ವಿದ್ಯಾ ಶಂಕರ್ ಶರ್ಮ
ನಡೆಯುವ ದಾರಿಯಲ್ಲಿ ಎಡವುದು ಸಹಜ. ಅದು ಒಂದು ರೀತಿಯ ಪುಟ್ಟ ಸೋಲು. ಅಂತಹ ಸೋಲಿನ ಅನುಭವವೇ ಮುಂದೆ ಗುರಿಯನ್ನು ತಲುಪಲು ಅವಕಾಶ ಮಾಡಿಕೊಡುತ್ತದೆ.
ನಾವೆಲ್ಲರೂ ಜೀವನದಲ್ಲಿ ಯಶಸ್ಸನ್ನೇ ಬಯಸುತ್ತೇವೆ. ಆ ಪ್ರಯತ್ನದಲ್ಲಿ ಸಣ್ಣ ಸೋಲನ್ನೂ ಮನಸ್ಸು ಒಪ್ಪುವುದಿಲ್ಲ. ಆದರೆ ನಾವು ಸೋಲಿನಿಂದ ಕಲಿತಷ್ಟು ಪಾಠ ವನ್ನು ಗೆಲುವಿನಿಂದ ಕಲಿಯುವುದಿಲ್ಲ. ಸೋಲಿನ ನಂತರದ ಗೆಲುವು ತುಂಬ ಚೆನ್ನಾಗಿರುತ್ತದೆ, ಅದನ್ನು ಮನಸಾರೆ ಅನುಭವಿಸುತ್ತೇವೆ. ಬರಿಯ ಗೆಲುವೊಂದನ್ನೇ ಕಂಡ ವ್ಯಕ್ತಿಗೆ ಈ ಖುಷಿಯ ಭಾಗ್ಯ ಇರುವುದಿಲ್ಲ. ಈ ಸೋಲು ಗೆಲುವಗಳ ಹಾವು ಏಣಿ ಆಟ ನಮ್ಮಲ್ಲಿ ಒಂದು ಪ್ರಶ್ನೆ ಯನ್ನು ಹುಟ್ಟು ಹಾಕುತ್ತದೆ. ನಮ್ಮ ನಂಬಿಕೆ, ಸೋಲು, ಗೆಲುವು, ಇವೆಲ್ಲ ಒಂದಕ್ಕೊಂದು ಕೊಂಡಿಯೇ? ಈ ಪ್ರಶ್ನೆಗೆ ಕಾರಣವೂ ಇಲ್ಲದಿಲ್ಲ. ಸೋಲಿನ ಸಂದರ್ಭದಲ್ಲಿ ನಾವು ಸಹಜವಾಗಿ ದೇವರ ಮೊರೆ ಹೋಗುತ್ತೇವೆ, ವಿನೀತ ರಾಗುತ್ತೇವೆ.
ದೇವರೆಂಬ ಅದ್ಭುತ ಶಕ್ತಿ ನಮಗೆ ಆಸರೆಯಾಗುತ್ತದಯೆಂಬ ನಂಬಿಕೆ ನಮಗೆ ಆಶಾಭಾವನೆಯನ್ನು ಮೂಡಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ ನಾವು ಬರಿಯ ಗೆಲುವೊಂದನ್ನೇ ಕಾಣುತ್ತಿದ್ದರೆ, ಆ ಗೆಲುವು ನಮ್ಮ ಪ್ರತಿಭೆ ಮತ್ತು ಬುದ್ಧಿ ಮತ್ತೆಯಿಂದಲೇ ಸಾಧ್ಯವಾಯಿತು ಎಂದುಕೊಳ್ಳುತ್ತೇವೆ. ಬಹುಷಃ ಇದೇ ಕಾರಣಕ್ಕೋ ಏನೋ ಸತತ ಗೆಲುವಿನ ನಂತರ ಬರುವ ಸಣ್ಣ ನಿರಾಸೆಯನ್ನೂ ಅರಿಗಿಸಿಕೊಳ್ಳುವ ಛಾತಿ ನಮಗಿರುವುದಿಲ್ಲ, ಅಧೀರರಾಗಿ ಬಿಡುತ್ತೇವೆ.
ಎಡವಿ ನಡೆದರೆ ಪ್ರಗತಿ
ನಿರಂತರ ಪ್ರಯತ್ನದಲ್ಲಿ ಎದುರಾಗುವ ಸಣ್ಣ ಸಣ್ಣ ಸೋಲಿಗೆ ಎದೆಗುಂದಬಾರದು. ಎಡವಿದವ ತಾನೇ ಮುಂದೆ ಸಾಗಬಲ್ಲ? ಶ್ರಮ ಆಗುತ್ತದೆ ಅಥವಾ ಎಡವಿ ಗಾಯವಾಗುತ್ತದೆ ಎಂದು ಕುಳಿತ ಕುಳಿತು ಮುಂದೆ ಸಾಗುವ ಪ್ರಯತ್ನ ಮಾಡದೆ ಉಳಿದರೆ, ಮುಂದುವರೆಯುವ ಅವಕಾಶವೇ ಇರುವುದಿಲ್ಲವಲ್ಲ!
