Thursday, 12th December 2024

ಕುಕ್ಕರ್‌ ಮಿಕ್ಸರ್‌ಗಳ ಚಕ್ಕರ್‌

ಡಾ.ಕೆ.ಎಸ್‌.ಚೈತ್ರಾ

‘ಈಗ ವ್ಯಾಕ್ಸಿನ್ ಬಂದಿದೆ; ಸ್ವಲ್ಪ ನೆಮ್ಮದಿ. ಆದರೆ ಕರೋನಾ ಬರಲಿ ಬಿಡಲಿ; ಜೀವನ ನಡೆಯಬೇಕು. ಅಂದ್ರೆ ಈ ಮೋಟರ್ ತಿರುಗಬೇಕು. ಆಗಾಗ್ಗೆ ನಿಲ್ಲುತ್ತೆ, ಮುಗ್ಗರಿಸುತ್ತೆ, ಹಾಳಾಗುತ್ತೆ. ಹೆಚ್ಚಿನವು ರಿಪೇರಿ ಮಾಡಬಹುದು, ಕೆಲವನ್ನು ಬದಲಿಸಬೇಕು. ಒಟ್ಟಿನಲ್ಲಿ ತಿರುಗುವುದು ಮುಖ್ಯ, ಅಷ್ಟೇ’ ಎಂದ ರಾಜ.

ಕಳೆದ ವರ್ಷ ಕರೋನಾ ಕಾರಣಕ್ಕಾಗಿ ದೇಶದೆಲ್ಲೆಡೆ ಲಾಕ್ ಡೌನ್ ಜಾರಿಯಾದಾಗ ಎಲ್ಲರಿಗೂ ಅವರವರದ್ದೇ ಚಿಂತೆ. ತರಕಾರಿ, ಹಾಲು, ದಿನಸಿ ಸಿಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳುವ ಆತುರ, ವಾಹನ ವ್ಯವಸ್ಥೆ ಹೇಗೆ ಎಂಬ ಕಾತುರ, ಕೆಲಸದವರು ಇಲ್ಲದೇ ಹೇಗೆ ನಿಭಾಯಿಸುವುದು ಎಂಬ ಗಾಬರಿ.

ಹೀಗೆ! ಸತ್ಯವಾಗಿ ಹೇಳುತ್ತೇನೆ ನನಗೆ ಮಾತ್ರ ಈ ಕರೋನಾ ಕಾಲದಲ್ಲಿ ನಮ್ಮ ರಾಜನ ಅಂಗಡಿ ಮುಚ್ಚಿಬಿಟ್ಟರೆ ಎಂಬ ಆತಂಕ ವಿತ್ತು! ಅದೇನೂ ದಿನಸಿ-ಹಾಲಿನ ಅಂಗಡಿ ಅಥವಾ ಮೆಡಿಕಲ್ ಶಾಪ್ ಅಲ್ಲ; ಬದಲಿಗೆ ನಮ್ಮ ಮಿಕ್ಸರ್- ಕುಕ್ಕರ್ ರಿಪೇರಿ ಮಾಡುವ ಆಪದ್ಭಾಂಧವನ ಪುಣ್ಯಕ್ಷೇತ್ರ !

