Sunday, 15th December 2024

ಹಿರಿಯ ಕಲಾವಿದರ ಅವಕಾಶ ಕಸಿದ ಕರೋನಾ

ಚಿತ್ರರಂಗಕ್ಕೆ ಕರೋನಾ ತಂದೊಡ್ಡಿದ ಆಪತ್ತು ಒಂದಾ ಎರಡಾ. ಹಲವು ನಟ ನಟಿಯರು ಜೀವವನ್ನೇ ಕಸಿದಿದೆ ಈ ಕ್ರೂರಿ ಕರೋನಾ. ಇನ್ನು ಕೋವಿಡ್‌ನಿಂದಾಗಿ ಹಿರಿಯ ಕಲಾವಿದರ ಬದುಕು ತತ್ತರಿಸಿದೆ. ಸೂತ್ರಹರಿದ ಗಾಳಿಪಟದಂತಾಗಿದೆ. ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಪಾತ್ರಗಳ ಮೂಲಕವೇ ಶೋಭಾಯಮಾನ ವಾಗಿದ್ದ ಹಿರಿಯ ಕಲಾವಿದರಿಗೆ ಕರೋನಾದಿಂದಾಗಿ ಅವಕಾಶಗಳೇ ಇಲ್ಲದಂತಾಗಿವೆ. ಬಣ್ಣವೇಬದುಕಾಗಿಸಿಕೊಂಡಿದ್ದ ಬಹುತೇಕ ಹಿರಿಯರು ಕಳೆದ ಎರಡು
ವರ್ಷಗಳಿಂದ ಬಣ್ಣಹಚ್ಚಲಾಗದೆ ಚಡಪಡಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಅವಕಾಶಗಳಿಲ್ಲದೆ ಬದುಕಿನ ಬಂಡಿ ಸಾಗಿಸಲು ಹರಸಾಹಸ ಪಡುವಂತಾಗಿದೆ. ಕರೋನಾ ಕಾಲದಲ್ಲಿ ಬಂದೆರಗಿರುವ ಸಂಕಷ್ಟದ ಬಗ್ಗೆ ಹಿರಿಯ ಕಲಾವಿದರು ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ಸ್ವಾಭಿಮಾನದ ಬದುಕಿಗೆ ಪೆಟ್ಟುನೀಡಿದೆ 
ನನಗೆ ನಟನೆಯೇ ಬದುಕು. ಬಯಸಿಯೇ ಬಣ್ಣದ ಬದುಕಿನತ್ತ ಆಕರ್ಷಿತನಾದವನು ನಾನು. ಸಣ್ಣಪುಟ್ಟ ಸಿನಿಮಾಗಳು ಎಂದು ಎಣಿಸದೆ ಎಲ್ಲಾ ಸಿನಿಮಾಗಳಲ್ಲೂ ನಟಿಸಲು ಹಾತೊರೆಯುತ್ತಿದ್ದೆ. ಎರಡು ವರ್ಷದ ಹಿಂದೆ ಸಾಲು ಸಾಲು ಸಿನಿಮಾಗಳಲ್ಲಿ. ಬ್ಯುಸಿಯಾಗಿದ್ದೆ. ದಿನಂಪ್ರತಿ ಒಂದಾದರೂ ಸಿನಿಮಾಗಳಲ್ಲಿ ನಟಿಸುವ
ಅವಕಾಶಗಳು ಇರುತ್ತಿದ್ದವು. ಸಿನಿಮಾಗಳಲ್ಲಿ ನಟಿಸುವಾಗ ನನಗೆ ಸಂಭಾವನೆಗಿಂತ ಅಭಿನಯವೇ ಮುಖ್ಯವಾಗಿತ್ತು. ಹಾಗಾಗಿ ಎಂದಿಗೂ ನಾನು ಹಣಕ್ಕಾಗಿ ಆಸೆಪಟ್ಟವನೇ ಅಲ್ಲ. ಉಸಿರಿರುವವಗೆಗೂ ಕಲಾಸೇವೆಗೆ ನನ್ನ ಜೀವ ಮುಡಿಪಾಗಿಡಬೇಕು ಅಂದುಕೊಂಡಿದ್ದೆ. ಆದರೆ ಈ ಕರೋನಾ ಎಲ್ಲವನ್ನು ಕಸಿದಿದೆ. ಇನ್ನೂ
ನಟಿಸಬೇಕು ಎಂಬ ನನ್ನ ಆಸೆಗೆ ತಣ್ಣೀರೆರಚಿದೆ. ನಟನೆಯಿಲ್ಲದೆ ಬದುಕಿಲ್ಲ. ಈ ಇಳಿವಯಸ್ಸಿನಲ್ಲಿ ಕಾಡುವ ವಯೋಸಹಜ ಕಾಯಿಲೆಗಳು, ಅದಕ್ಕೆ ಚಿಕಿತ್ಸೆ ಪಡೆಯಲು ಆಗದ ಪರಿಸ್ಥಿತಿ ಇದೆ. ಒಟ್ಟಿನಲ್ಲಿ ನಮ್ಮ ಸ್ವಾಭಿಮಾನದ ಬದುಕಿಗೆ ಕರೋನಾ ದೊಡ್ಡಪೆಟ್ಟು ನೀಡಿದೆ.
-ಬ್ಯಾಂಕ್ ಜನಾರ್ಧನ್, ಹಿರಿಯ ನಟ

