Sunday, 15th December 2024

ಇ ಪ್ರದರ್ಶನಗಳ ಲೋಕದಲ್ಲಿ…

ಇಂದಿನ ಅಂತರ್ಜಾಲಾಧಾರಿತ ಪ್ರದರ್ಶನ ಯುಗದಲ್ಲಿ, ತಂತ್ರಜ್ಞಾನದ ಲಾಭಗಳನ್ನು ಉಪಯೋಗಿಸಿಕೊಂಡು, ಅದು ಕಲೆ ಯನ್ನು ಕಬಳಿಸದಿರುವ ವಿಧಾನಗಳನ್ನು ನಾವು ಹುಡುಕಬೇಕಾಗಿರುವುದು ಕಲಾ ಜಗತ್ತಿನ ಈ ಹೊತ್ತಿನ ತುರ್ತು.

ಡಾ.ಕೆ.ಎಸ್.ಪವಿತ್ರ

ರಂಗಮಂದಿರಗಳು ನಿಧಾನವಾಗಿ ತೆರೆಯುವ ಸುದ್ದಿ ಪತ್ರಿಕೆಗಳಲ್ಲಿ ಮೊದಲಾಗುತ್ತಿದೆ. ಕಳೆದ ಆರು ತಿಂಗಳುಗಳಲ್ಲಿ ಚಿಕ್ಕ ಕಂಪ್ಯೂಟರ್, ಮೊಬೈಲ್ ತೆರೆಗಳೇ ವೇದಿಕೆಗಳಾಗಿ, ಜಗತ್ತೇ ರಂಗಮಂದಿರವಾಗಿವುದನ್ನು ನೆನೆಸಿಕೊಂಡರೆ ಒಮ್ಮೆಲೇ ಅಚ್ಚರಿ-ಆತಂಕ ಗಳೆರಡೂ ಮೂಡುತ್ತವೆ. ಇನ್ಸ್ಟಾಗ್ರಾಂ, ಫೇಸ್‌ಬುಕ್, ಯೂಟ್ಯೂಬ್ ಮತ್ತು ಜೂಮ್‌ಗಳಲ್ಲಿ ವಿವಿಧ ಕಲಾಪ್ರದರ್ಶನಗಳ ಮಹಾಸ್ಫೋಟವೇ ಆಗಿದೆ.

ಇಂತಹ ‘ಮಹಾಸ್ಫೋಟ’ ನಮ್ಮ ‘ಕಲೆ’ಯ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವ ಸಾಧ್ಯತೆ ಎಷ್ಟು? ಹೊಸ ಅವಕಾಶಗಳನ್ನು, ಹೊಸ ಪ್ರವೃತ್ತಿಗಳನ್ನು ಅದು ಸೃಷ್ಟಿಸಬಹುದೆ? ಅಥವಾ ಮತ್ತೆ ಮೊದಲಿನ ನಮ್ಮ ‘ಜೀವಂತ’ ಕಲಾಜಗತ್ತಿಗೆ ಅಂದರೆ, ಪ್ರತ್ಯಕ್ಷ ನೇರ ಕಾರ್ಯಕ್ರಮಗಳಿಗೆ ನಾವು ಮರಳಬಹುದೆ? ಇಂತಹ ಪ್ರಶ್ನೆಗಳನ್ನು ಉತ್ತರಿಸುವ, ಚರ್ಚಿಸುವ ಸಾಹಸಕ್ಕೆ, ಒಬ್ಬ ಕಲಾವಿದೆ ಯಾಗಿ, ಕುತೂಹಲದಿಂದ ವಿದ್ಯಮಾನಗಳನ್ನು ಅವಲೋಕಿಸುವ ವ್ಯಕ್ತಿಯಾಗಿ ಕೈ ಹಾಕಿದ್ದೇನೆ.

