Sunday, 15th December 2024

ಫ್ರಾಂಕ್‌’ಫರ್ಟ್‌’ನಲ್ಲಿ ಆಗಸದೆತ್ತರಕ್ಕೆ

ಡಾ.ಉಮಾಮಹೇಶ್ವರಿ ಎನ್‌.

ಅತಿ ಎತ್ತರದ ಕಟ್ಟಡಗಳಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಕುಳಿತು, ಕಾಫಿ ಹೀರುತ್ತಾ, ದೂರದಿಗಂತವನ್ನು, ಕೆಳಗೆ ಹರಡಿರುವ ನಗರವನ್ನು ನೋಡುವ ಅನುಭವವೇ ಸುಂದರ.

ನನ್ನ ಗೆಳತಿಯೊಬ್ಬರು ಎಂ. ಜಿ. ರಸ್ತೆಯಲ್ಲಿ, 13 ನೇ ಮಹಡಿಯಲ್ಲಿರುವ ರೆಸ್ಟೋರೆಂಟ್‌ಗೆ ಊಟಕ್ಕೆ ಆಹ್ವಾನಿಸಿದಾಗ ಅಲ್ಲಿನ ವಿಶೇಷತೆ ಏನೆಂದು ವಿಚಾರಿಸಿದೆ. ‘ಆ ಎತ್ತರದಿಂದ ಬೆಂಗಳೂರಿನ ಸೌಂದರ್ಯವನ್ನು ಕಣ್ತುಂಬಿಕೊಂಡು ಊಟಮಾಡುವ ಮಜವೇ ಬೇರೆ’ ಎಂದರು. ನೆನಪು ಎರಡು ವರ್ಷಗಳ ಹಿಂದಕ್ಕೆೆ ಪಯಣಿಸಿತು.

ಫ್ರಾಂಕ್‌ಫರ್ಟ್ ನಗರದ ಎತ್ತರದ ಸ್ಥಳಗಳಿಗೆ ವಿವಿಧ ಬಗೆಗಳಲ್ಲಿ ತಲುಪಿ, ಮಕ್ಕಳಂತೆ ಸಂಭ್ರಮಿಸಿದ ಜರ್ಮನಿ ಪ್ರವಾಸದ ನೆನಪಿನ ಬುತ್ತಿ ತನ್ನಿಂತಾ ನಾಗಿಯೇ ಬಿಚ್ಚಿಕೊಂಡಿತು.

ಮೆಟ್ಟಲುಗಳನ್ನೇರಿ

ಕೈಸರ್ ಡೋಮ್ ಅಥವಾ ಇಂಪೀರಿಯಲ್ ಚರ್ಚ್ ಎಂಬ ಪುರಾತನ ಚರ್ಚ್ ಫ್ರಾಂಕ್ ಫರ್ಟ್ ನಗರದ ಪ್ರಸಿದ್ಧ ನಿರ್ಮಿತಿ. ನಿಜ ವಾದ ಅರ್ಥದಲ್ಲಿ ಇದು ಚರ್ಚ್ ಆಗಿರಲಿಲ್ಲ. ಯಾವತ್ತೂ ಇದು ಬಿಷಪ್‌ರ ತಾಣ ಆಗಿರಲಿಲ್ಲ. ರಾಜರನ್ನು ಆಯ್ಕೆ ಮಾಡುವ ಹಾಗೂ ರಾಜರ ಕಿರೀಟಧಾರಣೆ ಸಮಾರಂಭ ನಡೆಯುವ ಸ್ಥಳವಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಲ್ಲಿ ಪ್ರಾರ್ಥನೆಗಳು ನಡೆಯುತ್ತಿವೆ. ಈ ಚರ್ಚಿನ 95 ಮೀಟರ್ ಎತ್ತರದ ಗೋಪುರವನ್ನು ಒಳಗಿನ ಸುರುಳಿ ಮೆಟ್ಟಲುಗಳನ್ನು ಉಪಯೋಗಿಸಿ ಹತ್ತಬಹುದು.

