ಡಾ.ಕೆ.ಎಸ್.ಚೈತ್ರಾ
ಬಣ್ಣ ಬಣ್ಣದ ಕೊಡೆಗಳನ್ನು ತಯಾರು ಮಾಡುವ ಈ ನಾಡಿನಲ್ಲಿ ಕೊಡೆಗಳ ಹಬ್ಬವನ್ನು ಸಹ ಆಚರಿಸುತ್ತಾರೆ!
ನಮ್ಮ ರಿಕ್ಷಾದಂಥ ಟುಕ್ಟುಕ್ನಿಂದ ಇಳಿದು, ನೆತ್ತಿ ಮೇಲೆ ಸುಡುವ ಸೂರ್ಯನಿಂದಾಗಿ ಕಣ್ಣು ಕಿರಿದುಗೊಳಿಸಿ ನೋಡಿದರೆ ಎಲ್ಲೆಲ್ಲೂ ಕೊಡೆಗಳು! ಒಂದಲ್ಲ, ಎರಡಲ್ಲ ನೂರಾರು!
ಅದೂ ಬಣ್ಣ ಬಣ್ಣದ್ದು; ಹೂವು, ಬಳ್ಳಿ, ಹಣ್ಣು, ಸೂರ್ಯ, ಚಂದ್ರ, ಮನೆ, ಬೆಟ್ಟ ಗುಡ್ಡ – ಹೀಗೆ ಮನಸ್ಸಿಗೆ ಬಂದ ಚಿತ್ತಾರಗಳಲ್ಲಿ. ಅಪ್ಪಿ ತಪ್ಪಿ ಕೊಡೆ ಉಪಯೋಗಿಸುವ ಗಂಧರ್ವರ ನಾಡಿಗೆ ಕಾಲಿಟ್ಟೆವೇನೋ ಎಂಬ ಸಂಶಯ ಬರುವಷ್ಟು ಚೆಂದ! ಈ ಭೂಮಿ ಯಲ್ಲೇ ಅಂದರೆ ಥೈಲ್ಯಾಂಡಿನ ಉತ್ತರ ಭಾಗದಲ್ಲಿರುವ ಚಿಯಾಂಗ್ ಮಾಯ್ ನಗರದಿಂದ ಕೇವಲ ಆರು ಮೈಲಿ ದೂರ ದಲ್ಲಿರುವ ಬೊಸಾಂಗ್ ಎಂಬ ಪುಟ್ಟ ಹಳ್ಳಿ. ಬೊಸಾಂಗ್ ಅನ್ನುವುದಕ್ಕಿಂತ ಅಂಬ್ರೆಲ್ಲಾ ವಿಲೇಜ್ ಎಂದೇ ಇದು ಹೆಸರುವಾಸಿ.
ಭಿಕ್ಷುವಿನ ಜಾಣತನ
ಭತ್ತದ ಗದ್ದೆಗಳಿಂದ ಕೂಡಿ ಕೃಷಿಯೇ ಪ್ರಧಾನವಾಗಿರುವ ಥೈಲ್ಯಾಂಡಿನಲ್ಲಿರುವ ಈ ಪುಟ್ಟ ಹಳ್ಳಿಯ ಕೊಡೆಗಳು ಪ್ರಪಂಚದಲ್ಲೇ ತಮ್ಮ ಚಿತ್ತಾರ, ವಿನ್ಯಾಸಕ್ಕೆ ಪ್ರಸಿದ್ಧಿಯಾಗಿರುವುದಕ್ಕೆ ಬೌದ್ಧ ಭಿಕ್ಷುವಿನ ದೂರದರ್ಶಿತ್ವವೇ ಕಾರಣ.
