ಟೆಕ್ ಮಾತು
ಇಂಧುಧರ ಹಳೆಯಂಗಡಿ
ಡಿಜಿಟಲ್ ಇಂಡಿಯಾ ಯೋಜನೆಯ ಅಡಿ, ಎಲ್ಲಾ ದಾಖಲೆಗಳ ಡಿಜಿಟಲ್ ಪ್ರತಿಯನ್ನು ರಚಿಸಲು ಡಿಜಿಲಾ ಕರ್ ಸಹಕಾರಿ. ವಿಮೆ, ವೈದ್ಯಕೀಯ ವರದಿಗಳು, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಮದುವೆ ಪ್ರಮಾಣ ಪತ್ರ, ಶಾಲಾ ಪ್ರಮಾಣಪತ್ರ ಮತ್ತು ಇನ್ನಿತರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು.
ವಾಹನ ಚಾಲನೆ ಮಾಡುವಾಗ, ನಿಮ್ಮಲ್ಲಿ ಎಲ್ಲಾ ದಾಖಲೆಗಳಿ ದ್ದರೂ, ಅದನ್ನು ಮನೆಯಲ್ಲಿ ಬಿಟ್ಟುಬಂದಿರುವ ಕಾರಣಕ್ಕೆ ಎಂದಾ ದರೂ ಪೋಲೀಸರಿಗೆ ದಂಡ ಕಟ್ಟಿದ್ದೀರಾ? ಎಲ್ಲೋ ದೂರದ ಊರಿಗೆ ಹೋಗಿರುವಾಗ, ನಿಮ್ಮ ಯಾವುದೋ ದಾಖಲೆಪತ್ರ ತತ್ ಕ್ಷಣದಲ್ಲಿ ಬೇಕಾಗಿದ್ದರೂ, ಅದನ್ನು ಮನೆಯಲ್ಲೇ ಬಿಟ್ಟಿರುವ ಕಾರಣಕ್ಕೆ, ಕಷ್ಟಪಟ್ಟಿ ದ್ದೀರಾ? ಹಾಗಾದರೆ, ಈಗ ಅದಕ್ಕೆಲ್ಲಾ ಪರಿಹಾರ ಬಂದಿದೆ.
ನಿಮ್ಮ ಸ್ಮಾರ್ಟ್‌ಫೋನ್‌ನ್ನು ಸ್ಮಾರ್ಟ್ ಆಗಿ ಬಳಸಲು ನಿಮಗೆ ಗೊತ್ತಿರಬೇಕು ಅಷ್ಟೆ. ಇಡೀ ಜಗತ್ತು ಡಿಜಿಟಲ್ ಆಗುತ್ತಿದೆ. ಆನ್‌ಲೈನ್ ಮೂಲಕ ಏನನ್ನೂ ಮಾಡಲು ಸಾಧ್ಯ ಎಂದು ದಿನೇ ದಿನೇ ಸಾಬಿತಾಗುತ್ತಿದೆ. ಹಲವರಿಗೆ ಇಂದು ದಿನಕ್ಕೆ 1 ಜಿಬಿ ಡೇಟಾ ಸಾಲುತ್ತಿಲ್ಲ. ಜಾಹೀರಾತುಗಳು, ಚಲನಚಿತ್ರ ಗಳು, ಸಭೆ-ಸಮಾರಂಭಗಳು ಈರೀತಿ ಎಲ್ಲವನ್ನೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರದರ್ಶಿಸಲಾಗುತ್ತಿದೆ.
ಅಷ್ಟೇ ಅಲ್ಲದೆ, 2021-22 ಸಾಲಿನ ಬಜೆಟ್ಅನ್ನು ವಿತ್ತ ಸಚಿವರು ಟ್ಯಾಬ್ಲೆಟ್ ನಲ್ಲಿ ಪ್ರಸ್ತುತಪಡಿಸಿದ್ದರು. ಅನೇಕ ದೇಶ ಗಳಂತೆ ಈಗ ಭಾರತವೂ ಡಿಜಿಟಲ್ ಮಾರ್ಗವನ್ನು ಅನುಸರಿಸುತ್ತಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಅಡಿ ಯಲ್ಲಿ, ಭಾರತ ಸರ್ಕಾರವು ಡಿಜಿಲಾಕರ್ ಅಪ್ಲಿಕೇಶನ್ ಒದಗಿಸಿದೆ.
