Sunday, 15th December 2024

ರಂಗಭೂಮಿ ಸಂಸ್ಕೃತಿಯ ವಿಮರ್ಶೆಗಳು

ರಂಗಸ್ಪಂದ (ನಾಟಕ ವಿಮರ್ಶೆಗಳು), ನೆಲದ ತಾರೆಗಳು (ಚಿತ್ರಗಳು- ಸಮೀಕ್ಷೆಗಳು) ಮತ್ತು ಪ್ರಬೋಧ (ಚಿಂತನ ಗುಚ್ಛ) ಎಂಬ ಮೂರು ಪುಸ್ತಕಗಳು ಇಂದು ಮೈಸೂರಿನ ನಟನ ರಂಗಶಾಲೆಯ ಆವರಣದಲ್ಲಿ ಅನಾವರಣಗೊಳ್ಳುತ್ತಿದೆ. ಈ ಮೂರೂ ಪುಸ್ತಕಗಳ ಕರ್ತೃ ಗ.ನಾ.ಭಟ್ಟ.

ಟಿ.ದೇವಿದಾಸ್

ಮೂರು ದಶಕಗಳ ಅಧ್ಯಾಪನ ವೃತ್ತಿಯಿಂದ ನಿವೃತ್ತರಾದ ಗ.ನಾ.ಭಟ್ಟರು ಪ್ರವೃತ್ತಿಯಲ್ಲಿ ಯಕ್ಷಗಾನ ಅರ್ಥಧಾರಿಗಳು, ಲೇಖಕರು, ಚಿಂತಕರು, ರಂಗಭೂಮಿ ಚಟುವಟಿಕೆಗಳಲ್ಲಿ ಸದಾ ನಿರತರು. ಉತ್ತಮವಾಗ್ಮಿ, ಪ್ರವಚನಕಾರ. ಮುಖ್ಯವಾಗಿ ಅಧ್ಯಯನ ಶೀಲರು.

ಇದ್ದುದನ್ನು ಇದ್ದ ಹಾಗೆಯೇ ಬರೆಯುವ ನಿರ್ಭಿಡೆಯವರು. ಮಾತಿನಲ್ಲೂ ಬರೆಹದಲ್ಲೂ ನೇರ ನಡೆ-ನುಡಿಯ ಭಟ್ಟರು 90 ದಶಕದಿಂದ ಈವರೆಗೆ ಪ್ರದರ್ಶನಗೊಂಡ ಪ್ರಸಿದ್ಧ ನಾಟಕಗಳ ವಿಮರ್ಶೆಗಳನ್ನು ಪತ್ರಿಕೆಗಳಿಗೆ ಬರೆದವರು. ಅವುಗಳ ಸಂಕಲನವೇ ರಂಗಸ್ಪಂದ. ಇನ್ನೊಂದು, 32 ಮಹನೀಯರ ಬಗ್ಗೆೆ ಬರೆದ ಅಪರೂಪದ ಪುಸ್ತಕ ನೆಲದ ತಾರೆಗಳು. ಮತ್ತೊಂದು ಚಿಂತನೆಗಳ  ಗುಚ್ಛ ಪ್ರಬೋಧ.

ರಂಗಸ್ಪಂದದ ವಿಮರ್ಶೆಗಳು ನಿಜಪ್ರಜ್ಞೆಯೊಂದರ ಅಂತರಾಳದ ನುಡಿಗಳಾದ್ದರಿಂದ ಈ ನುಡಿಗಳು ನಿಜವಾಗಿ ದಕ್ಕಬೇಕಾದದ್ದು ರಂಗಭೂಮಿಗೆ, ಆಯಾ ನಾಟಕಗಳ ನಿರ್ದೇಶಕರಿಗೆ, ಪಾತ್ರಧಾರಿಗಳಿಗೆ. ಆದ್ದರಿಂದ ಇಂಥ ಪುಸ್ತಕಗಳು ರಂಗಭೂಮಿ ಸಂಸ್ಕೃತಿಯನ್ನು ಕಾಪಿಟ್ಟುಕೊಳ್ಳಬೇಕಾದ ಅಂಶಗಳನ್ನು ಅರಿಕೆ ಮಾಡುತ್ತವೆ. ಕಲಾವಿದನ ಕಲಾಭಿವ್ಯಕ್ತಿಯನ್ನು ಇನ್ನಷ್ಟು ಪ್ರಬುದ್ಧಗೊಳಿಸುತ್ತವೆ. ಆದ್ದರಿಂದ ಈ ಕಿರು ವಿಮರ್ಶೆಗಳು ರಂಗಭೂಮಿ ಸಂಸ್ಕೃತಿಯ ಉಳಿವಿನ ಚಿಂತನೆಯ ವಿಮರ್ಶೆಗಳೆಂದು ಗ್ರಹಿಸಬೇಕಾಗುತ್ತದೆ.

