಹೋಗಿದ್ದರೂ ಮರಳಿ ಬರುವಾಗ ಡಝನ್ ಬಳೆಗಳನ್ನು ತಪ್ಪದೆ ತರುತ್ತಿದ್ದರು.
ನಮ್ಮ ಊರಿನ ಜಾತ್ರೆ ಬಂದರಂತೂ ದೇವಳದಲ್ಲಿ ಇರುವ ಜಂಗುಳಿಗಿಂತ ಜಾಸ್ತಿ ಜನ ಬಳೆಯಂಗಡಿಯೆದರು ಇರುತ್ತದೆ. ಝಗಮಗಿಸುವ ದೀಪಗಳ ಕೆಳಗೆ ಕಣ್ಣುಕೋರೈಸುವ ಬಳೆಗಳಲ್ಲಿ ಹೆಣ್ಣು ಮಕ್ಕಳಿಗೆ ಹಲವು ಆಯ್ಕೆಯಲ್ಲಿ ಯಾವುದು ಖರೀದಿಸುವುದೆಂಬ ಗೊಂದಲ. ಎಲ್ಲವೂ ಬಣ್ಣದಲ್ಲಿ, ವಿನ್ಯಾಸದಲ್ಲಿ ಚಂದವೇ.
ಕೋಟೇಶ್ವರz ಅಥವಾ ಸಾಲಿಗ್ರಾಮz ಜಾತ್ರೆ ಬಂದಾಗ ಬಳೆ ಕೊಳ್ಳಲೆಂದೇ ನಮ್ಮ ಹಿರಿಯರು ಹಣ ಕೊಡುತ್ತಿದ್ದರು. ಆಟಿಕೆಗಳಿಗಾಗಲೀ, ತಿಂಡಿ, ತೊಟ್ಟಿಲು ಆಟ, ಮುಂತಾದವುಗಳಿಗೆ ಖರ್ಚು ಮಾಡದೆ ಬಳೆಕೊಳ್ಳಲೆಂದೇ ಜಾಗ್ರತೆಯಿಂದ ಖರ್ಚು ಮಾಡುತ್ತಿದ್ದುದು ಮರೆಯಲಾಗದ ನೆನಪು.
ಲಿಂಗಭೇದವಿಲ್ಲದೆ ಹುಟ್ಟಿದ ಕೂಸುಗಳ ಕರಗಳನ್ನಲಂಕರಿಸುವ ಬಳೆಗಳು ಗಂಡಸಿನ ದೌರ್ಬಲ್ಯವೂ ಹೌದು. ಅದೆಷ್ಟೋ ತಪೋನಿರತ ಋಷಿಗಳ ತಪಸ್ಸನ್ನು ಭಂಗ ಪಡಿಸಿದ ಕೀರ್ತಿ ಬಳೆಗಳಿಗಿವೆ. ಬಳೆಗಳ ಸದ್ದಿನಿಂದಲೇ ಏಕಾಗ್ರತೆಗೆ ಭಂಗ ತರುವ ಸಂದರ್ಭ ಅದು. ಇನ್ನೊಂದೆಡೆ ಇದೇ ಬಳೆಗಳ ಸದ್ದಿನಿಂದ ಗಂಡು ಮಕ್ಕಳ ಒಲವನ್ನು, ಪ್ರೀತಿಯನ್ನು ಸಂಪಾದಿಸಿದವರೂ ಉಂಟು! ಬಳೆಯ ಸದ್ದಿನಿಂದಲೇ ತನ್ನ ಗಂಡನಿಗೆ ತನ್ನ ಮನದ ಇಂಗಿತವನ್ನು ತಿಳಿಸುವ ಹೆಂಡತಿಯರು ಇದ್ದಾರೆ! ಅವರ ಜೀವನದಲ್ಲಿ ಬಳೆಗಳು ಯಾವುದಾದರೂ ಒಂದು ರೂಪದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುತ್ತವೆ.
ಆಷಾಢ ಮುಗಿದು ಶ್ರಾವಣ ಕಾಲಿಟ್ಟಿದೆ, ಹಬ್ಬಗಳೂ ಒಂದರ ಹಿಂದೆ ಬರಲು ತಯಾರಾಗಿದೆ; ಈ ಸಂಭ್ರಮಕ್ಕೆ ಮೂರನೇ ಅಲೆ ಕೋರೋನಾದ ಭಯವೇಕೆ? ’ಬೋಲೇ ಚೂಡಿಯಾಂ, ಬೋಲೆ ಕಂಗನಾ’ ಅನ್ನುತ್ತಾ ಕೈತುಂಬಾ ಬಳೆ ತೊಟ್ಟು ಸಂಭ್ರಮದಿಂದ ಬರಮಾಡಿಕೊಳ್ಳಿ.