ಜಯಶ್ರೀ ಕಾಲ್ಕುಂದ್ರಿ
ದಾನ ನೀಡುವ ಪ್ರಕ್ರಿಯೆಯು ಉದಾತ್ತ. ಸಂಕಷ್ಟದಲ್ಲಿರುವ ಅರ್ಹರಿಗೆ ನೀಡುವ ಕೊಡುಗೆ ತರುವ ಪುಣ್ಯಕ್ಕೆ ಸಾಟಿ ಎಲ್ಲಿದೆ?
ಅಂಗರಾಜನಾದ ಕರ್ಣನು ದಾನ ಶೂರ ಕರ್ಣನೆಂದೇ ಹೆಸರಾದವನು. ಯಾವುದೇ ಸಮಯದಲ್ಲಿ ಏನನ್ನು ಕೇಳಿದರೂ ದಾನ
ಮಾಡುವ ಮನಸ್ಸುಳ್ಳ ಕರ್ಣ ನನ್ನು ಎಲ್ಲರೂ ಬಹುವಾಗಿ ಕೊಂಡಾಡುತ್ತಿದ್ದರು. ಇತರರಿಗೆ ಒಳಿತಾಗಲೆಂದು ತನ್ನಲ್ಲಿರುವು ದನ್ನೆಲ್ಲಾ ದಾನ ಮಾಡುವ ಕರ್ಣನ ಮನೋಭಾವವನ್ನು ಇತರರೂ ಅನುಸರಿಸಬೇಕೆಂದು ತಿಳಿಯಲಾಗಿತ್ತು.
ಇತ್ತ ದುರ್ಯೋಧನನು ಕರ್ಣನ ಸ್ನೇಹಿತ. ಆದರೂ, ಕರ್ಣನ ಈ ಸದ್ಗುಣ ಮತ್ತು ಅದರಿಂದಾಗಿ ಆತ ಪಡೆದ ಉನ್ನತ ಹೆಸರು ಹಸ್ತಿನಾಪುರದ ಯುವರಾಜನಾದ ದುರ್ಯೋಧನನಲ್ಲಿ ಸಣ್ಣಗೆ ಅಸೂಯೆ ಮೂಡುವಂತೆ ಮಾಡಿತ್ತು. ಕರ್ಣನ ಬಳಿಯಲ್ಲಿರುವ
ಸಂಪತ್ತೆಲ್ಲವೂ ತನ್ನದು, ತಾನು ಕೊಟ್ಟಿರುವ ಧನ- ಕನಕಗಳನ್ನೇ ದಾನವಾಗಿ ನೀಡಿ, ದಾನಶೂರನೆಂದು ಕೀರ್ತಿವಂತ ನಾಗಿರುವದರಲ್ಲಿ ಯಾವ ಹೆಚ್ಚುಗಾರಿಕೆಯಿದೆ, ಎಂದುಕೊಂಡು, ತಾನೂ ಸಹ ದಾನಶೂರ ನೆಂಬ ಹೆಸರು ಪಡೆಯಲು ಆಸೆಪಟ್ಟ.
ದುರ್ಯೋಧನನು ತನ್ನ ಅರಮನೆಯ ಗೋಡೆಯ ಮೇಲೆ ದಾನಶೂರ ದುರ್ಯೋಧನನೆಂದು ಫಲಕ ಹಾಕಿ, ಬೇಡಿಬಂದವರಿಗೆ ದಾನ ನೀಡಲಾರಂಭಿಸಿದ. ಹೀಗಿರುವಾಗ ಮಳೆಗಾಲ ಆರಂಭವಾಯಿತು. ಒಂದೇ ಸಮನೆ ಬಿಡುವಿಲ್ಲದ ಮಳೆ ಸುರಿಯಲಾರಂಭಿ
ಸುತ್ತದೆ. ರಾಜ್ಯದೆಲ್ಲಡೆ ಒಣಸೌದೆಯ ಆಭಾವವುಂಟಾಗಿ, ಅನ್ನ, ಆಹಾರ ತಯಾರಿಸಲೂ ಸಹ ಒಣ ಸೌದೆಯಿಲ್ಲದೆ ಜನತೆ ಪರಿತಪಿಸುವಂತಾಗುತ್ತದೆ.
