Thursday, 12th December 2024

ಜೀವನ ದೃಷ್ಟಿಗಾಗಿ ಸ್ವಾತಂತ್ರ‍್ಯ ಕಾವ್ಯ !

ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ

ಡಾ.ಕೆ.ಎಸ್‌.ಪವಿತ್ರ

ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂಭ್ರಮ, ಅದಕ್ಕೂ ಮೊದಲು ಸ್ವಾತಂತ್ರ್ಯ ಪಡೆಯಲು ನಡೆದ ಹೋರಾಟ, ಬ್ರಿಟಿಷರ ದಬ್ಬಾಳಿಕೆ, ಕ್ರಾಂತಿಕಾರಿಗಳ ಹೋರಾಟ, ಸಾವು ಇಂತಹ ವಿದ್ಯಮಾನಗಳು ನಮ್ಮ ನಾಡಿನ ಕವಿಗಳ ಮೇಲೆ ದಟ್ಟ ಪ್ರಭಾವ ಬೀರಿವೆ. ಕುವೆಂಪು ಮೊದಲಾದ ಕವಿಗಳು ರಾಷ್ಟ್ರಭಕ್ತಿಯ ಹಲವು ಕವನಗಳನ್ನು ಬರೆದಿದ್ದಾರೆ. ಬಿಳಿಯ ಜನರು ನಮ್ಮ ದೇಶವನ್ನು ತೊರೆದು ಹೋದ ಆ ಕ್ಷಣವು, ದಾಸ್ಯದಿಂದ ಮುಕ್ತಿ ದೊರೆತ ಅಮೃತ ಘಳಿಗೆ. ಅದನ್ನು ಕವಿಗಳು ಸಂಭ್ರಮಿಸಿದ ಪರಿ ವಿನೂತನ, ಅನನ್ಯ.

ಸರಕಾರದ ವೆಬ್‌ಸೈಟಿನಲ್ಲಿ ‘ರಾಷ್ಟ್ರಗಾನ್’ ಮುದ್ರಿಸಿ, ಅರ್ಹತಾ ಪತ್ರ ಕೈಸೇರಿ ಧನ್ಯತಾ ಭಾವದಿಂದ ಕುಳಿತಿದ್ದೆ. ‘ಯಾರೂ ಹಾಡಬಹುದಾದ ರಾಷ್ಟ್ರಗೀತೆಯ ಗಾನದಲ್ಲೇನು ವಿಶೇಷ?’ ಎಂದು ಕೇಳಬಹುದು. ಒಮ್ಮೆ ಬಾಲ್ಯದಲ್ಲಿ ಸಿಹಿ ಮಾಡಿದ ದಿನ ‘ಇಂದೇನು ವಿಶೇಷ’ ಎಂದು ಕೇಳಿದ್ದಕ್ಕೆ ನನ್ನಮ್ಮ ನಗುತ್ತಾ ಹೇಳಿದ ಉತ್ತರ – ‘ಇವತ್ತು ಸ್ವಾತಂತ್ರ್ಯದ ಹಬ್ಬ’ ಇಂದೂ ನನ್ನ ನೆನಪಿನಲ್ಲಿದೆ. ಅಂದಿನಿಂದಲೂ ಸ್ವಾತಂತ್ರ್ಯದ ಹಬ್ಬವೆಂದರೆ ನನಗೆ ಸಂಭ್ರಮ.

ನಮ್ಮ ಕನ್ನಡ ಸಾಹಿತ್ಯದಲ್ಲಿ ನವೋದಯ ಎಂಬ ಹಂತವಿರುವುದು ಗೊತ್ತಿದೆಯಷ್ಟೆ. ನವೋದಯ ಪಂಥದ ಒಂದು ಪ್ರಮುಖ ಪ್ರೇರಣೆ ಸ್ವಾತಂತ್ರ್ಯ ಹೋರಾಟ. ನವೋದಯದ ಪ್ರಮುಖ ಕವಿಗಳಾದ ಕುವೆಂಪು, ಬೇಂದ್ರೆ, ಪು.ತಿ.ನ., ಆಧುನಿಕ ರತ್ನತ್ರಯರೆಂದೇ ಪರಿಗಣಿಸಲ್ಪಟ್ಟವರು. ಅವರ ಕಾವ್ಯ ಸೃಷ್ಟಿಯಲ್ಲಿ ಅಡಗಿರುವ ಸ್ವಾತಂತ್ರ್ಯದ ಹಲವು ಪರಿಕಲ್ಪನೆಗಳನ್ನು ನೋಡಿದರೆ ಪ್ರತಿ ಬಾರಿ ನಾವು ಆಚರಿಸುವ ‘ಸ್ವಾತಂತ್ರ್ಯ ದಿನ’ ಕೇವಲ ಸ್ವಾತಂತ್ರ್ಯ ಯೋಧರನ್ನು ಸ್ಮರಿಸಲು,  ಸಂಭ್ರಮಿಸುವುದಕ್ಕೆ ಸೀಮಿತವಾಗಿರಬೇಕಿಲ್ಲ ಎಂಬುದು ಅರಿವಾಗುತ್ತದೆ.

