Saturday, 14th December 2024

ನಮಾಮಿ ಗಂಗೆ

ಶೋಭಾ ಪುರೋಹಿತ್

ಗಂಗೆ ಎಂದರೆ ಸಾಕು, ನಮ್ಮ ದೇಶದ ಜನರ ಮನಸ್ಸಿನಲ್ಲಿ ಭಕ್ತಿ ಮೂಡುತ್ತದೆ. ದೇವನದಿ ಎಂದೇ ಜನರಿಂದ ಗುರುತಿ ಸಲ್ಪಟ್ಟಿರುವ ಗಂಗಾ ನದಿಗೆ, ಅದರ ಹರಿವಿನುದ್ದಕ್ಕೂ ಹಲವು ಕಡೆ ಆರತಿ ನಡೆಯುತ್ತದೆ. ಕಾಶಿಯಲ್ಲಿ ಪ್ರತಿದಿನ ಸಂಜೆ ನಡೆಯುವ ಗಂಗಾರತಿ ವಿಶ್ವಪ್ರಸಿದ್ಧ. ಅದೇ ರೀತಿ, ಹಿಮಾಲಯದ ತಪ್ಪಲಿನಲ್ಲಿರುವ ಹರಿದ್ವಾರದಲ್ಲೂ ಗಂಗೆಗೆ ಸಂಜೆಯ ವೇಳೆ ಆರತಿ ನಡೆಯುತ್ತದೆ. ಅಲ್ಲಿನ ಬೆಟ್ಟಗಳ ಹಿನ್ನೆೆಲೆಯಲ್ಲಿ, ಹಿಮಶೀತಲ ನೀರಿನ ಗಂಗೆಗೆ ನಡೆಯುವ ಆ ಆರತಿಯನ್ನು ನೋಡುವ ಅನುಭೂತಿಯೇ ಅನನ್ಯ, ವಿಶಿಷ್ಟ.

ಗಂಗೆಯ ಹೆಸರನ್ನು ಉಸುರಿದರೂ ಸಾಕು, ಎದೆಯಲ್ಲಿ ಗಂಗೆಯ ಸಿಂಚನದ ಅನುಭವವಾಗಿ, ಮೈ ಮನಸ್ಸು ಪುಳಕಿತಗೊಳ್ಳುತ್ತದೆ. ಉತ್ತರಾಖಂಡದ ಗಂಗೊತ್ರಿಯಲ್ಲಿ ಉಗಮಿಸಿದ ಗಂಗೆಯ ಹರಿವು, ಅಲ್ಲಿಂದ 13 ಕಿ.ಮೀ. ಅಂತರದ ಗೋಮುಖ ಎಂಬಲ್ಲಿ ವ್ಯಕ್ತ ವಾಗುತ್ತದೆ. ಪಿತರ ಸದ್ಗತಿಗಾಗಿ, ತನ್ನ ತಪಸ್ಸಿನಿಂದ ಶಿವನನ್ನು ಒಲಿಸಿ ಗಂಗೆಯನ್ನು ಭುವಿಗೆ ತಂದ ರಾಜ ಭಗೀರಥನಿಂದಾಗಿ, ಭಾಗೀರಥಿ ಎಂಬ ಹೆಸರು ಬಂತು!

ಬದರಿಯಲ್ಲಿ ಅಲಕನಂದಾ ಎಂಬ ಹೆಸರಿನಿಂದ ಹರಿದು ಬಂದು ದೇವ ಪ್ರಯಾಗದಲ್ಲಿ, ಭಾಗೀರಥಿಯೊಡನೆ ಸಂಗಮಿಸಿ, ಗಂಗೆ ಯಾಗಿ ಹರಿಯುತ್ತಾ, ಮಂದಾಕಿನಿಯನ್ನು ಒಡಗೂಡಿ, ಹೃಷಿಕೇಶದ ಮೂಲಕ, ಹರಿದ್ವಾರದಲ್ಲಿ ವಿಶಾಲವಾಗಿ ಹರಿಯುತ್ತಾಳೆ. ಇದಕ್ಕೆ ಗಂಗಾವತರಣ, ಅಂದರೆ ಕೆಳಗೆ ಇಳಿಯುವುದು ಎಂದು ಅರ್ಥ!

