Sunday, 24th November 2024

ಅರವತ್ತರ ನಂತರದ ದಾಂಪತ್ಯ

ದಾಂಪತ್ಯದ ಸುಖ, ಪ್ರೀತಿಯು ಹಿರಿಯರಲ್ಲಿ ಕಡಿಮೆಯಾಗಬಾರದು, ಕಡಿಮೆಯಾಗಕೂಡದು. ಪ್ರೀತಿಯ ಸವಿ ನಿರಂತರ ವಾಗಿರಲು ಏನು ಮಾಡಬಹುದು? ವಯಸ್ಸಾದರೂ ಪತಿ ಸತಿಯರು ಸಂತಸದಿಂದ ಇರಲು ಯಾವ ಉಪಾಯ ಕೈಗೊಳ್ಳ ಬಹುದು? ಕೆಲವು ಟಿಪ್ಸ್‌ ಇಲ್ಲಿವೆ.

ಕೆ.ಶ್ರೀನಿವಾಸರಾವ್

ಅರವತ್ತು ದಾಟಿ ಆಯಿತು, ಆಗಲೇ ಮೂರು ವರ್ಷ. ಹಿರಿಯ ನಾಗರಿಕರ ಪಾಸ್ ಮಾಡಿಸಿದ್ದೇನೆ. ನಮ್ಮದೇನಿದೆ ಇನ್ನು? ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ. ಚಿತ್ರಗುಪ್ತನ ಲೆಡ್ಜರ್‌ನಲ್ಲಿ ನಮ್ಮದು ಗ್ರೇಸ್ ಪೀರಿಯಡ್!’ ಯಾಕೆ ಈ ನಿರುತ್ಸಾಹ? ಅರವತ್ತು ದಾಟಿದರೆ ಎಲ್ಲ ಮುಗಿದಂತೆಯೇ? ಹೀಗೆ ಹೇಳಿ, ಹೇಳಿ ಇದೀಗ 60 ದಾಟಿದ ನಿಮ್ಮ ಪತ್ನಿಯನ್ನೂ ಶಕ್ತಳನ್ನಾಗಿಸದಿರಿ.

ಮಾಮರವೆಲ್ಲೋ, ಕೋಗಿಲೆಯೆಲ್ಲೋ

ಎಲ್ಲೋ ಮಾಮರ, ಎತ್ತಣವೋ ಕೋಗಿಲೆ. ನಿಮ್ಮೊಂದಿಗೆ ಸಪ್ತಪದಿ ತುಳಿದು ‘ಮಾಂಗಲ್ಯಂ ತಂತು ನಾನೇನ’ ಮಂತ್ರಘೋಷ, ಮಂಗಳವಾದ್ಯಗಳ ನಡುವೆ ನಿಮ್ಮಿಂದ ಮಂಗಳಸೂತ್ರ ಕಟ್ಟಿಸಿಕೊಂಡು ನಿಮ್ಮ ಮನೆಯ ಹೊಸಿಲ ಮೇಲಿನ ಅಕ್ಕಿ ತುಂಬಿದ ಸೇರನೊದ್ದು, ಅಕ್ಕಿಬೆಲ್ಲವ ಚೆಲ್ಲುತ್ತಾ ಬಲಗಾಲಿಟ್ಟು ಒಳಬಂದ ನಿಮ್ಮ ಸಹಧರ್ಮಿಣಿ ಯೊಂದಿಗೆ ಸುಖ ಸಂಸಾರಕ್ಕೆ ಬರೀ 12 ಸೂತ್ರಗಳೇಕೆ? 24 ಸೂತ್ರಗಳಿರಲಿ ಎಂದು ಮತ್ತೊಬ್ಬರು ಕರುಬುವಂತೆ ಬಾಳಿ ತೋರಿಸಿದ ನಂತರ ಈಗೇಕೆ ಈ ಒಣ ಸನ್ಯಾಸ?

ನಲ್ನುಡಿ, ನಲ್ನಡೆಗಳಿಂದ ಪತ್ನಿಯನ್ನು ಖುಷಿಗೊಳಿಸಿ ದಾಂಪತ್ಯದಲ್ಲಿ ಭಾವ ಸಾಂಗತ್ಯದ ತುಷಾರ ಸಿಂಚನ ಅನುಭವಿಸಿ.

