Thursday, 18th July 2024

ವಾಯುಮಾಲಿನ್ಯ ತಡೆಯುವ ಲಿಕ್ವಿಡ್ ಟ್ರೀ

ನಮ್ಮ ದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಸಮಸ್ಯೆ ವಿಪರೀತ ಎನಿಸಿದೆ. ಮರಗಳನ್ನು ನೆಡಲು ಜಾಗದ ಕೊರತೆಯೂ ಇದೆ. ಅಂತಹ ಪ್ರದೇಶಗಳಿಗೆ ಸೂಕ್ತ ಎನಿಸುವ ಲಿಕ್ವಿಡ್ ಟ್ರೀ, ವಾಯುಮಾಲಿನ್ಯವನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಬಲ್ಲದು.

ಡಾ.ಕಾರ್ತಿಕ ಜೆ.ಎಸ್.

ಇತ್ತೀಚೆಗೆ ನಮ್ಮ ದೇಶದ ಹೆಚ್ಚಿನ ನಗರಗಳಲ್ಲಿ ವಾಯುಮಾಲಿನ್ಯ ವಿಪರೀತವಾಗಿ ಹೆಚ್ಚುತ್ತಿದೆ. ಅತಿಯಾದ ಜನದಟ್ಟಣೆ, ಅಗಾಧ ಸಂಖ್ಯೆಯ ವಾಹನಗಳ ಬಳಕೆ, ಕಟ್ಟಡ ನಿರ್ಮಾಣದ ಸಮಯದಲ್ಲಿ ಎದ್ದೇಳುವ ದೂಳು, ವಾಯು ಮಾಲಿನ್ಯವನ್ನು ತಡೆಯುವ ಗಿಡ ಮರಗಳ ಕೊರತೆ, ಕೈಗಾರಿಕೆಗಳಲ್ಲಿ ಬಳಸುವ ನಾನಾ ರೀತಿಯ ರಾಸಾಯನಿಕಗಳು ಉತ್ಪಾದಿಸುವ ಕಲ್ಮಶ ಮೊದಲಾದವು ಇದಕ್ಕೆ ಪ್ರಮುಖ ಕಾರಣ.

ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ವಾಯುಮಾಲಿನ್ಯದಿಂದಾಗಿ ಜಗತ್ತಿನಾದ್ಯಂತ ೭೦ ಲಕ್ಷಕ್ಕೂ ಅಧಿಕ ಜನರು ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಇಂದು, ಜನರ ವಾಸಕ್ಕಾಗಿ ಎಲ್ಲೆಂದರಲ್ಲಿ ಕಟ್ಟುತ್ತಿರುವ ಕಾಂಕ್ರೀಟ್ ಕಟ್ಟಡಗಳಿಂದಾಗಿ, ಗಿಡ ನೆಡಲೂ ಜಾಗವಿಲ್ಲದ ಪರಿಸ್ಥಿತಿ ಬಂದೊದಗಿದೆ. ಜತೆಗೆ, ಕಾಂಕ್ರೀಟ್ ಕಟ್ಟಡ ಕಟ್ಟುವಾಗ, ಸೂಕ್ತ ಸಂಖ್ಯೆಯ ಗಿಡಮರಗಳನ್ನು ನೆಡುವ ಇಚ್ಚಾಶಕ್ತಿಯ ಕೊರತೆಯನ್ನೂ ಕಾಣಬಹುದು. ಇಂತಹ ಸನ್ನಿವೇಶ ದಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟಲು ಸರ್ಬಿಯ ದೇಶದ ಬೆಲ್ ಗ್ರೇಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಚತುರ ಉಪಾಯವೊಂದನ್ನು ಕಂಡುಹಿಡಿದಿದ್ದಾರೆ. ಅದುವೇ ‘ಲಿಕ್ವಿಡ್ ಟ್ರೀ’ ಗಳ ಬಳಕೆ.