ತುತ್ತತುದಿಯಲ್ಲಿರುವ ವೀಕ್ಷಣಾ ಸ್ಥಳದಿಂದ ನಗರದ 360 ಡಿಗ್ರಿ ನೋಟ ಲಭ್ಯ. ಇದನ್ನು ಏರಲು ತಲಾ ಮೂರು ಯೂರೋಗಳ ಟಿಕೆಟ್ ಖರೀದಿ ಮಾಡಿದೆವು. ಹತ್ತಿಳಿಯುವಾಗ ಏನಾದರೂ ಅವಘಡಗಳಾದರೆ ಪ್ರವಾಸಿಗರೇ ಅದರ ಜವಾಬ್ದಾರರು ಎಂದು
ಸ್ಪಷ್ಟವಾಗಿ ಟಿಕೆಟ್ ನಲ್ಲಿ ನಮೂದಿಯಾಗಿತ್ತು. ಭಂಡ ಧೈರ್ಯದಿಂದ ಆರೋಹಣ ಆರಂಭಿಸಿಯೇ ಬಿಟ್ಟೆವು.

ಸುರುಳಿಯಾಕಾರದಲ್ಲಿ ನಿರ್ಮಿಸಿದ ತ್ರಿಕೋನಾಕಾರದ ಒಂದೊಂದೇ ಮೆಟ್ಟಲ ನ್ನೇರತೊಡಗಿದೆವು. ನಿಧಾನವಾಗಿಯೇ ಹತ್ತುವಾಗ ಮೇಲಿನಿಂದ ಯಾರಾದರೂ ಸ್ಥೂಲ ಶರೀರದವರು ಇಳಿಯುತ್ತಿದ್ದರೆ ಸುಧಾರಿುವುದು ಹೇಗಪ್ಪಾ ಎಂಬ ಸಂಶಯದ ಹುಳ ತಲೆ ಯೊಳಗೆ ಹೊಕ್ಕು ನಗು ಬಂತು.

ಒಂದೆರಡು ಯುರೋಪಿಯನ್ ಕುಟುಂಬಗಳನ್ನು ಮುಂದೆ ಹೋಗಲು ಬಿಟ್ಟು ನನ್ನ ಸವಾರಿ ನಿಧಾನವಾಗಿ ಮತ್ತೆ ಮೇಲೆ ಹೊರಟಿತು. ಆಸರೆಗಾಗಿ ಅಳವಡಿ ಸಿದ್ದ ಕಬ್ಬಿಣದ ಸಲಾಕೆ ಸುರುಳಿಯಾಕಾರದಲ್ಲಿ ಮೆಟ್ಟಲುಗಳೆತ್ತರಕ್ಕೂ ಜೊತೆಯಾಗಿತ್ತು.

ಉದ್ದಕ್ಕೂ ಯಾವುದೇ ವೆಲ್ಡ್ ಮಾಡಿದ ಗುರುತುಗಳಿಲ್ಲದೇ ಇದ್ದ ಈ ಕಬ್ಬಿಣದ ಆಸರೆಯನ್ನು ಒಳಗೆ ಹೇಗೆ ಹುದುಗಿಸಿರಬಹು
ದೆಂಬ ಯೋಚನೆಯಲ್ಲಿ ಮುಳುಗಿದ ಜತೆಗಿದ್ದ ಮೆಕ್ಯಾನಿಕಲ್ ಇಂಜಿನಿಯರ್ ಮಗ. ವೀಕ್ಷಣಾ ಸ್ಥಳದ ಬಾಗಿಲನ್ನು ದಾಟಿ
ಹೊರಬಂದಾಗ ಕಂಡ ಸುತ್ತಲಿನ ದೃಶ್ಯ ಹತ್ತಿದ ಆಯಾಸವನ್ನೆಲ್ಲಾ ಮರೆಮಾಚಿತು.