ಜತೆ ಜತೆಯಲಿ

ನಿತ್ಯ ನಸುಕಿನಲ್ಲಿ ಎದ್ದಾಕ್ಷಣ ಪತ್ನಿಯ ಹಣೆಗೆ ಒಂದು ಹೂ ಮುತ್ತನ್ನಿಟ್ಟು ಅಥವಾ ನಸುನಕ್ಕು, ಶುಭೋದಯ ಹೇಳಿ ಒಂದೆರಡು ಕಿ.ಮೀ. ಲಘುನಡೆಯಲಿ ವಾಯು ವಿಹಾರ ಹೋಗಿ ಬನ್ನಿ. ಆಗಾಗ ಲಾಂಗ್ ಡ್ರೈವ್ ಹೋಗಿ, ಮನೆಯಲ್ಲಿ ಎಲ್ಲರೆದುರು ಹೇಳಲಾ ಗದ ಅವಳ ಅಂತರಂಗದ ಮಾತುಗಳಿಗೆ ಅನುಭಾವಗಳಿಗೆ ಕಿವಿಯಾಗಿ, ಪರಸ್ಪರ ಸಂವಹನ ಅನವರತ ಆನಂದಕ್ಕಿದೇ ದಾರಿ.
ಪತ್ನಿ ಮಾಡುವ ತಿಂಡಿ, ಅಡುಗೆಯನ್ನು ಯಾವ ಕಾರಣಕ್ಕೂ ಟೀಕಿಸಬೇಡಿ. ನಿಮ್ಮ ಅರ್ಧಾಂಗಿಯಾಗಿ ಬಂದಂದಿನಿಂದ ಗಾಣ ದೆತ್ತಿನಂತೆ ಒಂದು ದಿನವೂ ರಜೆಯಿಲ್ಲದೇ ಅಡುಗೆ ಮನೆಯೇ ಗುಡಿಯಮ್ಮ ಎಂದು ತಿಳಿದು ನಿಮ್ಮ ಜಿಹ್ವಾಚಾಪಲ್ಯವನ್ನು ತಣಿಸಿ ಹೈರಾಣಾಗಿದ್ದಾಳೆ. ಹೊಗಳಲು ಸಾಧ್ಯವಾದರೆ ಹೊಗಳಿ, ಆದರೆ ತೆಗಳದಿರಿ. ಉಪ್ಪು, ಹುಳಿ, ಕಾರ ಏನೇ ವ್ಯತ್ಯಯವಾಗಿ ದ್ದರೂ ವಿವಾಹ ಭೋಜನವದೆಂಬಂತೆ ಚಪ್ಪರಿಸಿ ತಿನ್ನಿ.

ನಿಮ್ಮ ಹೊಟ್ಟೆ ನಿಮ್ಮ ಇಷ್ಟ
ನಿತ್ಯ ಮನೆಯ ಊಟ ಬೇಸರ ಬಂದಿರುತ್ತದೆ. ಆಗಾಗ ಮಗ, ಸೊಸೆ, ಪತ್ನಿ, ಮೊಮ್ಮಕ್ಕಳೊಂದಿಗೆ ಹೊರಗೆ ಊಟ ಮಾಡಿ ಬನ್ನಿ. ಯಾರೂ ಬರದಿದ್ದರೂ ನೀವೇ ಭಾರ್ಯಾ ಭರ್ತರು ಹೋಗಿ. ಅಯ್ಯೋ, ನೋಡಿದವರು ಏನೆನ್ನುತ್ತಾರೆ. ಅದನ್ನೆಲ್ಲ ಒತ್ತಟ್ಟಿಗಿಡಿ. ನಿಮ್ಮ ಹೊಟ್ಟೆ, ನಿಮ್ಮ ಇಷ್ಟ. ಅಷ್ಟಕ್ಕೂ ನೀವು ಹೋಗುತ್ತಿರುವುದು ನಿಮ್ಮ ಪತ್ನಿಯೊಂದಿಗೆ ತಾನೇ? ಮತ್ತೊಬ್ಬರ ಪತ್ನಿ ಯೊಂದಿಗೆ ಅಲ್ಲವಲ್ಲ? ವರ್ಷಕ್ಕೊಮ್ಮೆ ಇಬ್ಬರೇ ಪ್ರವಾಸ ಹೋಗಿ ಬನ್ನಿ, ದೇಗುಲಗಳಲ್ಲಿ ಸುತ್ತಾಡಿ. ದೈವ ಕೃಪೆಗೆ ಪಾತ್ರರಾಗಿ, ಪ್ರಕೃತಿ ಹಾಸಿ ಹೊದ್ದು ಸೌಂದರ್ಯ ಮೈ ಚೆಲ್ಲಿದ ವಿಹಾರ ಧಾಮಗಳಲ್ಲಿ ಕೆಲದಿನ ವಾಸ್ತವ್ಯ ಹೂಡಿ. ದೇವದಾರು ಮರಗಳ ನಡುವಲಿ, ಮಂಜು ಮುಸುಕಿದ ಹೂ ಚೆಲ್ಲಿದ ಹಾದಿಯಲಿ ಕೈ ಕೈ ಹಿಡಿದು ಸಾಗುತ್ತ ಪತ್ನಿಗೆ ಹೇಳಿ ‘‘ಭಲೆ, ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು’’. ಹಿಂತಿರುಗುವಾಗ ನಿಮ್ಮ ಬುಟ್ಟಿಯಲ್ಲಿ ಮೂರು ಜನ್ಮಕ್ಕಾಗುವಷ್ಟು, ಪ್ರಫುಲ್ಲತೆ, ಹರುಷ ತುಂಬಿ ಪುಳಕೋತ್ಸವ ದಲ್ಲಿ  ಮಿಂದಿರುತ್ತೀರಿ!

