Thursday, 12th December 2024

ಗಾಂಧೀಜಿಯ ಸಂಗಾತಿ ಈ ಕನ್ನಡದ ಕೋಲು

ಕನ್ನಡ ನಾಡಿನಿಂದ ಒಂದು ವಾಕಿಂಗ್ ಸ್ಟಿಕ್ ಗಾಂಧೀಜಿಯವರ ಕೈ ಸೇರಿದ ಕಥನ ಬಹು ಕುತೂಹಲಕಾರಿ. ಹಿರಿಯ ಕವಿ ಗೋವಿಂದ ಪೈಯವರ ಮೂಲಕ ಗಾಂಧೀಜಿಯವರನ್ನು ತಲುಪಿದ ಈ ಕೋಲು ದಂಡಿಯ ಉಪ್ಪಿನ ಸತ್ಯಾಗ್ರಹಕ್ಕೆ ಸಾಕ್ಷಿ ಯಾಗಿತ್ತು.

ಮಲ್ಲಿಕಾರ್ಜುನ ಹೆಗ್ಗಳಗಿ ಮುಧೋಳ

ಮಹಾತ್ಮಾ ಗಾಂಧೀಜಿ ಅವರು ಕೈಯಲ್ಲಿ ಉದ್ದನೆಯ ಊರುಗೋಲು ಹಿಡಿದು ನಡೆಯುವ ಚಿತ್ರ ಎಲ್ಲರ ಮನಸ್ಸಿನಲ್ಲಿ ಅಚ್ಚಳಿ ಯದೆ ಉಳಿದಿದೆ. ಆದರೆ ಈ ಕೋಲು ಕನ್ನಡ ನೆಲದ್ದು ಎಂಬುದು ಬಹಳ ಜನರಿಗೆ ಗೊತ್ತಿಲ್ಲ.

ರಾಷ್ಟ್ರಕವಿ ಎಂ.ಗೋವಿಂದ ಪೈ ಕುಟುಂಬಕ್ಕೆ ಸೇರಿದ್ದ ಈ ಕೋಲು ಗಾಂಧೀಜಿ ಅವರ 250 ಮೈಲಿ ದೂರದ ದಂಡಿಯಾತ್ರೆಯ ನಡಿಗೆಗೆ ಅನುಕೂಲವಾಗಿದ್ದು ತುಂಬ ಸ್ವಾರಸ್ಯದ ಸಂಗತಿಯಾಗಿದೆ. ತಾರುಣ್ಯದ ಆರಂಭದ ದಿನಗಳಲ್ಲಿ ಗೋವಿಂದ ಪೈ ಅವರು
ಅರವಿಂದ ಘೋಷ್ ಅವರು ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಗುಜರಾತ್ ರಾಜ್ಯದ ನವ ಸಾರಿಗೆ ತೆರಳಿದ್ದರು. ಅಲ್ಲಿ ಅವರಿಗೆ ಗಾಂಧೀಜಿಯವರ ಅನುಯಾಯಿ ಮತ್ತು ಆಪ್ತ ಸಹಾಯಕ ಕಾಕಾ ಕಾಲೇಕರ ಅವರ ಸ್ನೇಹ ಲಭಿಸುತ್ತದೆ.

ಕೆಲಕಾಲ ಅಲ್ಲಿದ್ದ ಗೋವಿಂದ ಪೈಯವರು ತಮ್ಮ ಪತ್ನಿಯ ನಿಧನದ ನಂತರ, ಮರಳಿ ಮಂಗಳೂರು ಸಮೀಪದ ತಮ್ಮ ಹುಟ್ಟೂರು ಮಂಜೇಶ್ವರಕ್ಕೆ ಬಂದು ನೆಲೆಸುತ್ತಾರೆ. ಮುಂದೆ ಕೆಲ ದಿನಗಳ ನಂತರ ರಾಷ್ಟ್ರೀಯ ಶಿಕ್ಷಣ ಪ್ರಚಾರ ಕಾರ್ಯದ ನಿಮಿತ್ಯ ಮಂಗಳೂರಿಗೆ ಆಗಮಿಸಿದ್ದ ಕಾಕಾ ಕಾಲೇಕರ ಮಂಜೇಶ್ವರಕ್ಕೆ ತೆರಳಿ ತಮ್ಮಹಳೆಯ ಗೆಳೆಯ ಗೋವಿಂದ ಪೈ ಅವರನ್ನು ಭೇಟಿ
ಮಾಡುತ್ತಾರೆ. ಈ ಸಂದರ್ಭದಲ್ಲಿ ಪೈ ಅವರು ತಮ್ಮ ಹಿರಿಯರು ಬಳಸುತ್ತಿದ್ದ 54 ಇಂಚು ಉದ್ದವಾದ, ಸಪೂಟಾದ ವಾಕಿಂಗ್ ಸ್ಟಿಕ್‌ನ್ನು ಕಾಲೇಕರ ಅವರಿಗೆ ಕಾಣಿಕೆಯಾಗಿ ಕೊಡುತ್ತಾರೆ.

