Thursday, 12th December 2024

ಹಿಮದಲ್ಲಿ ಆಡುವ ಮಗು ನಾನು..

ಸುಪ್ರೀತಾ ವೆಂಕಟ್‌

ಹಿಮಾಚಲ ಪ್ರದೇಶದ ಶಿಮ್ಲಾ, ಮನಾಲಿ ಮೊದಲಾದ ಪ್ರದೇಶಗಳು ಹಿಮಪ್ರವಾಸಕ್ಕೆ ಹೆಸರುವಾಸಿ. ಹಿಮದಲ್ಲಿ ಆಟವಾ ಡಲು, ಹಿಮತುಂಬಿದ ಪರ್ವತಗಳಲ್ಲಿ ನಡೆದಾಡಲು, ಹಿಮದ ಇಳಿಜಾರುಗಳಲ್ಲಿ ಜಾರುತ್ತಾ ಸಾಗಲು ಇಲ್ಲಿ ಅವಕಾಶ. ಪ್ರವಾಸದ ನಿಜಾನುಭವ ನೀಡುವ ಈ ಹಿಮಪ್ರದೇಶಗಳಲ್ಲಿ ಈಗ ಚಳಿಗಾಲದಿಂದಾಗಿ, ಸಂಪೂರ್ಣ ಹಿಮ.

ದಕ್ಷಿಣ ಭಾರತೀಯರಿಗೆ ವರ್ಷದಲ್ಲಿ ಮೂರು ಋತುಮಾನಗಳಿವೆ. ಆದರೆ ಒಂದು ಕೊರತೆಯಿದೆ. ಏನು ಗೊತ್ತಾ? ಅದುವೇ ಹಿಮದ ಜೊತೆಗಿನ ಅನುಭವ. ಚಳಿಗಾಲದಲ್ಲಿ ವಾತಾವರಣದಲ್ಲಿ ಬದಲಾವಣೆ ಕಾಣುತ್ತದೆಯೇ ಹೊರತು ಇಲ್ಲಿ ಹಿಮಪಾತವಾಗೋಲ್ಲ. ಮಕ್ಕಳಿಗೆ, ಹಿರಿಯರಿಗೆ ಹಿಮದ ಅನುಭವವಾಗಲು ಉತ್ತರ ಭಾರತಕ್ಕೆ ಪ್ರವಾಸ ಹೋಗಬೇಕು. ಹಿಮಾಲಯದ ಅಂಚಿನುದ್ದಕ್ಕೂ ಅತ್ಯಂತ ಆಕರ್ಷಣೀಯ ಹಿಮದ ಅನುಭವವಾಗುವ ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ ಹಿಮಾಚಲ ಪ್ರದೇಶದ ಮನಾಲಿ, ಶಿಮ್ಲಾ ಬಹು ಸುಂದರ, ತಲುಪಲು ಸಹ ಸುಲಭ. ಹಿಮದ ರಾಶಿಯ ಮೇಲೆ ಓದಬೇಕು, ಜಾರಬೇಕು. ಹಿಮವನ್ನು ಉಂಡೆಗಳನ್ನಾಗಿ ಮಾಡಿ ಒಬ್ಬರಿ ಗೊಬ್ಬರು ಎಸೆಯ ಬೇಕು. ಹಿಮದಲ್ಲೇ ಆಕೃತಿಗಳನ್ನು ತಯಾರಿಸಬೇಕು ಹೀಗೆ ಹಿಮ ಕಂಡರೆ ಏನೆಲ್ಲಾ ಮಾಡಬೇಕೆಂಬುದು ಕೇಳಿದರೆ, ಪಟ್ಟಿ ಉದ್ದುದ್ದ ಬೆಳೆಯುತ್ತಾ ಹೋಗುತ್ತದೆ. ಹಿಮದೊಂದಿಗೆ ಆಡಬೇಕೆಂಬ ಕನಸು ನನಸು ಮಾಡಬೇಕಾದರೆ ಉತ್ತರ ಭಾರತಕ್ಕೊಮ್ಮೆ ಭೇಟಿ ಕೊಡಿ, ಎಲ್ಲಾ ಕನಸುಗಳೂ ನನಸಾಗುವುದು ಪಕ್ಕಾ. ಮನಾಲಿ ಶಿಮ್ಲಾ ನವ ದಂಪತಿಗಳಿಗೆ ಹನಿಮೂನ್ ಸ್ಪಾಟ್. ಮಕ್ಕಳಿಗೆ ಸ್ನೋ ಫಾಲ್ ಎಂಜಾಯ್ ಮಾಡಲು, ಯುವಕರಿಗೆ ಸಾಹಸಮಯ ಆಟಗಳಿಗೆ ಫೇವರೇಟ್ ಜಾಗ, ಹಿರಿಯರಿಗೆ ನಡುಗುವ ಚಳಿಯ ಅನುಭವ ನೀಡುತ್ತದೆ.