ಅಲ್ಲಿಂದ ಗಂಗೆ, ಗಂಗಾ ಸಾಗರ ಎಂಬಲ್ಲಿ, ಬಂಗಾಳಕೊಲ್ಲಿಯಲ್ಲಿ ಸೇರುತ್ತಾಳೆ. ಗಂಗೆ ಅತ್ಯಂತ ಪೂಜನೀಯಳು. ಇಂತಹ ಗಂಗೆ ಯಲ್ಲಿ ಹರಿದ್ವಾರದಲ್ಲಿ ಮತ್ತು ಪ್ರಯಾಗದಲ್ಲಿ ಎರಡೆರಡು ಸಲ ಗಂಗಾಸ್ನಾನದ ಜೊತೆಗೆ ಯಮುನಾ, ಸರಸ್ವತಿ, ಭಾಗೀರಥಿ ಮತ್ತು ಪಂಚ ಪ್ರಯಾಗಗಳ ಸಂಗಮ ಸ್ನಾನವೂ ನಮಗೆ ಲಭಿಸಿತು.

ಗರುಡ ಗಂಗಾ
ಬದರಿಯಿಂದ ಹಿಂತಿರುಗುವಾಗ, ಗರುಡ ಗಂಗಾ ಎಂಬ ಇನ್ನೊಂದು ಸ್ಥಳ ನಮಗೆ ಸಿಕ್ಕಿತು. ಗರುಡನು ವಿಷ್ಣುವನ್ನು ಭೇಟಿ ಮಾಡಲು ಹೋಗುವಾಗ, ತನ್ನ ಕೊಕ್ಕಿನಿಂದ ಚುಚ್ಚಿ ಇಲ್ಲಿ ನದಿ ಉಂಟಾಯಿತು, ಇಲ್ಲಿ ಮಿಂದು, ಮುಂದಿನ ಪಯಣ ಬೆಳೆಸಿದ ಎಂದು ಹೇಳುತ್ತಾರೆ. ಇನ್ನೊಂದು ನಂಬಿಕೆಯಂತೆ, ಗರುಡನು, ಶಿವನ ಸರ್ಪವನ್ನು ಕಚ್ಚಿ ಒಯ್ದಾಗ, ಶಿವನು ವಿಷ್ಣುವಿನ ಮೊರೆ ಹೋದನಂತೆ.

ನಾಗನನ್ನು ಬಿಡುಗಡೆಗೊಳಿಸಲು ನಾರಾಯಣನು ಆದೇಶವಿತ್ತಾಗ, ‘ನಿನ್ನನ್ನು ಹೊರಲು ನನಗೆ ಶಕ್ತಿ ಬೇಡವೇ?’ ಎಂದು ಗರುಡ ಅಹಂಕಾರದಿಂದ ನುಡಿಯು ತ್ತಾನೆ. ‘ಸರಿ ನನ್ನ ಭಾರವನ್ನು ಸಹಿಸಿಕೋ’ ಎಂದು ನಾರಾಯಣ ಬೆನ್ನ ಮೇಲೆ,
ಬೆರಳನ್ನಿಡಲು, ತಡೆಯಲಾಗದೇ, ಗರ್ವಭಂಗವಾಗಿ, ಗರುಡನು ವಿಷ್ಣುವಿಗೆ ಶರಣಾಗಿ, ನಾಗನನ್ನು ಬಿಡುಗಡೆ ಮಾಡಿದ. ಈ ಪಾಪದ ಪ್ರಾಯಶ್ಚಿತ್ತಕ್ಕಾಗಿ, ಗರುಡ ಈ ಸ್ಥಳದಲ್ಲಿ, ತಪಸ್ಸನ್ನು ಮಾಡಿದ. ಹೀಗಾಗಿ ಗರುಡ ಗಂಗಾ ಎಂಬ ಹೆಸರು ಬಂತು ಎಂದು ಉಲ್ಲೇಖವಿದೆ. ಈ ಸ್ಥಳ ಬಹಳ ರಮ್ಯವಾಗಿದೆ. ಮತ್ತು ಇಲ್ಲಿ ನದಿಯಲ್ಲಿ, ಸಿಗುವ, ನುಣುಪಾದ ಕಲ್ಲುಗಳನ್ನು ಮನೆಯಲ್ಲಿಟ್ಟರೆ ಸರ್ಪಭಯ, ಸರ್ಪದೋಷ ನಿವಾರಣೆ ಆಗುತ್ತದೆ ಅಂತ ನಂಬಿಕೆ ಇದೆ.

