Thursday, 21st November 2024

ಮತ್ತು ತಂದೀತು ಜೀವಕ್ಕೆ ಕುತ್ತು

ಡಾ ಮುರಲೀ ಮೋಹನ್ ಚೂಂತಾರು

ಇಂದು ನಮ್ಮ ರಾಜ್ಯದಲ್ಲಿ ಎಗ್ಗಿಲ್ಲದೇ ದೊರೆಯುವ ಮಾದಕ ವಸ್ತುಗಳು, ಡ್ರಗ್ಸ್‌‌ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ.
ಕಾನೂನು ಪಾಲಕರ ಕಣ್‌ತಪ್ಪಿಸಿ, ಕಾನೂನು ಬಾಹಿರವಾಗಿ ನಡೆಯುವ ಡ್ರಗ್ಸ್‌ ಸೇವನೆ, ಪ್ರತಿಷ್ಠಿತರ, ಯುವಜನರ,  ಹಣವುಳ್ಳವರ
ಜೀವನಶೈಲಿಯಾಗಿ ಬದಲಾಗುತ್ತಿದೆ!

ಆಧುನಿಕ ಜೀವನ ಶೈಲಿಯನ್ನು ಅನುಕರಿಸುವ ಉತ್ಸಾಹದಲ್ಲಿ, ಪಾರ್ಟಿ ನೆಪದಲ್ಲಿ ಮಾದಕ ವಸ್ತುಗಳನ್ನು ಸೇವಿಸುವವರ ಸಂಖ್ಯೆ ಹೆಚ್ಚಳಗೊಂಡಿದೆ. ಖ್ಯಾತನಾಮರು, ಚಿತ್ರತಾರೆಯರು ಈ ಜಾಲದಲ್ಲಿ ಸಿಕ್ಕಿಬಿದ್ದ ಆರೋಪ ಎದುರಾಗಿದೆ. ಡ್ರಗ್ಸ್‌ ಸಮಸ್ಯೆಗೆ ಪರಿಹಾರವೇನು? ವೈದ್ಯರೊಬ್ಬರ ವಿಶ್ಲೇಷಣೆ ಇಲ್ಲಿದೆ, ಓದಿ.

ಈ ಅಂಕಿ ಅಂಶ ಬೆಚ್ಚಿ ಬೀಳಿಸುವಂತಹದ್ದು. ಸುಮಾರು 200 ಮಿಲಿಯನ್ ಮಂದಿ ಜಗತ್ತಿನೆಲ್ಲೆಡೆ ಮಾದಕ ದ್ರವ್ಯ ವ್ಯಸನದಿಂದ ಬಳಲುತ್ತಿದ್ದಾರೆ! ಜಾಗತಿಕ ವಾಗಿ ಮಾದಕ ದ್ರವ್ಯಗಳಿಗಾಗಿ ಬಳಸುವ ವೆಚ್ಚ ವರ್ಷವೊಂದರಲ್ಲಿ 1,36,500 ಮಿಲಿಯನ್ ಡಾಲರ್! ಅಫೀಮು, ಕೊಕೈನ್, ಹೆರೋಯಿನ್, ಮಾರಿಜುವಾನಾ ಮುಂತಾದ ಮಾದಕ ದ್ರವ್ಯಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ. ಇದರ ದುಷ್ಪರಿಣಾಮಗಳ ಅರಿವಿದ್ದೂ, ಯುವ ಜನತೆ ಮಾದಕ ದ್ರವ್ಯಗಳ ಚಟಕ್ಕೆ ದಾಸರಾಗಿ, ಸರ್ವಸ್ವವನ್ನೂ ಕಳೆದು ಕೊಂಡು ಅನಾರೋಗ್ಯದ ಹಂದರವಾಗಿ ಸಮಾಜಕ್ಕೆ, ಕುಟುಂಬಕ್ಕೆ ಹೊರೆಯಾಗುವುದೇ ಆಧುನಿಕ ಜೀವನಶೈಲಿಯ ಕುಚೋದ್ಯ.

ಎಲ್ಲಾ ಓಕೆ ಗಾಂಜಾ ಯಾಕೆ?