ಕನ್ನಡ ಸಾಹಿತ್ಯದ ಚರಿತ್ರೆಯತ್ತ ನೋಡಿದರೆ ಒಂದು ಮಾತು ಸ್ಪಷ್ಟವಾಗುತ್ತದೆ. 19ನೇ ಶತಮನದ ಮಧ್ಯ ಭಾಗದ ಹೊತ್ತಿಗೆ ಕರ್ನಾಟಕ ಬ್ರಿಟಿಷರ ಆಳ್ವಿಕೆಗೆ ಸೇರಿಹೋಗಿತ್ತು. ಬುದ್ಧಿಜೀವಿಗಳ ಮಾತೃಭಾಷಾ ಪ್ರೇಮ ದಕ್ಷಿಣ ಭಾರತದ ಇತರೆಡೆಗಳಂತೆ ‘ಆಂಗ್ಲ ಮೋಹ’ಕ್ಕೆ ಬದಲಾಗಿ ಹೋಗಿತ್ತು. ಅಚ್ಚರಿಯ ಮಾತೆಂದರೆ ಈ ಮೋಹವೇ, ಇಂಗ್ಲಿಷ್ ಸಾಹಿತ್ಯದ ಅಧ್ಯಯನಕ್ಕೆ ಕಾರಣವಾಗಿ ತನ್ಮೂಲಕ ಕನ್ನಡ ಭಾಷೆಯನ್ನು ಹೊಸ ಹೊಸ ರೀತಿಗಳಲ್ಲಿ ಬೆಳೆಸಲು ದಾರಿಯಾಯಿತು. ಇಂಗ್ಲಿಷ್ ಸಾಹಿತ್ಯದ ‘ಸ್ವಾತಂತ್ರ್ಯ ಸೌಲಭ್ಯ’ ಕನ್ನಡಿಗರಿಗೆ ಸಿಕ್ಕಿದ್ದು ಹೀಗೆಯೇ.

ತ.ಸು. ಶಾಮರಾಯರು ತಮ್ಮ ‘ಕನ್ನಡ ಸಾಹಿತ್ಯ ಚರಿತ್ರೆ’ ಯಲ್ಲಿ ಪಾಶ್ಚಾತ್ಯ ವಿದ್ವಾಂಸರಿಂದ ಕನ್ನಡಕ್ಕೆ ದೊರೆತ ಪ್ರೇರಣೆ -ಪ್ರಯೋಜನಗಳನ್ನು ವಿವರವಾಗಿ ಹೆಸರಿಸಿದ್ದಾರೆ. ಜಾನ್ ಹ್ಯಾಂಡ್, ವಿಲಿಯಂ ರೀವ್, ಕಿಟ್ಟೆಲ್, ಬಿ.ಎಲ್. ರೈಸ್, ಫ್ಲೀಟ್, ಕಾಲ್ಡ್ ವೆಲ್ ಹೀಗೆ ಆ ಪಟ್ಟಿ ಬೆಳೆಯುತ್ತ ಸಾಗುತ್ತದೆ. ಇಷ್ಟೆಲ್ಲ ಕೊಡುಗೆಗಳ ನಡುವೆಯೂ ಭಾರತದ ನೆಲ-ಜಲ-ಜನಗಳು ಸ್ವಾತಂತ್ರ್ಯಕ್ಕಾಗಿ ತುಡಿಯುತ್ತಿದ್ದ ಕಾಲವದು. ಇಂದು ಸ್ವಾತಂತ್ರ್ಯದ ಹಬ್ಬವನ್ನು ಶಾಲೆಯ, ಸರ್ಕಾರದ ಒಂದು ದಿನಾಚರಣೆಯಂತಾಗಲಿ, ಜೀವನದಿಂದ ಬೇರೆಯಾಗಿಯೇ ಆಗಲಿ, ಕಾವ್ಯವನ್ನು ಒಂದು ‘ಲಕ್ಷುರಿ’ ಯೆಂದಾಗಲೀ ಭಾವಿಸಿರುವಂತೆ ಅಂದು ಇರಲಿಲ್ಲ ಎಂಬುದು ನಾವೆಲ್ಲರೂ ಗಮನಿಸಬೇಕಾದ ವಿಷಯ. ಅಲ್ಲಿಯವರೆಗೆ ಕನ್ನಡದ ಕವಿಗಳು ಬೆಳೆದು ಬಂದದ್ದು ರಾಜಾಶ್ರಯದಲ್ಲಿ. ಆದರೆ ತಮ್ಮ ವ್ಯಕ್ತಿತ್ವದಲ್ಲಿಯೇ ಸ್ವತಂತ್ರ ಮನೋಭಾವ ರೂಢಿಸಿಕೊಂಡವನೇ ಉತ್ತಮ ಕವಿಯಾಗಲು ಸಾಧ್ಯ ಎನ್ನುವುದೂ ಸತ್ಯವಷ್ಟೆ.

