Thursday, 12th December 2024

ದುಬಾರಿ ಕಾರುಗಳ ಐಷಾರಾಮ

ಹಾಹಾಕಾರ್‌

ವಸಂತ ಗ ಭಟ್‌

ಹೊಸ ದುಬಾರಿ ಕಾರುಗಳೆಂದರೆ ಒಂದು ರೀತಿಯ ಸಂಭ್ರಮ. ಅಂತಹ ಎರಡು ಕಾರುಗಳ ಕಿರು ಪರಿಚಯ ಇಲ್ಲಿದೆ.

ಯುರೋಪ್‌ನ ಕಾರು ತಯಾರಿಕಾ ಸಂಸ್ಥೆ ಸ್ಕೋಡ ಭಾರತದಲ್ಲಿ ತನ್ನ ಕಾರು ಮಾರಾಟ ಆರಂಭಿಸಿ ಇದೇ ನವೆಂಬರ್‌ಗೆ ೨೦ ವರ್ಷವಾಗಲಿದೆ. ಎರಡು ದಶಕಗಳ ಕಾಲ ಭಾರತದ ಮಾರುಕಟ್ಟೆಯಲ್ಲಿದ್ದರೂ ವ್ಯವಹಾರಿಕವಾಗಿ ಸ್ಕೋಡ ಅಷ್ಟೊಂದು ಲಾಭ ಗಳಿಸಿಲ್ಲ.

ಭಾರತದ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಹೊಂದುವ ಉದ್ದೇಶದಿಂದ ಸ್ಕೋಡ ತನ್ನ ಒಕ್ಟಾ ವಿಯಾ ಕಾರಿನ ಹೊಸ ಮಾದರಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ದುಬಾರಿ ಸೇಡಾನ್ ಆಗಿರುವ ಸ್ಕೋಡ ಒಕ್ಟಾ ವಿಯಾ ಸಾಕಷ್ಟು ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ತಂದಿದೆ. ಹೆಚ್ಚಿನವರಿಗೆ ತಿಳಿದಿರುವಂತೆ ಇದು ಸಂಪೂರ್ಣ ಹೊಸ ಕಾರು ಆವೃತ್ತಿಯಲ್ಲ, ಅದಾಗಲೇ ಮಾರುಕಟ್ಟೆಯಲ್ಲಿರುವ ಸ್ಕೋಡ ಒಕ್ಟಾ ವಿಯಾ ಕಾರಿಗೆ 2021 ರಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಕಾರಿನ ಮೊದಲ ಮುಖ್ಯ ಆಕರ್ಷಣೆ ಅಂದರೆ ಕಾರಿನ ವಿಶಾಲವಾದ ಬೂಟ್ ಸ್ಪೇಸ್. ಸುಮಾರು 600 ಲೀಟರ್ ಸಾಮರ್ಥ್ಯದಾಗಿದ್ದು, ಹಿಂಬದಿಯ ಆಸನಗಳನ್ನು ಮಡಚಿದರೆ ಅದು ಸುಮಾರು 1555 ಲೀಟರ್ ನಷ್ಟಾಗಲಿದೆ. ಡಿಕ್ಕಿಯನ್ನು ತೆಗೆಯಲು ಕಾರಿನ ಕೆಳಭಾಗದಲ್ಲಿ ಒಮ್ಮೆ ಕಾಲನ್ನು ಆಡಿಸಿದ ರಾಯಿತು, ಡಿಕ್ಕಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳಲಿದೆ. ಸ್ಕೋಡ ಒಕ್ಟಾವಿಯಾ 4689 ಮಿಲಿಮೀಟರ್ ಉದ್ದವಿದ್ದು, 1829 ಮಿಲಿಮೀಟರ್ ಅಗಲವಿದ್ದು, 1469 ಮಿಲಿಮೀಟರ್ ಎತ್ತರವಿದೆ.

ಹಿಂಬದಿಯ ಆಸನದ ಕಡೆ ಬರುವುದಾದರೆ ದುಬಾರಿ ಲೆದರ್‌ನಿಂದ ಮಾಡ ಲಾದ ಆಸನಗಳಲ್ಲಿ ಕುಳಿತುಕೊಳ್ಳಲು ಸಾಕಷ್ಟು ಲೆಗ್ ರೂಂ ಲಭ್ಯವಿದ್ದು, ಅವಶ್ಯಕತೆಗನುಗುಣವಾಗಿ ಕಿಟಕಿಯನ್ನು ಮುಚ್ಚಲು ಕಪ್ಪು ಪರದೆ ಲಭ್ಯವಿದೆ. ಮೊಬೈಲ್ ಚಾರ್ಜ್ ಮಾಡಲು ಎರಡು ಯೂಎಸ್ಬಿ ಪೋರ್ಟ್ ಲಭ್ಯವಿದ್ದು, ಎ.ಸಿ ಯನ್ನು ನಿಯಂತ್ರಿಸಲು ಹಿಂಬದಿಯ ಆಸನದಲ್ಲಿ ನಿಯಂತ್ರಕ ಲಭ್ಯವಿದೆ.

