Thursday, 12th December 2024

ಇವರಿಗೂ ಬದುಕುವ ಹಕ್ಕು ಇದೆ

ಸೌರಭ ರಾವ್‌

ಒಂದು ಅಭಯಾರಣ್ಯದಲ್ಲಿ ವನ್ಯಜೀವಿ ಸಫಾರಿಯಲ್ಲಿದ್ದಾಗ ಒಂದು ಚಿರತೆ ಕಾಣಿಸಿಕೊಂಡಿತ್ತು. ಅದು ಕಾಡಿನಾಳಕ್ಕೆ
ಮರೆಯಾಗುತ್ತಿದ್ದಂತೆಯೇ ಪಕ್ಕದ ಸಫಾರಿ ಜೀಪಿನಲ್ಲಿದ್ದ ಸುಮಾರು 10-12 ವರ್ಷದ ಹುಡುಗನೊಬ್ಬ ಚೀಟಾ ಚೀಟಾ ಎಂದು ಒಂದೆರಡು ಸಲ ಖುಷಿಯಿಂದ ಕೂಗಿಕೊಂಡ. ಅವನ ತಾಯಿಯೂ ಖುಷಿಯಿಂದ ಇಂಗ್ಲಿಷಿನಲ್ಲೇನೋ ಉತ್ತರ ಕೊಟ್ಟರು.

ಆದರೆ ಆ ಹುಡುಗನಿಗೆ ಅದು ಚೀಟಾ ಅಲ್ಲ, ಚಿರತೆ (ಲೆಪರ್ಡ್) ಎಂದು ಹೇಳಿಕೊಟ್ಟದ್ದು ಆಕೆಯಲ್ಲ, ಅವರ ಗೈಡ್. ನಮ್ಮ ಮಕ್ಕಳಿರಲಿ, ದೊಡ್ಡವರೆನಿಸಿಕೊಂಡ ನಮ್ಮಲ್ಲೂ ಎಷ್ಟೋ ಜನರಿಗೆ ಚೀಟಾ ಮತ್ತು ಚಿರತೆ ಲೆಪರ್ಡ್ ನಡುವೆ ವ್ಯತ್ಯಾಸ ಗೊತ್ತಿರುವುದಿರಲಿ, ಚೀಟಾ ಎಂಬ ಪ್ರಾಣಿ ಆಫ್ರಿಕಾ ದಲ್ಲಿರುತ್ತದೆ, ನಮ್ಮ ದೇಶದಲ್ಲಿ ಅದು ಕಂಡುಬರುವುದೇ ಇಲ್ಲ ಎಂಬ ಸಂಗತಿ ತಿಳಿದಿರುವುದೂ ಅಪರೂಪವೇ. ಚೀಟಾ ಮತ್ತು ಚಿರತೆ ತರಹವೇ ಅಮೆರಿಕಾದಲ್ಲಿ ಮತ್ತೊಂದು ದೊಡ್ಡ ಮಾರ್ಜಾಲವಿದೆ. ಅದು ಜ್ಯಾಗ್ಯುವರ್.

ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಆಗಾಗ ಕಾಡುತ್ತವೆ. ನಮಗೆ ಇಷ್ಟೂ ತಿಳಿದಿರಬೇಡವೇ? ಅಥವಾ ಬೇರೆ ಪ್ರಾಣಿಗಳಿಗೂ ನಮಗೂ ಯಾವ ಮಹಾ ಸಂಬಂಧ ಎಂಬ ತಾತ್ಸಾರವೋ? ಪ್ರಕೃತಿಯನ್ನು ಅಲ್ಲೆಲ್ಲೋ ಕಾಡಿನಲ್ಲಿರುವ ಸ್ಥಿತಿ; ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬ ಭಾವವೆ? ‘ಪ್ರಕೃತಿಯ ಮಡಿಲಿಗೆ ಮರಳೋಣ’ ಎಂದೆಲ್ಲಾ ಜಾಹೀರಾತುಗಳನ್ನು ನೋಡಿದಾಗ ಏನೆಂದು ಕೊಳ್ಳಬೇಕೋ ತಿಳಿಯುವುದಿಲ್ಲ. ಪ್ರಕೃತಿಯ ಸಂಬಂಧ ಕಡಿದುಕೊಂಡು ಬದುಕಲಾದರೂ ಹೇಗೆ ಸಾಧ್ಯ? ನಿಜ, ಸೃಷ್ಟಿ  ಸೌಂದರ್ಯವನ್ನು ಸವಿಯಲು ಅದರ ವಿವರಗಳ ಅರಿವು ಬೇಕಿಲ್ಲ.