ಮಡಿವಂತಿಕೆ ಏಕೆ?
ಹಿರಿಯ ನಾಗರಿಕರಲ್ಲಿ ದಾಂಪತ್ಯ ಸುಖದ ಕುರಿತು ಒಂಥರಾ ಮಡಿವಂತಿಕೆ. ನೆನಪಿಡಿ, ಸುಖ ದಾಂಪತ್ಯ ಕೂಡುವಿಕೆಯಲ್ಲಿ ಮಾತ್ರ ಇಲ್ಲ. ಪರಸ್ಪರ ಒಂದು ಹಿತವಾದ ಅಪ್ಪುಗೆ, ಕೆನ್ನೆಗೆ ಕೆನ್ನೆ ಸೋಕಿಸಿ, ಉಸಿರಿಗೆ ಉಸಿರು ಮಿಳಿತವಾದಾಗ ಅಬ್ಬಾ! ಅದೆಂಥ ಚಿದ್ವಿಲಾಸ! ಹೀಗೆ ಆನಂದ ಪರ್ಯಾವಸಾಯಿಯಾಗುವುದೂ ಒಂದು ಸುರಮ್ಯ ಅನುಭವವೇ.

ಮೊಮ್ಮಕ್ಕಳ ಮಾಯಾಪಾಶ
60ರ ನಂತರ ಮೊಮ್ಮಕ್ಕಳೆಡೆಗಿನ ಮೋಹ ವರ್ಣನಾತೀತ. ಮೊಮ್ಮಕ್ಕಳೆಡೆಗೆ ಟಿಸಿಲೊಡೆದ ಕಕ್ಕುಲತೆ, ಸೆಳೆತ, ಅವರೊಂದಿಗೆ
ಕೂಸುಮರಿ, ಚೆಂಡು, ಕ್ರಿಕೆಟ್, ಕಣ್ಣಾಮುಚ್ಚಾಲೆ ಎಲ್ಲವೂ ಚೆನ್ನ. ಅವರ ನಿಷ್ಕಲ್ಮಶ ಪ್ರೇಮ, ಕ್ಷಣ ಭಂಗುರ, ಸಿಟ್ಟು, ಸೆಡವು, ಮರುಕ್ಷಣ ಹರ್ಷದ ಪಕಳೆಗಳು. ತೊಡೆಯ ಮೇಲೆ ನಮ್ಮನ್ನು ಮಲಗಿಸಿಕೊಂಡು ಲಾಲಿ ಹೇಳುವಾಗ, ಪುಟ್ಟ ಕೈಗಳಿಂದ ಕೆನ್ನೆ ನೇವರಿಸುವಾಗ ಇದೆಲ್ಲದರ ಮುಂದೆ ಜಗತ್ತೇ ಒಂದು ಲೊಳಲೊಟ್ಟೆ! ಇಂತಿಪ್ಪ 60ರ ನಂತರದ ಬದುಕನ್ನು ಸುಂದರವಾಗಿಸಿ ಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ.

ಉಡುಗೊರೆ ತನ್ನಿ
ಆಗಾಗ ಪತ್ನಿಗೆ ಅನೀರಿಕ್ಷಿತ ಗಿಫ್ಟ್ ತಂದು ಕೈಯಲ್ಲಿಡಿ. ಸೀರೆ, ಒಡವೆ, ಮೊಬೈಲ್, ಅಲಂಕಾರಿಕ ವಸ್ತು ಯಾವುದೇ ಸರಿ ಪತಿ ಪ್ರೀತಿ ಯಿಂದ ತಂದುದನ್ನು ಪತ್ನಿ ಸ್ವೀಕರಿಸದಿರಲಾರಳು. ಹಾಡು ಹಳೆಯದಾದರೇನು ಭಾವ ನವನವೀನ! ಪತ್ನಿಯ ಅವಶ್ಯಕತೆಗಳನ್ನು ಯಾವತ್ತೂ ಕಡೆಗಣಿಸದಿರಿ.