Saturday, 14th December 2024

ಬಿಸಿಲ ದಿನಗಳ ಹಬ್ಬ

ವಿದ್ವಾನ್ ನವೀನ ಶಾಸ್ತ್ರಿ ರಾ. ಪುರಾಣಿಕ

ಪ್ರತಿ ವರ್ಷದಂತೆಯೇ ಮತ್ತೆ ಬಂದಿದೆ ಯುಗಾದಿ. ಬಿಸಿಲಿನ ದಿನಗಳಲ್ಲಿ, ವರ್ಷದ ಮೊದಲ ಹಬ್ಬವಾಗಿ ಬರುವ ಯುಗಾದಿಯ ಆಚರಣೆಯ ಹಿಂದೆ, ನಮ್ಮ ಜನರ ಅಪಾರ ಅನುಭವದ ಸಾರವಿದೆ, ಬಿಸಿಲನ್ನು ಎದುರಿಸುವ ಉಪಾಯ ಗಳ ತಿರುಳಿದೆ.

ಯುಗಾದಿ ಅಥವಾ ಉಗಾದಿ ಎಂದರೆ ಯುಗದ ಆದಿ. ಚೈತ್ರ ಮಾಸದ ಮೊದಲ ದಿನ ಕರೆಯಲ್ಪಡುವ ದಿನವೇ ಈ ಯುಗಾದಿ. ನಮ್ಮ ದೇಶದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿ ಯನ್ನು ಆಚರಿಸ ಲಾಗುತ್ತದೆ. ಯುಗಾದಿ ಪದದ ಉತ್ಪತ್ತಿ ಹೀಗಿದೆ ಯುಗ+ಆದಿ – ಹೊಸ ಯುಗದ ಆರಂಭ ಎಂದರ್ಥ.

ಸಾಂಪ್ರದಾಯಿಕ ಆಚರಣೆ ಮತ್ತು ಮಹತ್ವ
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಮುಖ್ಯವಾಗಿ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಪಂಚಾಂಗ ಶ್ರವಣ, ಗುಡಿ ಪೂಜೆ ಹಾಗೂ ಸರ್ವೇ- ಸಾಮಾನ್ಯವಾಗಿ ಬೇವು – ಬೆಲ್ಲದ ಸೇವನೆ. ಜೀವನದ ಸಿಹಿ-ಕಹಿಗಳೆ ರಡನ್ನೂ ಪಡೆಯ ಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿ ಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ.

ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪದ್ಧತಿಗಳು, ಹಿಂದೂ ಧರ್ಮದ ವೇದಾಂಗದ ಒಂದು ಅಂಗ ವಾದ ಜೋತಿಷ್ಯ ಶಾಸದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿ ಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಮುಖ್ಯವಾಗಿ ಚಾಂದ್ರಮಾನ ಪದ್ಧತಿ ಮೊದಲಿನಿಂದ ಆಚರಿಸಿಕೊಂಡು ಬಂದಿರುವ ಪದ್ಧತಿ ರೂಢಿಯಲ್ಲಿದೆ. ಕರಾವಳಿಯಲ್ಲಿ ಸೌರಮಾನದ ಆಚರಣೆ ಇದೆ.

ಅಶ್ವಿನಿ ನಕ್ಷತ್ರಕ್ಕೆ ರವಿಯ ಪ್ರವೇಶ
ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ.
ವೇದಾಂಗದ ಭಾಗ ಜ್ಯೋತಿಷದ ಪ್ರಕಾರ, ಮೊದಲ ನಕ್ಷತ್ರ ಅಶ್ವಿನಿ – ಅಂದರೆ ಮೇಷ ರಾಶಿಯ – 13.20 ಭಾಗ (ಡಿಗ್ರಿ). ಅಲ್ಲಿ ಸೂರ್ಯನಿzಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಹೊಸಚಿ ಗುರು ಕಾಣುತ್ತದೆ; ಅಂದರೆ ಹೊಸಹುಟ್ಟು.

ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಚಂದ್ರನ ಗತಿ ಅತಿವೇಗ ವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆ ಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ, 11 ರಿಂದ 13 ಪೂರ್ಣಿಮೆ/ ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿ ನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲ ಗಣಿತದ ಅಪಾರವಾದ ಜ್ಞಾನ ಇಲ್ಲಿ ವ್ಯಕ್ತವಾಗುತ್ತದೆ.