ಏನಿದು ಡಿಜಿಲಾಕರ್ ಆ್ಯಪ್?
ಭಾರತದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಡಿಜಿಲಾಕರ್ ಅಪ್ಲಿಕೇಶನ್ – ಭಾರತೀಯ ಆನ್‌ಲೈನ್ ಸೇವೆಯನ್ನು ಬಿಡುಗಡೆ ಮಾಡಿತ್ತು. ಇದು ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಬಳಕೆದಾರರಿಗೆ ತಮ್ಮ ಎಲ್ಲಾ ದಾಖಲೆಪತ್ರಗಳನ್ನು (ಡಾಕ್ಯೂ ಮೆಂಟ್ಸ್) ಸಂರಕ್ಷಿಸಿಡಲು ಕ್ಲೌಡ್ ಖಾತೆಯನ್ನು ಒದಗಿಸುತ್ತದೆ. ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ, ಶಾಲೆ- ಕಾಲೇಜುಗಳ ಅಂಕಪಟ್ಟಿ ಮತ್ತು ಹೆಚ್ಚಿನದನ್ನು ಡಿಜಿಟಲ್ ಮಾದರಿಯಲ್ಲಿ ಸೇವ್ ಮಾಡಿಡಲು ಈ ಕ್ಲೌಡ್ ಖಾತೆಯನ್ನು ಬಳಸಬಹುದು.
ಈ ಅಪ್ಲಿಕೇಶನ್ನಲ್ಲಿ ಎಲ್ಲಾ ರೀತಿಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಲು ಪ್ರತಿಯೊಬ್ಬ ಖಾತೆದಾರರಿಗೆ 1 ಜಿಬಿ ಕ್ಲೌಡ್ ಸ್ಟೋರೇಜ್ ಲಭ್ಯವಿರುತ್ತದೆ. ಈ ಆ್ಯಪ್‌ನ ಬೀಟಾ ಆವೃತ್ತಿಯನ್ನು ಪ್ರಧಾನಿಯವರು 2015 ರ ಜುಲೈನಲ್ಲಿ ಬಿಡುಗಡೆ ಮಾಡಿದ್ದರು. ಆರಂಭದಲ್ಲಿ ಬಳಕೆದಾರರಿಗೆ ಕೇವಲ 100 ಎಂಬಿ ಸ್ಟೋರೇಜ್ ಅವಕಾಶ ಲಭ್ಯವಿತ್ತು.
ಇದೀಗ ಅದನ್ನು 1 ಜಿಬಿಗೆ ಹೆಚ್ಚಿಸಲಾಗಿದೆ. ಪ್ರತ್ಯೇಕ ದಾಖಲೆಯ ಫೈಲ್ ಗಾತ್ರವು 10 ಎಂಬಿಗಿಂತಲೂ ಅಧಿಕ ವಾಗಿರ ಬಾರದು. ಕೇವಲ ಆಧಾರ್ ಕಾರ್ಡ್‌ಅನ್ನು ಸೇವ್ ಮಾಡಿಡುವ ಅಪ್ಲಿಕೇಶನ್ ಆಗಿ ಆರಂಭವಾದ ಡಿಜಿಲಾಕರ್, ಬಳಿಕ ಶೈಕ್ಷಣಿಕ ಪ್ರಮಾಣಪತ್ರಗಳನ್ನೂ ಸೇರಿಸಿತು. ಪ್ರಸ್ತುತ ಈ ಆ್ಯಪ್‌ನಲ್ಲಿ ಬ್ಯಾಂಕ್ ದಾಖಲೆಗಳು, ವೈದ್ಯಕೀಯ ದಾಖಲೆಗಳು ಇನ್ನಿತರ ಅವಕಾಶವನ್ನು ಬಳಕೆದಾರರಿಗೆ ನೀಡುತ್ತಿದೆ. ಈಗ ಡಿಜಿಲಾಕರ್ ಕೋಟ್ಯಂತರ ಬಳಕೆದಾರರನ್ನು ಹೊಂದಿ ದ್ದು, ಬಹಳಷ್ಟು ದಾಖಲೆಗಳು ಇದರಲ್ಲಿ ಸಂಗ್ರಹವಾಗಿದೆ.