ದೊಡ್ಡ ಕಾಂಪ್ಲೆಕ್ಸ್‌‌ನ ಮೆಟ್ಟಿಲಿನ ಕೆಳಗಿರುವ ಆ ಅಂಗೈಯಗಲದ ಜಾಗದ ಮಹಿಮೆಯನ್ನು ಬರೀ ನೋಟದಿಂದ ಅಳೆಯಲು
ಸಾಧ್ಯವಿಲ್ಲ ; ಅನುಭವಿಸಿಯೇ ತೀರಬೇಕು. ಗಾಸ್ಕೆಟ್, ನಟ್ಟು, ಬೋಲ್ಟು, ವಾಶರ್ ಹೀಗೆ ಸಾವಿರಾರು ವಸ್ತುಗಳನ್ನು ಒಡಲೊಳಗೆ
ಅಡಗಿಸಿಟ್ಟುಕೊಂಡ ರತ್ನಗರ್ಭೆ ಆ ಕೋಣೆ. ಆ ಸಾಮ್ರಾಜ್ಯದಲ್ಲಿ ಸ್ಟೂಲುಧಾರಿ ನಮ್ಮ ರಾಜ. ವಯಸ್ಸು ಚಿಕ್ಕದಾದರೇನು, ಗತ್ತು-ಘನತೆ ಥೇಟ್ ದೊರೆಯದ್ದೇ! ಯಾರೇ ಬಂದರೂ ರಾಜನ ದಯಾದೃಷ್ಟಿ ಬೀಳಲು ಹತ್ತು ನಿಮಿಷಗಳಾದರೂ ಕಾಯಲೇಬೇಕು.

ಯಾವುದೋ ಮಿಕ್ಸಿಯ ಬ್ಲೇಡ್ ಹರಿತಗೊಳಿಸುತ್ತಾ ಕುಳಿತವನ ಏಕಾಗ್ರತೆಗೆ ಮಾತಿನಿಂದ ಭಂಗ ಬಂದರೆ ಅವನ ಕಣ್ಣೋಟ ಸುಟ್ಟುಹಾಕುವಷ್ಟು ತೀಕ್ಷ್ಣ ಮತ್ತು ಇನ್ನೆಂದೂ ಕೆಟ್ಟಿರುವ ವಸ್ತು ರಿಪೇರಿಯಾಗುವುದಿಲ್ಲ. ಹಾಗಾಗಿ ಹೊರಗೆ ನಿಂತು ಕೈಯ್ಯಲ್ಲಿ ಚೀಲ ಹಿಡಿದು ವಿನೀತರಾಗಿ ಕಾಯುವುದನ್ನು ಬಿಟ್ಟರೆ ವಿಧಿಯೇ ಇಲ್ಲ. ತಾಳಿದವನು ಬಾಳಿಯಾನು ಗಾದೆಯ ಬಗ್ಗೆ ಶಾಲೆಯಲ್ಲಿ  ಪೇಜುಗಟ್ಟಲೇ ಬರೆದು ಬಹುಮಾನ ಗಿಟ್ಟಿಸಿದ್ದೆ. ಆದರೆ ಒಂದೂ ಮಾತನಾಡದೇ ತಾಳ್ಮೆಯ ಪ್ರಾಯೋಗಿಕ ಪಾಠ ಮಾಡಿದ್ದು ನಮ್ಮ ರಾಜನೇ!

ರಾಜನ ಫ್ರೆಂಡ್ಸ್‌ ನಮ್ಮ ಹಿತಶತ್ರು

ಕಡೆಗೊಮ್ಮೆ ತನಗೇ ಮನಸ್ಸಿಗೆ ಬಂದು ರಾಜ ಮಿಕ್ಸರ್ / ಕುಕ್ಕರ್ ಪರಿಶೀಲಿಸುವಾಗ ಮಧ್ಯೆ ನಾವು ಮಾತನಾಡುವಂತಿಲ್ಲ, ನಮ್ಮ ದೂರು ಹೇಳುವಂತಿಲ್ಲ. ಎಷ್ಟು ಹೊತ್ತಿಗೆ ರಿಪೇರಿ ಆಗುತ್ತದೆ ಎಂಬ ಪ್ರಶ್ನೆಯನ್ನು ಅಪ್ಪಿ ತಪ್ಪಿಯೂ ಕೇಳುವಂತಿಲ್ಲ. ಏಕೆಂದರೆ ಜಗತ್ತಿನಲ್ಲಿರುವ ಎಲ್ಲಾ ಮಿಕ್ಸರ್ ಕುಕ್ಕರ್‌ಗಳು ಅವನ ಫ್ರೆಂಡ್‌ಗಳು. ಅವುಗಳನ್ನು ನೋಡಿ- ಮುಟ್ಟಿ ದೊಡನೆ ರಾಜನಿಗೆ ಎಲ್ಲವೂ ವೇದ್ಯ. ಅವುಗಳ ನೋವು- ನಲಿವು ಎಲ್ಲಾ ಗಮನಿಸಿ ಆರೈಕೆ ಮಾಡುವಾಗ ಸಮಯ- ದುಡ್ಡು ಇವೆಲ್ಲಾ ಕೇಳಿದರೆ ಹೇಗೆ? ಅವನಿಗೆ ಫ್ರೆಂಡ್ಸ್‌ ಸರಿ; ನನಗಂತೂ ಇವು ಒಂಥರಾ ಹಿತಶತ್ರು ಎನಿಸಲು ಸಾಕಷ್ಟು ಸಾಕ್ಷಿಗಳಿವೆ.

