Thursday, 12th December 2024

ಯುರೋಪಿಯನ್ನರ ನೌಕಾ ಸಾಹಸ

ಡಾ.ಉಮೇಶ್‌ ಪುತ್ರನ್‌

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ಕಥೆಯ ಹಿಂದೆ ಯುರೋಪಿಯನರ ಮತ್ತು ಬ್ರಿಟಿಷರ ನೌಕಾ ಸಾಹಸದ ಕಥನವಿದೆ, ಕಡಲುಗಳ್ಳತನದ ದುಸ್ಸಾಹಸವೂ ಇದೆ. ಸಂಬಾರ ಪದಾರ್ಥ ಮತ್ತು ಹೇರಳ ಸಂಪತ್ತು ಇದ್ದ ಭಾರತದಲ್ಲಿ ವ್ಯಾಪಾರ ಮಾಡಲು ದೂರದ ಯುರೋಪಿನಿಂದ ಬ್ರಿಟಿಷರು ಬಂದದ್ದು ಹಡಗುಗಳ ಮೂಲಕ. ನಂತರದ ದಿನಗಳಲ್ಲಿ ಇಡೀ ಭಾರತವನ್ನೇ ತಮ್ಮ ತೆಕ್ಕೆಗೆ ತೆಗೆದು ಕೊಂಡು, ಬ್ರಿಟಿಷ್ ಸಾಮ್ರಾಜ್ಯವನ್ನು ಬೆಳೆಸಿದರು. ಅವರನ್ನುಮತ್ತು ಇತರ ವಸಾಹತುದಾರ ರನ್ನು ಓಡಿಸಲು ನಡೆದ ಹೋರಾಟದ ವಿವಿಧ ಮಗ್ಗುಲುಗಳನ್ನು ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕಥೆಯು ಪ್ರತಿ ವಾರ ‘ವಿರಾಮ’ದಲ್ಲಿ ಪ್ರಕಟವಾಗಲಿದೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ಕಥೆಯ ಹಿಂದೆ ಯುರೋಪಿಯನರ ಮತ್ತು ಬ್ರಿಟಿಷರ ನೌಕಾ ಸಾಹಸದ ಕಥನವಿದೆ, ಕಡಲುಗಳ್ಳತನದ ದುಸ್ಸಾಹಸವೂ ಇದೆ. ಸಂಬಾರ ಪದಾರ್ಥ ಮತ್ತು ಹೇರಳ ಸಂಪತ್ತು ಇದ್ದ ಭಾರತದಲ್ಲಿ ವ್ಯಾಪಾರ ಮಾಡಲು ದೂರದ ಯುರೋಪಿನಿಂದ ಬ್ರಿಟಿಷರು ಬಂದದ್ದು ಹಡಗುಗಳ ಮೂಲಕ. ನಂತರದ ದಿನಗಳಲ್ಲಿ  ಇಡೀ ಭಾರತವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು, ಬ್ರಿಟಿಷ್ ಸಾಮ್ರಾಜ್ಯವನ್ನು ಬೆಳೆಸಿದರು. ಅವರನ್ನು ಮತ್ತು ಇತರ ವಸಾಹತುದಾರ ರನ್ನು ಓಡಿಸಲು ನಡೆದ ಹೋರಾಟದ ವಿವಿಧ ಮಗ್ಗುಲುಗಳನ್ನು ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕಥೆಯು ಪ್ರತಿ ವಾರ ‘ವಿರಾಮ’ದಲ್ಲಿ ಪ್ರಕಟವಾಗಲಿದೆ.