‘ರಂಗಸ್ಪಂದ’ ದಲ್ಲಿನ ವಿಮರ್ಶೆಗಳು ರಘುವಂಶದ ಕೆಲವು ಭಾಗಗಳನ್ನು ಆಯ್ದ, ಎಚ್ಚೆಸ್ವಿಯವರ ಅಗ್ನಿವರ್ಣದಿಂದ ಆರಂಗೊಂಡು ಭಾಸನ ಪ್ರತಿಮಾ ಮತ್ತು ಅಭಿಷೇಕ ನಾಟಕದವರೆಗೆ ಸಾಗುತ್ತದೆ. ಕಲಾಕೃತಿಯೊಂದನ್ನು ರಂಗಭೂಮಿಯ ಕೃತಿಯನ್ನಾಗಿಸಿ ಅಳವಡಿಸಿಕೊಂಡಾಗ ಆಗುವ ಬದಲಾವಣೆಗಳನ್ನು ಅದರ ಒಟ್ಟೂ ಇತಿಮಿತಿಗಳೊಂದಿಗೇ ವಿಮರ್ಶಿಸುವ ಭಟ್ಟರು ಯಾವುದನ್ನೂ ತಿರಸ್ಕರಿಸಲಾರರು.

ಹೀಗೆಯೇ ಇದೆಯೆಂಬುದೂ ಒಪ್ಪಿತ ಧೋರಣೆಯಾದರೆ, ಹಿಗೆಯೇ ಇರಬೇಕಿತ್ತೆಂಬುದೂ ಸದಾಗ್ರಹದ ಧೋರಣೆ. ಮುನ್ನುಡಿಯಲ್ಲಿ ಹೆಚ್.ಎಸ್.ಉಮೇಶ ಅವರು ಹೇಳಿದ ಹಾಗೆ ಭಟ್ಟರ ವಿಮರ್ಶೆಗಳು ಸುಸಂಸ್ಕೃತ ಮನಸಿನ ಸಮೀಕ್ಷೆಯಾಗಿ ಕಾಣುತ್ತವೆ. ಹೌದು, ಉಮೇಶ ಅವರು ಹೇಳಿದಂತೆ ಭಟ್ಟರದು ಕ್ಲಾಸಿಕಲ್ ಮನೋವೃತ್ತಿ. ಅಷ್ಟೇ ಅಲ್ಲ ಮನೋಧರ್ಮವೂ ಕೂಡ. ಯಾವುದರಲ್ಲೂ ಸುಲಭದಲ್ಲಿ ರಾಜೀಯಾಗದ ಭಟ್ಟರು ಕಲೆ, ಸಾಹಿತ್ಯ, ಸಂಗೀತ, ನಾಟ್ಯ, ರಂಗಭೂಮಿ, ಯಕ್ಷಗಾನದ ಹೊಸ ಪೀಳಿಗೆಯ ಕಲಾವಿ ದರ ಕಲಾಭಿನಯವನ್ನು ಮೆಚ್ಚುವಂತೆಯೇ ಹಳೆಯ ತಲೆಮಾರಿನ ಕಲಾವಿದರ ಕಲಾಭಿನಯವನ್ನೂ ಕಣ್ಮುಚ್ಚಿ ಒಪ್ಪದೆ ಸಾರಾ ಸಗಟಾಗಿ ನಿಕಷಕ್ಕೆ ಒಡ್ಡಬಲ್ಲರು. ಲೋಪದೋಷಗಳನ್ನು ಸಾಬೀತುಪಡಿಸಬಲ್ಲರು. ಇಂಥ ತಾಕತ್ತು ಬರುವುದು ನಿಜ ಕಲಾವಿದನಿಗೆ ಮಾತ್ರ.