ದಿನವೂ ಸರಿಯಾಗಿ ವಿಶಲ್ ಕೂಗುವ ಕುಕ್ಕರ್‌ಗೆ ಅತಿಥಿಗಳು ಬಂದಾಗಲೇ ಗಂಟಲು ಕಟ್ಟುವುದ್ಯಾಕೆ? ಯಾವಾಗಲೂ ಮಲ್ಲಿಗೆ ಹೂವಿನಂತೆ ಅರಳುವ ಅನ್ನ ಆ ದಿನ ಮಾತ್ರ ಸೀದು, ಕರಕಲು ! ವಯಸ್ಸಾದವರು ಬಂದರೆ ಗಟ್ಟಿ ಅನ್ನ, ಯುವಕರು ಬಂದಾಗ
ನುಂಗಬಹುದಾದ ಮಮ್ಮ ! ಅಕ್ಕಿ- ನೀರು ಒಂದಕ್ಕೊಂದು ಸಂಬಂಧವೇ ಇಲ್ಲ. ಎಷ್ಟೇ ಅಳತೆ ಮಾಡಿ ಇಟ್ಟರೂ ಕುಕ್ಕರಿನ ಮೂಡಿ ನಂತೆ ಅನ್ನ, ಇದು ನಮ್ಮ ಮನೆಯ ಕುಕ್ಕರಿನ ವೈಶಿಷ್ಟ್ಯ.

ಈ ಕುಕ್ಕರ್ ಕಳ್ಳನಿಗೆ, ಮೋಸಗಾರ ಮಿಕ್ಸರ್ ಎಂಬ ಗೆಳೆಯನ ಜೋಡಿ. (ಹೌದು, ಬೇಕೆಂದೇ ಪುಲ್ಲಿಂಗವನ್ನು ಬಳಸಿದ್ದೇನೆ… ಅದು
ಹೆಣ್ಣಾಗಿದ್ದರೆ ಮತ್ತೊಂದು ಹೆಣ್ಣಿನ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿದ್ದರು ಎಂಬ ಯೋಚನೆ ನನ್ನದು!) ಹಾಗೆಯೇ ಒಳಗೊ ಳಗೆ ಈ ಮಿಕ್ಸರ್‌ನಲ್ಲಿ ಯಾವುದಾದರೂ ಭೂತ ಆವಾಹನೆ ಆಗಿರಬಹುದು ಎಂಬ ಸಂಶಯವೂ ಕಾಡಿದ್ದಿದೆ. ನೋಡಲೇನೋ ಚಿಕ್ಕದೇ, ಆದರೆ ಮಸಾಲೆ ಹಾಕಿ ತಿರುಗಿಸಿದೊಡನೆ ಎದೆ ಒಡೆಯುವ ಕರ್ಕಶ ಶಬ್ದ.