ಕಲಾವಿದೆಯಾದರೂ, ಸಾರ್ವಜನಿಕ ರಂಗದಲ್ಲಿ ಕ್ರಿಯಾಶೀಲಳಾದರೂ ಸಾಮಾಜಿಕ, ಮಾಧ್ಯಮಗಳಿಂದ ದೂರವೇ ಉಳಿದವಳು ನಾನು. ‘ಫೇಸ್‌ಬುಕ್ ಲೈವ್’ ಎಂಬ ಉಪನ್ಯಾಸಗಳನ್ನು ಈ ಹಿಂದೆ ಕೇವಲ ಮೂರು ಬಾರಿ ಮಾಡಿದ್ದೆ. ಅದೂ ಅದರ ಪ್ರಸಾರ-ತಾಂತ್ರಿಕತೆಯ ಬಗೆಗೆ ಹೆಚ್ಚು ಅರಿವಿರದೆ! ಆದರೆ ಕಳೆದ ಆರು ತಿಂಗಳಲ್ಲಿ ಫೇಸ್‌ಬುಕ್ ಲೈವ್‌ಗಳು, ಜೂಮ್ ಉಪನ್ಯಾಸಗಳು, ಯೂಟ್ಯೂಬ್ ವೀಡಿಯೋಗಳು ನನ್ನ ದಿನಚರಿಯಲ್ಲಿ ಸಹಜವಾಗಿ ಅಡಕವಾಗಿಬಿಟ್ಟಿವೆ.

ಆನ್‌ಲೈನ್ ವೀಡಿಯೋಗಳಲ್ಲಿ ಹುಡುಕಿದರೆ ಬೇಕಷ್ಟು ವೀಡಿಯೋಗಳು ಹೇಗೆ ವೆಬ್ ಕ್ಯಾಮೆರಾದಲ್ಲಿಯೂ ‘ಸುಂದರ’ ವಾಗಿ ಕಾಣಲು ಸಾಧ್ಯವಿದೆ. ವೆಬ್‌ಕ್ಯಾಮೆರಾ, ಮೊಬೈಲ್‌ನ್ನು ಎಲ್ಲಿ ಇಟ್ಟರೆ ಒಳ್ಳೆಯದು, ಬೆಳಕು ಮುಖದ ಮೇಲೆ ಯಾವ ಕಡೆಯಿಂದ ಬೀಳಬೇಕು, ಹೇಗೆ ಮುಖದ ಪ್ರಸಾಧನ ಮಾಡಿಕೊಂಡರೆ ಕಣ್ಣು-ಮೂಗು ಕೆಟ್ಟದಾಗಿ ಕಾಣುವುದಿಲ್ಲ ಎಂಬ ಬಗ್ಗೆ ವಿವರಿಸುತ್ತವೆ. ಇವುಗಳನ್ನು ಒಮ್ಮೆಯಾದರೂ ನೋಡಬೇಕಾದ, ಇಂಟರ್ ನೆಟ್ ಸಂಪರ್ಕದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಪರಿಸ್ಥಿತಿ ಈಗ ನಮ್ಮದು.

ಕಲಾವಿದರಾಗಿ ರಂಗದ ಮೇಲೆ ನರ್ತಿಸುವಾಗ, ಮಾತನಾಡುವಾಗ, ಹಾಡುವಾಗ ನಾವು ಎಚ್ಚರ ವಹಿಸಬೇಕಾದ ವಿವರಗಳೆಲ್ಲವೂ ಈ ಆರು ತಿಂಗಳಲ್ಲಿ ಬದಲಾಗಿವೆ. ಅಂದರೆ ಮೊದಲು ವೇದಿಕೆಯ ಪ್ರದರ್ಶನಗಳಲ್ಲಿ ಸಮಯಕ್ಕೆ ಸರಿಯಾಗಿ ಆರಂಭಿಸುವುದು, ಮುಖ್ಯ ಅತಿಥಿಗಳು, ಪ್ರೇಕ್ಷಕರ ಸಂಖ್ಯೆೆ, ಬೆಳಕು, ಧ್ವನಿ ವ್ಯವಸ್ಥೆಗಳ ಬಗೆಗೆ ತಲೆಕೆಡಿಸಿಕೊಳ್ಳುತ್ತಿದ್ದದ್ದು ಈಗ ಬದಲಾಗಿದೆ.