ಯುರೋಪ್ ದೇಶಗಳು ಮೊದಲಿನಿಂದಲೂ ನೌಕಾಯಾನ ಸಾಹಸಕ್ಕೆ ಹೆಸರುವಾಸಿ. ಇದರಲ್ಲಿ ಪ್ರಮುಖವಾಗಿ ಕೇಳಿ ಬರುವ ದೇಶಗಳು ಸ್ಪೇನ್ ಹಾಗೂ ಪೋರ್ಚುಗಲ್. ಸ್ಪೇನ್ ದೇಶವು ದಕ್ಷಿಣ ಅಮೆರಿಕವನ್ನು 1492 ರಲ್ಲಿ ಆಕ್ರಮಣ ಮಾಡಿ ಅಲ್ಲಿಯ ಅಜ್ಟೆಕ್ ಮತ್ತು ಇಂಕಾ ಸಾಮ್ರಾಜ್ಯಗಳ ಸಂಪತ್ತುಗಳನ್ನು ಸತತ
350 ವರ್ಷಗಳವರೆಗೆ ಕೊಳ್ಳೆ ಹೊಡೆಯಿತು. ಆ ಸಂಸ್ಕೃತಿಯನ್ನು ನಾಮಾವಶೇಷ ಮಾಡಿತು. ದಕ್ಷಿಣ ಅಮೆರಿಕದಿಂದ ಸ್ಪೇನ್ ಕಡೆ ಬರುವ ಸಾವಿರಾರು ಹಡಗು ಗಳನ್ನು ಸಮುದ್ರಗಳ್ಳರು ಕೊಳ್ಳೆ ಹೊಡೆಯುವ ದಂದೆ ಪ್ರಾರಂಭವಾಯಿತು. ಸಮುದ್ರಗಳ್ಳರಿಗೆ ಕೆರೆಬಿಯನ್ ಪೈರೇಟ್ಸ ಎನ್ನುವ ಹೆಸರು ಬಂತು. ಈ ಸಂಪತ್ತುಗಳ ಮೇಲೆ ಇಂಗ್ಲೆಂಡ್ ದೇಶದ ಕಣ್ಣು ಕೂಡ ಬಿತ್ತು.

1588 ರಲ್ಲಿ ಸ್ಪೇನ್ ದೇಶವು ತನ್ನ 130 ಹಡಗುಗಳಿಂದ ಇಂಗ್ಲೆಂಡ್ ಮೇಲೆ ನೌಕಾ ಯುದ್ಧವನ್ನು ಕೈಗೊಂಡಿತು. ಇದರಲ್ಲಿ ಸ್ಪೇನ್‌ಗೆ ಸೋಲಾಯಿತು. ಆಗ ಸೆರೆಸಿಕ್ಕಿದ ಈ ಹಡಗುಗಳು ಇಂಗ್ಲೆಂಡ್ ದೇಶದ ಚರಿತ್ರೆಯನ್ನೇ ಬದಲಾಯಿಸಿದವು. ಕೆಲವು ಇಂಗ್ಲೆಂಡ್ ದೇಶದ ವರ್ತಕರು, ಒಂದನೇ ಕ್ವೀನ್ ಎಲಿಜಬೆತ್‌ಗೆ
ದೂರದ ಪೌರಾತ್ಯ ದೇಶಗಳೊಂದಿಗೆ ವ್ಯಾಪಾರವನ್ನು ಕೈಗೊಳ್ಳಲು ಅನುಮತಿ ನೀಡಬೇಕೆಂದು ಕೇಳಿಕೊಂಡರು. 1591ರ ಏಪ್ರಿಲ್ 10ರಂದು ಅನುಮತಿ ಸಿಕ್ಕ ನಂತರ ಇಂಗ್ಲೆಂಡಿನಿಂದ ಪೂರ್ವ ದೇಶಗಳಿಗೆ ಹೊರಟ ಮೊದಲ ನೌಕಾ ಸಾಹಸಿಗ ಜೇಮ್ಸ ಲ್ಯಾಂಕಾಸ್ಟರ್. ಈತ ತನ್ನ ಪ್ರಯಾಣವನ್ನು ಬೆಳೆಸುತ್ತಾ ಗುಡ್ ಹೋಪ್ ಭೂಶಿರ, ಕನ್ಯಾಕುಮಾರಿ ಮೂಲಕ ಮಲಯಾ ಪರ್ಯಾಯ ದ್ವೀಪವನ್ನು ತಲುಪಿದ. ಅಲ್ಲಿ ಈಗಾಗಲೇ ಬಂದಿದ್ದ ಸ್ಪೇನ್ ಹಾಗೂ ಪೋರ್ಚುಗಲ್ ನೌಕೆ ಗಳನ್ನು ಕೊಳ್ಳೆ ಹೊಡೆದ.