ಅಂತಹ ಶಬ್ದದಿಂದಾಗಿ, ವಾಕಿಂಗ್ ಹೋಗುವಾಗ ಒಬ್ಬರು ‘ನಿಮ್ಮದು ಹೋಂ ಇಂಡಸ್ಟ್ರಿ ಇದೆಯೇ?’ ಎಂದು ಕೇಳಿದ್ದರು. ಹಾಗೆ ಕೇಳಲು ಕಾರಣ ದಿನಾ ಕೇಳಿಸುವ ಈ ಭಾರೀ ಯಂತ್ರದ ಸದ್ದು. ಬೇರೆಯವರು ಹೋಗಲಿ, ಈ ಶಬ್ದ ಕೇಳಿ ಬೆಳೆದ ನನ್ನ ಪುಟ್ಟ ಮಗಳು ಶಾಲೆಯಲ್ಲಿ ಶಬ್ದ ಮಾಲಿನ್ಯದ ಬಗ್ಗೆ ಪ್ರಬಂಧದಲ್ಲಿ ಪರಿಹಾರಕ್ಕೆ ‘ಮನೆಯಲ್ಲಿ ಮಿಕ್ಸರ್ ಬಳಸದಿರುವುದು’ ಎಂದು ಬರೆದಿದ್ದಳು.

ಒಟ್ಟಿನಲ್ಲಿ ಮಿಕ್ಸರ್- ಮಗಳು ಇಬ್ಬರಿಂದಲೂ ಮರ್ಯಾದೆ ಮೂರುಕಾಸು ! ಏನೇ ಆದರೂ ಈ ಕುಕ್ಕರ್ ಮಿಕ್ಸರ್ ಇಲ್ಲದೇ ಸಂಸಾರ ಸಾಗುವುದೇ? ಯಜಮಾನರಿಂದ ಅನ್ನ ಬಸಿದು ಮಾಡುವ, ಒರಳು ಕಲ್ಲಿನಲ್ಲಿ ಮಸಾಲೆ-ಚಟ್ನಿ ಅರೆಯುವ ಅದ್ಭುತ ಸಲಹೆ ಬಂತು. ಆದರೆ ದಿನವೂ ಅದರ ಸಂಪೂರ್ಣ ಹೊಣೆ ಅವರಿಗೇ ಎಂದು ಸ್ಪಷ್ಟಪಡಿಸಿದ ಮೇಲೆ ಉಸಿರೆತ್ತಲಿಲ್ಲ. ಹೀಗಾಗಿ ರಾಜನೇ ನಮ್ಮ ಕುಟುಂಬದ ಪರಮಾಪ್ತ.

ಆಶ್ಚರ್ಯವೆಂದರೆ ಮನೆಯಲ್ಲಿ ಕಿರಿಚುವ ಮಿಕ್ಸರ್ ಅವನ ಅಂಗಡಿಯಲ್ಲಿ ಸಂಗೀತ ಹಾಡುತ್ತಿತ್ತು. ಕೇಳಿದ್ದಕ್ಕೆ ರಾಜ ‘ಅವರವರ ಭಾವಕ್ಕೆ ತಕ್ಕಂತೆ ರಾಗ’ ಎಂದು ಡೈಲಾಗ್ ಹೊಡೆದ. ಅಲ್ಲಿಯವರೆಗೆ ಇವೆಲ್ಲಾ ನಿರ್ಜೀವ ವಸ್ತುಗಳು ಎಂಬ ಅಜ್ಞಾನ ನನ್ನಲ್ಲಿ ತುಂಬಿ ತುಳುಕುತ್ತಿತ್ತು. ರಾಜನ ಮಾತು ಕೇಳಿ ಯೋಚಿಸಿದಾಗ ಆಗಾಗ್ಗೆ ನಾನು ಬರೀ ದಂಡ , ಈ ಮಿಕ್ಸರ್- ಕುಕ್ಕರ್‌ಗೆ ದುಡ್ಡು ಸುರಿದದ್ದು ಎಂದು ಗೊಣಗಾಡಿದ್ದು ನೆನಪಿಗೆ ಬಂತು. ಇವು ಮಿಕ್ಸರ್-ಕುಕ್ಕರ್ ಆಗಿ ನನ್ನನ್ನು ಪರೀಕ್ಷಿಸಲು ಬಂದ ದಿವ್ಯ ಚೇತನ ಗಳು ಎನಿಸಲು ಶುರುವಾಯಿತು. ಕೆಲವರು ಅಡಿಗೆ ಎಂದರೆ ಅಧ್ಯಾತ್ಮ ಎನ್ನುತ್ತಿದ್ದುದ್ದರ ಅರ್ಥ ತಿಳಿಯಿತು.