ಲಾಕ್‌ಡೌನ್‌ನ ಆರಂಭದಲ್ಲಿ ಇವೆಲ್ಲವೂ ರೂಢಿಯಿರದಿದ್ದರೂ, ಕಲಾವಿದರು ಈಗ ಕಲಿತು, ಪರಿಣತಿಯತ್ತ ಸಾಗಿದ್ದಾರೆ. ಟಿ.ವಿ.ಯ ರೆಕಾರ್ಡಿಂಗ್, ನೇರ ಕಾರ್ಯಕ್ರಮಗಳನ್ನು ಮಾಡುವಾಗ ಎದುರು ಪ್ರೇಕ್ಷಕರು ಕಾಣದಿದ್ದರೂ ಮಾಡುತ್ತೇವಲ್ಲ, ಆ ರೀತಿಯಲ್ಲಿ ಅಭ್ಯಾಸ ಮಾಡಿಕೊಳ್ಳುವತ್ತ ಮುನ್ನಡೆದಿದ್ದೇವೆ. ಲಾಕ್‌ಡೌನ್‌ನ ಹೊಸತರಲ್ಲಿ ನೃತ್ಯದಂತಹ ಪ್ರದರ್ಶನ ಕಲೆಗಳಿಗೆ ಕಾರ್ಯಕ್ರಮ ಗಳೇ ಇಲ್ಲದ ಪರಿಸ್ಥಿತಿಯಿಂದ, ನಮ್ಮ ಕಲಾಜಗತ್ತಿಗೆ ಏನಾಗಿಬಿಡುತ್ತದೆಯೋ ಎಂಬ ಆತಂಕ ಕಾಡಿತ್ತು.

ಕ್ರಮೇಣ ಫೇಸ್‌ಬುಕ್ ನಂತಹ ಮಾಧ್ಯಮಗಳು ಮತ್ತಷ್ಟು ಪ್ರಬಲವಾಗಿ ಕಲೆಯನ್ನು ಬೆಳೆಸಬಲ್ಲವು ಎಂಬ ಅರಿವು ಮೂಡತೊಡ ಗಿತು. ವೇದಿಕೆಯ ಕಾರ್ಯಕ್ರಮ- ರಂಗಮಂದಿರದ ಖರ್ಚಿಲ್ಲ, ಮನೆಯಲ್ಲಿಯೇ ಒಂದಷ್ಟು ಜಾಗವನ್ನು ಸ್ಟುಡಿಯೋ ಹಾಗೆ ಮಾರ್ಪಡಿಸಿಕೊಂಡರೆ ಸಾಕು. ಪ್ರಯಾಣದ ಖರ್ಚೂ ಇಲ್ಲ. ಎಷ್ಟು ಪ್ರೇಕ್ಷಕರು ನೇರ ಪ್ರಸಾರದಲ್ಲಿರುತ್ತಾರೆ ಎಂಬುದರ ಕಾಳಜಿಯೂ ಬೇಕಿಲ್ಲ.

