Thursday, 12th December 2024

ನಾವು ಏರುವ ದುರ್ಗ

ಭಾವಾನುವಾದ: ಡಾ.ಮೈ.ಶ್ರೀ.ನಟರಾಜ

20 ಜನವರಿ 2021 ರಂದು ಅಮೆರಿಕದ ನೂತನ ಅಧ್ಯಕ್ಷ ಬೈಡನ್ ಉಪಾಧ್ಯಕ್ಷೆಯಾಗಿ ಹ್ಯಾರಿಸ್ ವಚನ ಸ್ವೀಕಾರದ ಸಂದರ್ಭದಲ್ಲಿ ಅಮೆರಿಕದ ತರುಣಿ ಕವಯಿತ್ರಿ ಅಮ್ಯಾಂಡ ಗೋರ್ಮನ್ ಓದಿದ ಕವಿತೆ.

ಬೆಳಗಾಗ, ನಮ್ಮ ನಿತ್ಯದ ಸ್ವಗತ ‘ಮುಗಿಯದ ಕತ್ತಲಲಿ ಬೆಳಕನೆಂತು ಕಂಡೇವು?’ ‘ನಷ್ಟದ ಭಾರವನು ಹೇಗೆ ಹೊತ್ತೇವು?’
‘ಸಾಗರವ ಸೀಳಿ ಎಂತು ನಡೆದೇವು?’ಹೆಬ್ಬುಲಿಯ ತಬ್ಬಿ ಧೈರ್ಯದಲಿ ನಿಂದೇವು?॥ ‘ನಿಶ್ಶಬ್ದವೆಂದರೆ ಶಾಂತಿ ಎಂದೇನಲ್ಲ’ ಎಂಬು ದನರಿತೆವು.

‘ಆದದ್ದೆಲ್ಲ ನ್ಯಾಯವಲ್ಲ ರೂಢಿಯೆಂದ ಮಾತ್ರಕ್ಕೆ ನ್ಯಾಯ ಸಮ್ಮತವಲ್ಲ’ ನಿರತ ಸ್ವಗತದ ಮೌನದಾಚೆಗೆ ಅರುಣ ಬಂದನು ನಭದ ಅಂಚಿಗೆ॥ ಇನ್ನೇನು ಮುರಿದುಬೀಳುವುದೇನೋ ದೇಶ ಎಂಬುದಕೆ ಸಾಕ್ಷಿಗಳಾದೆವು ಸೊರಗಿ ಮಳೆಯಲಿ ನೆಂದು ಬಿಸಿಲಲಿ ಒಣಗಿ ಛಳಿಯಲಿ ನಡುಗಿ ಹೇಗೋ ಸಹಿಸಿಕೊಂಡೆವು.

ದೇಶ ಮುರಿದುಬೀಳಲಿಲ್ಲ ದಿಟ, ಆದರೆ ಕಟ್ಟುವ ಕೆಲಸ ಇನ್ನೂ ಮುಗಿದಿಲ್ಲ॥ ರಾಷ್ಟ್ರದ ವಂಶೋದ್ಧಾರಕರು ಯುಗವ ಹೊತ್ತು ಮುನ್ನಡೆವವರು ನಾವು ಇಲ್ಲಿ ಒಬ್ಬಳು ತೆಳುವು ದೇಹದ ಶಾಮಲೆ ಒಂಟಿ ತಾಯಿ ಬೆಳೆಸಿದ ಕೋಮಲೆ ಗುಲಾಮರ ಗೋತ್ರದ ಕೂಸು ಅಬಲೆ ರಾಣಿಯಾಗುವ ಕನಸ ಕಾಣಬಲ್ಲವಳು ಪಟ್ಟಾಭಿಷೇಕದಲಿ ರಾಜನೆದುರಲಿ ನಿಂದು ಕವಿತಾವಾಚನವ ಮಾಡುತಿಹಳಿಂದು॥