ಮುಳುಕ ಮಾಡಲು ಮಿಕ್ಸರ್ ಮುಷ್ಕರ 
ಅದಕ್ಕೆ ಸರಿಯಾಗಿ ಮೊನ್ನೆ ಊರಿಂದ ಕೆಸುವಿನ ಎಲೆ, ಹಲಸಿನ ಹಣ್ಣು, ಮಾವಿನಕಾಯಿ ಎಲ್ಲವೂ ಬಂದಿತ್ತು. ಪತ್ರೊಡೆ, ಹಲಸಿನ ಮುಳುಕ, ಮಾವಿನ ಹಿಂಡಿ ಎಲ್ಲವನ್ನೂ ಮಾಡುವ ಸಂಭ್ರಮ. ಮಿಕ್ಸರ್‌ನಲ್ಲಿ ಸಾಕಷ್ಟು ರುಬ್ಬುವುದಿತ್ತು. ಅರ್ಧ ಕೆಲಸವೂ ಆಗಿಲ್ಲ. ಬೇಗ ಬೇಗ ರುಬ್ಬಿದ್ದರೆ ಒಳ್ಳೆಯದಿತ್ತು, ಇದರ ಬ್ಲೇಡು ಬರೀ ಬಡ್ಡು ಎಂದುಕೊಂಡೆ ಮನಸ್ಸಿನಲ್ಲೇ!

ಆ ಕೂಡಲೇ ತಿರುಗುತ್ತಿದ್ದ ಮಿಕ್ಸರ್ ಸಿಟ್ಟು ಬಂದಂತೆ ಜೋರಾಗಿ ಆರ್ಭಟಿಸಿ ನಿಂತೇ ಬಿಟ್ಟಿತು. ಹಬ್ಬದ ಗಡಿಬಿಡಿಯಲ್ಲಿ ಯಾರಿಗೂ ಪುರುಸೊತ್ತಿಲ್ಲ. ರಾಜನ ಅಂಗಡಿ ಬೇರೆ ರಜ. ಅಳು ಬರುವಂತಾಯಿತು. ಕಡೆಗೆ ಏನೂ ತೋಚದೇ ಮಿಕ್ಸರ್‌ಗೆ ‘ತಪ್ಪಾಯಿತು, ಕಾಪಾಡಪ್ಪಾ’ ಎಂದು ಪಾದ ಮುಟ್ಟುವವರಂತೆ ಕೆಳಭಾಗ ಮುಟ್ಟಿದೆ.

ನನ್ನ ಪರಿಸ್ಥಿತಿ ಕನಿಕರ ಮೂಡಿಸಿತೋ ಏನೋ, ಒಂದು ನಿಮಿಷ ಬಿಟ್ಟು ತಿರುಗಿಸಿದರೆ ನಾನಿದ್ದೇನೆ ಎಂದು ಧೈರ್ಯ ನೀಡುವ
ಕರ್ಕಶ ಶಬ್ದ. ಗಂಡ, ಮಿಕ್ಸರ್‌ಗೆ ಲೋಡ್ ಹೆಚ್ಚಾದಾಗ ಕೆಳ ಭಾಗದ ಬಟನ್ ಒತ್ತಬೇಕು, ಹಾಗೆ ಮಾಡಿದಾಗ ಸರಿಹೋಗಿದೆ ಎಂದು
ವಿವರಣೆ ನೀಡಿದರು. ಆದರೆ ಒಳಗೊಳಗೆ ಅವರಿಗೂ ನನ್ನ ನಮಸ್ಕಾರ, ತಪ್ಪೊಪ್ಪಿಗೆ ಕೆಲಸ ಮಾಡಿತು ಎಂಬ ವಿಶ್ವಾಸ.