ಇಂಗ್ಲಿಷರಿಗೆ ಸಿಕ್ಕಿದ ಅತ್ಯಂತ ದೊಡ್ಡ ಯಶಸ್ಸು ಸರ್ ವಾಲ್ಟರ್ ರಾಲೈ ದಕ್ಷಿಣ ಪೋರ್ಚುಗಲ್ ತೀರದಲ್ಲಿ ಹೊಡೆದುರುಳಿಸಿದ ಮಾಡ್ರೆ ಡಿ ಡಿಯಸ್ ಎನ್ನುವ ಬೃಹತ್ ನೌಕೆ. ಈ ಹಡಗು ಇಂಡೋನೇಷ್ಯಾ ಕಡೆಯಿಂದ ಹೇರಳವಾದ ಚಿನ್ನಾಭರಣಗಳು, ಮುತ್ತು, ಬೆಳ್ಳಿ ನಾಣ್ಯ, ಕಾಳುಮೆಣಸು, ಲವಂಗ, ದಾಲ್ಚಿನ್ನಿ, ಜಾಯಿಕಾಯಿ, ದುಬಾರಿಯಾದ ಬಟ್ಟೆ, ಕಲಾಕೃತಿಗಳನ್ನು ಹೊತ್ತು ತಂದಿತ್ತು. ಅಷ್ಟು ಮಾತ್ರವಲ್ಲ, ಭಾರತ, ಚೀನಾ, ಜಪಾನ್ ಮುಂತಾದ ದೇಶಗಳನ್ನು ತಲುಪಲು ನೌಕಾ ಮಾರ್ಗದ ಮಾಹಿತಿಗಳ ಪುಸ್ತಕವೂ ಕೂಡ ಇದರಲ್ಲಿ ಬ್ರಿಟಿಷರಿಗೆ ಸಿಕ್ಕಿತು.

ಕಡಲುಗಳ್ಳನಿಗೆ ನೈಟ್‌ಹುಡ್ 
ಸರ್ ಜೇಮ್ಸ ಲ್ಯಾನ್ ಕ್ಯಾಸ್ಟರ್ ತನ್ನ ರೆಡ್ ಡ್ರ್ಯಾಗನ್ ಎನ್ನುವ ಹಡಗಿನಲ್ಲಿ ಪೂರ್ವಕ್ಕೆ ಪ್ರಯಾಣ ಬೆಳೆಸಿದ ಪ್ರಪ್ರಥಮ ಬ್ರಿಟಿಷ್ ನಾವಿಕ. ಈತನ ಪ್ರಯಾಣ ಎಪ್ರಿಲ್ 10, 1591ರಂದು ಇಂಗ್ಲೆಂಡಿನ ಡೆವನ್‌ನಿಂದ ಪ್ರಾರಂಭವಾಯಿತು. ಗುಡ್ ಹೋಪ್ ಭೂಶಿರ ಹಾಗೂ ಭಾರತದ ಕನ್ಯಾಕುಮಾರಿ ಯನ್ನು ಸುತ್ತುವರಿದು, ಮಲಯಾ ಪರ್ಯಾಯ ದ್ವೀಪದ ಮೂಲಕ ಈಗಿನ ಮಲೇಶಿಯಾದ ಪಿನಾಂಗ್ ನಗರಕ್ಕೆ 1592 ರ ಜೂನ್ ತಿಂಗಳಲ್ಲಿ ಬಂದು ತಲುಪಿದ. ಆ ವರ್ಷದ ಜೂನ್ ತಿಂಗಳಿನವರೆಗೆ ತನಗೆ ಸಿಕ್ಕಿದ ಎ ಸ್ಪೇನ್ ಮತ್ತು ಪೋರ್ಚುಗಲ್ ಹಡಗುಗಳನ್ನು ಕೊಳ್ಳೆಹೊಡೆದ.