ಏಕೆಂದರೆ ಅಂತರ್ಜಾಲದಲ್ಲಿ ಯಾವಾಗಲೂ ಉಳಿಯುವ ಕಾರ್ಯಕ್ರಮವನ್ನು ಯಾರು, ಯಾವಾಗ ಬೇಕಾದರೂ ವೀಕ್ಷಿಸಲು ಸಾಧ್ಯವಿದೆ. ಕುತೂಹಲಕ್ಕೆ ಎಷ್ಟು ಕಾಮೆಂಟ್ಸ್‌, ಎಷ್ಟು ‘ವ್ಯೂ’ಸ್, ಎಷ್ಟು ಲೈಕ್ಸ್‌ ಎಂಬುದನ್ನು ನೋಡಲಂತೂ ಸಾಧ್ಯವಿದೆ.
ಜೊತೆಗೇ ವೇದಿಕೆಯ ಮೇಲೆ ಸಾಧ್ಯವಾಗದಂತಹ ಇನ್ನು ಕೆಲವು ಉಪಯೋಗಗಳೂ ಇಲ್ಲಿವೆ. ಕಲೆಯ ಬಗೆಗೆ ಅಧ್ಯಯನ ಮಾಡಿ ಸಂಶೋಧನೆ ಮಾಡಿ, ಉಪಯುಕ್ತ ಮಾಹಿತಿ ನೀಡಬಲ್ಲ ಹಲವು ಸಂಶೋಧಕರು ಕಲಾಜಗತ್ತಿನಲ್ಲಿದ್ದಾರೆ. ಅವರು ವೇದಿಕೆಯ ಮೇಲೆ ಕೇವಲ ಭಾಷಣ ಮಾಡುವ ಸೀಮಿತತೆಯನ್ನು ಇಂದು ದಾಟಿ, ದೃಶ್ಯ -ಶ್ರವಣ ಮಾಧ್ಯಮಗಳನ್ನು ಸಶಕ್ತವಾಗಿ ದುಡಿಸಿ ಕೊಂಡು, ತಮ್ಮ ಜ್ಞಾನವನ್ನು ಫೇಸ್ ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವುದು ಸಾಧ್ಯವಾಗಿದೆ.

ಕೈಕೊಡುವ ಅಂತರ್ಜಾಲ ಸಾಮಾಜಿಕ ಮಾಧ್ಯಮಗಳಲ್ಲಿ ಬಹು ಮುಖ್ಯ ತೊಡಕು ಅಂತರ್ಜಾಲ ಸಂಪರ್ಕಕ್ಕೆ ಸಂಬಂಧಿಸಿದ್ದು. ಇದ್ದಕ್ಕಿದ್ದಂತೆ ‘ಫ್ರೀಜ್’ ಆಗಿ ಬಿಡುವುದು, ಚಿತ್ರ ಬಂದರೆ ಧ್ವನಿ ಬಾರದಿರುವುದು, ಧ್ವನಿ ಬಂದರೆ ಚಿತ್ರ ಬಾರದಿರುವುದು, ತಡವಾಗಿ ನಮಗೆ ತಲುಪುವಂತೆ ಮಾಡುವ ‘ಲ್ಯಾಗ್’ ಇವು ಅಂತರ್ಜಾಲವನ್ನು ಇಂಥ ಕಾರ್ಯಕ್ರಮಗಳನ್ನು ನಡೆಸಲು ಅವಲಂಬಿಸುವು ದಕ್ಕೇ ಭಯ ತರಿಸಬಹುದು. ಆದರೂ ಬೇರೆ ಬೇರೆ ಕಂಪೆನಿಗಳ ಮೋಡಮ್‌ಗಳು ಈ ತೊಡಕನ್ನು ಬಹುಶಃ ನಿವಾರಿಸಿವೆ. ಎಫ್.ಬಿ. ಲೈವ್, ಜೂಮ್ ದಾಖಲೆಗಳನ್ನು ನೋಡಿದರೆ ಇದು ಅರಿವಾಗುತ್ತದೆ.

ಜೂಮ್ ಎಂಬ ಆ್ಯಪ್ ನ್ನು ಡಿಸೆಂಬರ್ 2019ರಲ್ಲಿ ಹತ್ತು ಮಿಲಿಯನ್ ಜನ ಉಪಯೋಗಿಸುತ್ತಿದ್ದರೆ, ಏಪ್ರಿಲ್ 2020ರ ವೇಳೆಗೆ ಅದನ್ನು ಬಳಸುತ್ತಿರುವವರ ಸಂಖ್ಯೆ ಬರೋಬ್ಬರಿ 200 ಮಿಲಿಯನ್!

