ಮದುವೆಯ ಖರ್ಚು ಹೇಗೆ ಹೊಂದಿಸುವುದು ಎಂದು ಚಿಂತೆಯಿಂದ ಕುಳಿತಿದ್ದ ಹೆಣ್ಣು ಹೆತ್ತವರಿಗೆ, ಕರೋನಮ್ಮ ಬಂದು, ಸರಳ ಮದುವೆ ಮಾಡಿಸಿ, ಬದುಕನ್ನು ಸುಸೂತ್ರವಾಗಿಸಿದಳು!
ಡಾ ಕೆ.ಎಸ್.ಚೈತ್ರಾ
ಒಂದೇ ಸಮ ಓಡುತ್ತಿದ್ದ ಬದುಕಿಗೆ ಕಳೆದ ಆರು ತಿಂಗಳಿಂದ ಒಂದು ಬ್ರೇಕ್! ಯಾವುದೇ ಮುನ್ಸೂಚನೇ ಇಲ್ಲದೇ ಈ ಬ್ರೇಕ್
ಅನಿರೀಕ್ಷಿತವಾಗಿ ಬಂದ ಕಾರಣ ಬದುಕಿನ ಗಾಡಿ ಮುಗ್ಗರಿಸಿದ್ದಂತೂ ನಿಜ. ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕ ಹೀಗೆ ಎಲ್ಲಾ ರಂಗಗಳಲ್ಲೂ ಕರೋನಾದ ಕರಿನೆರಳು.
ಕರೋನಾಕ್ಕೆ ತುತ್ತಾಗಿ ಪ್ರಾಣ ತೆತ್ತವರು ಸಾವಿರಾರು ಜನರಾದರೆ, ರೋಗ ಬರದೆಯೂ ಬದುಕು ಮುಳುಗಿದ್ದು ಲಕ್ಷಾಂತರ
ಜನರದ್ದು. ಕೆಲಸ ಇಲ್ಲ, ಸಂಬಳ ಕಡಿತ, ಮನೆ ಖಾಲಿ, ಮದುವೆ ರದ್ದು- ಒಂದೇ ಎರಡೇ! ಕರೊನಾದ ಕತೆ ಹೇಳಿದಷ್ಟೂ
ಮುಗಿಯ ದು. ಇನ್ನು ಮಾಧ್ಯಮಗಳಲ್ಲಂತೂ ಕರೋನಾ ಮಾರಿ, ವಿಷಕನ್ಯೆೆ, ಮೃತ್ಯುದೇವತೆ ಇಂಥ ಭೀಕರ ವರ್ಣನೆ ಕೇಳಿ
ಮೈ ನಡುಗಿದ್ದು ಸತ್ಯ. ಹೀಗಿರುವಾಗ ಕಾರ್ಮೋಡದ ಅಂಚಿಗೊಂದು ಬೆಳ್ಳಿ ಗೆರೆಯಂತೆ, ಮಗಳ ಮದುವೆ ಮಾಡಿಸಿದ್ದು ಕರೋನಮ್ಮಾ ಎಂದು ತೆಂಗಿನ ಕಾಯಿ ಮಾರುವ ಸುಧಾ ಕೈಮುಗಿದಾಗ ಅಚ್ಚರಿಯಾಗಿದ್ದು ಸಹಜವೇ! ಮುಂದಿನ ಮಾತುಗಳನ್ನು ಹೆಣ್ಣು ಹೆತ್ತ ಆ ಮಹಿಳೆಯ ಮಾತುಗಳಲ್ಲೇ ಕೇಳಿ.
‘‘ಅಕ್ಕಾ! ಕಳೆದ ಹತ್ತು ವರ್ಷಗಳಿಂದ ಕಾಯಿ ಮಾರುತ್ತಾ ಇದ್ದೀನಿ. ನನ್ನ ಗಂಡನದ್ದು ಹಣ್ಣಿನ ಅಂಗಡಿ ಇದೆ. ಇರುವ
ಒಬ್ಬಳೇ ಮಗಳೊಂದಿಗೆ ಸ್ವಂತ ಪುಟ್ಟ ಮನೆಯಲ್ಲಿ ಚಿಕ್ಕ ಸಂಸಾರ ನಮ್ಮದು. ಗಂಡನಿಗೆ ವ್ಯಾಪಾರ ಚೆನ್ನಾಗಿ ಇರುವುದರಿಂದ
ಊಟ-ಬಟ್ಟೆೆ ಸಣ್ಣ ಪುಟ್ಟ ತಿರುಗಾಟಕ್ಕೆೆ ತೊಂದರೆ ಇಲ್ಲ. ಊರಲ್ಲಿ ಸ್ವಲ್ಪ ಜಮೀನು ಬೇರೆ ಇದೆ. ಮಗಳು ಚೆನ್ನಾಗಿ ಓದಿದಳು, ಬಿಎ
ಮುಗಿಸಿದಳು. ಮುಂದೆ ಎಂಎ ಮಾಡುವ ಮನಸ್ಸಿದೆ. ಅದರ ನಡುವೆ ಕಾಲೇಜು ಸೀನಿಯರ್ ಜತೆ ಪ್ರೇಮ ಬೆಳೆಯಿತು.
