Thursday, 12th December 2024

ಸರಸ ಮಾತಿನ ಸ್ನೇಹಜೀವಿ

ಎಂ.ಎಸ್‌.ನರಸಿಂಹಮೂರ್ತಿ

ಡಾಕ್ಟರ್ ಸಿದ್ಧಲಿಂಗಯ್ಯ ಅವರ ಜೊತೆ ನನ್ನದು ಹಳೆಯ ಸ್ನೇಹ. ಮೊಟ್ಟಮೊದಲ ಬಾರಿಗೆ ನಾನು ಅವರ ಜೊತೆ ವೇದಿಕೆ ಹಂಚಿ ಕೊಂಡಿದ್ದು ಶಿವಮೊಗ್ಗದಲ್ಲಿ.

ನನಗೆ ಚೆನ್ನಾಗಿ ನೆನಪಿದೆ. 24-04-1994 ಶಿವಮೊಗ್ಗದಲ್ಲಿ ಮೈಸೂರು ಬ್ಯಾಂಕಿನ ಅಧಿಕಾರಿಗಳಾಗಿದ್ದ ಲೇಖಕ, ಅಂಕಣಕಾರ ಮಂಜುನಾಥ ಅಜ್ಜಂಪುರ ಅವರ ಮನೆಯ ಗೃಹಪ್ರವೇಶ ಇತ್ತು. ವಿನೋಬ ನಗರದ ಲಕ್ಷ್ಮೀಪುರ ಬಡಾವಣೆಯಲ್ಲಿ ಹೊಸ ಮನೆ ಯನ್ನು ಅವರು ಕಟ್ಟಿದ್ದರು. ಮಾಮೂಲಿ ಶೈಲಿಯಲ್ಲಿ ಗೃಹಪ್ರವೇಶ ನಡೆಯಲಿಲ್ಲ.

ಪೂಜೆ, ಪುನಸ್ಕಾರ, ಹಸುವನ್ನು ಕರೆಸಿ ನುಗ್ಸೋದು ಇದ್ಯಾವುದೂ ಇರಲಿಲ್ಲ. ಅದರ ಬದಲು ವಿಚಾರವಾದಿಗಳಾದ ದಲಿತ ಕವಿ ಸಿದ್ಧಲಿಂಗಯ್ಯ ಅವರ ನೇತೃತ್ವದಲ್ಲಿ ಒಂದು ಹಾಸ್ಯ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಗೃಹಪ್ರವೇಶ ಮತ್ತು ಸಾಂಸ್ಕೃತಿಕ
ಕಾರ್ಯಕ್ರಮದ ಉದ್ಘಾಟನೆ ಸಿದ್ದಲಿಂಗಯ್ಯ ಅವರದು. ಈ ಕಾರ್ಯಕ್ರಮಕ್ಕೆ ಹಿರೇಮಗಳೂರು ಕಣ್ಣನ್, ಅಸದುಲ್ಲಾ ಬೇಗ್ ಮತ್ತು ಇತರ ಸಾಹಿತಿಗಳು, ಕನ್ನಡಾಭಿಮಾನಿಗಳು ಮುಖ್ಯ ಅತಿಥಿಗಳು. ಇವರೆಲ್ಲರ ಜೊತೆ ಹಾಸ್ಯ ಭಾಷಣ ನೀಡಲು ನಾನು ಹೋಗಿದ್ದೆ. ಅಂದು ಕಂಡ ಸಿದ್ಧಲಿಂಗಯ್ಯ ನವರ ಸರಳತೆಗೆ ಮೂಕ ವಿಸ್ಮಿತನಾಗಿದ್ದೆ.

