Monday, 25th November 2024

ಇಷ್ಟಗಳ ತಾಳಕ್ಕೆ ಕುಣಿಯುವ ಮನಸು

ರವಿ ರಾ ಕಂಗಳ ಕೊಂಕಣಕೊಪ್ಪ

ನಕಾರಾತ್ಮಕ ದೃಷ್ಟಿಯ ಬದಲಾಗಿ ಸಕಾರಾತ್ಮಕ ದೃಷ್ಟಿಯು ಹೂವಿನಂತೆ ಅರಳಿದರೆ, ಪ್ರಕೃತಿಯು ಸೌಂದರ್ಯ ಸೌಹಾರ್ದತೆಯ ಫಲವನ್ನು ನೀಡಬಹುದಲ್ಲವೇ? ಜಗತ್ತಿನಲ್ಲಿ ಎಷ್ಟು ಜನಸಂಖ್ಯೆಯಿದೆಯೋ ಅಷ್ಟೂ ಜನರ ಭಾವನೆಗಳು ಭಿನ್ನವಾಗಿವೆ.
ಒಬ್ಬರಂತೆ ಮತ್ತೊಬ್ಬರಿಲ್ಲ ಎಂಬುದು ಎಷ್ಟು ಸತ್ಯವೋ ಭಾವನೆಗಳು ಭಿನ್ನವಾಗಿರುತ್ತವೆ ಎಂಬುದು ಅಷ್ಟೇ ಸತ್ಯ. ಹೋಟೆಲ್ ತಿಂಡಿಗೆ ಹೋದವರಿಗೆಲ್ಲ ಒಂದೇ ರೀತಿಯ ತಿಂಡಿ ಇಷ್ಟವಾಗುವುದಿಲ್ಲ. ಒಬ್ಬರಿಗೆ ಉಪ್ಪಿಟ್ಟು, ಮತ್ತೊಬ್ಬರಿಗೆ ಇಡ್ಲಿ, ಮಗದೊಬ್ಬರಿಗೆ ದೋಸೆ ಹೀಗೆ ಅವರವರ ಅಭಿರುಚಿಗೆ ತಕ್ಕಂತೆ ನಾಲಿಗೆಯು ಇಷ್ಟ ಪಡುತ್ತದೆ.

ಸಮಾನ ಮನಸ್ಕರು ಮಾತ್ರ ಒಂದೇ ಬಗೆಯ ಧೋರಣೆಯನ್ನು ಹೊಂದಿರಲು ಸಾಧ್ಯವಿದೆ. ಹೆಣದವರು ಹೆಣಕ್ಕೆ ಅತ್ತರೆ, ಊದು ವವರು ಹಣಕ್ಕೆ ಅತ್ತರಂತೆ ಇದರಿಂದ ಅವರವರ ಅಭಿಪ್ರಾಯಗಳು, ಮನೋಧೋರಣೆಗಳು ವ್ಯಕ್ತಿಯ ಅವಶ್ಯಕತೆಯನುಸಾರ ವಾಗಿ ಭಿನ್ನವಾಗಿರುತ್ತದೆಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.

ಅಂತೆಯೇ ಡಿವಿಜಿಯವರು ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚಂದ ಮಡದಿ ಮುಡಿದಿರುವ ಹೂ ಯುವಕಂಗೆ ಚಂದ ॥
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚಂದ ಬಿಡಿಗಾಸು ಹೂವಳಗೆ-ಮಂಕುತಿಮ್ಮ ॥ ಎಂದು ಹೇಳಿದಂತೆ ದೃಷ್ಟಿಯಂತೆ ಸೃಷ್ಟಿ ಕಾಣುತ್ತದೆ ಎನ್ನುತ್ತಾರೆ.

ಪ್ರಕೃತಿಯಲ್ಲಿನ ಚರಾಚರ ವಸ್ತುಗಳು ಅವರವರ ಭಾವನೆಗಳನುಸಾರವಾಗಿ, ವೃತ್ತಿ ಪ್ರವೃತ್ತಿಯನುಸಾರವಾಗಿ, ಒಂದೇ ವಸ್ತು ವಿಭಿನ್ನವಾಗಿ ಕಂಡು ಅವರವರ ಬಯಕೆಗಳನ್ನು ಅಭಿವ್ಯಕ್ತಗೊಳಿಸುತ್ತದೆ. ಒಬ್ಬ ಪ್ರಕೃತಿಯ ಆರಾಧಕನು, ಚಿಂತಕನು ಸಾಹಿತಿ ಯು ಅದರ ಸೌಂದರ್ಯವನ್ನು ಆಹ್ಲಾದಿಸಿ ಸೃಷ್ಟಿಯ ಸೊಬಗನ್ನು ಕೊಂಡಾಡುತ್ತಾನೆ.