ನನ್ನ ಪ್ರಕಾರ ತಂತ್ರಜ್ಞಾನದ ಈ ಹಠಾತ್ ಬೆಳವಣಿಗೆ, ಉಪಯೋಗಿಸಲೇಬೇಕಾದ ಅನಿವಾರ್ಯತೆಯಿಂದ ಆಗಿರುವ ಅತಿ ದೊಡ್ಡ ಲಾಭವೆಂದರೆ ದೊಡ್ಡ, ಪ್ರತಿಷ್ಠಿತ ವೇದಿಕೆಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಕಲಾವಿದರು, ಯಾರಿಗೂ ಈಗ ಅಂಗೈನಲ್ಲಿ ಸಿಗುತ್ತಾರೆ! ನೇರವಾಗಿ ತಮ್ಮ ಕಲೆಯನ್ನು ಜನಸಾಮಾನ್ಯರಿಗಾಗಿ ಅವರು ಪ್ರದರ್ಶಿಸಲು ಸಾಧ್ಯವಾಗುತ್ತಿರುವುದು, ಅವರೊಡನೆ ಸಹೃದಯರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಸಾಧ್ಯವಾಗಿರುವುದು. ಅರುಣಾ ಸಾಯಿರಾಂ, ಅಲರ್ ಮೇಲರ್‌ವಳ್ಳಿ, ಬಾಂಬೆ ಜಯಶ್ರೀ ಇಂತಹ ಕಲಾವಿದೆಯರೆಲ್ಲರೂ ಇಂದು ತಮ್ಮ ಕಲೆ-ಕಲಿಕೆ -ಕಿರಿಯ ಕಲಾವಿದರಿಗೆ ಕಿವಿಮಾತು ಹೀಗೆ ಜನಮಾನಸಕ್ಕೆ ‘ಹತ್ತಿರ’ ವಾಗುತ್ತಿದ್ದಾರೆ.

ಈ ಹಿಂದೆ ಇದು ಸಾಧ್ಯವಾಗಿರಲಿಲ್ಲವೆಂದಲ್ಲ. ಆದರೆ ಕಾರ್ಯಕ್ರಮಗಳಲ್ಲಿ ಸದಾ ಬಿಡುವಿಲ್ಲದೆ ಮುಳುಗಿರುತ್ತಿದ್ದ ಕಲಾವಿದರಿಗೆ ಸಮಯವಿರಲಿಲ್ಲ, ಎಲೆಕ್ಟ್ರಾನಿಕ್ ಮಾಧ್ಯಮ -ಸೋಷಿಯಲ್ ಮೀಡಿಯಾಗಳನ್ನು ಉಪಯೋಗಿಸಲೇಬೇಕಾದ ಅನಿವಾರ್ಯ ತೆಯೂ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಆದರೆ ಕಲಾಜಗತ್ತಿಗೆ ಲಾಭವೂ ಆಗಿದೆ. ಕೋವಿಡ್ ಇಲ್ಲದಿದ್ದರೆ ಬಾಂಬೆ ಜಯಶ್ರೀ ತನ್ನಣ್ಣನ ಬಳಿ ಅಣ್ಣಮಾಚಾರ್ಯರ ಕೀರ್ತನೆ ಕಲಿಯುವುದನ್ನು ನಾವು ನೋಡಲು ಸಾಧ್ಯವಿತ್ತೆ? ಅಲರ್‌ಮೇಲರ್‌ವಳ್ಳಿಯ
‘ಲಯ-ಲಾಸ್ಯ’ ಎಂಬ ಜೀವನ ಚಿತ್ರದ ಬಗೆಗೆ ಅಲರ್‌ಮೇಲರ್‌ವಳ್ಳಿ ಮತ್ತು ಸಂಕಲ್ಪ್ ಮಿಶ್ರಾ ತಮ್ಮ ಅನುಭವ ಹಂಚಿಕೊಂಡಿ ದ್ದನ್ನು ನೋಡಲು ಸಾಧ್ಯವಿತ್ತೆ? ಸಹೃದಯನಿಗೆ ಹಿಂದೆ ಸಾಧ್ಯವಿರದ, ಒಂದೇ ದಿನದಲ್ಲಿ ಹಲವು ಕಾರ್ಯಕಮಗಳನ್ನು, ಒಂದೆಡೆ
ಕುಳಿತು ಪೈಸಾ ಖರ್ಚಿಲ್ಲದೆ ನೋಡುವ ಸದವಕಾಶ ಇದೀಗ!