ಇಂದು ನಾವು ಜೀವಿಸುತ್ತಿರುವುದು ಒಂದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಒತ್ತಡವೂ ಬಹಳ. ಈ ಒತ್ತಡದ, ಧಾವಂತದ ಜಗತ್ತಿನಲ್ಲಿ, ಆ ವೇಗಕ್ಕೆ ತಾಳ ಹಾಕಲು ಕಷ್ಟವಾಗಿ ಕೆಲ ಯುವಜನರು ತಪ್ಪುದಾರಿ ಹಿಡಿಯುತ್ತಿದ್ದಾರೆ. ಇಂದಿನ ಜೀವನಶೈಲಿಯಲ್ಲಿ ಮೋಜು, ಮಸ್ತಿ ತಡ ರಾತ್ರಿಯ ಪಾರ್ಟಿ ಇತ್ಯಾದಿಗಳು ಮಾಮೂಲಿಯಾಗಿವೆ. ಈ ಹಂತದಲ್ಲಿ ಯುವ ಜನತೆ, ಹಣ ಉಳ್ಳವರು, ನಟ ನಟಿ ಯರು ದಾರಿ ತಪ್ಪುವುದು ಸಾಮಾನ್ಯ. ಈ ದಿಸೆಯಲ್ಲಿ ಹಿರಿಯರ, ತಂದೆ, ತಾಯಂದಿರ ಆಸರೆ, ಮಾರ್ಗದರ್ಶನ ಅತೀ ಅಗತ್ಯ. ಹದಿ ಹರೆಯದಲ್ಲಿ ಮಕ್ಕಳನ್ನು ಕಾಯದಿದ್ದಲ್ಲಿ ಅನಾಹುತವಾಗುವ ಸಾಧ್ಯತೆಯಿದೆ.

ಅಪೀಮ, ಗಾಂಜಾ, ಕೋಕೇನ್, ಮಾರಿಜುವಾನಾ ಇವೆಲ್ಲಾ ಮಾದಕ ವಸ್ತುಗಳ ಸೇವನೆ ನಮ್ಮ ದೇಶಗಳಲ್ಲಿ ಹಿಂದಿನಿಂದಲೂ ಇದೆ. ಒಮ್ಮೆ ಇದರ ಚಟಕ್ಕೆ ಬಿದ್ದಲ್ಲಿ ಮತ್ತೆ ಹೊರಬರುವುದು ಬಹಳ ಕಷ್ಟ. ಅದನ್ನು ನಿಲ್ಲಿಸಿದರೆ ಆತನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಹಿಂಸೆಯಾಗುತ್ತದೆ. ಹೀಗಾಗಿ ಒಮ್ಮೆ ಅಂಟಿಕೊಂಡ ಚಟಗಳು ಬಿಡದೆ ಆವರಿಸಿಕೊಂಡಿರುತ್ತದೆ.

ಗಾಂಜಾದ ವಿಷಯಕ್ಕೆ ಬಂದರೆ, ಇದು ಸಸ್ಯ ಮೂಲದಿಂದ ತಯಾರಾದ ಮಾದಕವಸ್ತು. ಈಗೀಗ ಹಳ್ಳಿ ಹಳ್ಳಿಗಳಲ್ಲೂ ಇದನ್ನು ಅಕ್ರಮವಾಗಿ ಬೆಳೆಸುತ್ತಿದ್ದಾರೆ. ಅದೇ ರೀತಿ ಸಸ್ಯಮೂಲದಿಂದ ಬಂದಿರುವ ಕೋಕೇನ್, ಮಾರಿಜುವಾನಾ ಮತ್ತು ಹಷೀಷ್
ಕೂಡಾ ಮಾದಕ ದ್ರವ್ಯಗಳೇ. ಈ ಎಲ್ಲಾ ವಸ್ತುಗಳ ಬಳಕೆಯಿಂದ ಮನಸ್ಸು ಉತ್ತೇಜಿತಗೊಳ್ಳುತ್ತದೆ ಮತ್ತು ಅಸ್ವಾದಗೊಳ್ಳುತ್ತದೆ. ಒತ್ತಡದಿಂದ ಬಳಲಿದ ದೇಹ ಮತ್ತು ಮನಸ್ಸಿಗೆ ಭ್ರಮೆ ಮತ್ತು ಭ್ರಾಾಂತಿಗಳನ್ನು ಮಾಡಿಸುತ್ತದೆ. ಮೊದಮೊದಲು ಒಂದು
ಮಾದಕ ದ್ರವ್ಯದ ಬಳಕೆ, ಬಳಿಕ ಎರಡು, ಮೂರು ವಸ್ತುಗಳನ್ನು ಬಳಸತೊಡಗುತ್ತಾರೆ. ಇದನ್ನು ಪಾಲಿಡ್ರಗ್ ಅಬ್ಯೂಸ್ ಎಂದು ಹೇಳುತ್ತಾರೆ. ಕಾಲಕ್ರಮೇಣ ಮಾದಕ ವಸ್ತುಗಳ ಬಳಕೆ ಜಾಸ್ತಿಯಾದಂತೆ, ಶರೀರ ದುರ್ಬಲವಾಗುತ್ತದೆ. ಅಶಕ್ತರಾಗಿ, ಗಳಿಕೆ ಇಲ್ಲದಂತಾಗಿ, ಮನೆಮಠ ಕಳೆದುಕೊಂಡು ಬೀದಿ ಪಾಲಾಗುತ್ತಾರೆ.