ವರಕವಿ ಬೇಂದ್ರೆೆಯವರು ಬ್ರಹ್ಮನು ತಾನು ಸೃಷ್ಟಿಸಿದ ಚೆಲುವಾದ ವಸ್ತುವನ್ನು ಕಂಡು ಮೈಮರೆತು ಹೂ ಎಂದು ಉಸಿರಲ್ಲೇ ಉದ್ಗರಿಸಿದನಂತೆ. ಅದಕ್ಕೇ ಹೂವೆಂಬ ಹೆಸರಾಯಿತಂತೆ ಎಂದು ಬಣ್ಣಿಸಿದ್ದಾರೆ. ಜಿ. ಎಸ್. ಶಿವರುದ್ರಪ್ಪನವರು ತಮ್ಮ ಕಲ್ಪನೆಯ ಕವನದಲ್ಲಿ ಹೂವನ್ನು ಧ್ಯಾನಿಸುತ್ತ ‘‘ನೋಡು ಇದೋ ಇಲ್ಲರಳಿ ನಗುತ್ತಿದೆ ಏಳು ಸುತ್ತಿನ ಮಲ್ಲಿಗೆ, ಇಷ್ಟು ಹಚ್ಚನೆ ಹಸಿರ ಗಿಡದಿ
ಎಂತು ಮೂಡಿತೋ ಬೆಳ್ಳಗೆ’’ ಎಂದು ಬಣ್ಣಿಸುವ ಪರಿ ಎಂತಹವರನ್ನು ಭಾವುಕರನ್ನಾಗಿ ಮಾಡುತ್ತದೆ.

ಇಲ್ಲಿ ಹೂ ಕಾವ್ಯ ವಸ್ತುವಾಗಿ ಕಂಡು ಅದ್ಭುತವಾದ ಕಲ್ಪನೆಗೆ ಕಾರಣವಾಗಿದೆ. ಮಡದಿಯ ಮುಡಿಯ ಹೂ ಅದೇ ಹೂವನ್ನು ನೋಡಿದ ಪತಿಯು ತನ್ನ ಮಡದಿಯ ಮುಡಿಯಲ್ಲಿದ್ದರೆ ಎಷ್ಟೊಂದು ಸೊಗಸು ಎನ್ನುತ್ತಾನೆ. ಪಾರಿಜಾತ ಪುರಾಣದಲ್ಲಿ
ಉಲ್ಲೇಖಿತ ಕಥೆಯಲ್ಲಿ ರಸಿಕ ಕೃಷ್ಣನಿಗೂ ಹೂ ಮುಡಿದ ಲಲನೆಯರನ್ನು ಕಾಣುವುದೆಂದರೆ ಬಲು ಇಷ್ಟ. ಒಮ್ಮೆ ಕೃಷ್ಣನೊಡನೆ ಸತ್ಯಭಾಮೆಯು ಇಂದ್ರನ ನಂದನವನದಲ್ಲಿ ಸುತ್ತಾಡುತ್ತಿರುತ್ತಾಳೆ.

ಅತಿ ಉತ್ಕೃಷ್ಟವಾದ ಪಾರಿಜಾತ ಹೂವು ಕಂಡು ಅದು ತನ್ನ ಮಡದಿಯ ಮುಡಿಯಲ್ಲಿ ಸದಾ ಇರಬೇಕೆಂದು ಈತ ಬಯಸಿದರೆ, ಅವಳು ಕೂಡ ಈ ಹೂ ತನ್ನೊಬ್ಬಳಿಗಲ್ಲದೆ ಬೇರೆ ಯಾರೂ ಮುಡಿಯುವಂತಿಲ್ಲ ಎಂಬ ಬಯಕೆಯನ್ನು ವ್ಯಕ್ತ ಪಡಿಸುತ್ತಾಳೆ.
ಗಿಡ ಪೂರ್ತಿ ತಂದು ನೆಟ್ಟದ್ದು ಅದಕ್ಕಾಗಿ ಕೃಷ್ಣನು ಬೇರುಸಮೇತ ಗಿಡವನ್ನು ಕಿತ್ತು ಗರುಡನ ಮೇಲೆ ಹೊತ್ತೊಯ್ದು ದ್ವಾರಕೆಗೆ
ತಂದು ಸತ್ಯಭಾಮೆಯ ಮನೆಯಂಗಳದಲ್ಲಿ ನೆಡುತ್ತಾನೆ. ನಿತ್ಯ ಹೂಕೊಯ್ದು ಹೆಣೆದು ಮುಡಿದುಕೊಳ್ಳುತ್ತಾಳೆ.