ಅವರಾಗಲೇ ಖ್ಯಾತ ಕವಿಯಾಗಿದ್ದರು. ಅವರ ಸರಳ ನಡೆ ನುಡಿ, ಹಾಸ್ಯಮಿಶ್ರಿತ ಮಾತುಗಳೇ ಎಲ್ಲರನ್ನು ಸೆಳೆಯುತ್ತಿದ್ದವು.
ಸಂದರ್ಭಕ್ಕೆ ತಕ್ಕಂತೆ ವಿಷಯವನ್ನ ಹಾಸ್ಯಮಯವಾಗಿ ನಿರೂಪಣೆ ಮಾಡುವ ಸಿದ್ಧಲಿಂಗಯ್ಯ, ಅಂದು ಅಲ್ಲಿ ನೆರೆದಿದ್ದ ಜನ ಸ್ತೋಮವನ್ನು ನಕ್ಕುನಲಿಸಿದರು. ತಮ್ಮ ಕೈ ಕೆಳಗಡೆ ಕೆಲಸ ಮಾಡುವ ನೌಕರನೊಬ್ಬ ರಜಾ ಬೇಕಾಗಿದೆ, ಮನೆಯಲ್ಲಿ ನಾನೊ ಬ್ಬನೇ ಇರುವುದು, ಯಾರೂ ಇಲ್ಲ ಎಂಬುದನ್ನು ಇಂಗ್ಲೀಷಲ್ಲಿ ಬರೆದಿದ್ದರಂತೆ.

As I am the only husband to my wife ಎಂಬ ವಾಕ್ಯ ಬರೆದು ರಜಾ ಕೇಳಿದ್ದ ಎಂಬುದನ್ನು ಹೇಳಿದಾಗ ನಗೆಯ ಸ್ಫೋಟ. ಗ್ರಾಮ ದೇವತೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ ಅವರು ದೇವರು ಮೈಮೇಲೆ ಬರುವುದನ್ನು ಪ್ರಸ್ತಾಪಿಸಿ ಕೆಲವೊಮ್ಮೆ ಇಂಗ್ಲಿಷ್ ದೇವರುಗಳು ಕೂಡ ಮೈಮೇಲೆ ಬಂದಿದ್ದು ಕಂಡಿದ್ದೇವೆ. ಆಗ ಗ್ರಾಮದೇವತೆ ಬಟ್ಲರ್ ಇಂಗ್ಲಿಷಲ್ಲಿ ಮಾತಾಡುತ್ತಾಳೆ ಎಂದು ಉದಾಹರಣೆಗಳನ್ನು ಕೊಟ್ಟಿದ್ದರು.

ಉನ್ನತ ಸ್ಥಾನಮಾನ ಪಡೆದ ನಂತರವೂ ಸಹ ಸಿದ್ಧಲಿಂಗಯ್ಯನವರು ಅತ್ಯಂತ ಸರಳ ಜೀವನ ನಡೆಸುತ್ತಿದ್ದರು ಮತ್ತು ಸದಾ ಸ್ನೇಹ ಜೀವಿ. ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರೂ ಸಹ ಅವರು ಅತ್ಯಂತ ಸುಲಭವಾಗಿ ಎಲ್ಲರಿಗೂ ಸಿಗುತ್ತಿದ್ದರು. ನನ್ನ ‘ಸನ್ಮಾನ ಸುಖ’ ನಾಟಕ ನೋಡಿ ಮೆಚ್ಚಿದ್ದ ಅವರು ನಾಟಕ ಸಂಕಲನಕ್ಕೆ ಮುನ್ನುಡಿ ಬರೆದುಕೊಡುತ್ತೇನೆಂದು ತಾವಾಗಿ ಮುಂದೆ
ಬಂದಿದ್ದರು. ೨೦೧೭ ರಲ್ಲಿ ಜಯನಗರದ ಹಾಸ್ಯೋತ್ಸವ ಉದ್ಘಾಟನೆ ಮಾಡಿ ಅವರು ಹರಿಸಿದ ನಗೆಯ ಸುಧೆ ಮರೆಯಲಾಗದು. ಅವರದು ವಿಚಾರಪೂರ್ಣ ಭಾಷಣ. ಇಂಥ ಸಿದ್ಧಲಿಂಗಯ್ಯ ಅವರನ್ನು ಕಳೆದುಕೊಂಡು ಕನ್ನಡ ಸಾಹಿತ್ಯ ಲೋಕ ಸೊರಗಿದೆ.