ಹೌದು ನಾವು ಕಟ್ಟಿದ ದೇಶಕ್ಕಿನ್ನೂ ಬಂದಿಲ್ಲ ಹೊಳಪು ಅದು ಪರಿಶುದ್ಧವೂ ಅಲ್ಲ, ಇರಬಹುದು ಬಿಳುಪು ಆದರೇನಂತೆ? ಪರಿ ಪೂರ್ಣದೇಶವಿದೆಂದು ನಾವೆಂದೂ ಸಾರಿಲ್ಲವಲ್ಲ ಪರಿಪೂರ್ಣತೆಯತ್ತ ಸಾಗುವುದಷ್ಟೇ ಒಕ್ಕೂಟ ರಚಿಸಲು ಹೊರಟವರ ಧ್ಯೇಯ ಎಲ್ಲ ಸಂಸ್ಕೃತಿಗಳ ಮೇಳೈಸುವ ಬದ್ಧತೆ ಎಲ್ಲ ಬಣಗಳ, ಬಣ್ಣಗಳ, ನಡತೆಗಳ, ಆಯ್ಕೆಗಳ ಒಕ್ಕೂಟ ಅದಕೇ ಇಂದು ತಲೆಯೆತ್ತಿ ದಿಟ್ಟಿಸೋಣ  ನಮ್ಮ ನಡುವಿನ ಗೋಡೆಯನಲ್ಲ ನಮ್ಮೆದುರು ನಿಂದಿರುವ ಬಂಡೆಯನ್ನು॥

ವಿಭಜನೆಗಳ ಕೂಡಿಸುತ ಭಿನ್ನಮತಗಳ ಕಡೆಗಣಿಸುತ್ತ ನಾಡಿನ ನಾಳಿನ ಭವಿತವ್ಯಕ್ಕೆ ಮುಂದೆ ಸಾಗೋಣ ಅಸ್ತ್ರಗಳ ಕೆಳಗಿಟ್ಟು ಹಸ್ತಲಾಘವಕೆ ಕೈಯ ಚಾಚೋಣ ಯಾರೊಂದಿಗೂ ಬೇಡ ಆಕ್ರೋಶ ಎಲ್ಲರೊಂದಿಗು ಇರಲಿ ವಿಶ್ವಾಸ ನೋಡುತಿಹ ವಿಶ್ವ ಹೇಳಲಿ ಈಗ ಸತ್ಯವೆಂದು ಸಾರಲಿ ಬೇಗ ಕಣ್ಣೀರ ಸುರಿಸಿದರೂ ತಲೆಯೆತ್ತಿ ಬೆಳೆದಿಹೆವೆಂದು ನೋವಿನಲಿ ಬೆಂದರೂ ಭರವಸೆಯ ಹೊತ್ತಿಹೆ ವೆಂದು ಸೋತು ಸುಣ್ಣವಾದರೂ ಯತ್ನವನು ಬಿಡದಿಹೆವೆಂದು ಐಕ್ಯತೆಯ ಬಂಧನದಿ ಜಯಭೇರಿ ಹೊಡೆದಿಹೆವೆಂದು॥

‘ಮುಂದೆಂದೂ ಸೋಲಕಾಣೆವು’ ಎಂದೇನೂ ಅಲ್ಲ ಆದರೆ ವಿಭಜನೆಯ ಬೀಜವನು ಬಿತ್ತದಿರೋಣ ನಾವೆಂದು ಶಾಸ್ತ್ರಗಳು ಸಾರುತಿವೆ ತಿಳಿದುಕೊಳ್ಳಿ ಕುಳಿತಿಹೆವು ಸುತ್ತಿಕೊಂಡು ಮೈಮೇಲೆ ಬಳ್ಳಿ ಮುಚ್ಚಿಕೊಳ್ಳಲು ಉಂಟು ಅಂಜೂರದೆಲೆ ಇರಿ ಯಾರೂ ಯಾರನೂ ಭಯಪಡಿಸದೆಲೆ॥

ನಮ್ಮ ಕಾಲದಿ ನಾವೇ ಬಾಳಲುಬೇಕು ಕತ್ತಿಯಲುಗಲಿ ಇಲ್ಲ ಜಯದ ಝಲಕು ಕಟ್ಟಿದ ಸೇತುಗಳೆ ನಮಗೆ ಮುಂದಿನ ದಾರಿ ನಾವು ಏರುವ ದುರ್ಗ ಛಾತಿಯಿದ್ದರೆ ಏರಿ ಅಮೆರಿಕದ ಪ್ರಜೆ ಆಗಿರುವುದೆಂದರೆ ಹಿರಿಯರು ಕೊಟ್ಟ ಕೃಪೆಗೆ ಹೆಮ್ಮೆಪಡುವುದಷ್ಟೇ ಅಲ್ಲ
ಅದು ನಾವು ಭೂತಕಾಲಕ್ಕಿಡುವ ಹೆಜ್ಜೆ ಅಂದಿನ ದುರಂತಗಳ ತಿದ್ದುವ ಮಜ್ಜೆ॥