ಮಧ್ಯದ ಆಸನವನ್ನು ಮಡಚುವ ಮೂಲಕ ಕೈಯನ್ನು ಆರಾಮವಾಗಿ ಇಟ್ಟು ಕೊಳ್ಳುಲು ಬಳಸಬಹುದಾಗಿದೆ. ಈ ಮಧ್ಯದ ಆಸನದಲ್ಲಿ ಲೊಟಗಳನ್ನು ಇಡುವ ಸ್ಟಾಂಡ್ ಕೂಡ ಲಭ್ಯವಿದೆ. ಹುಂಡೈ, ಹೊಂಡ, ಟೊಯೋಟ ಸಂಸ್ಥೆಗಳ ದುಬಾರಿ ಕಾರನ್ನು ಬಳಸಿ ಸ್ಕೋಡ ಒಕ್ಟಾ ವಿಯಾಕ್ಕೆ ಬಂದರೆ ಮುಂದಿನ ಆಸನದ ವಿನ್ಯಾಸ ಸ್ವಲ್ಪ ಸಪ್ಪೆ ಎನ್ನಿಸಬಹುದು. ಲೆದರ್‌ನಿಂದ ಮಾಡಲಾದ ಸುಂದರ ಆಸನಗಳು, ಹತ್ತು ಇಂಚಿನ ಟಚ್ ಸ್ಕ್ರೀನ್ ಪರದೆ, ತಂತಿ ರಹಿತ ಅನ್ದ್ರೊಯಿಡ್ ಆಟೋ ಮತ್ತು ಆಪಲ್ ಆಟೋಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ.  ತಂತಿ ರಹಿತ ಚಾರ್ಜಿಂಗ್ ಸೌಲಭ್ಯವಿದ್ದು ಇತರ ಕಾರುಗಳ ರೀತಿ ಇದು ಅತ್ಯಂತ ಚಿಕ್ಕದಾಗಿರದೆ ಸಾಕಷ್ಟು ವಿಶಾಲವಾಗಿದೆ. ಹೆಚ್ಚಿನ ದುಬಾರಿ ಕಾರುಗಳ ರೀತಿ ಇದರಲ್ಲೂ ಸಹ ಒಂದು ಬಟನ್ ಒತ್ತುವ ಮೂಲಕ ಕಾರನ್ನು ಆರಂಭಿಸಬಹುದಾಗಿದೆ.

ಸುರಕ್ಷತೆ
ಸುರಕ್ಷತೆಯ ವಿಚಾರಕ್ಕೆ ಬರುವುದಾದರೆ ಸ್ಕೋಡ ಒಕ್ಟಾ ವಿಯಾ 8 ಗಾಳಿಚೀಲಗಳನ್ನು ಹೊಂದಿದ್ದು, ಗಾಡಿಯನ್ನು ನಿಲುಗಡೆ ಮಾಡಲು ಸಹಕಾರಿಯಾಗುವಂತಹ ತಂಜ್ಞಾನವನ್ನು ಹೊಂದಿದೆ. ಸ್ವಯಂ ಚಾಲಿತ ವೈಪರ್, ಹೆಡ್ ಲ್ಯಾಂಪ್ಸ್ ಹೊಂದಿದೆ. ಸ್ವಯಂ ಚಾಲಿತ ಗೇರ್ ವ್ಯವಸ್ಥೆಯನ್ನು ಹೊಂದಿರುವ ಸ್ಕೋಡ ಒಕ್ಟಾ ವಿಯಾ 190 ಹಾರ್ಸ್ ಪವರ್ ಇಂಜಿನ್‌ಅನ್ನು ಹೊಂದಿದೆ. ಈ ಕಾರಿನ ಬೆಲೆ ರು.25 ಲಕ್ಷದಿಂದ ರು. 30 ಲಕ್ಷ. ಹುಂಡೈ ವನರ, ಟೊಯೋಟ ಇನ್ನೊವ ಕಾರಿನೊಂದಿಗೆ ಸ್ಪರ್ಧೆ ಮಾಡಲಿದೆ.

ಜಾಗ್ವರ್ ಐ ಪೇಸ್
ನಮ್ಮ ದೇಶದ ಹೆಮ್ಮೆ ಟಾಟ ಒಡೆತನದಲ್ಲಿರುವ ಜಾಗ್ವರ್ ಸಂಸ್ಥೆ, ಐ ಪೇಸ್ ಎನ್ನುವ ದುಬಾರಿ ಬೆಲೆಯ ಸಂಪೂರ್ಣ ವಿದ್ಯುತ್ ಚಾಲಿತ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಕಾರು ಅದಾಗಲೇ ಇಂಗ್ಲೆಂಡ್ ಮತ್ತಿತರ ಯೂರೋಪಿಯನ್ ದೇಶಗಳಲ್ಲಿ ಲಭ್ಯವಿದೆ.