ಚಟಕ್ಕೆ ದಾಸರಾಗಿ, ಮಾದಕ ದ್ರವ್ಯ ಸಿಗದಾದಾಗ ಹಣದ ಅವಶ್ಯಕತೆಗಾಗಿ ಕೊಲೆ, ಸುಲಿಗೆ, ಕಳ್ಳತನ ಮಾಡಲೂ ಹೇಸದ ಮನೋ ಸ್ಥಿತಿಗೆ ತಲುಪುತ್ತಾರೆ. ಯುವಜನರ ದಾರಿತಪ್ಪಿಸುವ ರೋಲ್ ಮಾಡೆಲ್ಸ್ ಯುವ ಜನತೆ ಮಾದಕ ದ್ರವ್ಯಗಳ ವ್ಯಸನಕ್ಕೆ ಯಾಕೆ ಬಲಿಯಾಗುತ್ತಾರೆ? ಸ್ನೇಹಿತರು, ಕುಟುಂಬದ ಹಿರಿಯರು, ಗ್ಲಾಮರ್ ಲೋಕದ ರೋಲ್ ಮಾಡೆಲ್ ಗಳು ಮಾದಕದ್ರವ್ಯ ಸೇವಿಸಿದಾಗ ಅವರನ್ನು ಅನುಕರಿಸುತ್ತಾರೆ. ಜೀವನದಲ್ಲಿ ಬೇಜಾರು ಕಳೆಯಲು ಮತ್ತು ಕಿಕ್ ಸಿಗಬೇಕೆಂದು ಯುವಜನತೆ ಮಾದಕದ್ರವ್ಯಕ್ಕೆ ಜೋತು ಬೀಳುತ್ತಾರೆ. ಕೈಯಲ್ಲಿ ಕಾಸಿದ್ದು, ಮಾಡಲು ಕೆಲಸವಿಲ್ಲದಾಗ, ಏಕತಾನತೆ ಕಳೆಯಲು, ತಮ್ಮದೇ ಆದ ಕಲ್ಪನಾ ಪ್ರಪಂಚ ವೊಂದನ್ನು ಸೃಷ್ಟಿಸಿಕೊಳ್ಳಲು ಮಾದಕ ದ್ರವ್ಯಗಳನ್ನು ಬಳಸಲು ಆರಂಭಿಸುತ್ತಾರೆ.

ಕ್ರಮೇಣ ಅದುವೇ ಚಟವಾಗಿ ಮಾರ್ಪಡಾಗುತ್ತದೆ. ಮಾದಕ ದ್ರವ್ಯಗಳಿಂದ ದೊರಕುವ ಉನ್ಮಾದ ನಿಜ ಜೀವನದಲ್ಲಿ ಸಿಗದಾಗ ಈ ಮತ್ತಿನ ಪರಾಕಾಷ್ಠೆಯ ಹುಡುಕಾಟ ನಿರಂತರವಾಗುತ್ತದೆ. ಈ ಹುಡುಕಾಟದ ಧಾವಂತದಲ್ಲಿ ಮಾದಕ ದ್ರವ್ಯದ ಪ್ರಮಾಣ ಮತ್ತು ಉಪಯೋಗ ಜಾಸ್ತಿಯಾಗಿ ವ್ಯಸನವಾಗಿ ಪರ್ಯಾಯವಾಗುತ್ತದೆ.

ವ್ಯಸನಿಗಳನ್ನು ಗುರುತಿಸುವುದು ಹೇಗೆ?