ಆದ್ದರಿಂದ ಈ ವಿಮರ್ಶೆಗಳು ರಂಗಭೂಮಿಯ ಚಲನೆಯ ದಿಕ್ಕಿನಲ್ಲಿ ಆದ ಸ್ಥಿತ್ಯಂತರಗಳನ್ನು ಹೇಳುತ್ತವೆ. ಯಾವುದೇ ಕೃತಿ ಯೊಂದನ್ನು ನಾಟಕ ರೂಪದಲ್ಲಿ ಇಳಿಸಿ ಪ್ರದರ್ಶಿಸುವಾಗ ಆರಂಭದಲ್ಲಿಯೇ ಸಿಕ್ಸರ್ ಹೊಡೆಯಲಾರದು. ಪ್ರೇಕ್ಷಕನ ಅಂತರಂಗ ವನ್ನು ಮುಟ್ಟಲಾರದು. ಆದರೆ ಕೊನೆಕೊನೆಯ ಪ್ರದರ್ಶನಗಳು ತನ್ನಲ್ಲಿ ಪ್ರಭ್ವುವನ್ನು ಹುಟ್ಟಿಸಿಕೊಳ್ಳುತ್ತದೆ. ಸಿನೆಮಾದಲ್ಲಾದರೆ ರೀಟೇಕ್ ಗಳಿರುತ್ತದೆ. ನಾಟಕದಲ್ಲಿ ಅದು ಸಾಧ್ಯವಿಲ್ಲ. ಜೀವಂತಿಕೆ ಮತ್ತು ವಾಸ್ತವತೆಯೇ ನಾಟಕದ ಜೀವಸ್ಸತ್ವ.

ಭೋಗಜೀವನಕ್ಕೆ ಭಾಷ್ಯ ಬರೆದ-ಅಗ್ನಿವರ್ಣ, ವಿರುದ್ಧ ದಿಕ್ಕಿನ ಧ್ರುವಗಳು-ಗಾಂಧಿ ವರ್ಸಸ್ ಗಾಂಧಿ, ಬಾನುಲಿಯಿಂದ ದೃಶ್ಯಕ್ಕೆ ಜಿಗಿದ ಭಟ್ಟರ ಮಗಳು, ನಾಟಕ ಧರ್ಮವನ್ನು ಮರೆತ-ಹೆಜ್ಜಾಲ, ಅಸಂಗತದಲ್ಲಿ ಸತ್ಯದರ್ಶನ- ಇಲಿಬೋನು, ರಾಮಾಯಣದ ಕನ್ನಡಿಯಲ್ಲಿ ಸಮಕಾಲೀನ ಜನಜೀವನದ ದರ್ಶನ-ಬಿಂಬ, ಕಥಾಶಯದ ಸಮರ್ಥ ನಿರೂಪಣೆ-ಒಥೆಲೋ, ಜಾತಿಯ ದುರ್ವಾಸನೆ-ಶೂದ್ರ ತಪಸ್ವಿ, ದೃಶ್ಯ ವೈಭವಕ್ಕೆ ಸಾಣೆ ಹಿಡಿದ-ಟಿಪ್ಪುವಿನ ಕನಸುಗಳು, ಸ್ತ್ರೀ ಸಂವೇದನೆಯಿಂದ ನಲುಗಿದ- ಅಂಧ
ಗಾಂಧಾರ, ಸಂಕೇತಗಳ ಸರಮಾಲೆ- ಶಿವರಾತ್ರಿ, ಸಮಕಾಲೀನ ಸಾಮಾಜಿಕ ಜೀವನದ ದಟ್ಟ ದರ್ಶನ- ಮೃಚ್ಛಕಟಿಕ, ನಟನ ರಂಗಶಾಲೆಯ ಹೆಜ್ಜೆ ಗುರುತುಗಳು, ಜೀವನ ಮೌಲ್ಯಗಳನ್ನು ಎತ್ತಿಹಿಡಿದ- ಚೋರ ಚರಣದಾಸ, ಹಳೆಯದು ಹೊಸದರ ಸುಂದರ ಸಮನ್ವಯ- ಉಷಾಹರಣ, ಭಾಸನ ರಂತಂತ್ರವನ್ನು ವಿಸ್ತರಿಸಿದ- ಪ್ರತಿಮಾ ಮತ್ತು ಅಭಿಷೇಕ- ಇವು 80 ಪುಟಗಳ ಈ ಸಣ್ಣ ಪುಸ್ತಕದಲ್ಲಿರುವ 16 ಕಿರು ವಿಮರ್ಶೆಗಳು.