ಕುಲ್ಲು ಮನಾಲಿ
ನಾನು ಮತ್ತು ನನ್ನ ಪತಿ ಪಂಜಾಬ್ ಪ್ರವಾಸ ಮುಗಿಸಿ ಮನಾಲಿಯತ್ತ ಕಾರ್ ಅಲ್ಲಿ ಪ್ರಯಾಣ ಬೆಳೆಸಿದೆವು. ಪಂಜಾಬ್‌ನಿಂದ ಮನಾಲಿಗೆ ಸಾಗುವ ರಸ್ತೆ ತುಂಬಾನೇ ಅದ್ಭುತ. ಒಂದು ಕಡೆ ಗಗನ ಚುಂಬಿಸು ವಂತಹ ಗುಡ್ಡಗಳು, ಮತ್ತೊಂದು ಕಡೆ ಎದೆ ಧಸಕ್ಕೆ ನ್ನುವ ಪ್ರಪಾತ, ಇವುಗಳ ರೆಡರ ಮಧ್ಯೆ ತಿರುವುಗಳುಳ್ಳ ರಸ್ತೆ. ಕೆಲವು ಎತ್ತರೆತ್ತರದ ಗುಡ್ಡಗಳಿಗೆ ಕೇಬಲ್ ವಯರ್ ಎಳೆದಿದ್ದಾರೆ, ಇದನ್ನು ಅತೀ ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದಿದ್ದೇ ನೆಂದರೆ ಆ ಗುಡ್ಡಗಳ ಮೇಲೆ ಮನೆಗಳಿವೆ, ಆ ಮನೆಗಳಿಗೆ ಬೇಕಾಗುವ ಸಾಮಗ್ರಿ ಗಳನ್ನು ಹೀಗೆ ಕೇಬಲ್ ವಯರ್ ಅಂದರೆ ಝಿಪ್ ಲೈನ್‌ಗಳ ಮೂಲಕ ಕೆಳಗಿ ನಿಂದ ಸಾಗಿಸುತ್ತಾರೆ.

ಇದನ್ನು ನೋಡಿ ತೀರಾ ಆಶ್ಚರ್ಯವಾಯಿತು, ಜನವಸತಿ ಎಲ್ಲೆಲ್ಲಾ ಇದೆಯೆಂದು! ಮನಾಲಿಯಲ್ಲಿರುವ ಕೆಲವು ಪ್ರವಾಸೀ ತಾಣ ಗಳೆಂದರೆ ಹಿಡಿಂಬ ದೇವಿ ದೇವಸ್ಥಾನ, ಸೋಲಂಗ್ ವ್ಯಾಲಿ, ರೋಹ್ತಂಗ್ ಪಾಸ್. ತುಂಬಾ ಹಿಮಪಾತವಾಗುವ ತಿಂಗಳುಗಳಲ್ಲಿ ರೋಹ್ತಂಗ್ ಪಾಸ್ ಮುಚ್ಚಿರುತ್ತಾರೆ.

