Sunday, 15th December 2024

ಹುವಾಯಿಯಿಂದ ಗೂಢಚಾರಿಕೆ ?

ಶಶಾಂಕ್ ಮುದೂರಿ

ಆಧುನಿಕ ತಂತ್ರಜ್ಞಾನದ ಬೆಳವಣಿಗೆಯು ಕೆಲವು ದೇಶಗಳ ನಡುವೆ ವಿಪರೀತ ಸ್ಪರ್ಧೆಯನ್ನು ತಂದೊಡ್ಡಿರುವುದು ಈ ಶತಮಾ ನದ ವಾಸ್ತವ. ಅಮೆರಿಕ ಮತ್ತು ಚೀನಾದ ನಡುವೆ ನಡೆಯುತ್ತಿರುವ ತಂತ್ರಜ್ಞಾನ ಯುದ್ಧವು ಈಗ ಹೊಸ ಮಜಲನ್ನು ಮುಟ್ಟಿದೆ.

ಚೀನಾದ ಹುವಾಯಿ ಸಂಸ್ಥೆ ತಯಾರಿಸಿದ ಉಪಕರಣಗಳನ್ನು ಈ ಹಿಂದೆಯೇ ಅಮೆರಿಕದ ಮೊಬೈಲ್ ಟವರ್‌ಗಳಲ್ಲಿ ಅಳವಡಿಸ ಲಾಗಿತ್ತು. ಅಂತಹ ಕೆಲವು ಟವರ್ ಗಳು ಮಿಲಿಟರಿ ಬೇಸ್ ಹತ್ತಿರವೂ ಇದ್ದವು. ಅಂತಹ ಉಪಕರಣಗಳು ಅಮೆರಿಕದ ನ್ಯೂಕ್ಲಿಯರ್ ಅಸಗಳ ಸಂಪರ್ಕವನ್ನು ವ್ಯತ್ಯಯಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕದ ಎಫ್ಬಿಐ
ಹೇಳಿದೆ.

ಅಮೆರಿಕದ ಡಿಫೆನ್ಸ್ ಡಿಪಾರ್ಟ್‌ಮೆಂಟ್ ಮತ್ತು ಯುಎಸ್ ಸ್ಟ್ರಾಜೆಟಿಕ್ ಕಮಾಂಡ್ ಗಳ ಸಂಪರ್ಕ, ಸಂದೇಶಗಳನ್ನು ಗ್ರಹಿಸುವ ಮತ್ತು ವ್ಯತ್ಯಯಗೊಳಿಸುವ ಸಾಮರ್ಥ್ಯವು ಹುವಾಯಿಯ ಉಪಕರಣಗಳಿಗಿದೆ ಎಂಬ ಗುರುತರ ಆಪಾದನೆಯನ್ನು ಅಮೆರಿಕ
ಮಾಡಿದೆ. ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಂಸ್ಥೆಯ ಸಂದೇಶಗಳನ್ನು ವ್ಯತ್ಯಯ ಗೊಳಿಸಬಲ್ಲ ಈ ಹೊಸ ವಿದ್ಯಮಾನವು ಅಲ್ಲಿನ ತಂತ್ರಜ್ಞರನ್ನು ಕಳವಳಕ್ಕೆ ಗುರಿಮಾಡಿದೆ.

ಇದು ಕೇವಲ ಆರೋಪ ಮಾತ್ರವಲ್ಲ, ಇದರ ಕುರಿತಾಗಿ ಅಲ್ಲಿನ ತನಿಖಾ ಸಂಸ್ಥೆಗಳು ಸಾಕಷ್ಟು ತನಿಖೆಯನ್ನೂ ಮಾಡಿವೆ ಎಂದು ವರದಿಯಾಗಿದೆ. ಆದರೆ, ಆ ರೀತಿ ಸಂಗ್ರಹಿಸಿದ ಮಾಹಿತಿ ಯನ್ನು, ಹುವಾಯಿಯ ಉಪಕರಣಗಳು ಚೀನಾಕ್ಕೆ ಕಳಿಸಿವೆಯೋ ಇಲ್ಲವೋ ಎಂದು ಖಚಿತಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಸಹಜವಾಗಿ ಈ ಆರೋಪವನ್ನು ಚೀನಾ ತಳ್ಳಿ ಹಾಕಿದೆ. ಆದರೆ ಚೀನಾದ ಹುವಾಯಿ ಸಂಸ್ಥೆ ತಯಾರಿಸಿದ ಉಪಕರಣಗಳು, ಅಮೆರಿಕದ ವಾಣಿಜ್ಯಕ ಮೊಬೈಲ್ ತರಂಗಗಳ ಮಾಹಿತಿಯನ್ನು
ಸಂಗ್ರಹಿಸಬಲ್ಲದು ಎಂದು ಈ ಹಿಂದೆಯೇ ಹಲವು ಮೂಲಗಳು ಹೇಳಿವೆ.