ರಾಷ್ಟ್ರವನು ಹಂಚಿಕೊಳ್ಳುವ ಬದಲು ಪುಡಿಮಾಡುವ ದೈತ್ಯಶಕ್ತಿಯನು ಕಂಡೆವಷ್ಟೆ? ಪ್ರಜಾತಂತ್ರವನೆ ರದ್ದುಗೊಳಿಸಲು ಹೊರಟವರು ಇನ್ನೇನು ಜಯವ ಗಳಿಸಿಯೇಬಿಟ್ಟಿದ್ದರಲ್ಲ ಅದು ತಾತ್ಕಾಲಿಕ ಜಯವಿರಬಹುದು ಸಾರ್ವಕಾಲಿಕವಾಗಲಾರದು ಅದೆಂದು ಈ ನಿಜವ ನಂಬೋಣ ನಂಬುಗೆಯ ನಂಬೋಣ॥

ನಮ್ಮ ಕಣ್ಣಿರಲು ಬರುವ ನಾಳಿನ ಮೇಲೆಇತಿಹಾಸ ನೋಡುತಿದೆ ನಮ್ಮನಿಂದು ಕೂಡಿಟ್ಟ ಪಾಪಗಳ ತೊಳೆದು ಕಳೆಯುವ ಕಾಲ
ಅದು ಹುಟ್ಟಿದಂದು ನಾವು ನಡುಗಿದ್ದೆವು ಎಂಥ ನಡುಗಿಸುವ ಗಳಿಗೆಯದು ಅವರ ತಪ್ಪಿನ ಹೊರೆಗೆ ಸಿದ್ಧರಾಗದ ನಾವು ಅದರಲೇ ಕಂಡುಕೊಂಡೆವು ಶಕ್ತಿ ಹೊಸ ಅಧ್ಯಾಯ ಬರೆವ ಯುಕ್ತಿ ಮತ್ತೊಮ್ಮೆ ಭರವಸೆಯ ನಗುವ ರಕ್ತಿ॥

‘ಹೇಗೆ ತಾನೇ ಗೆದ್ದೇವು ಇಂಥ ಸಂಕಟವ?’ಎಂದು ಕೊರಗುತಿದ್ದವರು ‘ಸಂಕಟ ನಮ್ಮ ಗೆದ್ದೀತು ಹೇಗೆ?’ ಎಂದು ಬೀಗಿದೆವು ಕಳೆದ ದಿನಗಳ ಕಡೆಗೆ ಮರಳದಿರೋಣ ಎಂದೂ ಬರುವ ದಿನಗಳ ಕಡೆಗೆ ನಡೆಯೋಣವಿಂದು ಗಾಯಗೊಂಡರೂ ದೇಶ ನಿಂದಿ ಹುದು ಇಡಿಯಾಗಿ ಉಳಿದಿದೆ ಇನ್ನೂ ಸನ್ಮಾರ್ಗ, ಧೈರ್ಯ, ರೋಷದಲಿ ಮೆರೆವ ಸ್ವಾತಂತ್ರ್ಯ ಯಾರೂ ಹಿಂದಿರುಗಿಸ ಲಾರರೆಮ್ಮನು ಬೆದರಿಕೆ ಒಡ್ಡಿ ಚದುರಿಸಲಾರರಿನ್ನು ಕರ್ಮಹೀನರಾದರೆ ನಾವು ಇದ್ದಲ್ಲೆ ಬಿದ್ದು ನಿದ್ದೆಹೋದರೆ ನಾವು ಆಗುವೆವು ಮುಂದಿನ ಪೀಳೆಗೆಯ ಶಾಪ ಭವಿಷ್ಯದ ಬಲಹೀನತೆಯ ವಿಲಾಪ ನಮ್ಮ ಹೊರೆ ಆಗುವುದು ಅವರ ಹೊರೆ ಆದರೆ ಈ ಮಾತು ಸತ್ಯ ಕರುಣೆ ಯೊಂದಿಗೆ ಶಕ್ತಿಯಿದ್ದರೆ, ಶಕ್ತಿಯೊಂದಿಗೆ ನ್ಯಾಯವಿದ್ದರೆ ಪ್ರೀತಿಯೇ ಆಗುವುದು ನಮ್ಮ ಆಸ್ತಿ ದೊರಕಾವು ಮಕ್ಕಳಿಗೆ ಜನ್ಮಸಿದ್ಧ ಹಕ್ಕುಗಳು॥