ಅವರದ್ದು ಬಿಸಿನೆಸ್ ಕುಟುಂಬ. ನಮಗಿಬ್ಬರಿಗೂ ಮಗಳ ಆಯ್ಕೆ ಬಗ್ಗೆೆ ಆಕ್ಷೇಪವಿಲ್ಲ. ಸುಳ್ಳು ಯಾಕೆ ಹೇಳೋದು, ಜಾತಿ ಬೇರೆ
ಅಂತ ಸ್ವಲ್ಪ ಬೇಜಾರಾಯ್ತು. ಆದರೆ ಒಳ್ಳೆಯ ಹುಡುಗ. ಮದುವೆಯಾಗಿ ಬದುಕಿ ಬಾಳಬೇಕಾದವರು ಅವರು, ಅವರಿಷ್ಟದಂತೆ ಸುಖವಾಗಿರಲಿ ಎಂಬ ತಿಳಿವಳಿಕೆ ತಂದುಕೊಂಡ್ವಿ. ಹಾಗಾಗಿ, ಹೆಣ್ಣಿನ ಕಡೆಯವರಾಗಿ ನಾವೇ ಹೂವು-ಹಣ್ಣು ಎಲ್ಲಾ
ತಗೊಂಡು ಅವರ ಮನೆಗೆ ಹೋದ್ವಿ. ‘‘ಆಶ್ಚರ್ಯ ಅಂದ್ರೆ ಹುಡುಗನ ಮನೆಯವರಿಗೂ ಮದುವೆಗೆ ಅಭ್ಯಂತರವಿಲ್ಲ. ಅವರು ಬೆಂಗಳೂರಿನಲ್ಲಿ ಇರೋದು ಹೌದಾದರೂ ಮೂಲತಃ ರಾಜಸ್ತಾನದವರು. ಈಗ ತಮ್ಮ ಮಗನ ಮದುವೆಯ ಸಲುವಾಗಿ ಅಲ್ಲಿನ ಸಂಬಂಧಿಕರನ್ನು ಕರೆಯಲೇಬೇಕು. ಹಾಗಾಗಿ ಮೆಹೆಂದಿ, ಮದುವೆ, ಬೀಗರೂಟ-ಆತಿಥ್ಯ ಎಲ್ಲವೂ ಚೆನ್ನಾಗಿ ನಡೆಯಬೇಕು.
ನಮಗೆ ವರದಕ್ಷಿಣೆ ಬೇಡ ಅಂದಿದ್ದಕ್ಕೆೆ ಖುಷಿಯಾಯ್ತು. ಆದರೆ ಸಂಬಂಧಿಕರ ಎದುರು ಮರ್ಯಾದೆ ಪ್ರಶ್ನೆೆ. ಆದ್ದರಿಂದ ಒಳ್ಳೆ
ಛತ್ರ, ಉಳಿಯಲು ಹೊಟೇಲ್, ಮೆಹೆಂದಿ, ಬಫೆ ಊಟ ಎಲ್ಲವನ್ನೂ ಸುಮಾರು ಇನ್ನೂರು ಜನರಿಗೆ ಮಾಡಿಸಿ ಅಂತ ಹೇಳಿದ್ರು. ಯಾರು ಏನೇ ಅನ್ನಲಿ, ಇರೋ ಒಬ್ಬನೇ ಮಗನ ಮದುವೆ ಮಾಡುವಾಗ ದೂರದ ಸಂಬಂಧಿಕರ ಎದುರು ಅಷ್ಟು ಮಾಡಬೇಕು ಅಂತ ಆಸೆ ಇರೋದು ತಪ್ಪಲ್ಲ ಅನ್ನಿಸ್ತು ನಮಗೂ. ದುಡ್ಡು ಹೊಂದಿಸ್ಕೋೋಬೇಕು ಸ್ವಲ್ಪ ಟೈಮ್ ಕೊಡಿ ಅಂತ ಬಂದ್ವಿ.