ಪಶ್ಚಾತ್ತಾಪಕ್ಕಿಂತ ಬೇರೆ ಪ್ರಾಯಶ್ಚಿತ್ತವುಂಟೇ? ಅಂತೂ ಹೊಟ್ಟೆ ಪೂಜೆ , ಕುಕ್ಕರ್ -ಮಿಕ್ಸರ್ ಎಂಬ ಬಂಧುಗಳ ನೆರವಿನಿಂದ ಸಾಂಗವಾಗಿ ನಡೆಯಿತು. ಆದರೂ ವಾರಕ್ಕೊಮ್ಮೆ ರಾಜನ ಬಳಿ ಹೋಗದಿದ್ದರೆ ನಮ್ಮ ಬಂಧುಗಳ ಜೀವ ತಡೆಯುವುದಿಲ್ಲ. ಒಂದೇ ಸಲ ಎಲ್ಲಾ ತಿರುಗಿ ಓವರ್ ಟೈಮ್ ಮಾಡಿದ್ದರ ಫಲವಾಗಿ, ಕುಕ್ಕರ್‌ಗೆ ಬುಸು ಬುಸು ಉಸಿರು ಬಂದು ಗಾಸ್ಕೆಟ್ ಬದಲಿಸಲು, ಬಳಲಿ ಬೆಂಡಾದ ಮಿಕ್ಸರ್‌ನ ಬ್ಲೇಡು ಹಾಕಿಸಲು ಹೋಗಿದ್ದಾಯ್ತು.

ಮೊದಲೇ ರಾಜನ ಮಾತು ಕಮ್ಮಿ, ಹತ್ತಿರವೂ ಹೋಗುವಂತಿಲ್ಲ. ಈಗಂತೂ ಮಾಸ್ಕ್‌ ಬೇರೆ. ಆದರೂ ದೂರದಿಂದಲೇ ‘ಹೇಗಿದೆ ವ್ಯಾಪಾರ?’ ಎಂದೆ. ‘ಈಗ ವ್ಯಾಕ್ಸಿನ್ ಬಂದಿದೆ; ಸ್ವಲ್ಪ ನೆಮ್ಮದಿ. ಆದರೆ ಕರೋನಾ ಬರಲಿ ಬಿಡಲಿ; ಜೀವನ ನಡೆಯಬೇಕು. ಅಂದ್ರೆ ಈ ಮೋಟರ್ ತಿರುಗಬೇಕು. ಆಗಾಗ್ಗೆ ನಿಲ್ಲುತ್ತೆ, ಮುಗ್ಗರಿಸುತ್ತೆ, ಹಾಳಾಗುತ್ತೆ. ಹೆಚ್ಚಿನವು ರಿಪೇರಿ ಮಾಡಬಹುದು, ಕೆಲವನ್ನು ಬದಲಿಸಬೇಕು.

ಒಟ್ಟಿನಲ್ಲಿ ತಿರುಗುವುದು ಮುಖ್ಯ, ಅಷ್ಟೇ’ ಎಂದ ರಾಜ. ಅವನು ಮಿಕ್ಸರ್ ಬಗ್ಗೆ ಹೇಳಿದನೋ, ಈ ಕಾಲಮಾನದ ಜೀವನದ ಬಗ್ಗೆ ವ್ಯಾಖ್ಯಾನ ನೀಡಿದನೋ? ಈ ಕುಕ್ಕರ್-ಮಿಕ್ಸರ್ ಎಂಬ ಚಕ್ಕರ್‌ನ ಭಾಗವಾಗಿದ್ದ ನಾನು ಸುಮ್ಮನೇ ಹೂಂಗುಟ್ಟಿದೆ.