ಮುಂದೆ ಕೆಲವು ದಿನಗಳಲ್ಲಿ ಮಹಾತ್ಮ ಗಾಂಧೀಜಿ ಉಪ್ಪಿನ ಸತ್ಯಾಗ್ರಹಕ್ಕಾಗಿ ಸಬರಮತಿ ಆಶ್ರಮದಿಂದ 250 ಮೈಲು ದೂರದ ದಂಡಿಗೆ ಪಾದಯಾತ್ರೆ ಮೂಲಕ ತೆರಳಲು ನಿರ್ಧರಿಸುತ್ತಾರೆ. ಗಾಂಧೀಜಿ ಆಯ್ಕೆ ಮಾಡಿದ 78 ಕಾರ್ಯಕರ್ತರೊಂದಿಗೆ ಮಾರ್ಚ್ 12, 1930 ರಲ್ಲಿ ದಂಡಿ ಸತ್ಯಾಗ್ರಹ ಯಾತ್ರೆ ಆರಂಭಿಸುತ್ತಾರೆ. ಕಸ್ತೂರ ಬಾ ಅವರು ಗಾಂಧೀಜಿಗೆ ಆರತಿ ಬೆಳಗಿ ಹಣೆಗೆ ತಿಲಕ ಇಟ್ಟು ಬಿಳ್ಕೊಡುತ್ತಾರೆ. ಇಡುತ್ತಾರೆ. ಈ ಯಾತ್ರೆಯಲ್ಲಿ ಭಾಗವಹಿಸಲು ಸಿದ್ಧರಾಗಿ ನಿಂತಿದ್ದ ಕಾಕಾ ಕಾಲೇಕರ ತಾವು ಗೋವಿಂದ ಪೈ ಅವರಿಂದ ಪಡೆದ ವಾಕಿಂಗ್ ಸ್ಟಿಕ್ ಗಾಂಧೀಜಿಗೆ ಕಾಣಿಗೆ ನೀಡಿ ನಮಸ್ಕರಿಸುತ್ತಾರೆ. ಈ ರೀತಿ ಕರ್ನಾಟಕದ ಕರಾವಳಿಯ ವಾಕಿಂಗ್ ಸ್ಟಿಕ್, ಗೋವಿಂದ ಪೈಯವರ ಮೂಲಕ ಗಾಂಧೀಜಿಯವರ ಕೈಸೇರಿ, ಗುಜರಾತ್‌ನ ದಂಡಿ ತನಕ ಸಾಗುತ್ತದೆ, ಬ್ರಿಟಿಷರನ್ನು ಎದುರಿ ಸಲು ಗಾಂಧೀಜಿ ಕೈಗೊಂಡ ಅಸ್ತ್ರ ಎನಿಸಿದ್ದ ಉಪ್ಪಿನ ಸತ್ಯಾಗ್ರಹಕ್ಕೆ ಸಾಕ್ಷಿ ಎನಿಸುತ್ತದೆ.

ಗಾಂಧೀಜಿ ಕನ್ನಡದ ಈ ಕೋಲನ್ನು ಹಿಡಿದು ಪ್ರತಿ ದಿನ 10 ಮೈಲು ನಡೆದು ದಂಡಿ ತಲುಪಿ, ಅಲ್ಲಿನ ಸಮುದ್ರ ತೀರದಲ್ಲಿ ಉಪ್ಪು ತಯಾರಿಸುತ್ತಾರೆ. ಅವರ ಜತೆಯಲ್ಲಿ ಬಂದ ನೂರಾರು ದೇಶಾಭಿಮಾನಿಗಳು ಸಮುದ್ರದ ನೀರಿನಿಂದ ಉಪ್ಪು ತಯಾರಿಸಿ, ನಮ್ಮ ದೇಶವನ್ನು ಅನಧಿಕೃತವಾಗಿ ತಮ್ಮ ವಸಾಹತನ್ನಾಗಿ ಮಾಡಿಕೊಂಡಿದ್ದ ಪರದೇಶಿಯರ ಪಶುಬಲಕ್ಕೆ ಸವಾಲು ಒಡ್ಡುತ್ತಾರೆ.

ತಾವು ತಯಾರಿಸಿದ ಹಿಡಿ ಉಪ್ಪು ಕೈಯಲ್ಲಿ ಹಿಡಿದು ಬ್ರಿಟೀಷರ ಕಾನೂನು ಧಿಕ್ಕರಿಸಿ ನಿಲ್ಲುತ್ತಾರೆ. ಕನ್ನಡ ನಾಡಿನಿಂದ ಪಯಣಿಸಿದ ಈ ಕೋಲು ಗಾಂಧೀಜಿ ಬದುಕಿನುದ್ದಕ್ಕೂ ಜೊತೆಯಾಗಿ ನಿಲ್ಲುತ್ತದೆ. ಸಬರಮತಿ ಆಶ್ರಮದಲ್ಲಿ ಗಾಂಧೀಜಿ ಬಳಸುತ್ತಿದ್ದ ಚರಕದ
ಜೊತೆ ಈ ಕೋಲನ್ನು ಕೂಡ ರಕ್ಷಿಸಿ ಇಡಲಾಗಿದೆ. ಕನ್ನಡದ ಹಿರಿಯ ಸಾಹಿತಿ ಕಯ್ಯಾರ ಕಿಞ್ಞಣ್ಣ ರೈ ಅವರು ಗೋವಿಂದ ಪೈ
ಅವರ ಜೀವನ ಚರಿತ್ರೆ ಬರೆದಿದ್ದು, ಅದರಲ್ಲಿ ತುಂಬ ಅಭಿಮಾನದಿಂದ ಈ ವಿಶಿಷ್ಟ ಸಂಗತಿಯನ್ನು ದಾಖಲಿಸಿದ್ದಾರೆ.