ಆ ದಿವಸದ ಹವಾಮಾನ ಅತಿ ಅನುಕೂಲಕರವಾಗಿತ್ತು. ನೀಲಿ ಬಣ್ಣದ ಶುಭ್ರ ಆಕಾಶ, ನಗರದುದ್ದಕ್ಕೂ ಹರಿಯುವ ಮೈನ್ ನದಿ ಮತ್ತು ಅದರಲ್ಲಿ ಹರಿಯುವ ನೀರಿನ ನೀಲಿಬಣ್ಣ, ನದಿಯಲ್ಲಿ ವಿಹರಿಸುತ್ತಿದ್ದ ದೋಣಿಗಳು, ನದಿ ದಾಟಲು ಇರುವ ಸೇತುವೆಗಳ ಸಾಲು…ನೋಡಿದಷ್ಟೂ ಮುಗಿಯದ ಸೌಂದರ್ಯ. ಆ ಎತ್ತರದಿಂದ ಹಿಂದಿನ ದಿವಸ ಭೇಟಿ ಇತ್ತ ಫ್ರಾಂಕ್ಫರ್ಟ್ ನ ಅಧಿಕಾರದ ಸ್ಥಳವಾದ ರೋಮರ್, ಅದರ ಸುತ್ತ ಮುತ್ತಲಿರುವ ಪ್ರಮುಖ ಕಟ್ಟಡಗಳನ್ನು ಗುರುತಿಸಿದಾಗ ಅದೇನೋ ಸಂಭ್ರಮ. ಗಜ ಗಾಂಭೀರ್ಯ ಹೊತ್ತು ನಿಂತಿದ್ದ ಗಗನಚುಂಬಿ ಕಟ್ಟಡಗಳ ಸಾಲು ತಮ್ಮದೇ ಸೌಂದರ್ಯ ಸೂಸುತ್ತಿದ್ದವು. ಬಿಸಿಲಿನ ಝಳ ಜಾಸ್ತಿ ಯಾದಾಗ ಕೆಳಗಿಳಿದು, ಚರ್ಚಿನ ಒಳಾಂಗಣವನ್ನು ವೀಕ್ಷಿಸಿದೆವು.

ಲಿಫ್ಟ್‌ ಏರಿ

ಮರುದಿನ ಸಾಯಂಕಾಲ ಗೊಯಥೆಯ ಮನೆಯನ್ನು ವೀಕ್ಷಿಸಿದ ನಂತರ ಸಮೀಪದಲ್ಲೇ ಇದ್ದ ಮೈನ್ ಟವರ್ ಕಡೆ ಕಾಲ್ನಡಿಗೆ ಯಲ್ಲಿ ಹೊರಟೆವು. ತುಂತುರು ಮಳೆ, ಚಳೀ. ಅಲ್ಲಿನ ಮೈನ್ ನದಿಯ ನಾಮಧೇಯ ಹೊಂದಿರುವ ಈ ಗಗನಚುಂಬಿ, ಜರ್ಮನಿ ಹಾಗೂ ಫ್ರಾಂಕ್ಫರ್ಟ್‌ಗಳಲ್ಲಿ ಐದನೇ ಅತಿ ಎತ್ತರದ ಕಟ್ಟಡವೆಂದು ಖ್ಯಾತಿ ಹೊಂದಿದೆ. ಪ್ರವಾಸಿಗರಿಗೆ ನಗರವೀಕ್ಷಣೆಯ ಸೌಲಭ್ಯ ಒದಗಿಸುವ ಏಕೈಕ ಆಧುನಿಕ ಸ್ಥಳ.

56 ಅಂತಸ್ತುಗಳ ಎತ್ತರದ ಈ ಸೌಧದೊಳಕ್ಕೆ ಪ್ರವಾಸಿಗರು ಹೋಗಬೇಕಾದರೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೊಳಗಾದಂತೆ ತಪಾಸಣೆಗೊಳಗಾಗಬೇಕು. ಏಳು ಯೂರೋಗಳ ಟಿಕೆಟ್ ಖರೀದಿಸಬೇಕು. ಮೇಲಕ್ಕೆ ಕೊಂಡೊಯ್ಯುವ ಲಿಫ್ಟ್ ಕೇವಲ 45 ಸೆಕೆಂಡು ಗಳಲ್ಲಿ ನಮ್ಮನ್ನು 54 ನೆಯ ಅಂತಸ್ತಿನ ವೀಕ್ಷಣಾ ಸ್ಥಳಕ್ಕೆ ತಂದಿತು. ಇಲ್ಲಿಂದ ಮೇಲೆ ಎರಡು ಅಂತಸ್ತುಗಳನ್ನು ಮೆಟ್ಟಲೇರಿ 56 ನೇ ಅಂತಸ್ತಿನ ಇನ್ನೊಂದು ವೀಕ್ಷಣಾ ಮಜಲನ್ನು ತಲುಪಬೇಕು.