ಬಳಕೆ ಹೇಗೆ?
ಡಿಜಿಲಾಕರ್ ಬಳಸಲು ಆಧಾರ್ ಸಂಖ್ಯೆೆ ಅಗತ್ಯ. ಬಳಕೆದಾರರಾಗಲು, ಮೊದಲಿಗೆ ಡಿಜಿಲಾಕರ್ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್ ನಿಂದ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ಡೌನ್ಲೋಡ್ ಮಾಡಬೇಕು. ನಿಮ್ಮ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ನಲ್ಲಿ, ಡಿಜಿಲಾಕರ್ ವೆಬ್ ಸೈಟ್‌ಗೆ ಭೇಟಿ ನೀಡಿ, ಅಪ್ಲಿಕೇಶನ್ ಡೌನ್ಲೋಡ್ ಮಾಡಬಹುದು.
ಬಳಿಕ, ಆಧಾರ್ ಸಂಖ್ಯೆ ಹಾಗೂ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ, ಅಪ್ಲಿಕೇಶನ್‌ಗೆ ಸೈನ್ ಅಪ್ ಆಗಬೇಕು. ಆಗ ಒಂದು ಓಟಿಪಿ ಬರುತ್ತದೆ. ಅದನ್ನು ಅಲ್ಲಿ ನಮೂದಿಸಿದರೆ, ನೀವು ಸೈನ್ ಇನ್ ಆಗುತ್ತೀರಿ. ಅಲ್ಲಿ ನೀವು, ನಿಮಗೆ ಬೇಕಾದ ಯೂಸರ್ ನೇಮ್ ಸಹ ಹಾಕಬಹುದು.
ಸೈನ್‌ಇನ್ ಆದ ಬಳಿಕ, ಯಾವುದೇ ಪ್ರಮಾಣಪತ್ರ. ಇನ್ನಿತರ ಕಾರ್ಡ್‌ಗಳನ್ನು ವಿತರಿಸುವ ಸರ್ಕಾರಿ-ಸರ್ಕಾರೇತರ ಸಂಸ್ಥೆಗಳಿಂದ ತಮ್ಮ ಇ-ಡಾಕ್ಯುಮೆಂಟ್ ಗಳನ್ನು ಪಡೆಯಬಹುದು. ಜತೆಗೆ, ಬಳಕೆದಾರರು ಇತರ ಖಾಸಗಿ ದಾಖಲೆ ಗಳನ್ನು ಅಪ್ಲೋಡ್ ಮಾಡಲೂ ಅವಕಾಶವಿದೆ. ಬಳಕೆದಾರರು ಈ ಯಾವುದೇ ದಾಖಲೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕಾದರೆ, ತಮ್ಮ ಡಾಕ್ಯೂಮೆಂಟ್ ಪಕ್ಕದಲ್ಲಿ ಇರುವ ಆಪ್ಷನ್ ಬಳಸಿ, ಆಗ ಸಿಗುವ ಲಿಂಕ್ ಮೂಲಕ ದಾಖಲೆಯನ್ನು ಇತರರಿಗೆ ಕಳುಹಿಸಬಹುದು. ಆ್ಯಪ್ ಜೊತೆ ನೋಂದಾಯಿಸಿಕೊಂಡಿರುವ ಯಾವುದೇ ಸಂಸ್ಥೆಯ ಪ್ರಮಾಣಪತ್ರ/ ಅಂಕಪಟ್ಟಿ/ಇನ್ನಿತರ ಕಾರ್ಡ್‌ಗಳು ಸ್ವಯಂಚಾಲಿತವಾಗಿ ಡಿಜಿಲಾಕರಿಗೆ ವರ್ಗಾವಣೆ ಯಾಗುತ್ತದೆ.
ಡಿಜಿಲಾಕರ್ ಎಷ್ಟು ಸುರಕ್ಷಿತ?
