Sunday, 15th December 2024

ಉಪಗ್ರಹ ನೀಡಿದ ಮಳೆ ಮಾಹಿತಿ

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಉಪಗ್ರಹಗಳು ಹವಾಮಾನದ ವಿವರಗಳನ್ನು ಸಂಗ್ರಹಿಸಿ, ವಿಶ್ಲೇಷಿಸುವುದು ಈ ಕಾಲಮಾನದ ಸುದ್ದಿ. ಈಗ ಬ್ರೆಜಿಲ್‌ನ ಕಾಫಿ ಕೃಷಿ ಪ್ರದೇಶದ ಹವಾಮಾನ ವಿವರಗಳನ್ನು ಯುರೋಪಿನ ಸೆಂಟಿನೆಲ್-೨ ಉಪಗ್ರಹ ಸಂಗ್ರಹಿಸಿದ್ದು, ಆ ಪ್ರದೇಶದಲ್ಲಿ ಉದ್ಭವಿಸಿರುವ ಬರಗಾಲದ ಸನ್ನಿವೇಶವನ್ನು ಬಿತ್ತರಿಸಿದೆ.

ಕಳೆದ ಒಂಬತ್ತು ದಶಕಗಳಲ್ಲೇ ಅತಿ ತೀವ್ರ ಎನಿಸುವ ಬರಗಾಲ ಮತ್ತು ಮಳೆಯ ಕೊರತೆಯನ್ನು ಎದುರಿಸುತ್ತಿರುವ ಆ
ಪ್ರದೇಶ ದಲ್ಲಿ ವಿಶಾಲವಾದ ಕಾಫಿ ತೋಟಗಳಿದ್ದು, ಈ ವರ್ಷದ ಬರಗಾಲವು ಕಾಫಿ ಬೆಳೆಯ ಮೇಲೆ ತೀವ್ರ ಪರಿಣಾಮ ಬೀರಿದೆ.
ಕಳೆದ ಹಲವು ತಿಂಗಳುಗಳಿಂದ ಬ್ರೆಜಿಲ್‌ನ ಕಾಫಿ ತೋಟಗಳು ಸರಿಯಾದ ಮಳೆಯನ್ನು ಕಂಡಿಲ್ಲ. ೨೦೨೧ರ ಕಾಫಿ ಬೆಳೆಯು ನೀರಿನ ಕೊರತೆಯಿಂದ ಕುಂಠಿತ ಗೊಂಡಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಬ್ರೆಜಿಲ್‌ನಲ್ಲಿ ಮಳೆಯಾಗುವ ಸಾಧ್ಯತೆ ಸಾಂಪ್ರದಾಯಿಕವಾಗಿ ಕಡಿಮೆ.

ಆದ್ದರಿಂದ, ೨೦೨೧-೨೨ರಲ್ಲಿ ಬ್ರೆಜಿಲ್‌ನ ಕಾಫಿ ಉತ್ಪನ್ನದ ಪ್ರಮಾಣವು ತೀವ್ರ ಕುಸಿಯುವ ಸಾಧ್ಯತೆ ಇದೆ ಎಂದು ಉಪಗ್ರಹದ
ಮಾಹಿತಿ ಹೇಳುತ್ತಿದೆ. ಜಗತ್ತಿನಲ್ಲಿ ಒಟ್ಟು ಉತ್ಪನ್ನವಾಗುವ ಕಾಫಿಯ ಪೈಕಿ, ಬ್ರೆಜಿಲ್‌ನಲ್ಲಿ ಶೇ.೩೩ರಷ್ಟು ಉತ್ಪನ್ನವಾಗುತ್ತಿದ್ದು, ಆ ದೇಶದಲ್ಲಿ ಕಾಫಿ ಬೆಳೆ ಸೊರಗಿದರೆ, ಅಂತಾರಾಷ್ಟ್ರೀಯ ಕಾಫಿ ಬೆಳೆಯ ಮೇಲೆ ಪರಿಣಾಮ ಬೀರಬಲ್ಲದು. ಈ ನಿಟ್ಟಿನಲ್ಲಿ, ಒಟ್ಟಾರೆ ಮುಂದಿನ ತಿಂಗಳುಗಳಲ್ಲಿ ಕಾಫಿ ಬೀಜದ ಸಗಟು ಬೆಲೆಯು ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಉಪಗ್ರಹ ನೀಡಿದ ಅಂಕಿಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿದ ಮಾರುಕಟ್ಟೆ ಪಂಡಿತರು ಸೂಚಿಸಿದ್ದಾರೆ.