ಹಣ ಹೊಂದಿಸುವ ಚಿಂತೆ ‘‘ಒಪ್ಕೊೊಂಡಿದ್ದೇನೋ ಆಯ್ತು, ದುಡ್ಡು ಹೇಗೆ ಹೊಂದಿಸೋದು? ಕಡೆಗೆ ಊರಲ್ಲಿರೋ ಜಮೀನು ಮಾರಾಟ ಮಾಡೋಣ ಅಂತ ತೀರ್ಮಾನ ಮಾಡಿದ್ವಿ. ಅಷ್ಟರಲ್ಲಿ ಶುರುವಾಯ್ತು ನೋಡಿ ಮಗಳ ಗಲಾಟೆ. ಹಾಗೆಲ್ಲ ಮಾಡಿ ಮದುವೆ ಆಗೋದಾದ್ರೆ ನಂಗೆ ಮದು ವೇನೇ ಬೇಡ ಅಂತ ಹಠ. ಪಾಪ ಆ ಹುಡುಗನಿಗೆ ಧರ್ಮಸಂಕಟ.
ಅತ್ತ ಅಪ್ಪ-ಅಮ್ಮನ್ನೂ ಬಿಡಕಾಗಲ್ಲ, ಇತ್ತ ಇವಳನ್ನೂ ಒಪ್ಪಿಸಕ್ಕೆ ಆಗಲ್ಲ. ಪಾಪ, ತಾನೂ ಒಂದಷ್ಟು ದುಡ್ಡು ಮದುವೆಗೆ ಕೊಡ್ತೀನಿ ಅಂತ ಹೇಳಿದ. ಹಾಗಾದ್ರೆ ನಾನು ಮುಂದೆ ಓದಲ್ಲ; ಕೆಲಸಕ್ಕೆ ಸೇರಿ ಸಂಬಳದಲ್ಲಿ ನಿಮಗೆ ದುಡ್ಡು ಕೊಡ್ತೀನಿ ಅಂತ ಮಗಳ ಷರತ್ತು. ಯಾರಿಗೆ ಏನು ಹೇಳೋದು? ಆ ಹುಡುಗ ಅಂತೂ ಸುಸ್ತಾಗಿ ಇದೆಲ್ಲಾ ಬಿಟ್ಟು ನಾವು ಓಡಿಹೋಗಿ ಮದುವೆ ಆಗೋಣ ಅಂತನೂ ಹೇಳಿದ. ಅದಕ್ಕೂ ಇವಳು ಅದೆಲ್ಲಾ ಆಗೊಲ್ಲ ಅಂತ ಕ್ಯಾತೆ ತೆಗೆದ್ಲು. ನಿಜ ಹೇಳ್ತೀನಿ, ಹಾಗೆಲ್ಲಾ ಮಾಡಿದ್ರೆ ನಮಗೂ ನಮ್ಮ ಸಂಬಂಧಿಕರೆದುರು ಮೂರು ಕಾಸು ಬೆಲೆ ಇರ್ತಿಲ್ಲಿಲ್ಲ.
ಒಟ್ಟು ಈ ಮದುವೆ, ಓದು, ಇವಳ ಹಠ, ದುಡ್ಡಿನ ವ್ಯವಸ್ಥೆ ಇದೆಲ್ಲದರ ನಡುವೆ ಕಂಗಾಲಾಗಿ ಕುಳಿತಿದ್ದೆೆವು. ‘‘ ಅಷ್ಟರಲ್ಲಿ ಈ ಕರೋನಾ ಬಂತು ನೋಡಿ – ಎಲ್ಲ ಬದಲಾಯ್ತು. ಸಮಾರಂಭಕ್ಕೆ ಐವತ್ತಕ್ಕಿಿಂತ ಹೆಚ್ಚು ಜನ ಸೇರುವಂತೆ ಇರಲಿಲ್ಲ. ಪ್ರಯಾಣ ಅಂತೂ ಸಾಧ್ಯವಿರಲಿಲ್ಲ. ಅದಕ್ಕಿಿಂತ ಹೆಚ್ಚಾಗಿ ಆದಷ್ಟು ಸರಳವಾಗಿ ಬೇಗ ಮದುವೆ ಮಾಡೋಣ ಅಂತ ಹುಡುಗನ ಮನೆಯ
ವರದ್ದು ಒತ್ತಾಯ. ಕಾರಣ ಹುಡುಗನೇ ಹೇಳಿ ದ; ಬಿಸಿನೆಸ್ ಕಡಿಮೆ, ಮುಂದೆ ಹೇಗೋ ಏನೋ ಅಂತ ಅವರ ಕಡೆ ಹುಡುಗರಿಗೆ ಹುಡುಗಿಯೇ ಸಿಕ್ಕುತ್ತಿಲ್ಲವಂತೆ. ಒಂದೆರಡು ಜನ ನಿಶ್ಚಿತಾರ್ಥದ ನಂತರ ಮದುವೆ ಮುರಿದು ಬಿಟ್ಟರಂತೆ. ಹೀಗಾಗಿ ಅವರಿಗೆ ಇದು ತಪ್ಪಿಬಿಟ್ರೆ ಅಂತ ಎಲ್ಲಿಲ್ಲದ ಗಡಿಬಿಡಿ.
