Thursday, 12th December 2024

ಎಲ್ಲಿದ್ದೆ ಇಲ್ಲಿ ತನಕ ! ಎಲ್ಲಿಂದ ಬಂದ್ಯಣ್ಣ !

ಶಶಿಧರ ಹಾಲಾಡಿ

ನಿಮ್ಮ ಊರಿನಲ್ಲಿ ಈ ವರ್ಷ ಮಳೆ ಹೇಗೆ ಸುರಿಯಿತು? ಬಿರು ಮಳೆಯೆ ಅಥವಾ ಹನಿಮಳೆಯೆ? ಬಾಲ್ಯಕಾಲದಲ್ಲಿ ಮಳೆರಾಯನೊಂದಿಗಿನ ನಿಮ್ಮ ಸಖ್ಯ ಹೇಗಿತ್ತು? ಮಳೆಗಾಲದಲ್ಲಿ ನಿಮ್ಮ ಅನುಭವಗಳೇನು? ಮಳೆಯಲ್ಲಿ ಸಿಲುಕಿ ತೋಯ್ದ ವಿಭಿನ್ನ ಅನುಭವಗಳು ನಿಮ್ಮದಾಗಿವೆಯೆ? ನಿಮ್ಮೂರಿನ ಮಳೆಯ ಅನುಭವಗಳನ್ನು ನಮ್ಮೊಂದಿಗೂ ಹಂಚಿಕೊಳ್ಳಿ! ಪದಮಿತಿ 200. ಯುನಿಕೋಡ್ ಅಥವಾ ನುಡಿಯಲ್ಲಿ ಬರೆದ ಬರೆಹ ಇಲ್ಲಿಗೆ ಕಳಿಸಿ viramapost@gmail.com

ಬಾನಂಚಿನಲ್ಲೊಂದು ಕರಿ ಮೋಡ – ದೂರದ ಕಾಡನ್ನು ಹಾದು ಬರುವ ತಂಗಾಳಿ; ಮೂಗಿಗೆ ಹಿತವಾದ ಮಣ್ಣಿನ ವಾಸನೆ. ನೋಡನೋಡುತ್ತಿದ್ದಂತೆ ದಿಗಂತ ದಂಚಿನಿಂದ ಬೀಸಿ ಬರುವ ಸಣ್ಣ ಬಿರುಗಾಳಿಯು ರಪ ರಪನೆ ಮುಖಕ್ಕೆ ಬಡಿಯುತ್ತದೆ. ಆಕಾಶದಲ್ಲಿ ಚದುರಿ ಬಿದ್ದಿದ್ದ ಮೋಡಗಳೆಲ್ಲವೂ ಒಮ್ಮೆಗೇ ಶಕ್ತಿತುಂಬಿ ಕೊಂಡು, ಕರಿ ಗೂಳಿಗಳಂತೆ ಗುಟುರು ಹಾಕುತ್ತಾ, ಬಾನ ಮೈದಾನದಲ್ಲಿ ಒಂದರ ಹಿಂದೆ ಓಡತೊಡಗು ತ್ತವೆ. ನಿಧಾನವಾಗಿ ಕಪ್ಪು ತುಂಬಿಕೊಂಡ ಬಾನಿನ ತುಂಬಾ ಗುಡುಗುಗಳ ಆರ್ಭಟ, ಮಿಂಚಿನ ಓಡಾಟ. ಆಕಾಶದ ಫುಟ್‌ಬಾಲ್ ಮೈದಾನದಲ್ಲಿ ತಾವು ಆಟ ವಾಡಿದ್ದು ಸಾಕು ಎನಿಸಿದಾಗ, ಮೋಡಗಳು ನಿಧಾನವಾಗಿ ಕರಗುತ್ತವೆ, ಅಮೃತ ಸಿಂಚನದ ಮಳೆಯಂತೆ ಭೂಮಿಗೆ ಇಳಿಯುತ್ತವೆ. ಆಗಲೇ ನಮ್ಮ, ನಿಮ್ಮೂರಿಗೆ ಆಗಮಿಸುವನು ಮಳೆರಾಯ. ಎಲ್ಲಿದ್ದೆ ಇಲ್ಲಿ ತನಕ, ಎಲ್ಲಿಂದ ಬಂದ್ಯಣ್ಣ ಮಳೆರಾಯ!

ಮೊದಲ ಮಳೆಯನ್ನು ಇಷ್ಟು ಸರಳವಾಗಿ ಹೇಳಿದರೆ ಹೇಗೆ ಸ್ವಾಮಿ? ನಿಜ ಹೇಳಬೇಕೆಂದರೆ, ಬಿರುಬೇಸಿಗೆಗೆ ಒಣಗಿ ಬಿರಿದ ನೆಲವನ್ನು ತಂಪು ಮಾಡುವ ಮೊದಲ ಮಳೆಯ ಆಗಮನವನ್ನು ಅಕ್ಷರಗಳಲ್ಲಿ ಬಣ್ಣಿಸಲು ಅಸಾಧ್ಯ. ಅಷ್ಟಕ್ಕೂ ಮೊದಲ ಮಳೆ ಎಂದರೆ, ಅದೊಂದು ಬಹುರೂಪಿ. ಮಲೆನಾಡಿನ ರಭಸದ ಮುಂಗಾರು ಒಂದು ಪಟ್ಟಾದರೆ, ಬಯಲು ನಾಡಿನ ಮೊದಲ ಮಳೆಯ ಸ್ವರೂಪವೇ ಬೇರೆ – ತಿಂಗಳುಗಳ ಕಾಲ ಕಾದು ಕಾದು ಬಿಸಿಯಾದ ನೆಲದ ಮೇಲೆ ಎರಗುವ ಮಳೆ ಯನ್ನು ನೋಡಲು ಉತ್ತರ ಕರ್ನಾಟಕಕ್ಕೆ ಹೋಗಬೇಕು.