ಇಷ್ಟರಲ್ಲಿ, ಒಬ್ಬ ಬಡವ್ಯಕ್ತಿಯ ಪಿತೃವಿಯೋಗವಾಗಿದ್ದರಿಂದ ಆತ ದುಯೋಧನನ ಬಳಿ ಬಂದು, ಅಂತ್ಯ ಸಂಸ್ಕಾರಕ್ಕೆ ಒಣ ಸೌದೆ ಯನ್ನು ನೀಡುವಂತೆ ಕೋರುತ್ತಾನೆ. ‘ಈಗ ಮಳೆಗಾಲ. ಅರಮನೆಯಲ್ಲಿರುವ ಸಾವಿರಾರು ಸದಸ್ಯರಿಗೆ, ಅಡಿಗೆ, ಸ್ನಾನಾದಿಗಳಿಗೆ ಒಣಸೌದೆಯ ಕೊರತೆಯಿರುವಾಗ, ಈ ಸಮಯದಲ್ಲಿ ನಿನಗೆ ಒಣಸೌದೆ ಕೊಡಲು ಸಾಧ್ಯವೇ? ನಿನಗೆ ಒಣಸೌದೆ ನೀಡಲಾಗದು’ ಎಂದು ಹೇಳಿ ಕಳುಹಿಸುತ್ತಾನೆ.
ಬಡ ವ್ಯಕ್ತಿಯು, ಉಪಾಯ ಕಾಣದೆ, ಕರ್ಣನ ಅರಮನೆಗೆ ಬಂದು ಒಣಸೌದೆ ಬೇಡುತ್ತಾನೆ. ಕರ್ಣನ ಬಳಿಯೂ ಒಣಸೌದೆ ಇರುವ ದಿಲ್ಲ. ಕರ್ಣ ಬೇರೆನನ್ನೂ ಯೋಚಿಸದೆ, ತನ್ನ ಮನೆಯ ಬಾಗಿಲನ್ನೇ ಮುರಿದು, ಸೌದೆಯನ್ನಾಗಿಸಿ, ಆ ಬಡ ವ್ಯಕ್ತಿಗೆ ಕೊಟ್ಟು ಕಳುಹಿಸುತ್ತಾನೆ. ಆದರೆ ಕರ್ಣನ ಮನೆಯ ಎದುರು ದಾನಶೂರ ಎಂಬ ಫಲಕವಿಲ್ಲ. ದಾನಶೀಲತೆ ಪ್ರದರ್ಶನದ ವಸ್ತುವಲ್ಲ. ಮನಸ್ಸಿನಾಳದೊಳಗೆ ಹುದುಗಿದ ಉದಾತ್ತತೆಯ ಸ್ವರೂಪ.