ಅಮೆರಿಕದ ಪ್ರಾದೇಶಿಕ ದೂತಾವಾಸವನ್ನು ಅಮೆರಿಕ ಮುಚ್ಚಿತ್ತು – ಅದಕ್ಕೆ ನೀಡಿದ ಕಾರಣ, ಅಲ್ಲಿ ಹಲವು ಗೂಢಚಾರರು ಇದ್ದಾರೆ ಎಂದು! ಇಂತಹ ಆರೋಪಗಳಿಗೆ ಪುಷ್ಟಿ ಕೊಡುವ ಒಂದು ವಿದ್ಯಮಾನ ಈಚೆಗೆ ಅಮೆರಿಕದಲ್ಲಿ ನಡೆದಿತ್ತು. ವಾಷಿಂಗ್ಟನ್‌ ನಲ್ಲಿ ಒಂದು ಚೈನೀಸ್ ಗಾರ್ಡನ್‌ನ್ನು ಸ್ಥಾಪಿಸಲು ಚೀನಾ ೨೦೧೭ರಲ್ಲಿ ಮುಂದಾಗಿತ್ತು ಮತ್ತು ಆ ಉದ್ದೇಶಕ್ಕಾಗಿ, ೧೦೦ ಮಿಲಿಯ ಡಾಲರ್‌ನ್ನು ವಿನಿಯೋಗಿಸಲು ಸಿದ್ಧವಾಗಿತ್ತು. ಆ ಚೈನೀಸ್ ಗಾರ್ಡನ್‌ನಲ್ಲಿ ಹಲವು ದೇಗುಲಗಳ ಮತ್ತು ಕಟ್ಟಡಗಳ ನಡುವೆ, ಎಪ್ಪತ್ತು ಅಡಿ ಉದ್ದದ ಪಗೋಡಾ ಗೋಪುರವನ್ನೂ ನಿರ್ಮಿಸುವ ಪ್ರಸ್ತಾಪವಿತ್ತು. ಆದರೆ, ಆ ಗೋಪುರವನ್ನು ಶ್ವೇತಭವನದಿಂದ ಕೇವಲ ಎರಡು ಮೈಲಿ ದೂರದಲ್ಲಿರುವಂತೆ ವಿನ್ಯಾಸಗೊಳಿಸಲಾಗಿತ್ತು.

ಅಲ್ಲಿ ಅಳವಡಿಸಬಹುದಾದ ಸೂಕ್ಷ್ಮಗ್ರಾಹಿ ಉಪಕರಣಗಳ ಮೂಲಕ ಶ್ವೇತಭವನ ಮತ್ತು ಅಮೆರಿಕ ಸರಕಾರದ ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆ ಇದೆ ಎಂದು, ಆ ಯೋಜನೆಗೆ ಚಾಲನೆ ನೀಡಲು ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಹುವಾಯಿ
ತಯಾರಿಸಿದ ಉಪಕರಣಗಳು, ಅಮೆರಿಕದ ಮಿಲಿಟರಿ ಮಾಹಿತಿಯನ್ನು ಸಂಗ್ರಹಿಸಬಲ್ಲವು ಎಂಬ ಅಮೆರಿಕ ಆರೋಪಿಸಿದೆ. ಇದು ಆಧುನಿಕ ತಂತ್ರಜ್ಞಾನ ಕ್ಷೇತ್ರದ ಯುದ್ಧ ಎಂದೇ ಸೈಬರ್ ಪಂಡಿತರು ವಿಶ್ಲೇಷಿಸಿದ್ದಾರೆ.