ಕಿಟ್‌ಗಾಗಿ ಕೈಚಾಚಬೇಕಾಗಿದೆ
ಹಾಳಾದ ಕರೋನಾ ವಕ್ಕರಿಸಿ ನಮ್ಮ ಬದುಕನ್ನೇ ಮೂರಾ ಬಟ್ಟೆಮಾಡಿದೆ. ಕಳೆದ ಒಂದು ವರ್ಷ ದಿಂದ ನಮ್ಮ ಬದುಕು ದುಸ್ತರವಾಗಿದೆ. ನಾನು ಕಳೆದ ೪೦ ವರ್ಷಗಳಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದೇನೆ. ರಂಗಭೂಮಿ ಹಿನ್ನಲೆಯಿಂದ ಬಂದ ನನಗೆ ಅಭಿನಯವೇ ಸರ್ವಸ್ವ. ನನ್ನ ಕುಟುಂಬ ನನ್ನನ್ನೇ ನಂಬಿದೆ. ಆದರೂ ಯಾವತ್ತೂ ನಾನು ಹಣಕ್ಕಾಗಿ ಆಸೆ ಪಟ್ಟವನಲ್ಲ. ನಟಿಸಬೇಕು, ಮನರಂಜನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಬೇಕು ಇಷ್ಟೇ ನನ್ನ ಜೀವನದ ಧ್ಯೇಯವಾಗಿತ್ತು. ಅದರಂತೆ ನಡೆದುಕೊಂಡು ಬಂದೆ. ಯಾವುದೇ ಪ್ರಶಸ್ತಿಗಾಗಲಿ, ಪ್ರಮಾಣ ಪತ್ರಕ್ಕಾಗಿಲಿ ನಾನು ಬಣ್ಣಹಚ್ಚಿದವನಲ್ಲ. ಪ್ರೇಕ್ಷಕರ ಮನರಂಜಯೇ ನನಗೆ ಮುಖ್ಯವಾಗಿತ್ತು. ಆದರೆ ಇಂದು ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಇದೆ. ಆಹಾರದ ಕಿಟ್‌ಗಾಗಿ ಕೈಚಾಚಬೇಕಿದೆ. ನಮ್ಮ ಸ್ಥಿತಿ ನೆನೆದು ಕನಿಕರ ಪಡಬೇಕಾಗದ ಅಹಾಯಕತೆ ನನ್ನಲ್ಲಿದೆ. ಈ ವಯಸ್ಸಿನಲ್ಲಿ ಊಟ ಇಲ್ಲದೆ ಇರಬಹುದು. ಆದರೆ ಔಷಧಿಗಳು ಇಲ್ಲದೆ ಬದುಕಲಾಗದ ಸ್ಥಿತಿಗೆ ತಲುಪಿದ್ದೇವೆ. ಕೆಲವು ಸಹೃದಯಿಗಳು ನಮ್ಮ ಸಹಾಯಕ್ಕೆ ಧಾವಿಸಿದ್ದಾರೆ. ಕೈಲಾದಷ್ಟು ಸಹಾಯ ಮಾಡಿದ್ದಾರೆ. ಆದರೆ ನಮಗಾಗಿಯೇ ಹುಟ್ಟಿಕೊಂಡ ಹಿರಿಯ ಕಲಾವಿದರ ಸಂಘ ನಮ್ಮ ಹಿತವನ್ನೇ ಮರೆತಿದೆ. ಏನೇ ಸಹಾಯಕ್ಕೂ ಕಾರ್ಡ್ ಕೇಳುತ್ತಾರೆ. ಸಂಘದಲ್ಲಿ ಸದಸ್ಯರಾದವರಿಗೆ ಮಾತ್ರ ಸವಲತ್ತಗಳು ಎಂದು ಹೇಳುತ್ತಾರೆ. ನಾನು ಹಿಂದೆ ಸಂಘದ ಸದಸ್ಯನಾಗಿದ್ದೆ, ಆದರೆ ಅಲ್ಲಿ ಇದುವರೆಗೂ ನಮ್ಮ ಹಿತದ ಬಗ್ಗೆ ಎಂದಿಗೂ ಚಿಂತಿಸಿಲ್ಲ, ಚರ್ಚಿಸಿಲ್ಲ. ಅಂದ ಮೇಲೆ ಸಂಘವೇಕೆ ಎಂದು ಹೊರಬಂದೆ. ಈ ಗಂಭೀರ ಪರಸ್ಥಿತಿಯಲ್ಲಿ ಸಂಘಕ್ಕಿಂತ ವ್ಯಕ್ತಿಗಳು ಮುಖ್ಯ, ಹಾಗಾಗಿ ಹಿರಿಯ ಕಲಾವಿದರನ್ನು ಗುರುತಿಸಿ ಸಹಾಯ ತಲುಪಿಸುವುದೇ ಉತ್ತಮ.
-ಅಮರ್‌ನಾಥ್ ಆರಾಧ್ಯ ಹಿರಿಯ ನಟ