ಸುಮಾರು ನೂರು ವರ್ಷಗಳ ಹಿಂದೆ – ಇಂತಾ ಎಂಬ ಬೌದ್ಧ ಭಿಕ್ಷು ತನ್ನ ಹಳ್ಳಿಯಾದ ಬೊಸಾಂಗ್ದಿಂದ ದೂರದ ಬರ್ಮಾಕ್ಕೆ ಪ್ರಯಾಣ ಕೈಗೊಂಡಿದ್ದ. ಧರ್ಮ ಪ್ರಸರಣ ಮತ್ತು ಹೆಚ್ಚಿನ ಅಧ್ಯಯನಕ್ಕಾಗಿ ಕಾಲ್ನಡಿಗೆಯಲ್ಲಿ ಅಲ್ಲಲ್ಲಿ ತಂಗುತ್ತಾ ದೂರ ಪ್ರದೇಶ ಗಳಿಗೆ ಪ್ರಯಾಣ ಬೆಳೆಸುವುದು ಅಂದಿನ ರೂಡಿ. ಹಾಗೆ ಬರ್ಮಾದಲ್ಲಿ ಆತನಿಗೆ ಅಲಂಕಾರಿಕ ಕಾಗದದ ಕೊಡೆಯೊಂದನ್ನು ಆತನಿಗೆ ಉಡುಗೊರೆಯಾಗಿ ನೀಡಿದ್ದರು.
ದೀರ್ಘ ಪ್ರಯಾಣದಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ಹಗುರವಾದ ಆದರೆ ದೃಢವಾದ ಕೊಡೆ ಅನುಕೂಲವಾಗಿತ್ತು. ಜತೆಗೆ ಕಾಗದದ ಕೊಡೆಗೆ ಎಣ್ಣೆ ಲೇಪನ ಮಾಡಿದ್ದಿದ್ದರಿಂದ ಅದು ತಂಪಿನ ಅನುಭವ ನೀಡುತ್ತಿತ್ತು. ಕುತೂಹಲದಿಂದ ಅದನ್ನು ಪರಿಶೀಲಿಸಿದ ಭಿಕ್ಷುವಿನ ಮನದಲ್ಲಿ ಇಷ್ಟು ಸುಲಭವಾದದ್ದು, ಉಪಯೋಗಿಯಾದದ್ದು ತಮ್ಮಲ್ಲೂ ಏಕೆ ಮಾಡಬಾರದು ಎನ್ನಿಸಿತು. ಆ ಕೊಡೆ ತಯಾರಿಸಲು ಬಳಸಿದ್ದು ಕೇವಲ ಬಿದಿರು ಮತ್ತು ಕಾಗದ!
ಕೂಡಲೇ ಕೊಡೆ ತಯಾರಿಕೆಯನ್ನು ಬರ್ಮಾದ ಕಲಾವಿದರಿಂದ ಕಲಿತ. ತನ್ನ ಅಧ್ಯಯನ ಮುಗಿಸಿ ಹಳ್ಳಿಗೆ ಮರಳಿ ಬಂದು ಹಳ್ಳಿಗರಿಗೆ ಕೊಡೆ ತಯಾರಿಸುವು ದನ್ನು ಕಲಿಸಿದ. ಕೃಷಿ ಪ್ರಧಾನ ಉದ್ಯೋಗವಾದರೂ ಬಿತ್ತನೆ ಮತ್ತು ಕಟಾವಿನ ನಂತರ ಹಳ್ಳಿಗರಿಗೆ ಸಾಕಷ್ಟು ಸಮಯ ಸಿಗುತ್ತಿತ್ತು. ಕೊಡೆ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳಾದ ಬಿದಿರು, ಹಿಪ್ಪುನೇರಲೆ ಗಿಡದ ರಸದಿಂದ ಮಾಡಿದ ಕಾಗದ ಸುಲಭವಾಗಿ ಸಿಗುತ್ತಿತ್ತು. ಹಣ್ಣು, ಹೂವು, ತರಕಾರಿ ಹೀಗೆ ಸಂಪೂರ್ಣ ಪರಿಸರಸ್ನೇಹಿ ವಸ್ತುಗಳನ್ನು ಬಳಸಿ ಈ ಕಾಗದಗಳಿಗೆ ಬಣ್ಣ ಹಾಕಿದರು. ಅಲ್ಲಿಂದ ಕಲಿತ ವಿಧಾನವನ್ನು ಉತ್ತಮಪಡಿಸುವುದರ ಜತೆ ಚಿತ್ತಾರ ಬಿಡಿಸಿ ಕೊಡೆಗೆ ಕಲಾತ್ಮಕ ಸ್ಪರ್ಶ ನೀಡಲಾಯಿತು. ಬಿಡುವಿನ ವೇಳೆ ಯಲ್ಲಿ ಕೆಲಸ, ಕೈಗೆ ದುಡ್ಡು, ತಮ್ಮ ಕಲೆಗೆ ಬೆಲೆ. ಹೀಗೆ ಕಾಲಕ್ರಮೇಣ ಹಳ್ಳಿಯ ಹೆಚ್ಚಿನವರು ಇದೇ ಉದ್ಯೋಗದಲ್ಲಿ ತೊಡಗಿ ದರು. ಭತ್ತ ಬೆಳೆಯುತ್ತಿದ್ದ ಹಳ್ಳಿ ಬಣ್ಣದ ಕೊಡೆಗಳ ನಾಡಾಯಿತು.