ಹಸಿವಿಲ್ಲದಿರುವುದು, ದೇಹದ ತೂಕ ಕಡಿಮೆಯಾಗುವುದು, ನಿದ್ರಾಹೀನತೆ,  ಮಲಬದ್ಧತೆ, ಸಣ್ಣ ಸಣ್ಣ ವಿಚಾರಕ್ಕೆ ಸಿಡುಕುವುದು, ಮಾನಸಿಕ ಖಿನ್ನತೆ, ಮಾನಸಿಕ ಉದ್ವೇಗ ಇವೆಲ್ಲವೂ ಡ್ರಗ್ಸ್‌ ವ್ಯಸನಿಗಳಲ್ಲಿ ಕಂಡು ಬರುತ್ತದೆ. ವ್ಯಕ್ತಿ ಒಬ್ಬನೆ ತಮ್ಮ ಪಾಡಿಗೆ ತಾನು ಮಾತನಾಡುತ್ತಿರುತ್ತಾನೆ. ಭ್ರಮಾ ಲೋಕದಲ್ಲಿ ತೇಲಾಡುತ್ತಿರುತ್ತಾನೆ. ಕಲಿಕೆಯಲ್ಲಿ ಮುಂದಿದ್ದ ಮಕ್ಕಳು ನಿಧಾನವಾಗಿ ತನ್ನ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ.

ಪರಿಹಾರವೇನು?

ಹದಿಹರೆಯದಲ್ಲಿ ಬೆಳೆಯುವ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಅತಿಯಾದ ಒತ್ತಡ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸಬಾರದು. ಮಕ್ಕಳ ಮೇಲೆ ವಿಪರೀತ ಒತ್ತಡ ಬೀಳದಂತೆ ನೋಡಿಕೊಳ್ಳ ಬೇಕು. ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅನಗತ್ಯವಾಗಿ ಅವರಿಗೆ ಬೈದು, ಹೊಡೆದು, ಬುದ್ಧಿ ಹೇಳುವುದನ್ನು ಬಿಟ್ಟು, ಆಪ್ತಮಿತ್ರರಂತೆ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಅವರಿಗೆ ಸೂಕ್ತ ಸಾಂತ್ವನ ಕೊಡಬೇಕು. ಇದು ತಂದೆ ತಾಯಿಂದಿರ ಆದ್ಯ ಧರ್ಮ. ಮಕ್ಕಳನ್ನು ಅತಿಯಾಗಿ ಮುದ್ದುಮಾಡಿ, ಕೈತುಂಬಾ ಹಣ ನೀಡಿ, ಕೇಳಿದ್ದೆೆಲ್ಲಾ ಕೊಡಿಸಿದಲ್ಲಿ, ದಾರಿ ತಪ್ಪುವ ಎಲ್ಲಾ ಸಾಧ್ಯತೆ ಇರುತ್ತದೆ. ಅವರ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಗೆ ಮೀರಿದ ಗುರಿಗಳನ್ನು ಸಾಧಿಸುವಂತೆ ಒತ್ತಡ ತಂದಲ್ಲಿ ವ್ಯಕ್ತಿರಿಕ್ತ ಪರಿಣಾಮ ಉಂಟಾಗಬಹುದು.

