ಟಿ.ಎಸ್.ಶ್ರವಣ ಕುಮಾರಿ
ನಾವು ನೋಡಿಕೊಂಡು ಬಂದಿದ್ದ ಎಷ್ಟೋ ಪ್ರದೇಶಗಳು ಬೂದಿಯಾಗತೊಡಗಿದ್ದನ್ನು ಟೀವಿಯ ಪರದೆಯ ಮೇಲೆ ಕಂಡೆವು. ಅದರಿಂದುಂಟಾದ ವಾಯು ಮಾಲಿನ್ಯ ಅದೆಷ್ಟೋ ಮೈಲುಗಳ ಸುತ್ತಳತೆಗೂ ವ್ಯಾಪಿಸಿ ಅಲ್ಲಿನ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಸೇರಿಕೊಳ್ಳುವ ಸೂಚನೆ ಮೇಲಿಂದ ಮೇಲೆ ಬರುತ್ತಲೇ ಇತ್ತು.
ನಾವು ಚಿಕ್ಕವರಿದ್ದಾಗ ‘ಬೆಟ್ಟಕ್ಕೆ ಬೆಂಕಿ ಹೊತ್ತಿತೋಡಿರೋ ಓಡಿರೋ’ ಎನ್ನುವ ಆಟವೊಂದನ್ನು ಆಡುತ್ತಿದ್ದೆವು. ಆಗ ಅದೊಂದು ಮೋಜು; ಆದರೆ ಈ ವಾಕ್ಯದ ಕರಾಳ ಸ್ವರೂಪವನ್ನು ಕಂಡಿದ್ದು ಕಳೆದ ವರ್ಷ ಮತ್ತು ಅದರ ಹಿಂದಿನ ವರ್ಷ ಅಮೇರಿಕಾದ ಪಶ್ಚಿಮ ತೀರದ ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್‌ನಲ್ಲಿ ಇದ್ದಾಗ. ಸೆಪ್ಟೆಂಬರ್ ಎಂದರೆ ಅಲ್ಲಿ ಬೇಸಿಗೆ ಮುಗಿಯುವ ಸಮಯ. ಇಡೀ ಪ್ರದೇಶವೇ ಬೆಟ್ಟ, ಕಣಿವೆಗಳಿಂದ ತುಂಬಿದ್ದು ಅದರ ಮೇಲಿನ ಹಸಿರು ಹುಲ್ಲೆಲ್ಲಾ ಹಳದಿ ಬಣ್ಣಕ್ಕೆ ತಿರುಗಿ, ಈ ಸಮಯದಲ್ಲಿ ಅದೂ ಒಣಗಿ ನಸುಗಂದುಬಣ್ಣದ ಗುಡ್ಡಗಳಾಗಿ ಕಾಣತೊಡಗುತ್ತವೆ. ಈ ಪ್ರದೇಶದಲ್ಲಿ ಹಾಲು ಮತ್ತು ಮಾಂಸ ಎರಡೂ ಉದ್ದೇಶಕ್ಕಾಗಿ ಹಸುಗಳನ್ನು ಸಾಕುವವರು ಈ ಹಸಿರುಹುಲ್ಲಿನ ಗುಡ್ಡಗಳನ್ನು ಭೋಗ್ಯಕ್ಕೆ ಪಡೆದುಕೊಂಡಿರುತ್ತಾರೆ.
ಬಿರುಬೇಸಿಗೆಯ ಸಮಯದಲ್ಲಿ ಒಂದು ಸಣ್ಣ ಕಿಡಿ ಎಲ್ಲಿ ಹೊತ್ತಿಕೊಂಡರೂ ಇಂತಹ ಗುಡ್ಡಗಳ ಸಾವಿರಾರು ಎಕರೆ ಪ್ರದೇಶ ಬೆಂಕಿಗೀಡಾಗಿ ರಭಸದಿಂದ ಆಹುತಿ ತೆಗೆದುಕೊಳ್ಳುತ್ತಾ ಹೋಗುತ್ತದೆ. ಬರಿಯ ಹುಲ್ಲಿರುವ ಪ್ರದೇಶ ಮಾತ್ರಾ ಹೊತ್ತಿ ಉರಿದರೆ ಪರವಾಗಿಲ್ಲ. ಕೆಲವೊಮ್ಮೆ ಊರಿಗೆ ಹತ್ತಿರವಿರುವ ಇಂತಹ ಕೆಲವು ಗುಡ್ಡಗಳ ಮೇಲೆ ಹಾಗೂ ಅದರ ಬುಡದಲ್ಲಿ ಜನವಸತಿಗಳೂ ಇರುತ್ತವೆ. ಇಲ್ಲಿನ ಮನೆಗಳೆಲ್ಲಾ ಮರದಿಂದಲೇ ನಿರ್ಮಿತವಾಗಿರುವುದರಿಂದ ಹೀಗೆ ಕಾಳ್ಗಿಚ್ಚು ಹರಡಿದಾಗ ಎಷ್ಟೋ ಮನೆಗಳೂ ಅಗ್ನಿಗಾಹುತಿಯಾಗುವುದುಂಟು.