ನಟನೆಯಲ್ಲಿ ನೋವುಗಳನ್ನು ಮರೆಯುತ್ತಿದ್ದೆವು
ನಟನೆಯಿಲ್ಲದ ನಮ್ಮ ಬದುಕನ್ನು ಉಹಿಸಿಕೊಳ್ಳಲು ಸಾಧ್ಯವಿಲ್ಲ. ಕಲಾದೇವಿಯ ಸೇವೆ ಮಾಡಬೇಕು ಎಂದು ಪಣತೊಟ್ಟು ಬಂದವರು ನಾವು. ಆದರೆ ಕಳೆದೊಂದು
ವರುಷದಿಂದ ಅವಕಾಶಗಳೇ ಮರೀಚಿಕೆಯಾಗಿವೆ. ಕರೋನಾದಿಂದ ಹಿರಿಯ ಕಲಾವಿದರಿಗೆ ಅವಕಾಶಗಳು ಸಿಗದಂತಾಗಿವೆ. ಕರೋನಾ ಮೊದಲ ಅಲೆ ಬಂದಾಗಲೇ ಅರವತ್ತು ವರುಷ ಮೀರಿದ ನಮ್ಮಂತಹ ಹಿರಿಯ ಕಲಾವಿದರಿಗೆ ಅವಕಾಶ ಸಹಜವಾಗಿಯೇ ಕಡಿಮೆಯಾಯಿತು. ಈಗ ಎರಡನೇ ಅಲೆಯೂ ಕಾಡುತ್ತಿದ್ದು, ಇದ್ದ ಅವಕಾಶಗಳು ಕೈತಪ್ಪಿದಂತಾಗಿವೆ. ಹಾಗಾಗಿ ಮನೆಯಲ್ಲಿಯೇ ಕೂರುವಂತಾಗಿದೆ. ಈ ನಡುವೆ ಊಟಕ್ಕೆ ಸಮಸ್ಯೆಗಾಗದಂತೆ ನಮ್ಮಂತಹ ಹಿರಿಯ ಕಲಾವಿದರಿಗೆ ಸಂಘ ಸಂಸ್ಥೆಗಳು ನೆರವು ನೀಡಿವೆ. ಹಾಗೋ ಹೀಗೋ ಬದುಕು ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸಹಜಸ್ಥಿತಿಗೆ ಬರಲಿದೆ ಎಂಬ ಆಶಾಭಾವವಿದೆ.

-ಉಮೇಶ್ ಹಿರಿಯ ನಟ

ಅವಕಾಶಗಳು ಮರೀಚಿಕೆಯಾಗಿವೆ
ಸದ್ಯದ ಪರಿಸ್ಥಿತಿಯಲ್ಲಿ ನಾವು ನಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಅನ್ನಿಸುತ್ತಿದೆ. ಕಳೆದ ಎರಡು ವರ್ಷ ಗಳಿಂದಲೂ ಅವಕಾಶಗಳೇ ಇಲ್ಲ. ನಮಗೆಲ್ಲ ೬೦ ವರ್ಷ ಮೀರಿದೆ. ಮುಂದೆ ಹೇಗೋ ಏನೋ ಎಂಬ ಭಯ ಇಂದಿನ ವರಲ್ಲಿದೆ. ಹಾಗಾಗಿಯೇ ನಮಗೆ ಅವಕಾಶ ನೀಡಲು ಹಿಂದುಮುಂದು ನೋಡುತ್ತಾರೆ. ಇಂದಿಗೂ ನಮ್ಮಲ್ಲಿ ಅಭಿನಯಿಸಬೇಕು ಎಂಬ ಛಲವಿದೆ. ಆದರೆ ಅದಕ್ಕೆ ಯಾರೂ ನೀರೆರೆಯುತ್ತಿಲ್ಲ.

ಪರಿಣಾಮ ನಮ್ಮಲ್ಲಿ ಅಭಿನಯದ ಉತ್ಸಾಹ ಇದ್ದರೂ ಅದನ್ನು ಕುಗ್ಗಿಸಲಾಗುತ್ತಿದೆ. ನಮಗೆ ಹಣ ಮುಖ್ಯವಲ್ಲ, ಅಭಿನಯದ ತುಡಿತವಿದೆ. ಯಾಕೆ ಯಾರಿಗೂ ಹಿರಿಯ ಕಲಾವಿದರ ಸಂಕಷ್ಟ ಅರ್ಥವಾಗುತ್ತಿಲ್ಲ. ಒಂದಷ್ಟು ಸಹಾಯ ಮಾಡಿ ಕೈತೊಳೆದುಕೊಂಡರೆ ಸಾಲದು, ಸಮಸ್ಯೆ ಆಲಿಸಿ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ.
-ರಮಾ ಹಿರಿಯ ನಟಿ