ಕೊಡೆ ತಯಾರಿಕೆ
ನೋಡಲು ಆಕರ್ಷಕವಾಗಿ ಕಂಡರೂ ಈ ಕೊಡೆಗಳ ತಯಾರಿಕೆ ಸಾಕಷ್ಟು ಸಹನೆ ಬೇಡುವಂಥದ್ದು. ಬಿದಿರಿನ ಗಳುಗಳನ್ನು ಸಣ್ಣ,
ಚೂಪಾದ ಚಾಕುವಿನಿಂದ ನಾಜೂಕಾಗಿ ನಿಖರವಾಗಿ ಕತ್ತರಿಸಿ ಕೊಡೆಗೆ ಬೇಕಾದ ಆಕಾರಕ್ಕೆ ಕೆತ್ತಲಾಗುತ್ತದೆ. ಈ ಬಿದಿರಿನ ಹಂದರಕ್ಕೆ ಹಿಪ್ಪುನೇರಳೆ ಮರದ ತೊಗಟೆಯಿಂದ ಸಂಗ್ರಹಿಸಿದ ರಸವನ್ನು ಒಣಗಿಸಿ ತಯಾರಿಸಿಲಾದ ಕಾಗದ ವನ್ನು ಹಾಕಲಾಗುತ್ತದೆ. ನಂತರ ವಿಶೇಷ ಅಂಟು ಬಳಸಿ ಬಿದಿರು ಮತ್ತು ಕಾಗದವನ್ನು ಜೋಡಿಸುತ್ತಾರೆ.
ಕೊಡೆ ಸಿದ್ಧವಾದ ಬಳಿಕ ಅವುಗಳಿಗೆ ಬಣ್ಣ ಹಚ್ಚಲಾಗುತ್ತದೆ. ಅದು ಒಣಗಿದ ನಂತರ ಚಿತ್ತಾರವನ್ನು ಬಿಡಿಸಲಾಗುತ್ತದೆ. ಹೀಗೆ ತಯಾರಾದ ಕೊಡೆಗಳ ಮೇಲೆ ಕಡೆಯದಾಗಿ ಎಣ್ಣೆಯ ಲೇಪನ ನೀಡಿದರೆ ಕೊಡೆ ಮಾರಾಟಕ್ಕೆ ಸಿದ್ಧ. ಪುಟ್ಟ ಅಲಂಕಾರಿಕ ಕೊಡೆಗಳಿಂದ ಉದ್ಯಾನಗಳಲ್ಲಿ ನೆರಳಿಗೆ ಬಳಸುವ ದೊಡ್ಡ ಕೊಡೆಗಳ ತನಕ ವಿವಿಧ ಗಾತ್ರ, ವಿನ್ಯಾಸ, ಆಕಾರ, ಬೆಲೆಯ ಕೊಡೆಗಳು ಇಲ್ಲಿ ಲಭ್ಯ. ಬೊಸಾಂಗ್ನ ಬೀದಿಯ ಇಕ್ಕೆಲಗಳಲ್ಲಿ ಈ ಕೊಡೆ ತಯಾರಿಕೆಯ ವಿವಿಧ ಹಂತಗಳನ್ನು ನೋಡ ಬಹುದು. ಸಿದ್ಧಪಡಿಸಿದ ಕೊಡೆಗಳ ಮೇಲೆ ನಮಗಿಷ್ಟದ ವಿನ್ಯಾಸವನ್ನೂ ಮಾಡಿಕೊಡುತ್ತಾರೆ.