ಪಂಜಾಬಿನ ರೈತರು ಕೂಳೆಬೆಳೆಯನ್ನು ಸುಡುವ ನವೆಂಬರ್ ತಿಂಗಳಿನಲ್ಲಿ ದೆಹಲಿಯನ್ನು ಮುಚ್ಚಿಕೊಳ್ಳುವ ಹೊಂಜಿನಂತೆಯೇ,
ಇಲ್ಲೂ ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲಾ ಹೊಂಜು ಆವರಿಸಿಕೊಳ್ಳುತ್ತದೆ. ಉಸಿರಾಟಕ್ಕೆ ತೊಂದರೆಯಾಗುವ ಅಪಾಯದ ಮುನ್ಸೂಚನೆ ಕಂಡರೆ ಅಲ್ಲಿರುವ ಜನವಸತಿಯನ್ನು ಖಾಲಿ ಮಾಡಿಸಿ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಆಜ್ಞಾಪಿಸುತ್ತಾರೆ. ತಕ್ಷಣವೇ ಅಗ್ನಿಶಮನದ ಕಾರ್ಯಾಚರಣೆಯನ್ನು ನಡೆಸಿದರೂ ಪರಿಸ್ಥಿತಿ ತಿಳಿಯಾಗಲು ಕೆಲವೊಮ್ಮೆ ತಿಂಗಳ ಕಾಲವೂ ಹಿಡಿಯ ಬಹುದು. ಕಾಳ್ಗಿಚ್ಚೆಲ್ಲಾ ಆರಿದ ನಂತರ ಎಲ್ಲೆಡೆಯೂ ಕಾಣುವ ಸುಟ್ಟು ಕರಕಲಾಗಿರುವ ಬೂದುಗಂದು ಬಣ್ಣದ ಗುಡ್ಡಗಳು ಪ್ರಕೃತಿಯ ರೌದ್ರ ನರ್ತನದ ಕುರುಹಿನ ಹಾಗೆ ಹಾಳು ಸುರಿಯುತ್ತಿರುತ್ತವೆ. ಸತ್ತ ಗುಡ್ಡಗಳೆಲ್ಲಾ ಮತ್ತೆ ಜೀವಕಳೆ ತುಂಬಿಕೊಳ್ಳಲು ವಸಂತನ ಆಗಮನಕ್ಕೇ ಕಾಯಬೇಕು. ಒಂದು ವಾರ ಮಳೆ ಸುರಿದರೆ ಸಾಕು, ದಿನದಿಂದ ದಿನಕ್ಕೆ ಗುಡ್ಡಗಳ ಬಣ್ಣ ಬದಲಾಗುತ್ತಾ ಮತ್ತೆ ಹಸಿರಿನಿಂದ ಕಂಗೊಳಿಸತೊಡಗುತ್ತವೆ.
ಯೆಸೋಮಿಟಿ ಅರಣ್ಯದಲ್ಲಿ ಬೆಂಕಿ
ಎರಡು ವರ್ಷದ ಹಿಂದೆ ನಾವು ಕ್ಯಾಲಿಫೋರ್ನಿಯಾದ ಮಿಲ್ಪಿ ಟಾಸ್‌ನಲ್ಲಿರುವ ಮಗಳ ಮನೆಗೆ ಹೋಗಿದ್ದಾಗ ಸಂದರ್ಶಿಸಿದ ಅಲ್ಲಿನ ಪಶ್ಚಿಮ ತೀರದ ಹಲವು ಪ್ರವಾಸಿ ತಾಣಗಳಲ್ಲಿ ಸ್ವರ್ಗದ ತುಂಡಿನಂತಿರುವ ಯೆಸೋಮಿಟಿ ಪರ್ವತ ಮಾಲೆಯೂ ಒಂದು.