ಖ್ಯಾತ ರಂಗನಿರ್ದೇಶಕ ಚಿದಂಬರ ರಾವ್ ಜಂಬೆ ನಿರ್ದೇನದ ಕಂಬಾರರ ‘ಶಿವರಾತ್ರಿ’ ಯ ಪ್ರದರ್ಶನದ ಬಗ್ಗೆ ಭಟ್ಟರು ಬರೆದ ಈ ಮಾತು ಬಹುಸೂಕ್ಷ್ಮವಾದದ್ದು: ಜಂಬೆಯವರ ನಡುವೆ ನಿರ್ದೇಶನದ ಪಕ್ವತೆ, ಕೌಶಲವನ್ನು ಮೆಚ್ಚಿದ ಭಟ್ಟರು ದ್ವಾರಪಾಲಕ ಜಗದೇವ ಮತ್ತು ಬೊಮ್ಮಣ್ಣರನ್ನು ಸಾಂಕೇತಿಕವಾಗಿ ಬಳಸಿಕೊಳ್ಳುವುದನ್ನು ಬಿಟ್ಟು ಸುಮಾರು ಒಂದೂವರೆ ಎರಡು ಗಂಟೆಗಳ ಕಾಲ ಅವರನ್ನು ಸ್ಟೇಜಿನ ಎರಡು ತುದಿಗಳಲ್ಲಿ ಅಂಗಸಾಧನೆ ಮಾಡುವಂತೆ ಹೇಳಿ ಕುಳ್ಳಿರಿಸಿದ್ದು ಯಾವ ಪುರುಷಾರ್ಥಕ್ಕೆ ಅಂತ ತಿಳಿಯದೇ ಹೋಯಿತು ಎನ್ನುತ್ತಾರೆ.