ಅದಕ್ಕಿಂತಲೂ ಮುಖ್ಯವಾಗಿ, ನಮ್ಮ ಮತಿಗೆ ಇನ್ನೂ ನಿಲುಕದ ಅವೆಷ್ಟೋ ಲಕ್ಷ ಲಕ್ಷ ಜೀವಿಗಳು, ವಿವರಗಳಿವೆ. ನಾವಿಲ್ಲದಿದ್ದರೂ ಅವಿರುತ್ತದೆ. ಇರಲಿ. ಸದ್ಯದ ಕೋವಿಡ್‌ನಂತಹ ಝೂನೋಟಿಕ್ ಖಾಯಿಲೆಗಳು ಹರಡುತ್ತಿರುವುದು ಏಕೆ ಎಂದು ಒಂದು ಕ್ಷಣ ನಿಜವಾಗಿಯೂ ಯೋಚಿಸಿದ್ದೇವಾ? ಮಾನವ-ವನ್ಯಜೀವಿಗಳ ನಡುವೆ ಅರಣ್ಯ ನಾಶದ ನಿಮಿತ್ತ ಸಂಪರ್ಕ ಜಾಸ್ತಿಯಾದಷ್ಟೂ ಇಂತಹ ಖಾಯಿಲೆಗಳು ಮತ್ತಷ್ಟು ಹರಡುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನಿಗಳು ಬೊಬ್ಬೆ ಹಾಕುತ್ತಿದ್ದರೂ ನಾವು ವನ್ಯಜೀವಿ ಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವಾ? ಪ್ರಾಣಿಗಳು ಎಲ್ಲಿಗೆ ಹೋಗಬೇಕು? ನಾವು ಶಾಲೆಯಲ್ಲಿ ರಾಷ್ಟ್ರಪ್ರಾಣಿ, ರಾಷ್ಟ್ರಪಕ್ಷಿ ಉರುಹೊಡೆದದ್ದು ಬಿಟ್ಟರೆ, ಚಿಕ್ಕ ವಯಸ್ಸಿನಿಂದಲೇ ನಮ್ಮ ಜಗತ್ತಿನ ಜೀವಸಂಕುಲದ ಬಗ್ಗೆ ಕುತೂಹಲ ಬೆಳೆಯುವಂತೆ ಮಾಡುವ ವಿಷಯಗಳೇ ಏಕಿಲ್ಲ? ಕೇವಲ ಮನುಷ್ಯ ಲೋಕದಲ್ಲಿ, ನಮ್ಮ ನಮ್ಮ ಗೋಳುಗಳಲ್ಲೇ ಕಳೆದುಹೋದರೆ ಸಾಕಾ? ಭೂಮಿಯನ್ನು, ಅದರ ಸಂಪನ್ಮೂಲಗಳನ್ನು ಮನಸೋ ಇಚ್ಛೆ ಸ್ವೇಚ್ಛೆೆಯಿಂದ ಬಳಸುತ್ತಿದ್ದೇವೆ.

ಹೀಗೆಯೇ ಮುಂದುವರೆಯುತ್ತಿದ್ದರೆ ಇನ್ನು ಕೆಲವೇ ದಶಕಗಳಲ್ಲಿ ಆಗುವ ಅನಾಹುತಗಳಿಗೆ ನಮ್ಮ ಮುಂದಿನ ಪೀಳಿಗೆಗಳು ಕೇಳುವ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿರುತ್ತವಾ? ಈಗಾಗಲೇ ನಡೆಯುತ್ತಿರುವ ಹವಾಮಾನ ವೈಪರಿತ್ಯಗಳನ್ನೂ ಎಲ್ಲೋ ಯಾರಿಗೋ ಆಗುತ್ತಿರುವಂತೆ ತಾತ್ಸಾರ ತೋರಿಸುತ್ತೇವೆ. ಮಕ್ಕಳನ್ನು ಹುಟ್ಟಿಸುತ್ತಿದ್ದೇವೆ ನಿಜ, ಅವರಿಗೆ ಒಳ್ಳೆಯ ಪ್ರಪಂಚ ಬಿಟ್ಟುಹೋಗುವ ಪ್ರಜ್ಞೆ, ತಾಳ್ಮೆ, ವ್ಯವಧಾನ ನಮಗಿದೆಯಾ? ನಾವೂ ಪ್ರಾಣಿಗಳೇ, ನಮ್ಮಂತೆ ಬೇರೆ ಪ್ರಾಣಿಗಳಿಗೂ ಭೂಮಿಯ ಮೇಲೆ ಹಕ್ಕಿದೆ.

ನಾವು ಸೈಟು, ಜಮೀನು ಎಂದು ಭೂಮಿಯ ಒಂದಷ್ಟು ತುಂಡನ್ನು ನಮ್ಮ ಹೆಸರಿಗೆ ಮಾಡಿಕೊಂಡಿದ್ದೇವೆ ಎನ್ನುವ ನಮ್ಮ ಮನುಷ್ಯ ಭ್ರಮೆಗಳನ್ನು ಕಟ್ಟಿಕೊಂಡು ಬೇರೆ ಪ್ರಾಣಿಗಳಿಗೇನಾಗಬೇಕು? ಎಂಟು ಬಿಲಿಯನ್ ಜನರಿದ್ದೇವೆ, ಬೇರೆ ಪ್ರಾಣಿಗಳೆಲ್ಲಿ ಹೋಗಬೇಕು? ಉಸಿರಾಡುವುದಕ್ಕೂ ಹೆದರುವಂತೆ ಮಾಸ್ಕ್‌ ಧರಿಸಿ ಓಡಾಡುವ ಈಗಿನ ಪರಿಸ್ಥಿತಿ, ಇಷ್ಟರಲ್ಲೇ ಮುಗಿದುಹೋಗುವ
ಮತ್ತೊಂದು ಕಂಟಕ ಅಷ್ಟೇ ಎಂಬಂತೆ ನಡೆದುಕೊಳ್ಳುತ್ತಿದ್ದೇವೆ.