ಅಖಂಡ ಅಗಾಧ ಶಿಲೆಗಳು, ಧುಮ್ಮಿಕ್ಕುತ್ತಿರುವ ಜಲಪಾತಗಳು, ಹರಿಯುತ್ತಿರುವ ನದಿ, ಹಸಿರನ್ನೇ ಹೊದ್ದು ಮಲಗಿದಂತಿರುವ ಪ್ರದೇಶ ಪ್ರವಾಸಿಗರ, ಚಾರಣಿಗರ ಆಕರ್ಷಣೆಯ ತಾಣ. ಒಂದೊಂದು ಹವಾಮಾನದಲ್ಲೂ ಒಂದೊಂದು ರೂಪದಿಂದ ಕಂಗೊ ಳಿಸುವ ಯೆಸೋಮಿಟಿ ಪರ್ವತ ಮಾಲೆ ಯನ್ನು ಒಮ್ಮೆ ನೋಡಿಬಂದಿದ್ದರೂ, ಭಾರತಕ್ಕೆ ಮರಳುವ ಮುನ್ನ ಒಂದು ರಾತ್ರಿ ಅಲ್ಲಿ ಉಳಿದುಕೊಂಡು ಅಲ್ಲಿನ ನೈಸರ್ಗಿಕ ವಾತಾವರಣದಲ್ಲಿ ಕಾಲಕಳೆದು ಬರಬೇಕೆಂದು ಯೋಜನೆ ಮಾಡಿಕೊಂಡಿದ್ದೆವು.
ನಿಗದಿಯಾದ ದಿನಕ್ಕೆ ಒಂದು ವಾರ ಮುಂಚಿತವಾಗಿ ಬೆಟ್ಟಬೇಗೆಯ ಕಾರಣದಿಂದಾಗಿ ಅಲ್ಲಿಗೆ ಯಾರನ್ನೂ ಬಿಡುತ್ತಿಲ್ಲವೆನ್ನುವ ಸುದ್ದಿ ಟೀವಿಯಲ್ಲಿ ಬಿತ್ತರವಾಗತೊಡಗಿತು. ಸಾವಿರಾರು ಎಕರೆ ಅರಣ್ಯ ಪ್ರದೇಶ ಅಗ್ನಿಗಾಹುತಿಯಾಗಿ ಧಗಧಗಿಸುತ್ತಿರುವ ದೃಶ್ಯ ಭಯ ಹುಟ್ಟಿಸುತ್ತಿತ್ತು. ನಾವು ನೋಡಿಕೊಂಡು ಬಂದಿದ್ದ ಎಷ್ಟೋ ಪ್ರದೇಶಗಳು ಬೂದಿಯಾಗತೊಡಗಿದ್ದನ್ನು ಟೀವಿಯ ಪರದೆಯ ಮೇಲೆ ಕಂಡೆವು.
ಅದರಿಂದುಂಟಾದ ವಾಯು ಮಾಲಿನ್ಯ, ಅದೆಷ್ಟೋ ಮೈಲುಗಳ ಸುತ್ತಳತೆಗೂ ವ್ಯಾಪಿಸಿ ಅಲ್ಲಿನ ಮನೆಗಳನ್ನು ಖಾಲಿ ಮಾಡಿ
ಸುರಕ್ಷಿತ ಸ್ಥಳಕ್ಕೆ ಸೇರಿಕೊಳ್ಳುವ ಸೂಚನೆ ಮೇಲಿಂದ ಮೇಲೆ ಬರುತ್ತಲೇ ಇತ್ತು. ನಾವು ಕಂಡು ಬಂದಿದ್ದ ಸ್ವರ್ಗ ನಮ್ಮ ಕಣ್ಣೆದುರೇ ಉರಿದು ಬೂದಿಯಾಗುವ ದೃಶ್ಯ ನಿಜಕ್ಕೂ ಭಯಾನಕವಾದದ್ದು. ಒಂದೆಡೆ ಪ್ರಕೃತಿಮಾತೆ ತನ್ನೆಲ್ಲಾ ಲೀಲೆಗಳನ್ನೂ ತೋರುತ್ತಾ
ನಲಿದಾಡುತ್ತಿರುವ ಜಾಗದಲ್ಲೇ ಇಂತಹ ಕೋಪವನ್ನೂ ತೋರುತ್ತಾಳೇಕೆ ಎನ್ನುವುದು ಒಂದು ದುರಂತ ವಿಸ್ಮಯ!