ಆಹಾರ ವಸತಿ ದಾನ
ದಾನವೆಂದರೆ, ಬರೀ ಧನ ದಾನ ಮಾತ್ರವಲ್ಲ, ಶಿಕ್ಷಣ, ಆಹಾರ, ವಸತಿ, ಹಸುಗಳನ್ನು ಸತ್ಪಾತ್ರರಿಗೆ ನೀಡುವದೂ ಸಹ ದಾನವೇ. ದಾನದ ಮಹತ್ವ ನಿಜಕ್ಕೂ ನಿಮಗೆ ತಿಳಿದಿದ್ದರೆ, ನಿಮ್ಮ ಯಾವ ಊಟವನ್ನೂ ನೀವು ಬೇರೆಯವರೊಂದಿಗೆ ಹಂಚಿಕೊಳ್ಳದೆ ಊಟ
ಮಾಡುವದಿಲ್ಲವೆಂದು ಗೌತಮ ಬುದ್ಧ ತನ್ನ ಪ್ರವಚನಗಳಲ್ಲಿ ಹೇಳಿದ್ದಾನೆ. ರಾಷ್ಟ್ರ ಹಿತದ ಕೆಲಸ ಮಾಡುವ ಜನತೆ, ಸಂಸ್ಥೆಗಳು ಮತ್ತು ಧರ್ಮ ಜಾಗೃತಿ ಮಾಡುವವರಿಗೆ ದಾನ ಮಾಡುವುದು ದಾನಶೀಲತೆ ಮಾತ್ರವಲ್ಲ, ಧರ್ಮಕಾರ್ಯವಾಗಿದೆ.
ದಾನವು ಎಂದೆಂದಿಗೂ ಉದಾರತೆ ಹಾಗೂ ಕೊಡುಗೆಯ ಪ್ರತಿರೂಪವೆನಿಸಿದೆ. ದಾನದಿಂದಲೇ ದೈವತ್ವ ಪ್ರಾಪ್ತಿಯಾಗುತ್ತದೆ.
ದಾನಶೀಲತೆಯೆಂದರೆ, ಉದಾರತೆ, ನೀಡುವಿಕೆ ಅಥವಾ ಒಂದು ಬಗೆಯ ಕೊಡುಗೆಯೆನ್ನಬಹುದು. ಮನಃಪೂರ್ವಕವಾಗಿ ಕೈಎತ್ತಿ ಅಗತ್ಯ ಇರುವವರಿಗೆ ಕೊಡುವುದೇ ದಾನ. ಕೊಡುವ ಕ್ರಿಯೆಯೋ ಒಂದು ಶ್ರೇಷ್ಠ ಪ್ರಕ್ರಿಯೆ. ನಮ್ಮ ನಾಡಿನ ಪರಂಪರೆಯಲ್ಲಿ
ದಾನವೆಂದರೆ ಉದಾರತೆಯನ್ನು ವಿಕಾಸಗೊಳಿಸುವ ಆಚರಣೆ. ಸಿರಿವಂತರು ಭೂಮಿ, ನೀರು, ಸುಖಭೋಗ ಸಾಮಗ್ರಿಗಳನ್ನು ಕಾಲ್ಪನಿಕ ಸುಖಕ್ಕಾಗಿ ಮಿತಿಮೀರಿ ಬಳಸುವದಕ್ಕಿಂತ, ಅರ್ಹರಿಗೆ ದಾನವಿತ್ತು ದಾನಶೀಲರಾದರೆ ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯ. ಬೇಕುಗಳು ಮತ್ತು ಸಂಗ್ರಹ ಬುದ್ಧಿ ಹೆಚ್ಚಾದಲ್ಲಿ ಒತ್ತಡ, ಕೋಪ, ನಿರಾಶೆಗಳು ಹೆಚ್ಚುತ್ತವೆ.
ಹಂಚಿ ಬಾಳಿದರೆ, ಸುಖ, ಸಂತೋಷ, ಸಂಭ್ರಮಗಳು ಹೆಚ್ಚುತ್ತವೆ. ಪರಿಶ್ರಮದಿಂದ ಸಂಪಾದಿಸಿದ ತನ್ನದೇ ಆದ, ತನಗೆ ಪ್ರಿಯವಾದ ವಸ್ತುಗಳನ್ನು ಅನ್ಯರ ಅನುಕೂಲಕ್ಕೆ ಒದಗಿಸುವ ದಾನಶೀಲತೆ, ಕಷ್ಟವೆನಿಸಿದರೂ ಅಪರೂಪದ ಗುಣವೇ ಸರಿ. ಜಗತ್ತನ್ನು ಸೋಂಕು ಜಾಡ್ಯವೆಂಬ ಪೀಡೆ ಇಂದು ಕಾಡುತ್ತಿರುವಾಗ, ಕಷ್ಟದಲ್ಲಿರುವ ಜನರಿಗೆ ಉಳ್ಳವರು ಕೊಡುಗೈ ದಾನ ನೀಡುವ ಮೂಲಕ ನೋವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬಹುದು. ಇಂದಿನ ದಿನಗಳಲ್ಲಿ ಮಾಡುವ ದಾನವು ಇನ್ನಷ್ಟು ಉದಾತ್ತ ಎನಿಸು ತ್ತದೆ.