ಹೆದರದೇ ಮುಂದುವರಿದಾಗ ಮಾತ್ರ ಯಶಸ್ಸಿನ ದಾರಿಯನ್ನು ತುಳಿಯಬಹುದು. ಜತೆಗೆ, ಆಗಾಗ ಎದುರಾಗುವ ಸಣ್ಣಪುಟ್ಟ ಸೋಲುಗಳಿಂದ ನಾವು ಅನುಭವ ವನ್ನು ಬೆಳೆಸಿಕೊಳ್ಳುತ್ತೇವೆ, ಮುಂದೆ ಎದುರಾಗಬಹುದಾದ ದೊಡ್ಡ ದೊಡ್ಡ ಕಂಟಕಗಳನ್ನು ಪರಿಹರಿಸಲು ಸೋಲುಗಳೇ ನಮಗೆ ತರಬೇತಿ ನೀಡುತ್ತವೆ. ‘ಸೋಲೇ ಗೆಲುವಿನ ಸೋಪಾನ’ ಎಂಬ ಸರಳ ಮಾತು ಅದೆಷ್ಟು ಅರ್ಥ ಪೂರ್ಣ!
ಗೆಲುವಿನ ಮೆಟ್ಟಲುಗಳನ್ನು ಒಂದೊಂದಾಗಿ ಏರಲು, ಸೋಲಿನ ಅನುಭವದಿಂದ ದೊರೆತ ನೋವುಗಳು ಸಹ ತಮ್ಮ ಕೊಡುಗೆಯನ್ನು ನೀಡುತ್ತವೆ. ಕಲ್ಲಿನ ಮೇಲೆ ಉಳಿಪೆಟ್ಟು ಹೆಚ್ಚು ಹೆಚ್ಚು ಬಿದ್ದಷ್ಟೂ, ಅದೇ ಕಲ್ಲು ಕಲಾಕೃತಿಯಾಗಿ ರೂಪುಗೊಳ್ಳುತ್ತದೆ, ರಸಿಕರ ಮನ ಸೆಳೆಯುತ್ತದೆ, ಶಿಲ್ಪಿಗೆ ಆದಾಯದ ಮಾರ್ಗವನ್ನು ಸಹ ಒದಗಿಸಿಕೊಡುತ್ತದೆ. ಆದ್ದರಿಂದಲೇ ಹಿರಿಯರು ಹೇಳುವುದು, ಸಣ್ಣಪುಟ್ಟ ಸೋಲಿಗೆ ಎಂದಿಗೂ ಎದೆಗುಂದಬಾರದು. ಜೀವನದ ಓಟದಲ್ಲಿ ಆಗಾಗ ನಾವು ಹಿಂದೆ ಬೀಳುವುದು ಒಂದು ಸಹಜ ಪ್ರಕ್ರಿಯೆ, ಇದರಿಂದ ಎದೆಗುಂದುವುದರಲ್ಲಿ ಅರ್ಥವಿಲ್ಲ.
ನಮ್ಮಿಂದ ಎಲ್ಲ ಎಂಬ ಹಮ್ಮು ಬಿಟ್ಟು ತಗ್ಗಿ ಬಗ್ಗಿ ನೆಡೆಯಬೇಕು, ಸಮಚಿತ್ತದಿಂದ ಎಲ್ಲವನ್ನು ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಇಂದಿನ ನಾಗಾಲೋಟದ ಜೀವನ, ಅದರಿಂದ ಹೆಚ್ಚಾದ ಒತ್ತಡಗಳು ನಮ್ಮನ್ನು ಮಾನಸಿಕವಾಗಿ ಬಳಲಿಸುತ್ತವೆ. ಹೀಗಾಗಿ ಮನಸ್ಸಿಗೆ ಧೈರ್ಯ ತುಂಬುವ, ನಮ್ಮಲ್ಲಿ ಒಂದಿಷ್ಟು ಭರವಸೆಯನ್ನು ನೀಡುವ ಒಂದು ನಂಬಿಕೆ ಬಹಳ ಅವಶ್ಯಕವಾಗುತ್ತದೆ. ಜೀವನದಲ್ಲಿ ಏರು ಪೇರು, ನಮ್ಮ ನಂಬಿಕೆಗಳು, ಆಚಾರ ವಿಚಾರಗಳು ಎಲ್ಲವೂ ಪರಸ್ಪರ ಸಂಪರ್ಕವಿರುವ ಕೊಂಡಿಗಳಂತೆ ಭಾಸವಾಗುತ್ತವೆ.