ಮಳೆ- ಮಂಜುಗಳ ಮಧ್ಯದಲ್ಲಿ ವೀಕ್ಷಣೆ ಸಮಾಧಾನಕರವಾಗದಿದ್ದರೂ ಸುತ್ತಲೂ ಇದ್ದ ಗಾಜಿನ ಗೋಡೆಯ ಮೂಲಕ ಕಾಣು ವಷ್ಟು ನೋಟಗಳನ್ನು ಕಣ್ತುಂಬಿಕೊಂಡೆವು. ಟೆಲಿಸ್ಕೋಪ್ ನಲ್ಲೂ ಕೆಲವು ದೃಶ್ಯಗಳನ್ನು ಕಂಡೆವು. 53 ನೆಯ ಅಂತಸ್ತಿನಲ್ಲಿರುವ ರೆಸ್ಟೋರೆಂಟ್ ನಲ್ಲಿ ಕುಳಿತು ಮತ್ತೆ ಸ್ವಲ್ಪ ಆಚೀಚೆ ನೋಡಿ ಕೆಳ ಬಂದೆವು.

ಎಸ್ಕಲೇಟರ್ ಏರಿ
ಫ್ರಾಂಕ್‌ಫರ್ಟ್‌ನ ಆಧುನಿಕ ನಿರ್ಮಾಣಗಳಲ್ಲೊಂದಾದ ಮೈ ಝೈಲ್ ಎಂಬ ಮಾಲ್ ಇನ್ನೊಂದು ಆಕರ್ಷಣೆ. ಮೂರನೇ
ದಿವಸದ ಮೇಲೇರುವಿಕೆ ಈ ಮಾಲ್‌ನ ಎಸ್ಕಲೇಟರ್‌ನಲ್ಲಿ!

ಇಲ್ಲಿನ ನೆಲ ಅಂತಸ್ತಿನಿಂದ ಐದನೇ ಅಂತಸ್ತಿನಲ್ಲಿರುವ ಫುಡ್ ಕೋರ್ಟ್ ವರೆಗೆ ಒಂದೇ ಎಸ್ಕಲೇಟರ್ ಮೂಲಕ ತಲುಪಬಹುದು. ಇತರ ಅಂತಸ್ತುಗಳನ್ನು ತಲುಪಲು ಸಣ್ಣ ಎಸ್ಕಲೇಟರ್ ಗಳಿದ್ದರೂ ಈ ಎತ್ತರದ ಎಸ್ಕಲೇಟರ್ ಸಾಕಷ್ಟು ಮುದನೀಡಿತು. ಫುಡ್ ಕೋರ್ಟ್‌ನ ಪಕ್ಕದಲ್ಲೇ ಇರುವ ಖಾಲಿ ಜಾಗದಲ್ಲಿ ಕುಳಿತು (ಹಾಗೆ ಕುಳಿತು ವೀಕ್ಷಿಸಲೆಂದೇ ನಿಗದಿಯಾಗಿರುವ ಸ್ಥಳ) ಗೋಡೆಯ ಗಾಜಿನ ಮೂಲಕ ಕೆಳಗಿನ ರಸ್ತೆ, ಮರಗಳ ತೋಪು, ಅಕ್ಕಪಕ್ಕದ ವಿವಿಧ ಕಟ್ಟಡಗಳು..ಇವೆಲ್ಲವನ್ನೂ ನೋಡುತ್ತಾ ಸಾಕಷ್ಟು ಸಮಯ ಕಳೆದೆವು. ಈ ಮಾಲ್‌ನ ಟೆರೇಸ್ ಕೂಡಾ ವಿಶಿಷ್ಟ ವಿನ್ಯಾಸ ಹೊಂದಿದ್ದು ಪ್ರಖ್ಯಾತವಾಗಿದೆ.

ಈಗಿನ ದಿನಗಳಲ್ಲಿ ಕರೋನಾದಿಂದಾಗಿ ಇವುಗಳಿಗೆ ಪ್ರವೇಶ ಇಲ್ಲ. ನೆನಪುಗಳ ಬುತ್ತಿಯೇ ಪ್ರವಾಸದ ಅನುಭವವನ್ನು
ಮೆಲುಕು ಹಾಕಲು ಸಹಕಾರಿ.