ಹೀಗೆ ಪೈಸಾ ಖರ್ಚಿಲ್ಲದೆ, ಆರಾಮವಾಗಿ ಮನೆಯಲ್ಲೇ ಕುಳಿತು ಹಲವು ಕಾರ್ಯಕ್ರಮ ನೋಡಿ ಅಭ್ಯಾಸವಾದ ಪ್ರೇಕ್ಷಕ, ರಂಗ ಮಂದಿರಗಳು ತಮ್ಮ ಪೂರ್ತಿ ‘ಕೆಪಾಸಿಟಿ’ ಯಲ್ಲಿ ತೆರೆದು ಕುಳಿತರೂ, ನೃತ್ಯ, ನಾಟಕ, ಸಂಗೀತ ನೋಡಲು, ಕೇಳಲು ಬರಬಹುದೆ? ಶಾಸ್ತ್ರೀಯ ಕಲೆಗಳು -ನಾಟಕಗಳಿಗೆ ಬೆಂಗಳೂರಿನಂತಹ ನಗರಗಳಲ್ಲಿ ಜನ ಸೇರಿಸಲು ಪಡಬೇಕಾದ ಕಷ್ಟ ಲಾಕ್‌ಡೌನ್‌ಗಿಂತ ಮೊದಲೇ ಕಲಾವಿದರಿಗೆ, ಆಯೋಜಕರಿಗೆ ಗೊತ್ತಿದೆ.

ಈಗಂತೂ, ಕಲಾಸೃಷ್ಟಿಯ ಅತಿವೃಷ್ಟಿಯೇ ತೆರೆಗಳ ಮೇಲಿರುವಾಗ, ದುಡ್ಡು ಕೊಟ್ಟು ಹೋಗಿ ನೋಡುವುದು ಬಿಡಿ,  ‘ಕಾರ್ಯ ಕ್ರಮಕ್ಕೆ ಬನ್ನಿ, ನಾವೇ ದುಡ್ಡು ಕೊಡುತ್ತೇವೆ’ ಎಂದರೂ ಯಾರು ಬರಬಹುದು? ಹೋಗಲಿ, ಸೋಶಿಯಲ್ ಮೀಡಿಯಾ ಗಳಲ್ಲಿಯೇ ಕಾರ್ಯಕ್ರಮಗಳನ್ನು ಮಾಡುವುದನ್ನೇ ಮುಂದುವರೆಸೋಣ ಎಂದು ಕಲಾವಿದರು ನಿರ್ಧಾರ ಮಾಡಿದರೆನ್ನಿ. ಗುಣಮಟ್ಟದ ಪ್ರೇಕ್ಷಕರ ಗ್ಯಾರಂಟಿ ಅಲ್ಲೂ ಇಲ್ಲ. ಉದಾಹರಣೆಗೆ ಕೆಲವು ಗುಣಮಟ್ಟದ ಸ್ಟುಡಿಯೋಗಳು ಸುರಕ್ಷಿತ ಜಾಗ’ಗಳನ್ನು ಸೃಷ್ಟಿಸಿ, ತಂತ್ರಜ್ಞಾನವನ್ನೂ ಸುಗಮಗೊಳಿಸಿ, ರಂಗಪ್ರವೇಶಗಳನ್ನೇ ನೇರ ಹಿಮ್ಮೇಳದೊಂದಿಗೆ ಮಾಡಿಸುವ ವ್ಯವಸ್ಥೆಯನ್ನೇನೋ
ಮಾಡಿವೆ.