ಇಂದಿನ ದೇವರು
ಕುವೆಂಪು ಅವರೇ ತಮ್ಮ ಆತ್ಮಕಥೆಯಲ್ಲಿ ಹೇಳಿರುವಂತೆ ‘ಇಂಡಿಯಾವನ್ನು ಶೋಷಣೆ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದ ಇಂಗ್ಲಿಷರ ಮೇಲೆ ನನಗೆ ಎಷ್ಟು ದ್ವೇಷ ವಿತ್ತೋ ಅದಕ್ಕೆ ದ್ವಿಗುಣಿತ-ತ್ರಿಗುಣಿತವಾಗಿ ಇಂಗ್ಲಿಷ್ ಭಾಷೆಯ ಮೇಲೆ ನನಗೆ ಗೌರವ- ಮಮತೆ ಗಳಿದ್ದವು’. ಭಾಷೆಯ ಭಿನ್ನವಾದ ಸಾಂಸ್ಕೃತಿಕ-ರಾಜಕೀಯ ಮುಖಗಳ ವಿಶ್ಲೇಷಣೆ ಇಲ್ಲಿದೆ ಎಂಬುದು, ಇದೇ ಹೊತ್ತಿನಲ್ಲಿ ರಾಷ್ಟ್ರೀಯ ಚಳವಳಿಗೆ ಪರೋಕ್ಷವಾಗಿ ಧ್ವನಿ ಯಾದ ಕುವೆಂಪು ಕವನಗಳನ್ನು ನೋಡಿದರೆ ಸ್ಪಷ್ಟ ವಾಗುತ್ತದೆ. ಈ ಅವಧಿಯಲ್ಲಿ ಬಂದ ‘ಪಾಂಚಜನ್ಯ’ ಎಂಬ ಕವನ ಸಂಕಲನದ ಸತ್ಯಾಗ್ರಹಿ, ಪಾಂಚಜನ್ಯ, ಭರತ ಮಾತೆ ಕವಿತೆಗಳು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮೂಡಿ ಬಂದಂತಹವೇ.

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು
ಪೂಜಿಸುವ ಬಾರ!
ಇಂದೊ ನಾಳೆಯೊ ದಾಸ ನೀಶನಾಗಲೆ ಬೇಕು,
ಎಂದಿಂದೆ ಎದ್ದೇಳಿ, ನಾಳೆಯನೆ ಹೋಕು
ನಾವೆ ದೇವತೆಗಳೈ! ಭಾರತವೆ ಸ್ವರ್ಗವೈ!
ಭಾರತಾಂಬೆಯೆ ನಮಗೆ ದೇವಿಯೈ, ಜನನಿ !