ಸೋಲಂಗ್ ವ್ಯಾಲಿ
ಮನಾಲಿಗೆ ಹೋದ ಮೇಲೆ ಸಾಹಸಮಯ ಆಟಗಳನ್ನು ಆಡದಿದ್ದರೆ ಹೇಗೆ? ಕುಲ್ಲು ಅಲ್ಲಿ ರಿವರ್ ರಾಫ್ಟಿಂಗ್, ಮನಾಲಿಯಲ್ಲಿ ಪ್ಯಾರ ಗ್ಲೈಡಿಂಗ್, ಸ್ಕೀಯಿಂಗ್, ಹಾರ್ಸ್ ರೈಡಿಂಗ್ ಇವೆ. ನಾವು ಭೇಟಿ ಕೊಟ್ಟ ದಿನಗಳು ತೀರಾ ಚಳಿಯಿದ್ದು, ನಿರಂತರವಾಗಿ ಹಿಮ ಬೀಳುತ್ತಿದ್ದ ಕಾರಣ ಪ್ಯಾರ ಗ್ಲೈಡಿಂಗ್ ಇರಲಿಲ್ಲ. ನಾನು ಹಿಮವನ್ನು ಕಾಣಲು ತೀರಾ ಉತ್ಸುಕಳಾಗಿದ್ದೆ. ಹಾಗಾಗಿ ಸೋಲಂಗ್ ವ್ಯಾಲಿಗೆ ಹೋದೆವು. ಅದ್ಭುತ, ಅತ್ಯದ್ಭುತ ತಾಣ ಅದು!

ಎತ್ತ ನೋಡಿದರೂ ಹಿಮ. ಕಣ್ಣಿನ ತುಂಬಾ ಆ ಹಿಮಭರಿತ ಲೋಕವನ್ನು ತುಂಬಿಕೊಳ್ಳುವ ಅನುಭವವೇ ಅಪೂರ್ವ. ಅಲ್ಲೊಂದು ಶಿವನ ದೇವಾಲಯವಿದೆ. ಸ್ಕೀಯಿಂಗ್, ಕೇಬಲ್ ಕಾರ್, ರೋಪ್ ವೇ, ಹಾರ್ಸ್ ರೈಡಿಂಗ್ ಇವೆ. ಸೋಲಂಗ್ ವ್ಯಾಲಿಗೆ ಭೇಟಿ ನೀಡುವ ಮುನ್ನ ಚಳಿಯಿಂದ ದೇಹವನ್ನು ಬೆಚ್ಚನೆ ಕಾಪಾಡಿಕೊಳ್ಳಲು ಬೇಕಾದ ಗ್ಲೌಸ್, ಶೂಸ್, ಜ್ಯಾಕೆಟ್ ಎಲ್ಲವೂ ಬಾಡಿಗೆಗೆ ದೊರೆಯುತ್ತದೆ. ಸ್ಕೀಯಿಂಗ್ ತುಂಬಾ ದೂರ ಮಾಡಲು ಬಿಡಲಾರರು, ಅದೊಂದು ಕಮರ್ಷಿಯಲ್ ಚಟುವಟಿಕೆ ಆಗಿದೆ. ತೀರಾ ಚಿಕ್ಕದಾದ ಜಾಗದಲ್ಲಿ ಸ್ಕೀಯಿಂಗ್ ಮಾಡಲು ಅವಕಾಶ ನೀಡುತ್ತಾರೆ. ಆದರೆ ಅದಕ್ಕಾಗಿ ನಾವು ತೆರಬೇಕಾದ ಬಾಡಿಗೆಯಂತೂ ಜಾಸ್ತಿಯೇ
ಇದೆ.