ಸಂಪೂರ್ಣ ಬ್ಯಾಟರಿ ಚಾರ್ಜ್ ಆದರೆ ಸುಮಾರು 470 ಕಿಲೋಮೀಟರ್ ಮೈಲೇಜ್ ನೀಡಲಿದೆ ಜಾಗ್ವರ್ ಐ ಪೇಸ್. ಇದು ಎರಡು ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು ಒಂದು ಮೋಟರ್ ಮುಂಬದಿಯ ಚಕ್ರಗಳಿಗೆ ಶಕ್ತಿಯನ್ನು ವರ್ಗಾಯಿಸಿದರೆ ಇನ್ನೊಂದು ಮೋಟರ್ ಹಿಂದಿನ ಚಕ್ರಕ್ಕೆ ಶಕ್ತಿಯನ್ನು ನೀಡಲಿದೆ. 656 ಲೀಟರ್ ಬೂಟ್ ಸ್ಪೇಸ್ ಲಭ್ಯವಿದ್ದು ಹಿಂಬದಿಯ ಆಸನವನ್ನು ಮಡಚಿದರೆ 1453 ಲೀಟರ್ ನಷ್ಟಾಗಲಿದೆ. ಕಾರಿನ ಬೆಲೆಗೆ ಹೊಲಿಸಿದರೆ ಇದು ಸ್ವಲ್ಪ ಕಡಿಮೆ ಎಂದೇ ಹೇಳಬಹುದು.

ಪೂರ್ಣ ವಿದ್ಯುತ್ ಚಾಲಿತ
ಇದು ಸಂಪೂರ್ಣ ವಿದ್ಯುತ್ ಚಾಲಿತ ಕಾರಾಗಿರುವುದರಿಂದ ಮುಂಬದಿಯಲ್ಲಿ ಯಾವುದೇ ಇಂಜಿನ್ ಇರುವುದಿಲ್ಲ. ಹಾಗಾಗಿ ಮುಂಬದಿಯ ಜಾಗವನ್ನು ಸಹ ವಸ್ತುಗಳನ್ನು ಇಡಲು ಬಳಸಬಹುದಾಗಿದೆ. ಹಿಂಬದಿಯ ಆಸನ ವಿಶಾಲವಾಗಿದ್ದು ಕಿಟಕಿಗಳು ಸ್ವಲ್ಪ ಚಿಕ್ಕದಾಗಿವೆ. ಎರಡು ಯುಎಸ್ ಬಿ ಸಿ-ಟೈಪ್ ನ ಪೋರ್ಟ್ ಗಳು ಲಭ್ಯವಿವೆ. ಹಿಂಬದಿಯ ಆಸನಗಳಲ್ಲಿ ತಾಪಮಾನವನ್ನು ನಿಯಂತ್ರಿಸಬಹುದಾಗಿದ್ದು ಎಸಿ ಯನ್ನು ನಿಯಂತ್ರಿಸಲು ವಿಶೇಷ ಡಿಜಿಟಲ್ ನಿಯಂತ್ರಕ ಲಭ್ಯ. ಕಾರಿನ ಮೇಲ್ಭಾಗ ಸಂಪೂರ್ಣ ಗಾಜಿನಿಂದ ಮಾಡಲಾಗಿದ್ದು, ತೆರೆದುಕೊಳ್ಳುವ ವ್ಯವಸ್ಥೆಯನ್ನು ಹೊಂದಿಲ್ಲ.

ಬದಲಾಗಿ ಈ ಗಾಜು ಇನ್ರಾರೆಡ್ ಕಿರಣಗಳನ್ನು ಹೀರಿ ಕಾರನ್ನು ತಂಪಾಗಿಡಲು ಸಹಕರಿಸಲಿದೆ. ಕಾರು ಪ್ರವೇಶಿಸುವ ಮೊದಲೇ ನೀವು ಹೇಳಿದ ತಾಪಮಾನಕ್ಕೆ ಕಾರು ಸಿದ್ಧವಾಗಿರಲಿದೆ, ಜತೆಗೆ ಗಾಳಿಯನ್ನು ಶುದ್ಧೀಕರಿಸುವ ವ್ಯವಸ್ಥೆ ಕೂಡ ಈ ಕಾರಿನಲ್ಲಿ ಲಭ್ಯ. ಇದರ ಮೌಲ್ಯ ಸುಮಾರು ರು.1.06 ಕೋಟಿಯಿಂದ ರು.1.12 ಕೋಟಿ. ಮರ್ಸಿಡಿಸ್ ಬೆಂಜ್ ಮತ್ತು ಬಿಎಮ್ ಡಬ್ಲೂ ಕಾರಿನೊಡನೆ ಈ ಕಾರು ಸ್ಪರ್ಧೆಗೆ ಇಳಿಯಲಿದೆ.