‘ಇಂದಿನ ದೇವರು’ ಎಂಬ ಈ ಪದ್ಯ ಆ ಸಂದರ್ಭದಲ್ಲಿ ಕನ್ನಡಿಗರ ದೇಶಾಭಿಮಾನವನ್ನು ಹುರಿದುಂಬಿಸಿದ ಸಂಗತಿಯನ್ನು ಈಗಲೂ ನಾವು ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಕುವೆಂಪು ಅವರು ಬರೆದ ಕವನಗಳ ಬಗೆಗಿನ ಟಿಪ್ಪಣಿಗಳನ್ನು ಗಮನಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ‘ಪಾಂಚಜನ್ಯ ಅಂದು ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮ ಜನ್ಯವಾದದ್ದು. ಬಂಗಾಳದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿಗಳ ವೀರಾಂದೋಲನಕ್ಕೆ ಸಂಬಂಧಪಟ್ಟದ್ದು.

ಜತೀಂದ್ರನಾಥ್ ದಾಸ್ ಎಂಬ ಯುವಕ ದೇಶಭಕ್ತ ವೀರನು ಬ್ರಿಟಿಷ್ ಸರ್ಕಾರದಿಂದ ಸೆರೆ ಹಿಡಿಯಲ್ಪಟ್ಟು ಕ್ರೂರ ಶಿಕ್ಷೆಗೆ ಒಳಗಾದನು. ಆತ ಜೈಲಿನಲ್ಲಿ ಉಪವಾಸ
ಸತ್ಯಾಗ್ರಹ ಹೂಡಿದನು. ಗಾಂಽಜಿಯೆ ಮೊದಲಾದ ಹಿರಿಯ ದೇಶಭಕ್ತರೂ, ರಾಜಕಾರಣಿಗಳೂ ಬ್ರಿಟಿಷ್ ಸರಕಾರಕ್ಕೆ ಎಷ್ಟೇ ಹೇಳಿದರೂ ಅದು ಜಗ್ಗಲಿಲ್ಲ. ಅರವತ್ತು ದಿನಗಳ ಉಪವಾಸಾನಂತರ ಜತೀಂದ್ರ ಸತ್ತೇ ಹೋದ! ಇಡೀ ಭಾರತದ ಜನತೆ ಮರುಗಿತು. ಯುವಕರ ರಕ್ತವಂತೂ ಪ್ರತೀಕಾರಕ್ಕಾಗಿ ಕುದಿಯ ತೊಡಗಿತು.

ಆ ಸಂದರ್ಭದಲ್ಲಿ ಮೂಡಿತ್ತು ‘ಪಾಂಚಜನ್ಯ’. ಅದನ್ನು ನಾನು ಅನೇಕ ಕವನ ವಾಚನ ಸಭೆಗಳಲ್ಲಿ ವೀರಾವೇಶದಿಂದಲೂ, ಅಭಿನಯುಪೂರ್ವಕವಾಗಿಯೂ
ವಾಚನ ಮಾಡುತ್ತಿದ್ದೆ. ‘ರಕ್ತಧುನಿ’ ‘ಕ್ರಾಂತಿಕಾಳಿ’ ಮುಂತಾದ ಅನೇಕ ಕವನಗಳು ನನ್ನ ಲೇಖನಿಯಿಂದ ಹೊಮ್ಮಿ ಅಂದಿನ ಸತ್ಯಾಗ್ರಹದ ಸ್ವಾತಂತ್ರ್ಯ ಸಂಗ್ರಾಮಕ್ಕೆ
ರಣಮಂತ್ರಗಳಾಗಿ ಪರಿಣಮಿಸಿ ಸುಪ್ರಸಿದ್ಧವಾಗಿವೆ’.

‘ರಕ್ತಧುನಿ’ ಎಂಬ ಉಗ್ರಕವನವೂ ಅಷ್ಟೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ರಕ್ತ ಕ್ರಾಂತಿಯ ಕರೆ ಕೊಡುವ ರುದ್ರಗೀತೆಯಾಗಿ ಸತ್ಯಾಗ್ರಹಿಗಳ ಬಾಯಲ್ಲಿ ‘ಖಡ್ಗ ಜಿಹ್ವೆ’ ಯಾಯಿತು ಎಂದು ಕುವೆಂಪು ಬರೆಯುತ್ತಾರೆ. ಹಾಗೆಯೇ ‘ಬೈಗುಗೆಂಪಿ’ಗೂ ‘ಸ್ವಾತಂತ್ರ್ಯ ಸಂಗ್ರಾಮ’ಕ್ಕೂ ಏನು ಸಂಬಂಧ? ಎಂಬುದನ್ನು ಉತ್ತರಿಸುತ್ತಾ, ಅದು ಉದಿಸಿದ ಸಂದರ್ಭವನ್ನು ಹೀಗೆ ವಿವರಿಸುತ್ತಾರೆ. ‘ಕುಕ್ಕರಹಳ್ಳಿ ಕೆರೆಯ ಏರಿಯ ಮೇಲೆ ಸಂಜೆ ಸಂಚಾರ ಹೋಗುತ್ತಿದ್ದ ಹೊತ್ತು ಪಶ್ಚಿಮ ದಿಕ್ಕು ಸೂರ್ಯಾಸ್ತದಲ್ಲಿ ಓಕುಳಿಯಾಗಿತ್ತು.

