L.P.Kulkarni
ಬಾಳೆ ಎಲೆಯನ್ನು ಸಂರಕ್ಷಿಸಿಡುವಂತಹ ತಂತ್ರಜ್ಞಾನವನ್ನು ತಮಿಳುನಾಡಿನ ಯುವಕ ಕಂಡುಹಿಡಿದಿದ್ದಾರೆ.
ಸದ್ಯ ನಾವು ಬಳಸುತ್ತಿರುವ ಹೆಚ್ಚಿನ ದಿನ ಬಳಕೆ ವಸ್ತುಗಳು ಪ್ಲಾಸ್ಟಿಕ್‌ನಿಂದ ತಯಾರಾದವುಗಳು ಎಂದರೆ ತಪ್ಪಾಗಲಾರದು. ನೀರು ಕುಡಿಯಲು ಬಳಸುವ ಲೋಟವನ್ನು ಮೊದಲು ಮಾಡಿಕೊಂಡು, ಧರಿಸುವ ಬಟ್ಟೆಗಳ ವರೆಗೂ ಪ್ಲಾಸ್ಟಿಕ್ ಆಕ್ರಮಿಸಿದೆ.
ಮಣ್ಣಿನಲ್ಲಿ ಕೊಳೆತು ಹೋಗದ (ಜೈವಿಕ ವಿಘಟನೆಗೊಳ್ಳದ ) ವಸ್ತುವಾಗಿರುವುದರಿಂದ ಈ ಪ್ಲಾಸ್ಟಿಕ್, ಭೂ,ಜಲ,ವಾಯು ಮಾಲಿನ್ಯಗಳನ್ನು ಸೃಷ್ಟಿಸುತ್ತಿದೆ. ಇದರಿಂದ ಕುಡಿಯುವ ನೀರು, ತಿನ್ನುವ ಆಹಾರ ಪದಾರ್ಥ, ಸೇವಿಸುವ ಗಾಳಿ ಎಲ್ಲವೂ ಕಲುಷಿತಗೊಳ್ಳುತ್ತಿವೆ. ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ಯಾಗಿರುವ ಇನ್ನೊಂದು ವಸ್ತುವನ್ನು ಕಂಡುಕೊಂಡು ಅದನ್ನು ಸುಲಭವಾಗಿ ಬಳಕೆಗೆ ತರುವುದು ಇಂದು ವಿಜ್ಞಾನಿಗಳಿಗೆ, ಸಂಶೋಧಕರಿಗೆ ಒಂದು ದೊಡ್ಡ ಸವಾಲಿನ ಸಂಗತಿಯಾಗಿ ಪರಿಣಮಿಸಿದೆ.
ಕೆಲವು ದಶಕಗಳ ಹಿಂದೆ, ನಮ್ಮಲ್ಲಿ ಕೆಲವರು ಪರಿಸರದ ಮೇಲೆ ಪ್ಲಾಸ್ಟಿಕ್‌ನ ದೂರಗಾಮಿ ದುಷ್ಪರಿಣಾಮದ ಪರಿಣಾಮಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ೨೦೧೦ ರಲ್ಲಿ, ಟೆನಿತ್ ಆದಿತ್ಯ ಎಂ, ತಮಿಳುನಾಡಿನ ವಿರು ದುನಗರದ ವಾಟ್ರಾಟ್ ಮಾರುಕಟ್ಟೆಯ ಹಿಂದೆ ನಡೆದುಕೊಂಡು ಹೋಗುತ್ತಿದ್ದಾಗ ರೈತರ ಗುಂಪೊಂದು ಬಾಳೆ ಎಲೆಗಳ ರಾಶಿಗೆ ಬೆಂಕಿ ಹಚ್ಚುವುದನ್ನು ನೋಡಿದನು. ಏನು ನಡೆಯುತ್ತಿದೆ ಎಂಬುದರ ಬಗ್ಗೆ ಆಸಕ್ತಿ ಹೊಂದಿದ್ದ ಆದಿತ್ಯ, ರೈತರನ್ನು ಸಂಪರ್ಕಿಸಿದನು.
ಅವರಿಬ್ಬರು, ಎಲೆಗಳು ಒಣಗಿ ಉದುರಿದ ಕಾರಣ ಮತ್ತು ಅವುಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿದು ಸುಡುತ್ತಿದ್ದೇವೆ ಎಂದರು. ಹೀಗೆ ವ್ಯರ್ಥವಾಗಿ ಹೋಗುವ ಬಾಳೆ ಎಲೆಯಿಂದ ಏನಾದರೂ ಉಪಯುಕ್ತ ವಾದ ವಸ್ತುವನ್ನು ತಯಾರಿ ಸಲು ಸಾಧ್ಯವೇ ಎಂದು ಆ ಕ್ಷಣದಲ್ಲಿ ಆದಿತ್ಯ ಯೋಚಿಸಿದ.