ಏನಿದು ಲಿಕ್ವಿಡ್ ಟ್ರೀ? ಹೆಸರು ವಿಭಿನ್ನವಾಗಿದೆಯಲ್ಲ? ಇವುಗಳ ಕಾರ್ಯನಿರ್ವಹಣೆ ಹೇಗೆ? ತಾಂತ್ರಿಕವಾಗಿ ‘ಫೋಟೋ ಬಯೋರಿಯಾಕ್ಟರ್’ ಎಂದು ಕರೆಯಲ್ಪಡುವ ಲಿಕ್ವಿಡ್ ಟ್ರೀ ಗಳು ೬೦೦ ಲೀಟರ್ ನೀರು, ಪಾಚಿ ಮತ್ತು ಸೌರಫಲಕಗಳನ್ನು ಹೊಂದಿರುವ ಗಾಜಿನ ಟ್ಯಾಂಕ್‌ಗಳಾಗಿವೆ. ಸೌರಫಲಕಗಳು ಟ್ಯಾಂಕ್‌ನಲ್ಲಿರುವ ಪಂಪ್ ಕಾರ್ಯನಿರ್ವಹಿಸಲು ಅಗತ್ಯವಿರುವ ವಿದ್ಯುತ್ತನ್ನು ಸರಬರಾಜು ಮಾಡುತ್ತದೆ. ಪಂಪ್‌ನಲ್ಲಿರುವ ಸಣ್ಣ ರಂಧ್ರಗಳ ಮುಖಾಂತರ ಗಾಳಿಯು ಟ್ಯಾಂಕ್‌ನ ಒಳಗೆ ಬರುತ್ತದೆ.

ಅಲ್ಲಿರುವ ಪಾಚಿಯು ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಹೀರಿ, ದ್ಯುತಿ ಸಂಶ್ಲೇಷಣೆ ಪ್ರಕ್ರಿಯೆ ಮೂಲಕ ಶುದ್ಧ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಉತ್ಪಾದಿಸಲ್ಪಟ್ಟ ಆಮ್ಲಜನಕದ ಪ್ರಮಾಣವು, ಹತ್ತು ವರ್ಷ ಪ್ರಾಯದ ಎರಡು ಮರಗಳು ಮತ್ತು ೨೦೦ ಚದರ ಮೀಟರ್ ಹುಲ್ಲು ಉತ್ಪತ್ತಿ ಮಾಡುವ ಆಮ್ಲಜನಕದ ಪ್ರಮಾಣಕ್ಕೆ ಸಮನಾಗಿರುತ್ತದೆ ಎಂಬುದು ಸಂಶೋಧಕರಾದ ಡಾ. ಇವಾನ್ ಸ್ಪಾಸೋಜೆವಿಕ್ ಅವರ ಅಭಿಮತ.

ಜನನಿಬಿಡ ನಗರಗಳಲ್ಲಿ ಹೆಚ್ಚುತ್ತಿರುವ ಹಾನಿಕಾರಕ ಅನಿಲಗಳಿಗೆ ಅಲ್ಲಿನ ಮರಗಳು ತಮ್ಮನ್ನು ಒಡ್ಡಿಕೊಂಡಿರುತ್ತವೆ. ಮಾತ್ರವಲ್ಲದೆ ವಾತಾವರಣ ದಲ್ಲಿರುವ ಧೂಳಿನ ಕಣಗಳು ಎಲೆಗಳನ್ನು ವ್ಯಾಪಕವಾಗಿ ಆವರಿಸುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಮರಗಳು ಎಲೆಗಳನ್ನು ಉದುರಿಸುತ್ತವೆ. ಇದರಿಂದ ದ್ಯುತಿ ಸಂಶ್ಲೇಷಣೆ ಮಾಡಲು ಕಠಿಣವಾಗಿ ತನ್ನ ಆಹಾರವನ್ನು ತಯಾರಿಸಲಾಗದೆ ಸಸ್ಯಗಳು ನರಳುತ್ತವೆ.