ಅಲ್ಲಿದ್ದ ಮೋಡಗಳು ಬೆಂಕಿ ಹೊತ್ತಿ ಉರಿಯುತ್ತಿದ್ದವು. ಪತ್ರಿಕೆಗಳಲ್ಲಿ ಸತ್ಯಾಗ್ರಹದ ಮತ್ತು ಸ್ವಾತಂತ್ರ್ಯ ಚಳವಳಿಯ ಸುದ್ದಿಗಳನ್ನು ಓದಿದ್ದ ಕವಿಯ ಮನಸ್ಸು, ಹೃದಯ, ಪ್ರಾಣ ಎಲ್ಲದರಲ್ಲಿಯೂ ಬೆಂಕಿ ವ್ಯಾಪಿಸಿತ್ತು. ಆದ್ದರಿಂದಲೇ ಎಂದಿನ ರಸಾಸ್ವಾದನೆ- ಸೌಂದರ್ಯಾನುಭವಗಳಿಗಿಂತ ಭಿನ್ನವಾಗಿ ರಕ್ತೋಕುಳಿಯ ಆ ಬಾನಿನಲ್ಲಿ ಕವಿ ರೌದ್ರವನ್ನು ಪ್ರದರ್ಶಿಸಿದ.

ಬರುತಿಹ ಲೋಹಿತ ವಿಪ್ಲವ ಸೂಚಕ
ರಕ್ತದ ಬುಗ್ಗೆಯು ಈ ಬೈಗು!
ಪರತಂತ್ರತೆಯನು ದಹಿಸುವ ಮಸಣದ
ಸೂಡಿನ ಕೇಸುರಿ ಈ ಬೈಗು!

ಸ್ವಾತಂತ್ರ್ಯದ ಆರಾಧನೆಗೆತ್ತಿದ ಕುಂಕುಮದಾರತಿ ಈ ಬೈಗು!
1947, ಆಗಸ್ಟ್ 15, ಸಂಜೆ ದೆಹಲಿಯಲ್ಲಿ ಸುಮಾರು ಮೂರು ಲಕ್ಷಕ್ಕೆ ಮೀರಿದ ಜನಸಂದಣಿಯಲ್ಲಿ ನಡೆದ ರಾಷ್ಟ್ರಧ್ವಜಾರೋಹಣದ ಸಮಯದಲ್ಲಿ ಮಳೆ
ಸುರಿದದ್ದು, ತುಸು ಹೊತ್ತಿನಲ್ಲಿ ಬಾವುಟದ ತ್ರಿವರ್ಣಗಳಿಗೆ ಹಿನ್ನೆಲೆಯಾಗಿ ಸೊಗಸಾದ ಕಾಮನಬಿಲ್ಲು ಕಟ್ಟಿತಂತೆ. ಅದೇ ರಾತ್ರಿ ಅದರ ವ್ಯಾಖ್ಯಾನವನ್ನಾಲಿಸಿದ
ಕುವೆಂಪು ಆ ಸೂರ್ತಿಯಿಂದ ಬರೆದ ‘ಶ್ರೀ ಸ್ವಾತಂತ್ರ್ಯೋದಯ ಮಹಾಪ್ರಗಾಥಾ’ ಎಂಬ ನೀಳ್ಗವಿತೆ ಈ ಎಲ್ಲವನ್ನೂ ಬಣ್ಣಿಸುತ್ತದೆ.