ನಾಲ್ಕು ವರ್ಷಗಳ ಸಮರ್ಪಿತ ಸಂಶೋಧನೆಯ ನಂತರ, ಆದಿತ್ಯನು ಬಾಳೆ ಎಲೆಗಳ ಶೆಲ ಜೀವಿತಾವಧಿಯನ್ನು ಸುಮಾರು ಮೂರು ವರ್ಷಗಳವರೆಗೆ ಸುಧಾರಿಸುವ ಮತ್ತು ಸಂಪೂರ್ಣವಾಗಿ ಪರಿಸರ ಸ್ನೇಹಿ ಮತ್ತು ರಾಸಾಯನಿಕವನ್ನು ಹೊಂದಿರದ ‘ಬಾಳೆ ಎಲೆ ತಂತ್ರಜ್ಞಾನ’ ಎಂಬ ಆವಿಷ್ಕಾರ ಮಾಡಲು ಸಾಧ್ಯವಾಯಿತು.
೨೦೨೦ ರಲ್ಲಿ ಎನ್.ಡಿ.ಟಿ.ವಿ ನಡೆಸಿದ ಸಂದರ್ಶನದಲ್ಲಿ ಆದಿತ್ಯ : ನಾವು ಪ್ಲಾಸ್ಟಿಕ್ ಪ್ಲೇಟ್, ಸ್ಟ್ರಾಗಳು, ಕಪ್, ಪಾಲಿಥಿನ್ ಮತ್ತು ಪ್ಯಾಕೇಜಿಂಗ್ ಅನ್ನು ಬಳಸುವುದನ್ನು ಅಭ್ಯಾಸ ಮಾಡಿದ್ದೇವೆ. ಕಾಗದದ ಪರ್ಯಾಯಗಳನ್ನು ಒಮ್ಮೆ ಮಾತ್ರ ಬಳಸಲಾಗುತ್ತದೆ. ಇದು, ಬಹಳಷ್ಟು ತ್ಯಾಜ್ಯವನ್ನು ಸೃಷ್ಟಿಸುತ್ತದೆ. ಹಾಗಾಗಿ ನಾನು ಬಾಳೆ ಎಲೆಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಿದೆ. ಈ ಬಾಳೆ ಎಲೆ ತಂತ್ರಜ್ಞಾನವು ಯಾವುದೇ ರಾಸಾಯನಿಕಗಳನ್ನು ಬಳಸದೆ ಮೂರು ವರ್ಷಗಳ ಕಾಲ ಎಲೆಗಳನ್ನು ಸಂರಕ್ಷಿಸುತ್ತದೆ. ಅವುಗಳ ಬಾಳಿಕೆಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ. ಸಂರಕ್ಷಿತ ಎಲೆಗಳು ವಿಪರೀತ ತಾಪಮಾನ ವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.
ಹೆಚ್ಚಿನ ತೂಕವನ್ನು ಸಹ ಹಿಡಿದಿಟ್ಟುಕೊಳ್ಳುತ್ತವೆ. ಈ ಕಪ್ ಮತ್ತು ಪ್ಲೇಟ್ ಉತ್ಪಾದನಾ ವೆಚ್ಚವು ತುಂಬಾ ಕಡಿಮೆಯಾಗಿದೆ ಮತ್ತು ಇವುಗಳನ್ನು ಬಳಸಿದ ನಂತರ ಒಂದೆಡೆ ಸಂಗ್ರಹಿಸಿ ಜಾನುವಾರುಗಳಿಗೆ ಮೇವಾಗಿಯೂ; ಸಸ್ಯಗಳಿಗೆ ಗೊಬ್ಬರವಾಗಿಯೂ ಬಳಸಬಹುದು. ಆದಿತ್ಯ ಅವರ ಈ ತಂತ್ರಜ್ಞಾನವು ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಇದು ಏಳು
ಅಂತರರಾಷ್ಟ್ರೀಯ ಮತ್ತು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಈ ತಂತ್ರಜ್ಞಾನದಲ್ಲಿ ಬಾಳೆ ಎಲೆಯಿಂದ ಪ್ಲೇಟ, ಲೋಟ ಮುಂತಾದ ದಿನಬಳಕೆ ವಸ್ತುಗಳನ್ನು ತಯಾರಿಸಿದಾಗ ಇವುಗಳ ತಯಾರಿಕೆಯ ವೆಚ್ಚವು ಒಂದು ವಸ್ತುವಿಗೆ ಸುಮಾರು ಹತ್ತು ಪೈಸೆಗಳು.
ಅದೇ ಗಾತ್ರದ ಪ್ಲಾಸ್ಟಿಕ್ ಬೆಲೆ ೭೦ ಪೈಸೆ. ಮತ್ತು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಹೋಲಿಸಿದರೆ ಬಾಳೆ ಎಲೆಯಿಂದ ತಯಾರಿಸಿದ ಪ್ಲೇಟ್ ಬೆಲೆ ಸುಮಾರು ಒಂದು ರುಪಾಯಿ. ಅದೇ ಗಾತ್ರದ ಪ್ಲಾಸ್ಟಿಕ್ ಪ್ಲೇಟ್ ಬೆಲೆ ರೂ.೪. ಆದ್ದರಿಂದ ಪರಿಸರ ಸ್ನೇಹಿ ಉಪಕ್ರಮ ವಾಗಿ, ಬಾಳೆ ಎಲೆಯನ್ನು ದೀರ್ಘಕಾಲ ರಕ್ಷಿಸಿಡುವ ಈ ತಂತ್ರಜ್ಞಾನವನ್ನು ಸಾವತ್ರಿಕಗೊಳಿಸಿದರೆ, ಮನುಕುಲದ ಭವಿಷ್ಯಕ್ಕೆ ಒಳ್ಳೆಯದು.