ಆದ್ದರಿಂದಲೆ ಕೇಳಿ ದೇಶವಾಸಿಗಳೆ ಮುಂದಿನ ಪೀಳಿಗೆಗೆ ಬಿಟ್ಟು ಹೋಗೋಣ ಉತ್ತಮ ದೇಶ ನಮಗೆ ದಕ್ಕಿದ್ದಕ್ಕಿಂತಲೂ ಉತ್ತಮ ದೇಶ ಇದು ನನ್ನೆದೆಯ ಮಿಡಿತದ ಘಂಟಾಘೋಷ ಘಾಸಿಗೊಂಡಿಹ ವಿಶ್ವವನು ವಾಸಿಗೊಳಿಸೋಣ ಪಶ್ಚಿಮದ ಸ್ವರ್ಣದುರ್ಗ ಗಳಿಂದ ಏರೋಣ ಪೂರ್ವಜರ ಕ್ರಾಂತಿಯ ಈಶಾನ್ಯದಿಂದ ಗಾಳಿಯಂತೇರೋಣ ವೇಗದಿಂದ ಸುಂದರ ಸರಸಿಗಳ ನಗರಮಾರ್ಗದಿ ಹೊರಟು ಮೇಲೆ ಮೇಲೇರೋಣ ಮಧ್ಯಪಶ್ಚಿಮದಿಂದ ಸುಡುವ ಸೂರ್ಯನ ಜೊತೆಗೆ ತೆರೆದ ತೆಂಕಣದಿಂದ ಬಿಸಿಯ ಸೂಸುತಲಿ ಮೇಲಕೇರೋಣ॥

ಕಟ್ಟೋಣ ದೇಶ ಅಳಿಸೋಣ ದ್ವೇಷ ಮತ್ತೊಮ್ಮೆ ಮೇಲೆದ್ದು ತುಂಬೋಣ ಕೋಶ ಮೂಲೆ ಮೂಲೆಗಳಲ್ಲಿಎಲ್ಲೆಲ್ಲು ಹುಡುಕಿ
ಕೋಣೆ ಕೋಣೆಗಳಲ್ಲಿ ಬಿಡದೆಲೆ ತಡಕಿ ವಿವಿಧತೆಯ ಸಾಕಾರ ಸುಂದರ ಸುಶೀಲರನು ತುಳಿತದಲಿ ತಗ್ಗಿರುವ ತರತರದ ತರಳರನು
ಎಲ್ಲರನು ಕೂಡಿಸುತ ಹೊರಡಿ ಮೆರವಣಿಗೆ॥

ಆದಾಗ ಬೆಳಗು ತೊಲಗುವುದು ಕತ್ತಲು ಕಣ್ಮರೆಯಾಗುವುದು ಉರಿವ ಬೆಂಕಿಯ ನೆಳಲು ನಿರ್ಭಯದಿ ಉಬ್ಬುವುದು ಅರುಣನು ದಯದ ಛಾಯೆ ಸ್ವಾತಂತ್ರ್ಯದಾರತಿಗೆ ಮುಳುಗುವುದು ಮಾಯೆ ಜ್ಯೋತಿ ಎಂಬುದು ಅಮರ ತಿಳಿಯಿರಿಷ್ಟೆ ಅದನು ನೋಡುವ ಕಣ್ಗಳಿರಬೇಕು ಅಷ್ಟೆ ಜ್ಯೋತಿಯೇ ಆಗುವ ಧೈರ್ಯ ಇರಬೇಕು ನಿಷ್ಠೆ॥