ಬೇಂದ್ರೆಯವರ ವಿವರಣೆ
ಕಾವ್ಯದಲ್ಲಿ ತಮ್ಮ ಒಂದು ವಿಶಿಷ್ಟ ಪಂಥವನ್ನೇ ಬೆಳೆಸಿದ ವರಕವಿ ಬೇಂದ್ರೆಯವರ ‘ಸ್ವಾತಂತ್ರ್ಯದ ವರ್ಧಂತಿ’ ಎಂಬ ಕವನವಂತೂ ಸ್ವಾತಂತ್ರ್ಯದ ಹುಟ್ಟುಹಬ್ಬ ದಂದು ಆದ ಮತ್ತು ಆಗಬೇಕಾದ ಕಾರ್ಯದ ಚಿಂತನೆ ನಡೆಸುತ್ತದೆ. ನಿಜವಾದ ಸ್ವಾತಂತ್ರ್ಯದ ಲಕ್ಷಣಗಳ ವಿವರಣೆ ಇಲ್ಲಿದೆ. ಹಡೆದರಾಯ್ತೆ? ಪಡೆಯಬೇಕು ಪಡೆದವರಿಗೆ ಶಿಕ್ಷಣಾ ಪಕ್ಷ ಪಕ್ಷ ಕಟ್ಟಿದರೂ ಬೇಕು ಶೀಲರಕ್ಷಣಾ ಸ್ವಾತಂತ್ರ್ಯದ ಮುದ್ರೆ ಕಂಡು ಅವ್ಯವಸ್ಥೆ ಓಡಲಿ ಸ್ವೈರ-ವೈರ ಇಂಗಿ ಹೋಗಿ ಸುವ್ಯವಸ್ಥೆ ಮೂಡಲಿ. ಬೇಂದ್ರೆಯವರ ಸ್ವತಂತ್ರ ಭಾರತದಲ್ಲಿರುವ ಉದ್ಗಾರ-ಪ್ರಶ್ನೆಗಳ ಸರಮಾಲೆ ಗಳನ್ನು ಎತ್ತಿ ಹಿಡಿಯುವ ‘ದಾರಿಗದಾರೋ’, ‘ಮಹಾತ್ಮ ವಚನ’ ‘ಸಹಸ್ರ ವಂದನ’
ಇವೆಲ್ಲವೂ ವೈಚಾರಿಕತೆ- ಭಾವನಾತ್ಮಕತೆ -ವ್ಯಂಗ್ಯ ಇವುಗಳನ್ನು ಬೆಸೆಯುತ್ತವೆ.

ಸಂತ ಕವಿ ಎಂದೇ ಹೆಸರಾದ ಪು.ತಿ.ನ. ಅವರೂ ಸ್ವಾತಂತ್ರ್ಯದ ಬಗೆಗೆ ರಚಿಸಿರುವ ಕವಿತೆಗಳು ಹಲವಿದೆ. ‘ಜಯ ನವಭಾರತಕೆ’, ‘ಸ್ವಾತಂತ್ರ್ಯ ದೇವಿಕೆ’, ‘ಯೋಧರ ಹಾಡು’, ‘ಸೈನಿಕರ ಹಾಡು’ ‘ನವಭಾರತ ತರುಣರಾವು’, ‘ಎಚ್ಚರು ಭಾರತ’ ಎಂಬ ಕವಿತೆ ಗಳು ಇಂದೂ ಮನದಲ್ಲಿ ದೇಶಭಕ್ತಿಯನ್ನು ಪುಟಿ ದೇಳಿಸುತ್ತವೆ.

ಮುಟ್ಟ ಬಹಗೆ ಬದುಕಿಲ್ಲ-ನಿನ್ನ
ಮುಟ್ಟ ಬಹಗೆ ಬದುಕಿಲ್ಲ
ಧೀರರ ನಾಡೆ
ವೀರರ ಬೀಡೆ ನಿನ್ನ
ಸೇವೆಗೈಯದವ ಹೊಲ್ಲ.
ಉರಿವ ಬಿಸಿಲಿರಲಿ
ಕೊರೆವ ಚಳಿಯಿರಲಿ
ಮನದೊಳಿರಲಿ ನಿನ್ನ ಧ್ಯಾನ ನಮ್ಮ
ಮನದೊಳಿರಲಿ ನಿನ್ನ ಧ್ಯಾನ.