ತಾವು ಸಾಧಿಸಲಾಗದ ಗುರಿಗಳನ್ನು ತಮ್ಮ ಮಕ್ಕಳಾದರೂ ಸಾಧಿಸಲಿ ಎಂಬ ಹುಂಬತನಕ್ಕೆ ಪ್ರಯತ್ನಿಸಲೇ ಬಾರದು. ನಮ್ಮ ಮಕ್ಕಳ ಸಾಮರ್ಥ್ಯದ ಅರಿವಿನ ಜೊತೆಗೆ, ಹೆತ್ತವರು ತಮ್ಮ ಸ್ಥಾನಮಾನದ ಬಗ್ಗೆ ಹೆಚ್ಚು ಪ್ರಾಶಾಸ್ತ್ಯ ಕೊಡದೆ, ಮಕ್ಕಳನ್ನು ಮ
ಕ್ಕಳ ರೀತಿಯಲ್ಲಿ ಬೆಳೆಸಿದ್ದಲ್ಲಿ ಅವರು ಮುಂದೆ ಸಮಾಜದ ಸತ್ಪ್ರಜೆ ಆಗಬಹುದು. ಇಂದಿನ ಜೀವನಶೈಲಿ, ಕೆಲಸದ ಒತ್ತಡ, ಸಂಬಂಧಗಳಲ್ಲಿನ ಭಾವನಾತ್ಮಕತೆಯ ಕೊರತೆ, ಜೀವನದಲ್ಲಿನ ಜಂಜಾಟಗಳು, ಯಾಂತ್ರೀಕೃತ ಬದುಕಿನ ನೋವು ಮತ್ತು ಸಂಕಟಗಳು, ಆರ್ಥಿಕ ಏರು ಪೇರು, ಇವೆಲ್ಲವೂ ಮೇಳೈಸಿ ಮನಸ್ಸು ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಮನುಷ್ಯ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೆಚ್ಚಿನ ಪ್ರಮಾಣದ ಖಿನ್ನತೆಗೆ ಒಳಗಾಗಿ ಮಾದಕ ದ್ರವ್ಯ ಸೇವಿಸುವುದು ಕಂಡುಬರುತ್ತಿದೆ.

ಚಂಚಲ ಮನಸ್ಸಿನ ಯುವ ಜನತೆಗೆ ಆತ್ಮವಿಶ್ವಾಸ ತುಂಬಬೇಕು. ಮತ್ತು ಒತ್ತಡ ನಿರ್ವಹಿಸಲು ಸಹಕರಿಸಬೇಕು. ಮಾದಕ ವಸ್ತುಗಳ ಮೊರೆ ಹೋಗದಂತೆ ಸರಿಯಾದ ಮಾರ್ಗದರ್ಶನ ನೀಡಬೇಕು.

ಮಾತ್ರೆ ತಿನ್ನುವ ಖಯಾಲಿ

ವೈದ್ಯರು ಕೊಟ್ಟ ಔಷಧಿಯನ್ನು ಖಾಯಿಲೆ ಗುಣವಾದ ಬಳಿಕವೂ ಬಳಸುವ ಖಯಾಲಿ ಕೆಲವು ರೋಗಿಗಳಿಗೆ ಇದೆ. ಒಂದೆಡೆ ಔಷಧಿ ನಿಲ್ಲಿಸಿದರೆ ಖಾಯಿಲೆ ಮರುಕಳಿಸುವುದೆಂಬ ಭಯ, ಮತ್ತೊೊಂದೆಡೆ ಔಷಧಿ ಜಾಸ್ತಿ ಸೇವಿಸಿದಲ್ಲಿ ರೋಗ ಬರುವ ಪ್ರಮೇಯ ಇಲ್ಲ ಎಂಬ ಭ್ರಮೆ. ಈ ಕಾರಣಗಳಿಂದಾಗಿ ಹಲವು ರೋಗಿಗಳು, ವೈದ್ಯರು ಕೆಲವು ವಾರಗಳ ಅವಧಿಗೆ ನೀಡಿದ ಔಷಧಿಯನ್ನು ಜೀವನ ಪರ್ಯಂತ ವೈದ್ಯರ ಅನುಮತಿ ಇಲ್ಲದೆ ಸೇವಿಸುವುದು ದುರಂತವೇ ಸರಿ. ನಮ್ಮ ದೇಶದಲ್ಲಿ ಮೆಡಿಕಲ್ ಶಾಪ್‌ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಎಲ್ಲಾ ಔಷಧಗಳೂ ಸಿಗುವ ಕಾರಣದಿಂದಾಗಿ, ಹಲವು ನಿರೋಗಿಗಳು ಸಹ ಔಷಧಿಗಳ ದಾಸರಾಗಿದ್ದಾರೆ
ಎಂದರೂ ತಪ್ಪಲ್ಲ. ಈ ರೀತಿಯ ಮಾತ್ರೆ ತಿನ್ನುವ ಖಯಾಲಿ ಮಾದಕ ದ್ರವ್ಯಗಳ ವ್ಯಸನದಷ್ಟೇ ಅಪಾಯಕಾರಿ ಮತ್ತು ಅನಾರೋಗ್ಯಕರ.