ಒಂದು ಸೂಕ್ಷ್ಮ ಕೊರತೆಯನ್ನು ಹೇಳುವಾಗಲೂ ಭಟ್ಟರಿಗೆ ಕೊರತೆಯನ್ನು ನೀಗಿಸಬಹುದಾದ ಸಾಧ್ಯತೆಯೂ ಗೊತ್ತಿರುತ್ತ ದೆಂಬುದು ಸ್ಪಷ್ಟ. ಇವೆಲ್ಲವೂ ರಂಗಭೂಮಿ ಸಂಸ್ಕೃತಿಯ ಕುರಿತಾದ ಚಿಂತಕರಲ್ಲಿ ಒಂದು ಎಚ್ಚರವನ್ನು ಕೊಡುತ್ತದೆಂಬುದನ್ನು
ಅಲ್ಲಗಳೆಯಲು ಸಾಧ್ಯವಿಲ್ಲ! ಕಳೆದ ಫೆಬ್ರವರಿಯಲ್ಲಿ ಮಂಡ್ಯ ರಮೇಶ್ ಸಾರಥ್ಯದ ಮೈಸೂರಿನ ನಟನ ರಂಗಶಾಲೆಯು ತನ್ನ ರಂಗಮಂದಿರದಲ್ಲಿ ಭಾಸನ ‘ಪ್ರತಿಮಾ’ ನಾಟಕವನ್ನು ಪ್ರದರ್ಶಿಸಿತು. ಈ ಪ್ರದರ್ಶನನ್ನು ಭಟ್ಟರು ಬಹುಸಂವೇದಿಯಾಗಿ
ವಿಮರ್ಶಿಸಿದಂತೆಯೂ, ಮೆಚ್ಚಿದಂತೆಯೂ ಕಾಣುತ್ತದೆ. ಈ ಮಾತುಗಳನ್ನು ನೋಡಿ: ಇಡೀ ನಾಟಕಕ್ಕೆ ಹೊಸ ಸ್ಪರ್ಶ ನೀಡಿದ್ದು ಯಕ್ಷಗಾನ ಹೆಜ್ಜೆ, ಕಳರಿ, ಛಾವೋ ಮುಂತಾದ ದೇಶೀ ಕಲೆಗಳನ್ನು ಅಳವಡಿಸಿದ್ದು, ರಾಮನ ಪ್ರವೇಶಕ್ಕೆ ಧಿತ್ತಾಕಟ್ತ್ಗ ಧಿನ್ನಾಧೇಂ ಒಡ್ಡೋಲಗದ ಬಿಡ್ತಿಗೆ ಬಳಸಿದ್ದು ಮತ್ತು ರಾಮ (ಅನೂಪ್ ಹಾಸನ) ಅದನ್ನು ಸುಂದರವಾಗಿ ಕುಣಿದು ತೋರಿಸಿದ್ದು ನಾಟಕಕ್ಕೆ ಹೊಸ ಕಳೆಯನ್ನೇ ತಂದಿತು.

ಲಕ್ಷ್ಮಣನ ವೀರಾವೇಶಕ್ಕಂತೂ ಯಕ್ಷಗಾನದ ಮಂಡಿ ಕುಣಿತವನ್ನು ಅಳವಡಿಸಿದ್ದು ವೀರರಸವನ್ನೇ ಸಾಕ್ಷಾತ್ಕರಿಸಿತು.
ಲಕ್ಷ್ಮಣನ ಪಾತ್ರಧಾರಿ ರವಿ ಪಾಂಡವಪುರ ಅವರು ಶ್ವಾಸೋಚ್ಛ್ವಾಸವನ್ನು ದೀರ್ಘವಾಗಿ ಎಳೆಯುತ್ತಾ, ದೇಹವನ್ನು ನಿಶ್ಚಲಗೊಳಿಸಿ ಬಾಗಿ ನಿಲ್ಲುವುದರ ಮೂಲಕ ಲಕ್ಷ್ಮಣನ ಕೋಪಾಟೋಪವನ್ನು ಇನ್ನಿಲ್ಲದಂತೆ ಪ್ರಚುರ ಪಡಿಸಿದರು. ರಾಮಲಕ್ಷ್ಮಣಾದಿಗಳು ತಮ್ಮ ಆಭರಣಗಳನ್ನು ಕಳಚುವುದಕ್ಕೆ ಸಭೆಗೆ ಬೆನ್ನು ತೋರಿಸುತ್ತಾ ಮಂಡಿಯೂರಿ ಕೂತಿದ್ದು ತುಂಬಾ ಅರ್ಥಪೂರ್ಣವಾಗಿ ಸಾಂಕೇತಿಕವಾಗಿ ಮೂಡಿ ಬಂತು. ಹಾಗೆಯೇ ಅಡವಿಯ ದೃಶ್ಯಕ್ಕೆ ರಂಗಸ್ಥಳದ ಎರಡೂ ಪಕ್ಕದಲ್ಲೂ ನಾಲ್ಕು ನಾಲ್ಕು ಬಿದಿರುಮೆಳೆಯ ಕಟ್ಟನ್ನು ಜೋಡಿಸಿ ನಿಲ್ಲಿಸಿದ್ದು ಅಡವಿಯ ದೃಶ್ಯ ಮೈದಳೆಯುವಂತೆ ಮಾಡಿತು…