ನಮ್ಮ ಕಾರ್ಯಕ್ರಮವಂತೂ ರದ್ದಾಯಿತು. ಮುಂದಿನ ಬಾರಿ ಬಂದಾಗ ಹೋದರಾಯಿತು ಎಂದುಕೊಂಡೆವು. ಆದರೆ ಕಳೆದ
ವರ್ಷವೂ ಮತ್ತೆ ಈ ಕಾಳ್ಗಿಚ್ಚು ಆವರಿಸಿ ನಮ್ಮ ಹಂಬಲ ಬರಿಯ ಹಂಬಲವಾಗೇ ಉಳಿಯಿತು. ಏನೆಂದರೆ ಎರಡು ಬಾರಿಯೂ
ಇದು ಬರಿಯ ನಾವು ಟೀವಿಯಲ್ಲಿ ನೋಡಿದ, ಕೇಳಿದ ವಿಷಯವಾಗಿತ್ತು. ಈಗ ಆರು ತಿಂಗಳ ಹಿಂದೆ ಮಗಳು ಸ್ಯಾನ್ ಹೊಸೆಗೆ ತನ್ನ
ಬಿಡಾರವನ್ನು ಬದಲಾಯಿಸಿದ್ದಾಳೆ. ಆಗಸ್ಟಿನ ಕೊನೆಯ ವಾರದಲ್ಲಿ ಕರೆ ಮಾಡಿದಾಗ ‘ಈ ಬಾರಿ ಕಾಳ್ಗಿಚ್ಚಿನ ಸ್ವರೂಪ ಇನ್ನೂ
ಭೀಕರವಾಗಿದೆ.
ನಾವು ಇರುವಲ್ಲಿಂದ ಎರಡು ಮೈಲು ದೂರದವರೆಗಿನ ಜನರನ್ನೆಲ್ಲಾ ಮನೆ ಖಾಲಿ ಮಾಡಿಸಿದ್ದಾರೆ. ಇಡೀ ವಾತಾವರಣವೇ ಹೊಗೆಯ ಘಾಟಿನಿಂದ ತುಂಬಿದೆ. ಮಂಜುಮಂಜಾಗಿ ಕಾಣುತ್ತಿದೆ. ಯಾವ ಘಳಿಗೆಯಲ್ಲಿ ನಮ್ಮನ್ನೂ ಖಾಲಿ ಮಾಡು ಎನ್ನುತ್ತಾ ರೋ ತಿಳಿಯದು’ ಎಂದಾಗ ನಮಗೆ ಎಲ್ಲೋ ಇದ್ದ ಮಾರಿ ಪಕ್ಕದಲ್ಲೇ ಕೂಗಿದಂತಾಯಿತು. ಹಾಗೇನಾದರೂ ಆದರೆ ನೀವೆಲ್ಲಿ ಹೋಗಬೇಕು? ಗಾಯಿತ್ರಿಯ ಮನೆಗೆ ಹೋಗುತ್ತಿದ್ದೀರಾ? (ಗಾಯಿತ್ರಿ ನನ್ನ ನಾದಿನಿಯ ಮಗಳು ಅಲ್ಲಿಂದ ನಲವತ್ತು ಮೈಲು ದೂರದ ಡಬ್ಲಿನ್ನಲ್ಲಿ ಅವರ ಮನೆಯಿದೆ) ಎಂದು ಕೇಳಿದೆ. ಅಲ್ಲೂ ಇದೇ ಪರಿಸ್ಥಿತಿಯಿದೆ.