ಔಷಧವಾಗಿ ಅಪೀಮು

ಅಪೀಮು ಎನ್ನುವುದು ಗಸಗಸೆಯಿಂದ ತಯಾರು ಮಾಡಲಾದ, ಔಷಧೀಯ ಗುಣವುಳ್ಳ ವಸ್ತು. ಅಪೀಮುನಿಂದ ತಯಾರಾದ ಮಾರ್ಫಿನ್ ಎನ್ನುವ ರಾಸಾಯನಿಕ ವಸ್ತುವನ್ನು, ಇಂದಿಗೂ ವೈದಕೀಯ ಶಾಸ್ತ್ರದಲ್ಲಿ ನೋವುನಿವಾರಕ ಚುಚ್ಚುಮದ್ದಿನ ರೂಪದಲ್ಲಿ ಬಳಸಲಾಗುತ್ತದೆ. ಅಫಘಾತದಲ್ಲಿ ಪೆಟ್ಟುಬಿದ್ದಾಗ, ಹೃದಯಘಾತವಾಗಿ ಅತಿಯಾದ ಎದೆನೋವು ಇದ್ದಲ್ಲಿ ನೋವು ನಿವಾರಕವಾಗಿ ಇಂದಿಗೂ ಬಳಸಲಾಗುತ್ತದೆ.

ಇದರಿಂದ ಸಣ್ಣ ಪ್ರಮಾಣದಲ್ಲಿ ನಿದ್ದೆೆಬರಬಹುದು. ಅಪೀಮುನಿಂದ ತಯಾರಿಸಲಾದ ಹೆರಾಯಿನ್ ಎಂಬ ಮಾದಕವಸ್ತು ಕೂಡಾ ಪಾಶ್ಚಾತ್ಯ ದೇಶಗಳಲ್ಲಿ ಹೇರಳವಾಗಿ ಬಳಕೆಯಲ್ಲಿದೆ. ಇದರಿಂದ ಶರೀರದ ನೋವು, ಬಳಲಿಕೆ, ಮಾನಸಿಕ ದುಗುಡ ಕಡಿಮೆಯಾಗಿ ಕ್ಷಣಿಕ ಖುಷಿ ಸಿಗುತ್ತದೆ. ಮನಸ್ಸಿನ ಬೇಸರ, ನಿರಾಸೆ ಎಲ್ಲವೂ ತಗ್ಗಿ ನಿರಾಳವಾಗುತ್ತದೆ. ಈ ಕಾರಣದಿಂದಲೇ ಕೆಲವರು ಹೆರಾಯಿನ್ ಚುಚ್ಚುಮದ್ದನ್ನು ಪದೇಪದೇ ಬಳಸುತ್ತಾರೆ. ಕ್ರಮೇಣ ಚಟವಾಗಿ ಮಾರ್ಪಾಡಾಗುತ್ತದೆ. ಮತ್ತೆ ಮತ್ತೆ ತೆಗೆದುಕೊಳ್ಳ ಬೇಕೆಂಬ ತುಡಿತ ಉಂಟಾಗುತ್ತದೆ. ತೆಗೆದುಕೊಳ್ಳದಿದ್ದಲ್ಲಿ ಆ ಮನುಷ್ಯ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಹುದು.

ಲೈಂಗಿಕ ಆಸೆ ಹೆಚ್ಚಿಸುವ ಹೆರಾಯಿನ್

ಹೆರಾಯಿನ್ ಬಳಕೆಯಿಂದ ಲೈಗಿಂಕ ಆಸೆ ಹೆಚ್ಚಾಗುತ್ತದೆ. ಆದರೆ ಲೈಂಗಿಕ ಸಾಮರ್ಥ್ಯ ಕುಗ್ಗುತ್ತದೆ. ಈಚೆಗೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಮಾದಕ ವಸ್ತುಗಳ ಬಳಕೆ ಒಂದು ಕಾರಣ. ಅಪೀಮು ಮತ್ತು ಹೆರಾಯಿನ್ ಔಷಧೀಯ ಗುಣವುಳ್ಳ ಮಾದಕವಸ್ತು. ಅಕಸ್ಮಾತ್ ಇದರ ಚಟಕ್ಕೆ ಹದಿಹರೆಯದ ಯುವಜನತೆ ಬಿದ್ದಲ್ಲಿ, ಅದರಿಂದ ಹೊರಬರಲು ಆಪ್ತಸಲಹೆ ಮತ್ತು ಸೂಕ್ತ ಚಿಕಿತ್ಸೆ ಅಗತ್ಯ.