ಬೇವು ಬೆಲ್ಲದ ವೈಜ್ಞಾನಿಕ ಹಿನ್ನಲೆ
ಯುಗಾದಿಯ ದಿನದಂದು ಅಭ್ಯಂಜನ ಸ್ನಾನ.
ವತ್ಸರಾದೌ ವಸಂತಾದೌ ಬಲಿರಾಜ್ಯೇ ತಥೈವ ಚ |
ತೈಲಾಭ್ಯಂಗಮಕುರ್ವಾಣೋ ನರಕಂ ಪ್ರತಿಪದ್ಯತೇ||
ಹೊಸ ವರ್ಷದ ಮೊದಲ ದಿನ (ಚೈತ್ರ ಶುಕ್ಲ ಪ್ರತಿಪದ ಯುಗಾದಿ ದಿನ)

ಬೇವಿನ ಎಲೆಗಳನ್ನು ನೀರಿಗೆ ಹಾಕಿ ಸ್ನಾನ ಮಾಡುವುದು, ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಹಚ್ಚಿ ಸ್ನಾನ ಮಾಡು ವುದು, ಸೀಗೇಕಾಯಿ ಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಉಚ್ಚರಿಸಿ ಮಾವಿನ ಎಲೆಗಳಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು.

ನಂತರ ಹೊಸ ಬಟ್ಟೆ ಧರಿಸಿ ತಳಿರು ತೋರಣವನ್ನು ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತೋರಣವಾಗಿ ಕಟ್ಟುವರು. ಬೇವಿನ ಹೂಗಳನ್ನು ಬೆಲ್ಲದೊಂದಿಗೆ ಬೆರಸಿ ತಿನ್ನುವುದು – ಬೇಸಿಗೆಯಲ್ಲಿ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗಿ ಚರ್ಮಕ್ಕೆ ಸಂಬಂಽಸಿದ ಅನೇಕ ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಬೇವಿನ ಎಲೆ, ಹೂ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಮಹತ್ವ ಪಡಿದಿದೆ. ಬೆಲ್ಲವು ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಸಮತೋಲನಗೊಳಿಸಿ ಉತ್ಸಾಹವನ್ನು ತುಂಬುತ್ತದೆ.

ಪಚ್ಚಡಿ
ಹುಣಿಸೇಹಣ್ಣು ಬೆಲ್ಲ ಮಾವಿನಕಾಯಿ ಉಪ್ಪು , ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಅಥವಾ ಪಾನಕ ಕೋಸಂಬರಿಯನ್ನು ನೈವಿಧ್ಯಮಾಡಿ ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಅಲಂಕಾರ ಮಾಡುತ್ತಾರೆ. ಪಂಚಾಂಗ ಪುಜೆಯನ್ನು ಮಾಡಿದ ನಂತರ ಪಂಚಾಂಗ ಶ್ರವಣ ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.

ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು. ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ತಿಂದು, ಜೀವನದಲ್ಲಿ ಎಲ್ಲವನ್ನೂ ಸಮನಾಗಿ ಸ್ವೀಕರಿಸಬೇಕೆಂಬ ಸಂದೇಶವಿದೆ. ಬೆಲ್ಲವು ಹೊಟ್ಟೆಯೊಳಗೆ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ.
ಶತಾಯುವ್ರಜ್ರದೇಹತ್ವ ಸರ್ವಸಂಪತ್ ಪ್ರದಂ ತಥಾ|
ಸರ್ವಾರಿಷ್ಟ ಹರಂ ಕುರ್ವೇ ನಿಂಬಪತ್ರಾಶನಂ ಶುಭಂ|| –
ಅಂದರೆ ನೂರು ವರುಷಗಳ ಆಯುಷ್ಯ, ಸದೃಢ
ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ
ಅರಿಷ್ಟ ನಿವಾರಣೆಗಾಗಿಯೂ ಬೇವು – ಬೆಲ್ಲ ಸೇವನೆಯು
ಸಹಾಯ ಮಾಡುತ್ತದೆ.

ಖಣಿ ಇಡುವುದು
ಕರಾವಳಿಯ ಸೌರಮಾನ ಯುಗಾದಿಯ ವಿಶೇಷ ಎಂದರೆ ಖಣಿ ಇಡುವುದು.. ಬಾಳೆ ಎಲೆ, ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ಇಷ್ಟದ ದೇವರ ಪ್ರತಿಮೆ, ಅದರ ಮುಂದೆ ಒಂದು ಕನ್ನಡಿ – ಆ ಕನ್ನಡಿಯಲ್ಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲ್ಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ.

ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು, ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲ್ಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ವೈವಿಧ್ಯಮಯ ರುಚಿ ರುಚಿಯಾದ ಅಡುಗೆ ಮಾಡಿ ನೈವೇದ್ಯ ಅರ್ಪಿಸಿ, ದೇಗುಲಕ್ಕೆ ಹಾಗೂ ಹಿರಿಯರ ಆಶೀರ್ವಾದ ಪಡೆದು, ಪಂಚಾಂಗ ಶ್ರವಣ ಮಾಡುವರು.