Sunday, 3rd November 2024

ಕಣ್ಣಲ್ಲಿ ಕಂಡ ಮಿಂಚು

ರವೀಂದ್ರಸಿಂಗ್ ಕೋಲಾರ

ಪ್ರತಿದಿನ ನೂರಾರು ಕಣ್ಣುಗಳನ್ನು ಕದ್ದುಮುಚ್ಚಿಯೋ, ದಿಟ್ಟಿಸಿಯೋ ನೋಡುವುದು ಸಾಮಾನ್ಯ ಇರಬಹುದು. ಅದೇ ವರಸೆ ಯಲ್ಲಿ ಎದುರಿಗೆ ಹಾದುಹೋಗುವ ಅದೆಷ್ಟೋ ಮಂದಿಯರು ಪ್ರತಿಯಾಗಿ ನೋಡಿ ಹೋಗುವುದು ಅನುಭವಕ್ಕೆ ಬಂದಿರುವ
ವಿಷಯ. ನಿಜ ಹೇಳ ಬೇಕೆಂದರೆ ಇದ್ಯಾವುದು ನೆನಪಿನಲ್ಲಿ ಉಳಿದುಕೊಳ್ಳದ ಸಂಗತಿಗಳಾಗಿ ನನ್ನನ್ನು ಎಂದೂ ಆವರಿಸಿ ಕೊಂಡಿರುವುದಿಲ್ಲ. ನನ್ನ ನೆನಪಲ್ಲಿ ಉಳಿದುಕೊಂಡಿರುವುದೆಂದರೆ ಅದು ನೀನು ಮತ್ತು ಆ ಕ್ಷಣದ ನಿನ್ನ ನಿಲುವು.

ಅದು ಎಷ್ಟರ ಮಟ್ಟಿಗೆ ನನ್ನ ಬಿಡದೆ ನಿಲ್ಲಿಸಿದೆ ಎಂದರೆ, ಎಷ್ಟೇ ಜೋರಾಗಿ ಸುರಿದರೂ ಮಳೆ, ಒದ್ದೆಯಾಗದೆ ನಗುತ್ತಾ ನಿಂತ
ಕಾಮನಬಿಲ್ಲಿನಂತೆ, ದುಂಬಿಯೊಂದು ಕಚ್ಚಿ ಮಧುವನ್ನು ಹೀರುತ್ತಿದ್ದರು ಹೂ ತನ್ನ ಪಾಡಿಗೆ ಅರಳಿ ನಿಂತಂತೆ. ನೀನು ನನ್ನ ನಯನದ್ವಯಗಳಲ್ಲಿ ಬಂದು ಅದು ಹೇಗೋ ಜಾಗ ಮಾಡಿ ಖಾಯಂ ಆಗಿ ಉಳಿದುಬಿಟ್ಟೆ. ಹಾಗೆ ಉಳಿಯಲು ನಿನಗೆ ಕಾರಣವನ್ನು ನಾನು ಈಗ ಹೇಳಲೇಬೇಕೆನಿಸಿದೆ.

ಅಂದು ನಾನು ಫ್ರೆಷ್ ಮೂಡಿನಲ್ಲಿ ಕಡು ನೀಲಿ ಬಣ್ಣದ ಜೀನ್ಸಿನೊಂದಿಗೆ ತಿಳಿ ಬಣ್ಣದ ಟೀ ಶರ್ಟ್ ಧರಿಸಿ ಐಸ್ ಕ್ರೀಂ ಪಾರ್ಲರ್ ಬಳಿ ಬೈಕಿನಲ್ಲಿ ಬಂದು ಇಳಿದೆ. ನನ್ನ ಕಣ್ಣನ್ನು ನಾನೇ ನಂಬದ ರೀತಿಯಲ್ಲಿ ಕಣ್ಣಲ್ಲಿ ಏನೋ ಮಿಂಚೊಂದು ಕಂಡ ಅನುಭವ. ಹೌದು ಸದ್ದೇ ಇಲ್ಲದ ನಿನ್ನ ನಗು ಮಂದಾಸ್ಮಿತವಾಗಿ ಬೆಳ್ಳನೆಯ ದಂತಪಂಕ್ತಿಗಳಿಂದ ಹೊಳೆಯಲಾರಂಭಿಸಿದರೆ, ತಾಜಾ ಸರೋವರದಂತಹ ನಿನ್ನ ಕಣ್ಣುಗಳ ಆ ರೆಪ್ಪೆಗಳು ನಯವಾಗಿ ಸ್ಪರ್ಶಿಸಿ ಹೊರಟಾಗ ಅಬ್ಬಾ ಎಂತಹ ತಲ್ಲಣ ಈ ಎದೆಯೊಳಗೆ! ನಿನ್ಯಾರೋ? ಯಾವ ಕವಿಯ ಕಲ್ಪನೆಯೊ? ನನಗಂತೂ ಅದರ ಅರಿವಿಲ್ಲ. ನೆನಪೊಂದೇ ನೀನು ನನ್ನ ಬಳಿ ಬೇಡವಾದ ನೆಪದ ಕಾರಣಕ್ಕೆ ಎಕ್ಸ್‌ ಕ್ಯೂಸ್ ಮಿ ಎಂದು ಹಸನ್ಮುಖಿಯಾಗಿ ಮಾತನಾಡಿ, ನನ್ನಲ್ಲಿ ನಿನ್ನ ಒಂದು ನೋಟ ನೆಟ್ಟು ಹೊರಟಿದ್ದು ಅದು
ಇಂದಿಗೂ ಹಸಿ, ಹಸಿರು ಚಿಗುರಾಗಿ ಉಳಿದುಬಿಟ್ಟಿದೆ.

ಪ್ರೀತಿಯ ಆರೈಕೆಗೆ ಹೂವಾಗಿ ಅರಳಿ ನಿಲ್ಲಲು ಆ ಒಂದು ನೋಟ ಸಾಕಲ್ಲವೆ!