ರುಕ್ಮಿಣಿಗೆ ಇದರ ಮಾಲೆಯನ್ನು ಕೊಟ್ಟು ಹೊಟ್ಟೆೆಯುರಿಸಲೇಬೇಕೆಂಬ ತವಕದಲ್ಲೊಮ್ಮೆ ಅವಳ ಮನೆಗೆ ಹೋದರೆ ಆಕೆಯ ತಲೆಯಲ್ಲೂ ಪಾರಿಜಾತ ಮಾಲೆ ಬಿದ್ದುಬಿದ್ದು ನಗುತ್ತಿವುದನ್ನು ಕಂಡು ಇದೇನಾಶ್ಚರ್ಯ! ಎಂದು ನೋಡಿದರೆ ತನ್ನ ಅಂಗಳದಲ್ಲಿ ನೆಟ್ಟ ಪಾರಿಜಾತ ಗಿಡವು ಆಚೆ ಬಾಗಿ ರುಕ್ಮಿಣಿಯ ಅಂಗಳದಲ್ಲಿ ಹೂವು ಸುರಿಸಿದೆ, ಇದರಿಂದ ಕುಪಿತಗೊಂಡ ಸತ್ಯಭಾಮೆ ಮತ್ಸರದಿ ಮುಡಿದ ಹೂವನ್ನೆ ಕಿತ್ತೆಸೆದು ಹೊಸಕಿ ಹಾಕುವ ಪ್ರಸಂಗವು ವಿಕೃತ ಮನಸ್ಸಿನ ಭಾವನೆಗಳ ಪ್ರತಿಬಿಂಬವಾಗಿದೆ ಎಂದು ಹೂ
ಹಲಬುತ್ತದೆ.

ದೇವರ ಮೇಲೆ ಅನನ್ಯ ಭಕ್ತಿಯಿರುವ ದೈವ ಭಕ್ತನು ದಾರಿಯಲ್ಲಿ ಕಾಣುವ ಹೂಗಳೆಲ್ಲವನು ಕಿತ್ತು ದೇವರ ಪಾದಗಳಿಗೆ ಅರ್ಪಿಸಿ ಕೃತಾರ್ಥನಾಗಲು ಬಯಸುತ್ತಾನೆ. ಹೂಗಳಿಂದ ಅಲಂಕೃತಗೊಂಡ ದೇವರನ್ನು ಕಂಡು ಪುಳಕಿತನಾಗಿ ಅದರ ಪರಿಮಳದಲ್ಲೇ ನಾಮ ಸ್ಮರಣೆ ಮಾಡುತ್ತಾನೆ. ಅದೇ ಹೂ, ಹೂವಿನಿಂದಲೆ ಹೊಟ್ಟೆ ಹೊರೆಯುವ ಹೂವಾಡಗಿತ್ತಿಯ ಕಣ್ಣಿಗೆ ಬಿದ್ದರೆ ಇದನ್ನು ಮಾರಿದರೆ ಎಷ್ಟು ದುಡ್ಡು ಮಾಡಬಹುದೆಂದು ಯೋಚಿಸುತ್ತಾಳೆ.

ಇಲ್ಲಿ ಹೂ ಎನ್ನುವುದೊಂದು ಉಪಮೆಯವಾಗಿ ವೃತ್ತಿ ಮತ್ತು ಪ್ರವೃತ್ತಿಯು ನಮ್ಮೆದುರಿಗಿರುವ ಪ್ರಸಂಗವನ್ನು ಹೇಗೆ ವಿವಿಧ ಆಯಾಮಗಳಲ್ಲಿ ಬಣ್ಣಿಸಿ ಆಸ್ವಾದಿಸುತ್ತದೆ ಎಂಬುದನ್ನು ಮನೋಜ್ಞವಾಗಿ ಡಿವಿಜಿಯರು ಕಟ್ಟಿಕೊಟ್ಟಿದ್ದಾರೆ. ಪ್ರಕೃತಿಯು ನೀಡಿದ ಚರಾಚರ ವಸ್ತುಗಳು ಅವರವರ ಭಾವಕ್ಕೆ ತಕ್ಕಂತೆ ಉಪಯೋಗಿತವಾಗುತ್ತವೆ. ಇಲ್ಲಿ ಒಬ್ಬರಿಗೆ ಇಷ್ಟವಾದದ್ದು ಇನ್ನೊಬ್ಬರಿಗೆ ಇಷ್ಟವಾಗಬೇಕೇಂಬ ನಿಯಮವಿಲ್ಲ ವಾದರೂ, ಯಾವ ವಸ್ತುವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕೆಂಬ ಪರಿಸರ ಪ್ರಜ್ಞೆ ಮೂಡಿದರೆ ಒಳಿತಲ್ಲವೇ?. ಇಷ್ಟಾರ್ಥಗಳ ತಾಳದಲ್ಲಿ ಕುಣಿಯುವ ಗೊಂಬೆಯಂತಾಗಿರುವ ನಾವುಗಳೆಲ್ಲ ನಮ್ಮ ಭಾವನೆ ಗಳೊಂದಿಗೆ ಬೇರೆಯವರ ಭಾವನೆಗೂ ಸ್ಪಂದಿಸುವ ವೈಶಾಲ್ಯ ಮನೋಭಾವ ಒಡಮೂಡಿ ಬರಬೇಕು.

ನಕಾರಾತ್ಮಕ ದೃಷ್ಟಿಯ ಬದಲಾಗಿ ಸಕಾರಾತ್ಮಕ ದೃಷ್ಟಿಯು ಹೂವಂತೆ ಅರಳಿದರೆ, ಪ್ರಕೃತಿಯು ಸೌಂದರ್ಯ ಸೌಹಾರ್ದತೆಯ ಫಲವನ್ನು ನೀಡಬಹುದಲ್ಲವೇ?