ಕೊಡೆ ಉತ್ಸವ
ಪ್ರತಿವರ್ಷ ಜನವರಿಯಲ್ಲಿ ಮೂರುದಿನಗಳ ಕಾಲ ಕೊಡೆ ಉತ್ಸವವನ್ನು ಸಂಭ್ರಮದಿಂದ ನಡೆಸಲಾಗುತ್ತದೆ. ಸಾಂಪ್ರದಾಯಿಕ ಉಡುಪನ್ನು ಧರಿಸಿ ಒಂದು ಕೈಯ್ಯಲ್ಲಿ ಬೊಸಾಂಗ್ ಕೊಡೆ ಮತ್ತೊಂದು ಕೈಯ್ಯಲ್ಲಿ ಸೈಕಲ್ ಹ್ಯಾಂಡಲ್ ಹಿಡಿದು ನಗೆ ಚಿಮ್ಮುತ್ತಾ ಬರುವ ಥೈ ಸುಂದರಿಯರ ಸೈಕಲ್ ಪೆರೇಡ್ ಅತ್ಯಂತ ಜನಪ್ರಿಯ.
ಸೌಂದರ್ಯ ಸ್ಪರ್ಧೆ, ಹಾಡು-ಕುಣಿತ, ಸಾಂಪ್ರದಾಯಿಕ ತಿಂಡಿ ತಿನಿಸು ಮತ್ತು ಇಡೀ ಹಳ್ಳಿಯಲ್ಲಿ ಕೊಡೆಗಳ ಅಲಂಕಾರ ಈ ಉತ್ಸವದ ವಿಶೇಷ. ಈ ವರ್ಷ ಜನರು ಬಹು ನಿರೀಕ್ಷಿಸಿದ್ದ ಈ ಕೊಡೆ ಉತ್ಸವ ಕೋವಿಡ್ ಕಾರಣದಿಂದ ನಡೆಯಲಿಲ್ಲ. ಸಂಪೂರ್ಣ
ಕೈಯ್ಯಿಂದಲೇ ತಯಾರಾಗುವ, ಸಾಂಪ್ರದಾಯಿಕ ಈ ಕೊಡೆ ತಯಾರಿಕೆಗೆ ಮಶೀನ್ ಮೇಡ್ ಚೈನಾ ಕೊಡೆಗಳಿಂದ ಸಾಕಷ್ಟು
ಪೈಪೋಟಿ ಇದೆ ಎಂಬುದರ ಬಗ್ಗೆ ಇಲ್ಲಿನ ಕಲಾವಿದರು ಕಳವಳ ವ್ಯಕ್ತಪಡಿಸುತ್ತಲೇ ಉತ್ಸವ ರದ್ದಾಗಿದ್ದರ ಬಗ್ಗೆ ಬೇಸರಿಸುತ್ತಾರೆ.
ಆದರೂ ಆಶ್ಚರ್ಯವೆಂದರೆ ಕೋವಿಡ್19 ರ ಸಂದರ್ಭದಲ್ಲಿ ಬೊಸಾಂಗ್ ಕೊಡೆಗಳ ವ್ಯಾಪಾರ ಹೆಚ್ಚಿದೆ! ಕೊಡೆಯು ಕೆಟ್ಟ
ಶಕ್ತಿ, ರೋಗ ರುಜಿನಗಳಿಂದ ರಕ್ಷಿಸುತ್ತದೆ ಎಂಬ ನಂಬಿಕೆ ಜನರಲ್ಲಿರುವುದು ಇದಕ್ಕೆ ಕಾರಣ.