ಆ ಸಮಯದಲ್ಲಿ ಸ್ಕರ್ವಿ ರೋಗದಿಂದಾಗಿ ತುಂಬಾ ನಾವಿಕರು ಸತ್ತರು. ಲಿಂಬು ಶರಬತ್ತನ್ನು ದಿನಾಲು ಕುಡಿದರೆ ಸ್ಕರ್ವಿ ರೋಗವನ್ನು ತಡೆಗಟ್ಟಬಹುದು ಎಂದು ಲ್ಯಾನ್ ಕ್ಯಾಸ್ಟರ್ ಕಂಡು ಕೊಂಡ. ಈತ ಮೇ 1954 ರಲ್ಲಿ ಇಂಗ್ಲೆಂಡಿಗೆ ವಾಪಸಾದ. ಅಂದು 1599 ರ ಸೆಪ್ಟೆಂಬರ್ 26. ಲಂಡನ್ನಿನ ಪ್ರಸಿದ್ಧ ವ್ಯಾಪಾರಿಗಳು ಲೆಡೆನ್ ಹಿಲ್ ರಸ್ತೆಯ ಒಂದು ಕಟ್ಟಡದಲ್ಲಿ ಸಭೆ ಸೇರುತ್ತಾರೆ. ಆ ದಿನದ ಚರ್ಚೆಯ ವಿಷಯ ಏನೆಂದರೆ ಡಚ್ ವ್ಯಾಪಾರಿಗಳು ಭಾರತದಿಂದ ಆಮದು ಮಾಡಿಕೊಂಡ
ಕಾಳುಮೆಣಸನ್ನು ಹೆಚ್ಚಿನ ಬೆಲೆಗೆ ಇಂಗ್ಲೆಂಡ್ ನಲ್ಲಿ ಮಾರಾಟ ಮಾಡುವುದರ ವಿರುದ್ಧ ಆಗಿತ್ತು. ಡಚ್ ವ್ಯಾಪಾರಿಗಳು ಒಂದು ಪೌಂಡ್ ಕಾಳುಮೆಣಸಿನ ಬೆಲೆಯನ್ನು ಕೆಲವು ಶಿಲ್ಲಿಂಗ್‌ನಷ್ಟು ಏರಿಸಿದ್ದರು. ಇದರಿಂದ ರೋಸಿ ಹೋದ ಇಂಗ್ಲಿಷ್ ವ್ಯಾಪಾರಿಗಳು ಪೌರಾತ್ಯ ದೇಶದೊಂದಿಗೆ ಸಾಂಬಾರು ಪದಾರ್ಥಗಳ ವ್ಯಾಪಾರವನ್ನು ನೇರವಾಗಿ ತಾವೇ ಮಾಡುವ ಸವಾಲನ್ನು ಸ್ವೀಕರಿಸದರು.