ಈಗಲಾದರೂ ನಾವು ನಮ್ಮ ಭೂಮಿಯ ಬಗ್ಗೆ, ಸಂಪನ್ಮೂಲಗಳ ಬಗ್ಗೆ, ವನ್ಯಜೀವಿಗಳ ಬಗ್ಗೆ ಪ್ರತಿದಿನ ನಾವು ನಡೆದುಕೊಳ್ಳುವ,
ಬದುಕುವ ರೀತಿಯಲ್ಲಿ ಗೌರವ ತೋರಿಸಬೇಕಿದೆ. ನಮ್ಮ ಶಾಲೆಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಇಂತಹ ವಿಷಯಗಳ ಬಗ್ಗೆ
ಸೂಕ್ಷ್ಮ ಸಂವೇದನೆಯಿಂದ ಪಾಠ ಮಾಡುವ, ಶ್ರದ್ಧೆಯಿಂದ ಮಕ್ಕಳು ಕಲಿಯಬೇಕಾದರೆ ಅಷ್ಟೇ ಶ್ರದ್ಧೆಯಿಂದ ಹೇಳಿಕೊಡುವ
ಶಿಕ್ಷಕರ ಅಗತ್ಯವಿದೆ. ಸಮೂಹ ಮಾಧ್ಯಮಗಳೂ ಕೂಡ ಈ ವಿಷಯಗಳನ್ನು ಕೇವಲ ಡಿಸ್ಕವರಿ, ಅನಿಮಲ್ ಪ್ಲ್ಯಾನೆಟ್,
ನ್ಯಾಷನಲ್ ಜಿಯೋಗ್ರಾಫಿಕ್ ಇವೆಯಲ್ಲಾ, ಸರ್ ಡೇವಿಡ್ ಆಟನ್‌ಬರೋ, ಜಾರ್ಜ್ ಶ್ಯಾಲರ್ ಅಂತಹವರು ಇದ್ದಾರಲ್ಲ ಎಂದು ಸುಮ್ಮನಿರದೇ, ಮತ್ತಷ್ಟು ಆಸ್ಥೆೆಯಿಂದ ಈ ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಬೇಕಿದೆ.

ಬ್ರೇಕಿಂಗ್ ನ್ಯೂಸ್ ಭರದಲ್ಲಿ ಬೇರೆ ಪ್ರಾಣಿಗಳ ಬಗ್ಗೆ ಅವೈಜ್ಞಾನಿಕವಾಗಿ, ಆತುರದಲ್ಲಿ ಬಾಯಿಗೆ ಬಂದಹಾಗೆ ವರದಿ ಮಾಡುವುದು ನಿಲ್ಲಿಸಿ, ನಮ್ಮ ಸುತ್ತಲೇ ಇರುವ ತಜ್ಞರಿಂದಲೋ, ಅಧಿಕೃತ ಮೂಲಗಳಿಂದಲೋ ಈ ವಿಷಯಗಳ ಬಗ್ಗೆ ತಿಳಿದುಕೊಂಡು ನಿಖರ ವಾಗಿ, ವಸ್ತುನಿಷ್ಠವಾಗಿ ಜ್ಞಾನ ಹಂಚಬೇಕಿದೆ. ನಮಗೆ ಸಿಕ್ಕಿರುವ ಈ ಅದ್ಭುತ ಅಸ್ತಿತ್ವವನ್ನು ಅಷ್ಟರಮಟ್ಟಿಗೆ ನಾವು ನಿಜವಾಗಿ ಯೂ ಗೌರವಿಸುವಂತಾಗಲಿ. ಮನುಷ್ಯಪ್ರಾಣಿ ಅಳಿದರೆ ಭೂಮಿ ಮತ್ತು ಇತರ ಪ್ರಾಣಿಗಳು ಇನ್ನೂ ಚೆನ್ನಾಗಿರುತ್ತವೆ ಎಂಬ ಸತ್ಯ ನಮ್ಮಲ್ಲಿ ನಮ್ರತೆ ಹುಟ್ಟಿಸಲಿ, ನಮ್ಮ ಅಗತ್ಯಗಳನ್ನು ಮೀರಿದ ಸತ್ಯಗಳಿಗೆ ನಮ್ಮ ಕಣ್ತೆರೆಸಲಿ.