ಮದುವೆಗೆ ನನ್ನದೇ ಅಡಿಗೆ ‘‘ನಂಬ್ತೀರೋ ಇಲ್ವೋ! ಇಲ್ಲೇ ದೇವಸ್ಥಾನದಲ್ಲಿ ಮದು ಮಕ್ಕಳು, ಪೂಜಾರಿಯೂ ಸೇರಿದಂತೆ ಒಟ್ಟು ಹನ್ನೆೆರಡು ಜನರು ಸೇರಿ ಮಾಸ್ಕ್ ಹಾಕಿಕೊಂಡು ಮದುವೆ ಮುಗಿಯಿತು. ಮೆಹೆಂದಿ, ಛತ್ರ, ಹೊಟೆಲ್, ಊಟ ಯಾವುದೂ ಇಲ್ಲ. ಅವರ ಮತ್ತು ನಮ್ಮ ಸಂಬಂಧಿಕರು ಅದೇನೋ ಆನ್ಲೈನಿನಲ್ಲಿ ಮದುವೆ ನೋಡಿದರು. ಊಟಕ್ಕೆ ಮನೆಯಲ್ಲಿ ನಾನೇ ಅಡಿಗೆ ಮಾಡಿದೆ.
ನಮ್ಮ ಬೀಗಿತ್ತಿ ಪಾಪ ತಾನೇ ಸ್ವೀಟು ಮಾಡಿ ತಂದಿದ್ದರು. ಒಟ್ಟಿನಲ್ಲಿ ಮದುವೆ ಹತ್ತು ಸಾವಿರದಲ್ಲಿ ಮುಗಿಯಿತು. ಜಮೀನೂ ಮಾರಲಿಲ್ಲ. ನಾವು ಅವಳ ಮದುವೆಗೆ ಅಂದ್ರೆ ಸೀರೆ, ಬಂಗಾರ, ಊಟ ಇದೆಲ್ಲಕ್ಕೆ ಅಂತ ಎತ್ತಿಟ್ಟ ದುಡ್ಡನ್ನು ಮದುಮಕ್ಕಳಿಗೆ ಉಡುಗೊರೆಯಾಗಿ ಕೊಟ್ವಿ. ಇಬ್ಬರೂ ಖುಷಿಯಾಗಿ ಇದ್ದಾರೆ. ಅಳಿಯ ಹೊಸ ಅಂಗಡಿ ತೆಗೆದಿದ್ದಾರೆ, ಮಗಳಿಗೆ ಮುಂದಿನ ತಿಂಗಳಿಂದ ಎಂ.ಎ ಕ್ಲಾಸು ಶುರು. ಈಗ ಉಳಿದಿರೋದು ಒಂದೇ ಕೆಲಸ ಈ ಮದುವೆ ಸುಸೂತ್ರವಾಗಿ ನಡೆದರೆ ನಮ್ಮೂರ ಮಾರಮ್ಮನಿಗೆ ಉಡಿ ತುಂಬಿಸಿ ಹಣ್ಣುಕಾಯಿ ಮಾಡಿಸ್ತೀನಿ ಅಂತ ಹರಕೆ ಹೇಳಿಕೊಂಡಿದ್ದೆ. ಈ ಕರೋನಮ್ಮನೂ ಮಾರಮ್ಮನ ರೂಪವೇ ಅನ್ನಿಸುತ್ತೆೆ. ಅಂತೂ ಅಮ್ಮ ಹೀಗೆ ನನ್ನ ಮಗಳ ಮದುವೆ ಮಾಡಿಸಿದಳು’’.
ಅಬ್ಬ! ಒಂದು ಸರಳ ಮದುವೆ ಯಶಸ್ವಿಯಾಗಿ ನೆರವೇರಿತು. ನಿಜ, ಕರೋನಾ ಕಷ್ಟವನ್ನು ತಂದಿತು; ಜತೆಗೇ ಸ್ವಚ್ಛತೆ, ಸರಳತೆ,
ಶಿಸ್ತು, ಸಂಬಂಧಗಳ ಮಹತ್ವ ಮೊದಲಾದ ಪಾಠವನ್ನೂ ಕಲಿಸಿತು. ಅಲ್ಲವೇ!