ಸಭೆಯಲ್ಲಿದ್ದ 101 ಜನರ ಪಾಲುದಾರಿಕೆಯಲ್ಲಿ 30133 ಪೌಂಡ್, 6 ಶಿಲ್ಲಿಂಗ್ ಹಾಗೂ 8 ಪೆನ್ಸ್‌ಗಳ ಆರಂಭಿಕ ಮೊತ್ತದೊಂದಿಗೆ ಈಸ್ಟ್ ಇಂಡಿಯಾ ಕಂಪೆನಿ ಎನ್ನುವ ವಾಣಿಜ್ಯ ಸಂಘಟನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಲಾಗುತ್ತದೆ. ಭಾರತದ ಭವಿಷ್ಯದ ದಿಕ್ಕನ್ನೇ ಬದಲಾಯಿಸುವ ಪುಟ್ಟ ಸಭೆ ಇದಾಗಿತ್ತು ಎಂದು ಯಾರಿಗೂ ಅಂದು ತಿಳಿದಿರಲಿಲ್ಲ. ರಾಣಿಯು ಮೊದಲು 15 ವರ್ಷಗಳ ಅವಧಿಯವರೆಗೆ ಈಸ್ಟ್ ಇಂಡಿಯಾ ಕಂಪನಿಗೆ ಭಾರತದೊಂದಿಗೆ ವ್ಯವಹಾರ ಮಾಡಲು
ಅನುಮತಿ ನೀಡಿದಳು. ಭಾರತಕ್ಕೆ ಹೋಗಲು ಸೂಕ್ತವಾದ ಹಡಗುಗಳ ಆಯ್ಕೆಯನ್ನು ಮಾಡಲು ನಿರ್ದೇಶಕರಿಗೆ ಅನುಮತಿ ನೀಡಲಾಯಿತು.

ದಿ ಸುಸಾನ್, ಹೆಕ್ಟರ್, ದಿ ಸ್ಕೌರ್ಜ್, ದಿ ಪಿನ್ನೇಸ್, ರೆಡ್ ಡ್ರಾಗನ್ ಮುಂತಾದ ಹಡಗುಗಳನ್ನು ಅಣಿಗೊಳಿಸಲಾಯಿತು. ಪುನಹ ಲ್ಯಾನ್ ಕ್ಯಾಸ್ಟರ್ ನೇತ್ರತ್ವದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಹಡಗು ಎಪ್ರಿಲ್ 22, 16 ರಲ್ಲಿ ಇಂಗ್ಲೆಂಡ್ ದಡವನ್ನು ಬಿಟ್ಟು ಪೂರ್ವಕ್ಕೆ ಸಾಗಿಬಂತು. ಈ ಬಾರಿ ಜಾವಾದ ಬಾಂತಮ್ ಬಂದರನ್ನು ತಲುಪಿತು. ಲ್ಯಾನ್ ಕ್ಯಾಸ್ಟರ್, ಬಾಂತಮ್ ಹಾಗೂ ಮಲಕ್ಕಾದಲ್ಲಿ ಎರಡು ಗೋದಾಮುಗಳನ್ನು ಸ್ಥಾಪಿಸಿದ. ಪೋರ್ಚುಗೀಸ್ ಗೆ ಸೇರಿದ ಅತ್ಯಂತ ಸಂಪತ್ಭರಿತ ವಾದ ನೌಕೆಯನ್ನು ಕೊಳ್ಳೆಹೊಡೆದು, 1603 ರ ಸೆಪ್ಟಂಬರ್‌ನಲ್ಲಿ ಇಂಗ್ಲೆಂಡ್ ತಲುಪಿದ ಲ್ಯಾನ್ ಕ್ಯಾಸ್ಟರ್‌ಗೆ, ಆತನ ಸಾಹಸಕ್ಕಾಗಿ ನೈಟ್ ಹುಡ್ ಪದವಿಯನ್ನು ನೀಡಲಾಯಿತು. ಕಡಲುಕಳ್ಳರಿಗೂ ನೈಟ್ ಹುಡ್ ಪದವಿಯನ್ನು ಇಂಗ್ಲೆಂಡ್ ಸರಕಾರ ನೀಡುತ್ತದೆಯೇ ಎಂದು ಹುಬ್ಬೇರಿಸಬೇಡಿ!

ಇಷ್ಟೇ ಅಲ್ಲ, ಈತ ಈಸ್ಟ್ ಇಂಡಿಯಾ ಕಂಪನಿಯ ಪ್ರಮುಖ ನಿರ್ದೇಶಕನಾಗಿ ಕೂಡ ಮುಂದುವರಿದ. (ಮುಂದುವರಿಯುವುದು)