ಕರಾವಳಿಯ ದಬದಬ ಮಳೆಯ ಕುಣಿದಾಟವು ಯಕ್ಷಗಾನದ ಚಂಡೆ ಬಡಿತವನ್ನು ನೆನಪಿಸಿದರೆ, ಚಿತ್ರದುರ್ಗದ ಚದುರಿದ ಮಳೆಯು ಅದೆಷ್ಟೋ ಹಳ್ಳಿಗಳಿಗೆ ಮರೀಚಿಕೆಯೂ ಆದೀತು, ಬರಿ ಮೋಡದ ದರ್ಶನ ನೀಡಿ, ಮಳೆಗಾಗಿ ನಿಡುಸುಯ್ಯುವವರ ನಿಟ್ಟುಸಿರಿನ ಬೇಗೆಗೂ ಕಾರಣವಾದೀತು. ಅದಕ್ಕೇ ಅಲ್ಲವೆ, ಮಳೆರಾಯನ ಆಗಮನವೆಂದರೆ ಮಾನವನೂ ಸೇರಿದಂತೆ, ಸಕಲೆಂಟು ಜೀವಿಗಳ ಬದುಕಿನಲ್ಲಿ ಒಂದು ಸಂಕ್ರಮಣ ಕಾಲ ಎನ್ನುವುದು? ರೈತರಿಗೆ ಮಳೆ ಬಿದ್ದರೆ ಜೀವನ; ರೈತ ಬೆಳೆಯುವ ಧಾನ್ಯ ತಿನ್ನುವ ರೈತರಲ್ಲದವರಿಗೂ ಮಳೆರಾಯನ ಕೃಪೆ ಇಲ್ಲದಿದ್ದರೆ ಜೀವನ ಹೇಗೆ ಸಾಗೀತು? ಆದ್ದರಿಂದಲೇ ನಮ್ಮ ಹಿಂದಿನ ತಲೆಮಾರಿನವರು ಮಳೆಯನ್ನು ದೂರುತ್ತಿರಲಿಲ್ಲ, ದೂಷಿಸುತ್ತಿರಲಿಲ್ಲ.

ಎಷ್ಟೇ ಕಾಯಿಸಿದರೂ, ಮಳೆರಾಯನು ಒಂದಲ್ಲಾ ಒಂದು ದಿನ ಹುಯ್ದೇ ಹುಯ್ಯುತ್ತಾನೆ, ತಮ್ಮ ಜೀವನ ಹಸನು ಮಾಡುತ್ತಾನೆ ಎಂಬ ಆಶಾಭಾವನೆ ಅವರಲ್ಲಿ ಸದಾ ಇರುತ್ತಿತ್ತು. ಆ ಆಸೆಯೇ ಅವರ ಜೀವನಶಕ್ತಿ. ‘ಹುಯ್ಯೋ ಹುಯ್ಯೋ ಮಳೆರಾಯ’ ಎಂದು ಹಾಡುಕಟ್ಟಿ, ನರ್ತಿಸಿ ಮಳೆಯನ್ನು ಸ್ವಾಗತಿಸುತ್ತಿದ್ದರು. ನೆರೆಯೇ
ಬರಲಿ, ಪ್ರವಾಹವೇ ನುಗ್ಗಲಿ, ಅದನ್ನೆದುರಿಸಿ ಬದುಕು ಸಾಗಿಸುತ್ತಿದ್ದರೇ ಹೊರತು, ಮಳೆಯನ್ನು ‘ನೀ ಬರಬೇಡ’ ಎಂದು ಹೇಳಿದವರಲ್ಲ.

ಈ ಭೂಮಿಗೆ ಅಮೃತ ಸಮಾನ ಜಲಧಾರೆಯನ್ನೇ ನೀಡಿ, ಕೋಟಿ ಕೋಟಿ ಜೀವಸಂಕುಲವನ್ನು ಪೊರೆಯುವ ಮಳೆರಾಯನು ನಿಜಕ್ಕೂ ಬಹುರೂಪಿ, ಅಲ್ಲವೆ! ಮಳೆಯ ನರ್ತನವನ್ನು, ಆಟವನ್ನು, ಓಟವನ್ನು, ಸೇಚನವನ್ನು ನೋಡುವುದೇ ಒಂದು ವಿಶಿಷ್ಟ ಅನುಭೂತಿ. ಮಳೆ ಸುರಿದು, ಇಳೆಗೆ ಹೊಸ ಕಳೆ ಕಟ್ಟಿಕೊಟ್ಟಾಗಲೇ, ನಮ್ಮ ಬದುಕು ಹಸನು, ಜೀವನ ಬೆಳಕು.

ಬಾ ಮಳೆಯೇ ಬಾ, ಇನ್ನೂ ಬಿರುಸಾಗಿ ಬಾ
ಕಾದಿರುವಳು ಭೂರಮೆ ನಿನ್ನ ಆಗಮನಕೆ, ನರ್ತನಕೆ
ಗರ್ಭದ ಮೊಳಕೆ ಒಡೆದು ಹಸಿರುಕ್ಕಿಸಲು ಬೇಗ ಬಾ
ನಿನದೇ ನೆನಪು ನೀನೇ ಬದುಕು ಜೀವ ಜಾಲಕೆ, ಸಸ್ಯಕೋಟಿಗೆ