ಡಿಜಿಲಾಕರ್ ಪ್ಲಾಟ್‌ಫಾರ್ಮ್ ಸಂಪೂರ್ಣ ಪ್ರಮಾಣಿತ ಭದ್ರತಾ ಕಾರ್ಯವಿಧಾನಗಳನ್ನು ಅನುಸರಿಸುವುದಾಗಿ
ಅಭಿವೃದ್ಧಿಪಡಿಸಿದ ಸಂಸ್ಥೆಯು ಹೇಳಿಕೊಂಡಿದೆ. ಪ್ಲಾಟ್ ಫಾಮ್ನ ಪ್ರಕಾರ, ತಮ್ಮ ಸರ್ವರ್‌ಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುವ ಮೊದಲು, ಅದರ ಸುರಕ್ಷತೆ ಮತ್ತು ಏನಾದರೂ ದೋಷಗಳ ಬಗ್ಗೆ ಪರಿಶೀಲಿಸಿ, ಪರೀಕ್ಷಿಸಲಾಗು ತ್ತದೆ. ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳುವ ಬಳಕೆದಾರರನ್ನು ದೃಢೀಕರಿಸಲು, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿನ್ನು ಕಳುಹಿಸ ಲಾಗುತ್ತದೆ.
ಅದಲ್ಲದೆ, ಡಿಜಿಲಾಕರ್ ಅಪ್ಲಿಕೇಶನ್‌ಅನ್ನು ಮಾನ್ಯತೆ ಪಡೆದ ಲೆಕ್ಕಪರಿಶೋಧಕ ಏಜೆನ್ಸಿಗಳು ಆಡಿಟ್ ಮಾಡುತ್ತವೆ
ಮತ್ತು ಸೆಕ್ಯುರಿಟಿ ಆಡಿಟ್ ಪ್ರಮಾಣಪತ್ರವನ್ನು ಆ್ಯಪ್ ನಿಯಮಿತವಾಗಿ ಪಡೆಯುತ್ತಿರುತ್ತದೆ.
ಸ್ಮಾರ್ಟ್‌ಫೋನ್ ಒಂದು ಕೈಯಲ್ಲಿದ್ದರೆ, ಎಲ್ಲವೂ ನಮ್ಮ ಕೈಯಲ್ಲಿದ್ದಂತೆ. ಈಗಾಗಲೇ, ಸರ್ಕಾರವೂ ಸಹ ಡಿಜಿಲಾಕರ್
ಮೂಲಕ ಹಂಚಿಕೊಳ್ಳುವ ದಾಖಲೆಗಳನ್ನು ಅಧಿಕೃತ ಎಂದು ಪರಿಗಣಿಸುವಂತೆ ಕೇಳಿಕೊಂಡಿದೆ. ಶಾಲೆ-ಕಾಲೇಜುಗಳ
ಪ್ರಮಾಣಪತ್ರ, ವಿಮೆ, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ ಇನ್ನಿತರ ಪ್ರಮುಖ ದಾಖಲೆಗಳೆಲ್ಲವೂ
ಒಂದೇ ಸೂರಿನಡಿ ಸಿಗುವಾಗ, ಹೊದಲ್ಲೆಲ್ಲಾ ಹತ್ತಾರು ದಾಖಲೆ ಪತ್ರಗಳನ್ನು ಎತ್ತಿಕೊಂಡು ಹೋಗಲು ಯಾರು
ಬಯಸುತ್ತಾರೆ? ಅಂತಹ ಎಲ್ಲಾ ದಾಖಲೆಗಳನ್ನು ನಿಮ್ಮ ಮನೆಯೊಳಗೆ ಸುರಕ್ಷಿತವಾಗಿ ಇರಿಸಿ ಮತ್ತು ಡಿಜಿಲಾಕರ್
ಮೊಬೈಲ್ ಅಪ್ಲಿಕೇಶನ್ ಬಳಸಿ ಅವುಗಳ ಇ-ಪ್ರತಿಗಳನ್ನು ಪಡೆದು, ಎಲ್ಲಿ ಬೇಕಾದರೂ ಬಳಸಿ.