Sunday, 15th December 2024

ಟಿಕ್‌ ಟಾಕ್‌ ಕಾನೂನು ಸಮರ

-ಅಜಯ್ ಅಂಚೆಪಾಳ್ಯ

ನಮ್ಮ ದೇಶವು ಟಿಕ್‌ಟಾಕ್‌ನ್ನು ನಿಷೇಧಿಸಿದಂತೆ, ಅಮೆರಿಕದಲ್ಲೂ ಟಿಕ್‌ಟಾಕ್ ನಿಷೇಧಗೊಂಡ ವಿಷಯ ಈಗ ಹಳೆಯ ಸುದ್ದಿ. ಆದರೆ, ನಿನ್ನೆಯಿಂದ ಅಲ್ಲಿ ಆ ನಿಷೇಧ ಜಾರಿಗೆ ಬರಬೇಕಿದ್ದರೂ, ಅದಕ್ಕೆ ಅಮೆರಿಕದ ನ್ಯಾಯಾಲಯವೊಂದು ತಡೆಯೊಡ್ಡಿದೆ.
ಅಮೆರಿಕದ ಸರಕಾರದ ಇಲಾಖೆಗಳು ಆದೇಶವನ್ನು ಜಾರಿಗೊಳಿಸಿ, ಸೆಪ್ಟೆೆಂಬರ್ 20ರಿಂದ ದೇಶದ ಎಲ್ಲಾ ಜನರು ಟಿಕ್‌ಟಾಕ್‌ನ್ನು ನಿಷೇಧಿಸುವಂತೆ ತಾಕೀತು ಮಾಡಿದ್ದವು. ಈ ನಡುವೆ ಟಿಕ್‌ಟಾಕ್‌ನ ಮಾಲಿಕ ಸಂಸ್ಥೆಯಾಗಿರುವ ಬೈಟ್ ಡಾನ್ಸ್‌, ಈ ನಿಷೇಧವನ್ನು ದೂರ ಮಾಡಲು ಸಾಕಷ್ಟು ಕೆಲಸ ಮಾಡಿದ್ದು, ಒರಾಕಲ್ ಸಂಸ್ಥೆೆಯೊಂದಿಗಿನ ಒಡಂಬಡಿಕೆಗೆ ಪ್ರಯತ್ನಿಸಿದ್ದು,  ಟಿಕ್‌ಟಾಕ್‌ ಗ್ಲೋಬಲ್ ಎಂಬ ಹೊಸ ಸಂಸ್ಥೆಯನ್ನು ಹುಟ್ಟುಹಾಕಲು ತಯಾರಿ ನಡೆಸಿತ್ತು.

ಆದ್ದರಿಂದ, ಟಿಕ್ ಟಾಕ್ ಮೇಲಿನ ನಿಷೇಧವನ್ನು ಸೆಪ್ಟೆಂಬರ್ 27ರ ತನಕ ಮುಂದುವರಿಸಲಾಗಿತ್ತು. ತನ್ನ ಮೇಲಿನ ನಿಷೇಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಟಿಕ್‌ಟಾಕ್, ಈ ರೀತಿ ನಿಷೇಧಮಾಡುವುದು ಏಕಪಕ್ಷೀಯವಾಗುತ್ತದೆ ಎಂದು ಮನವಿ ಸಲ್ಲಿಸಿತ್ತು. ಜತೆಗೆ, ಅಮೆರಿಕದ ಸುಮಾರು 100 ಮಿಲಿಯ ಜನರು ಟಿಕ್‌ಟಾಕ್‌ನ್ನು ಉಪಯೋಗಿಸುತ್ತಿದ್ದು, ಒಂದು ವೇಳೆ ಈ ನಿಷೇಧವು ಅಮೆರಿಕದಾದ್ಯಂತ ಜಾರಿಗೆ ಬಂದರೆ, ಅಷ್ಟು ಜನ ಗ್ರಾಹಕರು ತೊಂದರೆಗೆ ಒಳಗಾಗಬೇಕಾಗುತ್ತದೆ ಮತ್ತು ಟಿಕ್‌ಟಾಕ್ ಡೌನ್ ‌ಲೋಡ್ ಸಾಕಷ್ಟು ವೇಗವಾಗಿ ನಡೆಯುತ್ತಿದ್ದು, ಜನಪ್ರಿಯ ಸಾಮಾಜಿಕ ಮಾಧ್ಯಮವಾಗಿ ಮುನ್ನಡೆಯುತ್ತಿರುವುದರಿಂದ, ಈ ರೀತಿ ನಿಷೇಧ ಮಾಡುವುದು ಸರಿಯಲ್ಲ. ಈ ನಿಷೇಧದಿಂದ, ಟಿಕ್ ಟಾಕ್ ಕಣ್ಮರೆಯಾದರೆ, ಅಮೆರಿಕದ ಬಳಕೆದಾರರು ಮತ್ತು ಜಾಹಿರಾತುದಾರರು ಸಾಕಷ್ಟು ಕ್ಲೇಷಕ್ಕೆ ಒಳಗಾಗುತ್ತಾರೆ ಎಂದು ಟಿಕ್ ಟಾಕ್ ಮನವಿ ಸಲ್ಲಿಸಿತ್ತು.