ಲಿಕ್ವಿಡ್ ಟ್ರೀಗಳಲ್ಲಿ ಬಳಸುವ ಪಾಚಿಗಳು ೫ ರಿಂದ ೩೫ ಡಿಗ್ರಿ ನಡುವಿನ ತಾಪಮಾನದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಪಾಚಿಗಳ ಬಳಕೆ ಅತ್ಯಂತ ಅವಶ್ಯಕ ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಲಿಕ್ವಿಡ್ ಟ್ರೀಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಹೆಚ್ಚಿನ ನಿರ್ವಹಣೆಯ ಅಗತ್ಯ ಇದೆ. ಪ್ರತಿ ತಿಂಗಳೂ ಟ್ಯಾಂಕ್ ನಲ್ಲಿರುವ ನೀರು, ಪಾಚಿ ಮತ್ತು ಉಪ ಉತ್ಪನ್ನವಾದ ಜೈವಿಕ ದ್ರವ್ಯರಾಶಿಯನ್ನು ಹೊರತೆಗೆಯಬೇಕಾಗುತ್ತದೆ.

ನಮ್ಮ ದೇಶದ ಅನೇಕ ಜನನಿಬಿಡ ನಗರಗಳು ವಾಯುಮಾಲಿನ್ಯ ಸಮಸ್ಯೆಯಿಂದ ತತ್ತರಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ದೆಹಲಿ ಮೊದಲಾದ ಉತ್ತರ ಭಾರತದ ನಗರಗಳಲ್ಲಿ ಮಿತಿ ಮೀರಿದ ಮತ್ತು ಜನರ ಆರೋಗ್ಯಕ್ಕೆ ಅಪಾಯ ತರಬಲ್ಲಂತಹ ವಾಯುಮಾಲಿನ್ಯ ಇದ್ದು, ಇದು ವರ್ಷದಿಂದ ವರ್ಷಕ್ಕೆ ಹೆಚ್ಚಳಗೊಳ್ಳುತ್ತಾ ಇದೆ. ದೆಹಲಿಯಲ್ಲಂತೂ, ವರ್ಷದ ಒಂದೆರಡು ತಿಂಗಳುಗಳಲ್ಲಿ ಜೀವಕ್ಕೆ ಕುತ್ತು ತರಬಲ್ಲಂತಹ ವಾಯುಮಾಲಿನ್ಯ,  ಹೊಗೆ ಯಿಂದುಂಟಾಗು ಮಾಲಿನ್ಯ ಸಾಮಾನ್ಯ ಎನಿಸಿದೆ. ರಾಜ್ಯದ ರಾಜಧಾನಿಯಲ್ಲಿ ಇಂತಹ ಮಾಲಿನ್ಯ ಇರುವುದು ಕಳವಳಕಾರಿ.

ಜತೆಗೆ, ಉತ್ತರ ಭಾರತದ ಹೆಚ್ಚಿನ ನಗರಗಳಲ್ಲಿ ವರ್ಷದ ಕೆಲವು ತಿಂಗಳುಗಳಲ್ಲಿ ವಿಪರೀತ ವಾಯುಮಾಲಿನ್ಯ ಇರುತ್ತದೆ. ದಕ್ಷಿಣ ಭಾರತದಲ್ಲೂ ವಾಯು ಮಾಲಿನ್ಯ ಕ್ರಮೇಣ ಹೆಚ್ಚಳಗೊಳ್ಳುತ್ತಿದೆ. ಇಂತಹ ಸಮಸ್ಯೆಯನ್ನು ಎದುರಿಸಲು, ನಗರಗಳ ವಾಯುಮಾಲಿನ್ಯದ ಮಟ್ಟವನ್ನು ಕಡಿಮೆ ಗೊಳಿಸುವಲ್ಲಿ ಲಿಕ್ವಿಡ್ ಟ್ರೀ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಬಲ್ಲದು. ‘ಹಸಿರಿದ್ದರೆ ಮಾತ್ರ ಉಸಿರು’ ಎಂಬ ಪ್ರಾಜ್ಞರ ಮಾತನ್ನು ಗಂಭೀರವಾಗಿ ಅವಲೋಕಿಸಿ, ಕಾರ್ಯೋನ್ಮುಖರಾದರೆ ಸ್ವಚ್ಛ, ಸುಂದರ ಪರಿಸರ ನಮ್ಮದಾಗಬಹುದು.

error: Content is protected !!