‘ಸ್ವಾತಂತ್ರ್ಯ ದಿನ’ ದ ಸಂಭ್ರಮವನ್ನು ಇಂದೂ ಶಾಲೆಗಳು ಆಚರಿಸುತ್ತವೆ. ಯಾವ ವೃತ್ತಿಯಲ್ಲಿಯೇ ಇದ್ದರೂ ‘ರಜೆ’ ಎಂಬ ಕಾರಣದಿಂದ ನಮಗೆ ‘ಸ್ವಾತಂತ್ರ್ಯ’ ದ
ಅರಿವು ಮೂಡುತ್ತದೆ! ಆದರೆ ‘ಸ್ವಾತಂತ್ರ್ಯ ಸಾಹಿತ್ಯ’ ದ ಬಗ್ಗೆ ಗಮನ ಹರಿಸುವವರು ಯಾರು? ಬಂದಂತದ್ದೇ ದೇಶಭಕ್ತಿ ಗೀತೆಗಳನ್ನು ಹಾಡುವುದರ ಜೊತೆ ಮೇಲೆ
ಹೇಳಿರುವ ರೀತಿಯ ಕವನಗಳನ್ನು ಹಾಡುವ/ಅಭಿನಯಿಸುವ /ಕವನ ವಾಚನ ಮಾಡುವ ಪ್ರಯತ್ನಗಳನ್ನು ನಾವೇಕೆ ಮಾಡಬಾರದು?

ವಿಶಾಲ ವ್ಯಾಪ್ತಿ
ಈ ಕವನಗಳು ಕೇವಲ ಸ್ವಾತಂತ್ರ್ಯೋತ್ಸವಕ್ಕೆ ಸೀಮಿತವಾದದ್ದಲ್ಲ ಎಂಬುದು ಅವುಗಳ ವಿಶೇಷ. ಸ್ವಾತಂತ್ರ್ಯ-ಪಾರತಂತ್ರ್ಯಗಳ ಹಲವು ಆಯಾಮಗಳು,
ರಾಜಕೀಯವಾಗಿ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿಕೊಂಡರೂ, ಪ್ರಜಾಪ್ರತಿನಿಧಿಗಳನ್ನು ಓಲೈಸಬೇಕಾಗಿರುವ ‘ಪ್ರಜಾಪ್ರಭುತ್ವ’ದ ‘ಪ್ರಭುತ್ವ’ವನ್ನು ಹೊಂದಿರುವ
ನಾವು, ಹಲವು ರೀತಿಗಳಲ್ಲಿ ಬುದ್ಧಿ-ಮನಸ್ಸುಗಳ ಸ್ವಾತಂತ್ರ್ಯ ಸಾಧಿಸಲು ಸಾಧ್ಯವಾಗದಿರುವುದು ಇವೆಲ್ಲದರ ಬಗ್ಗೆ ನಮ್ಮ ಆತ್ಮ ಸಾಕ್ಷಿಯನ್ನು ಬಡಿದೆಬ್ಬಿಸುವ
ಶಕ್ತಿ ಇಂದೂ ಈ ಕವಿತೆಗಳಲ್ಲಿದೆ.

ಸ್ವಾತಂತ್ರ್ಯದ ಹಬ್ಬದೊಂದಿಗೇ ವೇಗವಾಗಿ ಹಾರಿ ಬರುತ್ತಿರುವ ಹಬ್ಬಗಳ ಸಾಲು, ಸ್ವಾತಂತ್ರ್ಯವನ್ನೂ -ದೇವಿಯರನ್ನೂ ಬೆಸೆಯುವ ಕುವೆಂಪು ಅವರ ಕವಿತೆಯ
ಸಾಲುಗಳನ್ನು ನೆನಪಿಸಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನಮ್ಮೊಳಗಿನ ಸ್ವಾತಂತ್ರ್ಯ ಸ್ವಾವಲಂಬನೆಯ ಸಾಮರ್ಥ್ಯಕ್ಕಾಗಿ ರಾಷ್ಟ್ರಕವಿಯ
ಕವನದೊಂದಿಗೆ ಪ್ರಾರ್ಥಿಸೋಣವೆ?

ಆ ಎಲ್ಲರನು ಹರಸು, ಹೇ ಸ್ವಾತಂತ್ರ್ಯ ದುರ್ಗೆ
ನಮ್ಮ ಸಾಧನೆ ಸಿದ್ಧಿಗಾಣ್ಬಂತೆ ಶೀಘ್ರದಿಂದೀ
ದುರ್ಗಾವತಾರಮಂ ಮುಗಿಸಿ ಬಾರ; ಮೂಡಿ ಬಾ
ಶಾಂತಿ ಶಶಿ ಕಾಂತಿಯಂ ಸಿಂಚಿಸಿ, ಲಸಲಕ್ಷ್ಮಿಯೋಲ್!