ಹೀಗೆ ಈ ರಂಗಸ್ಪಂದದ ವಿಮರ್ಶೆಗಳು ರಾಗದ್ವೇೇಷರಹಿತವಾಗಿ ರಂಗಭೂಮಿಯ ಔನ್ನತ್ಯವನ್ನು ಬಯಸುತ್ತವೆ. ಇಂಥ ಕಿರು ವಿಮರ್ಶೆಗಳನ್ನು ರಂಗಭೂಮಿ ಕಲಾವಿದರು, ನಿರ್ದೇಶಕರು, ಆಸಕ್ತರು ಓದಲೇಬೇಕು. ಅಧ್ಯಯನ ಯೋಗ್ಯ ಅಷ್ಟೇ ಅಲ್ಲ, ರಂಗಕರ್ಮಿಗಳಿಗೆ ಇದು ರಂಗ ಚಾಲನೆಯಲ್ಲಿ ಪ್ರಾಯೋಗಿಕವಾಗಿಯೂ ಮಹತ್ವದೆನಿಸುತ್ತದೆ. ಭಟ್ಟರ ಇನ್ನೊಂದು ಕೃತಿ ‘ನೆಲದ ತಾರೆಗಳು’. ಇದಕ್ಕೆ ಮುನ್ನುಡಿ (ಆಳದ ಆಯಾಮ) ಯನ್ನು ಬರೆದವರು ಅಷ್ಟಾವಧಾನಿ ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜರು.

ಪ್ರವೃತ್ತಿ-ನಿವೃತ್ತಿ ಸಮನ್ವಯಕಾರ ಯಾಜ್ಞವಲ್ಕ್ಯರು ಆದಿಯಾಗಿ ರಾಜತಾಂತ್ರಿಕತೆಯಿಂದ ಭಾರತದ ವರ್ಚಸ್ಸನ್ನು ಎತ್ತರಿಸಿದ ಮೋದಿ ಎಂಬ 32 ಲೇಖನಗಳಲ್ಲಿ 30 ಮಹನೀಯರು ಹಾಗೂ ಎರಡು ಕೃತಿಗಳ ಬಗ್ಗೆ ಇಲ್ಲಿ ಪರಿಚಯಿಸಲಾಗಿದೆ. ವಾಲ್ಮೀಕಿ, ವೇದವ್ಯಾಸರು, ಮೋಹನ ತರಂಗಿಣೀ, ಕನಕದಾಸರು, ಮಧ್ವರು, ಜಗದೀಶ್ ಚಂದ್ರ ಬೋಸ್, ಶ್ರೀನಿವಾಸ ರಾಮಾನುಜನ್, ಶಿವರಾಮ ಕಾರಂತ, ಸರದಾರ ವಲ್ಲಭಬಾಯಿ ಪಟೇಲ್, ಡಾ.ಎಂ.ಪ್ರಭಾಕರ ಜೋಶಿ, ವಿ.ಕೃ.ಗೋಕಾಕ್, ಕುವೆಂಪು, ನೇತಾಜಿ, ಬೇಂದ್ರೆ, ಕೆ.ಎಸ್.ನಾರಾಯಣ ಆಚಾರ್ಯ, ಬಿ.ಆರ್.ಲಕ್ಷ್ಮಣರಾವ್, ಕೆ.ಟಿ.ಗಟ್ಟಿ, ಎಸ್.ಎಲ್.ಭೈರಪ್ಪ, ಪರ್ವ, ಪಾಟೀಲ ಪುಟ್ಟಪ್ಪ,
ಮಾಸ್ತಿ, ತಿಲಕರು, ಬನ್ನಂಜೆ ಗೋವಿಂದಾಚಾರ್ಯ, ಶ್ರೀಕೃಷ್ಣ, ನರೇಂದ್ರ ಮೋದಿ- ಇವು ಇದರಲ್ಲಿನ ಅಧ್ಯಾಯಗಳು. ಈ ಪುಸ್ತಕವನ್ನು ಡಾ.ಕಬ್ಬಿನಾಲೆ ವಸಂತ ಭಾರದ್ವಾಜರು ತುಂಬಾ ಸೂಕ್ಷ್ಮವಾಗಿ ಚೊಕ್ಕದಾಗಿ ಮುನ್ನುಡಿಯಲ್ಲಿ ಪರಿಚಯಿಸಿದ್ದಾರೆ.