ಕಾಶಿಯಿಂದ ಆರಂಭವಾದ ನಮ್ಮ ಮತ್ತು ಗಂಗೆಯ ಒಡನಾಟ, ಪ್ರಯಾಗ, ಹೃಷಿಕೇಶ, ಹರಿದ್ವಾರ, ಬದರಿ, ಅಲ್ಲಿಂದ ಪುನಃ ಹರಿದ್ವಾರಕ್ಕೆ ವಾಪಸು ಬಂದು ಸೇರುವವರೆಗೆ ನಿರಂತರವಾಗಿತ್ತು. ಹಿಮಾಲಯದ ಗಿರಿ ಕಣಿವೆಗಳಲ್ಲಿ ಪ್ರಯಾಣ, ಕೆಳಗೆ ಪ್ರಪಾತ ದಲ್ಲಿ ಹರಿಯುವ, ಭಾಗೀರಥಿ, ಅಲಕನಂದಾ, ಮಂದಾಕಿನಿ, ಗಂಗಾ, ನದಿಗಳ ಸಲಿಲ ಧಾರೆ, ಮನಕೆ ತಂಪೆರೆಯುತ್ತಾ, ನಮ್ಮೊಂದಿಗೆ ಜತೆ ಜತೆಯಲ್ಲೇ ಪ್ರಯಾಣಿಸುವಂತಿತ್ತು!

ಹರಿದ್ವಾರದ ಗಂಗಾರತಿ
ಕಾಶಿಯಲ್ಲಿ ನಡೆಯುವ ವಿಶ್ವ ಪ್ರಸಿದ್ಧ ಗಂಗಾರತಿಯಂತೆ, ಹರಿದ್ವಾರದಲ್ಲೂ ಗಂಗೆಗೆ ಆರತಿ ನಡೆಯುತ್ತದೆ. ಇಲ್ಲಿನ ಆರತಿ ಇನ್ನೂ ವಿಧ್ಯುಕ್ತವಾಗಿ ನಡೆಯು ತ್ತದೆ! ಹರ್ ಕಿ ಪೌಡಿ ಎಂಬ ಜಾಗದಲ್ಲಿ, ಸಂಜೆ ವೇಳೆ ನಡೆಯುವ ಆರತಿಯನ್ನು, ಹತ್ತಿರದಿಂದ ನೋಡಲು ನಾಲ್ಕು ಗಂಟೆಗೇ, ಜನ ಸೇರಿದ್ದರು. ನಾವೂ ಒಂದು ಕಡೆ ಜಾಗ ಮಾಡಿಕೊಂಡು ಕುಳಿತೆವು. ಶ್ರದ್ಧಾ ಭಕ್ತಿಗಳಿಂದ, ಸಂಕಲ್ಪ ಸಮೇತ ಗಣೇಶನ ಪೂಜೆಯ ನಂತರ, ಅಲ್ಲಿನ ಪಂಡಿತರು, ಗಂಟೆ, ಜಾಗಟೆಗಳ ನಿನಾದದ ಜತೆ, ವೇದ ಘೋಷದೊಂದಿಗೆ ಪೂಜೆ ನಡೆಸಿದರು. ದೀಪ ಬೆಳಗಿಸಿ, ದೊನ್ನೆಗಳಲ್ಲಿ ಗಂಗೆಗೆ ದೀಪ ಅರ್ಪಿಸಿ, ಅನಂತರ ಒಟ್ಟಿಗೇ ಹಲವಾರು ಆರತಿಗಳನ್ನು ಗಂಗೆಗೆ ಆರತಿ ಎತ್ತುವಾಗ, ಹಿಮ್ಮೇಳದಲ್ಲಿ, ಲತಾ ಮಂಗೇಶ್ಕರ್ ಹಾಡಿದ, ಪ್ರಸಿದ್ಧ ‘ಓಂ ಜೈ ಗಂಗಾ ಮಯ್ಯಾ’ ಹಾಡು, ಅಲೆ ಅಲೆಯಾಗಿ ತೇಲಿ ಬಂತು.