ಈ ‘ಸುರಕ್ಷಿತ ಜಾಗ’ದಲ್ಲಿ 10-12 ಪ್ರೇಕ್ಷಕರಿಗಷ್ಟೇ ಅವಕಾಶ. ಆದರೆ ಎಷ್ಟು ಜನರಿಗಾದರೂ ಅವಕಾಶವಿರುವ ಈ ಕಾರ್ಯಕ್ರಮಗಳ ‘ನೇರಪ್ರಸಾರ’ -‘ಲೈವ್ ಸ್ಟ್ರೀಮ್’ ಗಳಲ್ಲಿ ನೋಡುವವರ ಸಂಖ್ಯೆ 20-25! ಆ ಮೇಲೆ ಒಂದೆರಡು ದಿನಗಳಲ್ಲಿ ನೋಡಿದವರ ಸಂಖ್ಯೆ ಸಾವಿರ ದಾಟಬಹುದು. ಆದರೆ ಅವರಲ್ಲಿ ಒಂದು ನಿಮಿಷ ಕಣ್ಣು ಹಾಯಿಸಿದವರೂ, ನೋಡಿದವರು ಎಂಬ ಅರ್ಹತೆ ಗಳಿಸಿ ದಾಖಲಾಗಿ ಬಿಡುತ್ತಾರೆ ಎಂಬುದನ್ನು ಗಮನಿಸದಿರಲು ಸಾಧ್ಯವಿಲ್ಲ.

ಗುಣಮಟ್ಟ ಮತ್ತು ಸಂಭಾವನೆ ತಾಂತ್ರಿಕ ಕಲಾ ಜಗತ್ತಿನ ಈ ಹೊತ್ತಿನ ಬಹು ಮುಖ್ಯ ಪ್ರಶ್ನೆಗಳು. ಯಾರೂ ಕಾರ್ಯಕ್ರಮ ಮಾಡ ಬಹುದಾದ, ಅರ್ಹತೆಯ ಅಗತ್ಯವೇ ಇರದ, ಪರಿಣತರು-ಅನನುಭವಿಗಳು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಪರಿಸ್ಥಿತಿ. ಈ ಕಾರ್ಯಕ್ರಮಗಳ ‘ಬೆಲೆ’ಯೂ ಅಷ್ಟೆ. ‘ಸಂಗೀತ ಸಭಾ’ ವೊಂದು ‘ಗೌರವ ವೀಕ್ಷಣೆ’ ಎಂದು ಆರಂಭಿಸಿದ್ದು, ಮತ್ತೆ ಮತ್ತೆ ಲಾಗ್ ಇನ್ ಆಗುವ ಪ್ರೇಕ್ಷಕರಿಗೆ ‘50 ರೂ. ಈ ನಂಬರ್‌ಗೆ ಹಾಕಿ’ ಎನ್ನುವ ಬೇಡಿಕೆಗಳು ಪ್ರೇಕ್ಷಕರನ್ನು  ಕಡಿಮೆಯಾಗಿಸಿ ಬಿಡುತ್ತಿಿದೆ!

ಕಲೆಯ ಗುಣಮಟ್ಟ ಮತ್ತು ಅದರ ಬೆಲೆಯನ್ನು ಉಳಿಸಿಕೊಳ್ಳುವ ಚಳುವಳಿಯೇ ನಡೆಯಬೇಕಾಗಿದೆ. ತಂತ್ರಜ್ಞಾನದ ಲಾಭ ಗಳನ್ನು ಉಪಯೋಗಿಸಿಕೊಂಡು, ಅದು ಕಲೆಯನ್ನು ಕಬಳಿಸದಿರುವ ವಿಧಾನಗಳನ್ನು ನಾವು ಹುಡುಕಬೇಕಾಗಿರುವುದು
ಕಲಾ ಜಗತ್ತಿನ ಈ ಹೊತ್ತಿನ ತುರ್ತು.