ನೇತ್ರದಾನ
ನೇತ್ರದಾನವೂ ಸಹ ಶ್ರೇಷ್ಠವಾದ ದಾನವೆನಿಸಿದೆ. ನೇತ್ರದಾನದಿಂದ, ನೇತ್ರಹೀನರ ಕಣ್ಣುಗಳಿಗೆ ಮಾತ್ರವಲ್ಲ, ಬದುಕಿಗೇ ಬೆಳಕು ನೀಡಲು ಸಾಧ್ಯ. ಬದುಕಿರುವಾಗಲೇ ಸ್ವಯಂಪ್ರೇರಣೆಯಿಂದ ತನ್ನ ಸಾವಿನ ನಂತರ ಇಬ್ಬರು ನೇತ್ರಹೀನರಿಗೆ, ತನ್ನ ನೇತ್ರಗಳನ್ನು ದಾನ ಮಾಡುವುದಾಗಿ ಸಂಕಲ್ಪ ಮಾಡುವುದು ಶ್ರೇಷ್ಠ ನಡೆ ಎನಿಸುತ್ತದೆ. ನೇತ್ರದಾನ ಮಾಡಿದ ವ್ಯಕ್ತಿಯ ಕಣ್ಣುಗಳು ಆತನ ಸಾವಿನ ನಂತರವೂ ಜಗತ್ತನ್ನು ನೋಡಲು ಸಾಧ್ಯವಾಗುತ್ತದೆ.
ಮಿದುಳು ನಿಷ್ಕ್ರಿಯಗೊಂಡು, ಬದುಕಿನ ಅಂತಿಮ ಹಂತದಲ್ಲಿರುವ ವ್ಯಕ್ತಿಯ ಅಂಗಾಂಗ ದಾನಗಳಿಗೆ ಅವನ ಬಂಧುಗಳು ಮುಂದಾಗುವದೂ ಸಹ ಶ್ರೇಷ್ಠ ದಾನಶೀಲತೆಯೆನಿಸುತ್ತದೆ, ಅಂಗಾಂಗ ದಾನದ ಪ್ರಕ್ರಿಯೆಗೆ ಮುಂದಾದರೆ, ಕನಿಷ್ಟ ಐದು ಜೀವ ಗಳನ್ನು ಉಳಿಸಬಹುದು. ಇಂತಹ ದಾನಶೀಲತೆಯಿಂದ ಮನಸ್ಸಿನ ಕೊಳೆಯೆ ಕರಗಿ ಹೋಗಿ, ಒತ್ತಡ ಕಡಿಮೆಯಾಗಿ ಪ್ರಸನ್ನ ಭಾವ ಮೂಡುತ್ತದೆ. ದಾನಶೀಲತೆಯಿಂದ ಮೂಡುವ ನೆಮ್ಮದಿ, ಮನಃಶಾಂತಿ, ಸುಖ ಹಾಗೂ ಸಂತಸ ಭಾವಗಳಿಗಿಂತ ಹೆಚ್ಚಿನ ಸಂಪತ್ತು ಈ ಮಾನವ ಜೀವನದಲ್ಲಿ ಬೇರೆ ಇಲ್ಲ ಎಂಬುದು ಸರಳ ಸತ್ಯ.