ಶಿಮ್ಲಾ
ಹಿಮಾಚಲ ಪ್ರದೇಶದ ಮತ್ತೊಂದು ಪ್ರವಾಸೀ ತಾಣ ಶಿಮ್ಲಾ. ಇಲ್ಲಿ ನೋಡ ಬಯಸುವ ತಾಣಗಳೆಂದರೆ ಮಾಲ್ ರೋಡ್, ದಿ ರಿಡ್ಜ್ ಕುಫ್ರಿ ಹೀಗೆ. ಇಲ್ಲೂ ಹಾರ್ಸ್ ರೈಡಿಂಗ್ ಇದೆ. ಮನಾಲಿ ಹಾಗೂ ಶಿಮ್ಲಾದಲ್ಲಿ ಅಲ್ಲಿಯ ಸಾಂಪ್ರಾದಾಯಿಕ ಉಡುಗೆ ತೊಡುಗೆ ಗಳನ್ನು ಬಾಡಿಗೆಗೆ ಪಡೆದು ಫೋಟೋ ತೆಗೆದುಕೊಳ್ಳುವ ಸೌಲಭ್ಯವಿದೆ. ಹೀಗೆ ಬಾಡಿಗೆಗೆ ನೀಡುವವರು ಅಲ್ಲಲ್ಲಿ ಕಾಣಸಿಗುತ್ತಾರೆ. ಮನಾಲಿ, ಶಿಮ್ಲಾ ಪ್ರವಾಸಿಗರನ್ನು ತೃಪ್ತಿ ಪಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಿಡಿಂಬ ದೇವಿ ದೇವಸ್ಥಾನ
ಕುಲ್ಲು ಜಿಲ್ಲೆಯಲ್ಲಿರುವ ಹಿಡಿಂಬ ದೇವಿ ದೇವಸ್ಥಾನ, ಹಿಡಿಂಬೆ ವಾಸವಿದ್ದ ಸ್ಥಳ ಎಂಬ ನಂಬಿಕೆ. ನವರಾತ್ರಿಯ ಸಮಯದಲ್ಲಿ ಮನಾಲಿಯ ಜನರು ದುರ್ಗಾ ದೇವಿಯ ಬದಲಿಗೆ ಹಿಡಿಂಬ ದೇವಿಯನ್ನು ಆರಾಧಿಸುತ್ತಾರೆ. ಕಾಡಿನ ಮಧ್ಯೆ ಕಟ್ಟಲಾದ
ದೇವಸ್ಥಾನ ಇದು. ಪ್ರಶಾಂತವಾದ ಪರಿಸರದ ಮಧ್ಯೆಯಿರುವ ಈ ದೇವಸ್ಥಾನದ ವಾಸ್ತು ಶೈಲಿಯು ಆ ಪ್ರದೇಶದ ಪಾರ್ವತೇಯ ವಾಸ್ತುವನ್ನು ಅಳವಡಿಸಿಕೊಂಡಿದ್ದು, ಕುತೂಹಲಕಾರಿಯಾಗಿದೆ.

ರೋಹ್ತಂಗ್ ಪಾಸ್
ಮನಾಲಿಯಿಂದ 60 ಕಿಮೀ ದೂರದಲ್ಲಿರುವ ರೋಹ್ತಂಗ್ ಪಾಸ್ ಒಂದು ಸುಂದರ ತಾಣ. ಸಮುದ್ರಮಟ್ಟದಿಂದ 13,000 ಸಾವಿರ ಅಡಿ ಎತ್ತರದಲ್ಲಿರುವ ಈ ಕಣಿವೆ ದಾರಿಯುದ್ದಕ್ಕೂ ಸದಾಕಾಲ ಹಿಮದ ಆಟ. ಚಳಿಗಾಲದಲ್ಲಿ ಈ ಪ್ರದೇಶ ಸಂಪೂರ್ಣ ಹಿಮ ದಿಂದ ಮುಚ್ಚಿ ಹೋಗುತ್ತದೆ.

ಬೇಸಗೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಹರಡಿರುವ ಹಿಮದ ರಾಶಿಯು ಕಣ್ಣಿಗೆ ಹಬ್ಬವನ್ನೇ ನೀಡುತ್ತವೆ. ಇಲ್ಲಿಂದ ಕಾಣಿಸುವ ಹಿಮಾಲಯ ಶ್ರೇಣಿಯ ಹಿಮಭರಿತ ಪರ್ವತ ಸಾಲುಗಳ ನೋಟವಂತೂ ಅದ್ಭುತ, ಅಪೂರ್ವ. ರೋಹ್ತಂಗ್ ಪಾಸ್ ತಾಣದಲ್ಲಿ ರುವ ಹಿಮ ದಿಬ್ಬಗಳಲ್ಲಿ ಜಾರುತ್ತಾ ಸಾಗುವ ಅನುಭವವು ಪ್ರವಾಸಿಗರ ಮನದಲ್ಲಿ ಅಚ್ಚಳಿಯದೇ ಉಳಿವ ಸುಂದರ ನೆನಪು.