ಇದನ್ನು ಗುರುತಿಸಿದ ನ್ಯಾಯಾಲಯವು 27 ಸೆಪ್ಟೆೆಂಬರ್‌ನಿಂದ ಜಾರಿಗೆ ಬರಬೇಕಿದ್ದ ನಿಷೇಧಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಅದೇನಿದ್ದರೂ, ನವೆಂಬರ್ 12ರಿಂದ ಟಿಕ್‌ಟಾಕ್ ಮೇಲೆ ಇನ್ನಷ್ಟು ನಿಯಂತ್ರಣ ಹೇರಲು ಅಮೆರಿಕ ಸಿದ್ಧವಾಗಿದ್ದು, ಅದರ ಕುರಿತು ನ್ಯಾಯಾಲಯ ಏನೂ ಹೇಳಿಲ್ಲ.

ಜನಪ್ರಿಯ ವಿಡಿಯೋ ಆಪ್ ಎನಿಸಿರುವ ಟಿಕ್‌ಟಾಕ್ ಅಮೆರಿಕ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಜನಪ್ರಿಯ. ಚೀನಾ ಒಡೆತನದ ಈ ಆ್ಯಪ್ ಬಳಸಿದರೆ, ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿ ಚೀನಾಕ್ಕೆ ರವಾನೆಯಾಗುವ ಸಾಧ್ಯತೆ ಇರುವ ಕಾರಣ ನೀಡಿ, ಅಮೆರಿಕ ಸರಕಾರ ಟಿಕ್‌ಟಾಕ್‌ನ್ನು ನಿಷೇಧ ಮಾಡಿ ಆಜ್ಞೆ ಹೊರಡಿಸಿತ್ತು. ಟಿಕ್‌ಟಾಕ್‌ನ ಒಡೆತನವನ್ನು ಚೀನಾ ಸಂಸ್ಥೆ ಯಿಂದ ತಪ್ಪಿಸಿ, ಅಮೆರಿಕದ ಒರಾಕಲ್‌ಗೆ ಹಸ್ತಾಂತರಿಸುವ ಕುರಿತು ಮಾತುಕತೆ ಇನ್ನೂ ನಡೆಯುತ್ತಿದ್ದು, ಅದು ಯಶಸ್ವಿ ಯಾದಲ್ಲಿ, ಟಿಕ್‌ಟಾಕ್ ಮುಂದುವರಿಯುವ ಸಾಧ್ಯತೆ ಇದ್ದೇ ಇದೆ. ಈ ನಡುವೆ ನಮ್ಮ ದೇಶದಲ್ಲಿ ಟಿಕ್‌ಟಾಕ್ ಮೇಲಿನ ನಿಷೇಧ ಜಾರಿಯಲ್ಲಿದೆ.