ಅಷ್ಟರಲ್ಲಿ ಕತ್ತಲಾಗಿದ್ದರಿಂದ, ಆರತಿಯ ದೀಪಗಳು, ನದಿಯಲ್ಲಿ ತೇಲಿಬಿಟ್ಟ ದೀಪದ ತೆಪ್ಪಗಳು, ಸುಮಧುರ ಗಾಯನ, ಎಲ್ಲಾ ಸೇರಿ, ಅಲ್ಲೊಂದು ಭಕ್ತಿಯ ವಾತಾವರಣ ನಿರ್ಮಿಸಿತು! ಹರಿದ್ವಾರದ ಪರಿಶುದ್ಧ ಗಂಗೆಯ ಮೇಲೆ ತೇಲುವ ಪುಟ್ಟ ಪುಟ್ಟ ದೀಪಗಳು,
ಹಿಮಾಲಯದ ತಪ್ಪಲಿನ ಆ ಪ್ರದೇಶದಲ್ಲಿ ಅನನ್ಯ ಭಾವಕೋಶವನ್ನು ನಿರ್ಮಿಸಿ, ನಮ್ಮ ಮನದಲ್ಲಿ ಅನಿರ್ವಚನೀಯ ಅನು ಭೂತಿಯನ್ನು ಮೂಡಿಸಿದ್ದಂತೂ ನಿಜ.

ಪೂಜೆಯ ನಂತರ, ಅಲ್ಲಿ ಸೇರಿದ ಜನರಿಗೆ, ಗಂಗೆಯ ಶುದ್ಧತೆ ಕಾಪಾಡುವ, ಗಂಗೆಯನ್ನು ಕಲುಷಿತಗೊಳಿಸದಿರುವ, ಪ್ರತಿಜ್ಞೆಯನ್ನು ಬೋಧಿಸುತ್ತಾರೆ. ಎಲ್ಲರೂ ಎರಡೂ ಕೈಗಳನ್ನು ಮೇಲೆತ್ತಿ, ಪಂಡಿತರು ಹೇಳಿ ಕೊಡುವ ಪ್ರತಿಜ್ಞೆಯನ್ನು ಪುನರುಚ್ಛರಿಸುವಾಗ ಪರಿಸರ ಪ್ರಜ್ಞೆ ಮೈತುಂಬಿ, ಪುಲಕಿತರಾಗುತ್ತೇವೆ. ಇಂಥ ಒಂದು ಸನ್ನಿವೇಶಕ್ಕೆ ನಾವು ಸಾಕ್ಷಿಯಾದಾಗ, ಮನಸ್ಸು ಸಾರ್ಥಕತೆ ಯನ್ನು ಅನುಭವಿಸಿತು.