ಮುನ್ನುಡಿಯನ್ನು ಓದಿದರೆ ಸಾಕು ಪುಸ್ತಕದ ಹೂರಣ ಅರ್ಥವಾಗುತ್ತದೆ. ಇದೊಂದು ಆಕರ ಗ್ರಂಥದ ರೂಪವನ್ನು ತಳೆದಿದೆ. ಸುಸಂಸ್ಕೃತ ಮನಸ್ಸೊಂದು ಕೃತಿ, ಕೃತಿಕಾರರನ್ನು ಹೇಗೆ ಗ್ರಹಿಸುತ್ತದೆಂಬುದನ್ನು ಇಲ್ಲಿ ಕಾಣಬಹುದು. ಮುನ್ನುಡಿಯಲ್ಲಿ ಕಬ್ಬಿನಾಲೆಯವರು ಬರೆದ ಮಾತಿದು: ತಾರೆಗಳು ಎತ್ತರದ ಬಾನಂಗಳದಲ್ಲಿದ್ದರೂ ಅವುಗಳ ಕಾಂತಿ ನೆಲದವರೆಗೆ ದಕ್ಕುವಂತೆ, ಇಲ್ಲಿಯ ವ್ಯಕ್ತಿ ವಿಚಾರಗಳ ಔನ್ನತ್ಯ ಓದುಗರಿಗೆ ಎಟಕುವಂತಿದೆ. ಉದ್ದ ಮತ್ತು ಅಗಲದ ಪುಟಗಳಿಗೆ ಆಳದ ಆಯಾಮ ವನ್ನು
ನೀಡಿದ ಹೃದ್ಯವಾದ ಗದ್ಯ ಭಟ್ಟರಿಗೆ ಒಲಿದಿದೆ.

ಭಟ್ಟರ ಮತ್ತೊಂದು ಕೃತಿ ‘ಪ್ರಬೋಧ’. ಇದು 51 ಬಿಡಿ ಬರೆಹಗಳ ಚಿಂತನೆಗಳ ಗುಚ್ಛ. ಬೌದ್ಧಿಕ ಜಿಜ್ಞಾಸೆಗಳಿಗೆ ಒಡ್ಡಿಕೊಂಡಿರುವ ಕೃತಿ. ರೋಹಿತ್ ಚಕ್ರತೀರ್ಥ ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರೇ ಹೇಳುವಂತೆ, ನಿರ್ದಿಷ್ಟ ಕ್ರಮದಲ್ಲಿ ಜೋಡಿಸಲಾದ ಈ ಕೃತಿಯ ಬಿಡಿಬರೆಹಗಳು ಒಂದು ಇಡಿತ್ವವನ್ನು (ಅರ್ಥಾತ್ ಪೂರ್ಣತ್ವ) ವನ್ನು ಹೊಂದಿದೆ. ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳನ್ನು ಓದುತ್ತಿದ್ದೇವೆಂಬ ಭಾವನೆಯನ್ನು ತರದೆ ಈ ಎಲ್ಲ ಬರೆಹಗಳೂ ಒಂದು ಸಾತತ್ಯವನ್ನು ಕಾಯ್ದುಕೊಂಡಿವೆ. ಇದು ಗಮನಿಸಬೇಕಾದ ಅಂಶ. ಈ ಮೂರು ಕೃತಿಗಳನ್ನು ಕ್ರಮವಾಗಿ ಮೈಸೂರಿನ ನಿಶಾಂತ್ ಎಂಟರ್ ಪ್ರೈಸಸ್, ಕೃತಿ ಪ್ರಕಾಶನ, ಅಪ್ಸರ ಪ್ರಕಾಶನ ಪ್ರಕಟಿಸಿದೆ.