ಇನ್ಯಾರಾದರೂ ಸ್ನೇಹಿತರ ಮನೆಗೆ ಹೋಗಬೇಕಾಗುತ್ತೇನೋ. ಯಾವುದೇ ಕಾಲಕ್ಕೂ ಹೊರಡಬೇಕಾಗಬಹುದು. ಅತ್ಯಗತ್ಯ
ವಸ್ತುಗಳನ್ನು ಒಂದೆಡೆ ಜೋಡಿಸಿಟುಕೊಂಡಿದ್ದೇವೆ ಎಂದಳು. ಅಂತೂ ಒಂದು ಹತ್ತು ಹದಿನೈದು ದಿನಗಳಲ್ಲಿ ಪರಿಸ್ಥಿತಿ ತಿಳಿಯಾ ಯಿತು. ಮನೆ ಬಿಡುವ ಸಂದರ್ಭ ಒದಗಲಿಲ್ಲ. ನಾವು ನಿರಾಳರಾದೆವು.
ಎಲ್ಲಿದೆ ಸ್ವರ್ಗ?
ಐಶಾರಾಮಿ ಜೀವನಶೈಲಿಯನ್ನು ರೂಢಿಸಿಕೊಂಡಿರುವ ಅಮೆರಿಕ ಒಂದು ಸ್ವರ್ಗ ಎಂದುಕೊಳ್ಳುವವರಿದ್ದಾರೆ. ಪ್ರಕೃತಿ ಮಾತೆ
ಎಲ್ಲೆಡೆಯೂ ತನ್ನ ಎಲ್ಲ ರೂಪಗಳಿಂದಲೂ ಇದ್ದಾಳೆಂದೇ ನನಗನ್ನಿಸುತ್ತದೆ. ಅಮೆರಿಕದ ಪೂರ್ವ ತೀರದಲ್ಲಿ ಶೂನ್ಯ ಡಿಗ್ರಿ ಗಿಂತಲೂ ಕೆಳಗಿಳಿಯುವ ತಾಪಮಾನ ತಿಂಗಳುಗಟ್ಟಲೆ.
ರಸ್ತೆಗಳೆಲ್ಲಾ ಮಂಜುಗಡ್ಡೆಯಿಂದಾವೃತವಾಗಿ, ಎಲ್ಲೆಡೆಯೂ ಶ್ವೇತ ವರ್ಣವೊಂದೇ ಸ್ಥಿರವಾಗಿ ಒಂದು ನಿರ್ಜೀವ ವಾತಾವರಣ
ಸೃಷ್ಟಿಯಾಗಿ ಮನೆಯಿಂದ ಹೊರಗಿಣುಕುವುದೇ ಪ್ರಯಾಸವಾಗುವ ಹವಾಮಾನ. ಮಧ್ಯ ಅಮೇರಿಕಾದಲ್ಲಿ ಶೀತ ಮತ್ತು
ಉಷ್ಣತೆಯ ವೈಪರೀತ್ಯಗಳು. ಜೊತೆಗೆ ಬಿರುಗಾಳಿ, ಸುಂಟರಗಾಳಿಯ ಆರ್ಭಟ. ಉಷ್ಣದಲೆಗಳ ಸಂಕಟ! ಗಾಳಿಯ ಆರ್ಭಟಕ್ಕೆ ಸಿಲುಕಿದಾಗ ಅವಿತುಕೊಳ್ಳಲು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಇರುವ ನೆಲಮಾಳಿಗೆ.
ಪಶ್ಚಿಮ ತೀರದಲ್ಲಿ ಭೂಕಂಪದ, ಕಾಡ್ಗಿಚ್ಚುಗಳ ಭಯ. ವಿಶ್ವ ಪ್ರಸಿದ್ಧ ಲಾಸ್ ವೇಗಾಸ್‌ಗೆ ಹೋಗುವ ದಾರಿಯಲ್ಲಿ ನೂರಾರು ಮೈಲುಗಟ್ಟಲೆ ಭೂಪ್ರದೇಶ ನೀರಿನ ಅಭಾವದಿಂದಾಗಿ ಜನವಸತಿಯೇ ಇಲ್ಲದೆ ಪಾಳು ಬಿದ್ದಿದೆ. ಇದ್ದ ಗ್ರಾಮಗಳ ಜನರು ಗುಳೆ ಯೆದ್ದು ಹೋಗಿ, ಆ ಊರುಗಳಿಗೆ ದೆವ್ವಗಳ ಊರೆಂಬ ಹೆಸರು ಅಂಟಿಕೊಂಡಿದೆ. ಹಾಗಾದರೆ ಸ್ವರ್ಗ ಇರುವುದೆಲ್ಲಿ? ನೋಡುವ ನಮ್ಮ ಕಣ್ಣಲ್ಲಲ್ಲವೇ?